60ರ ಪ್ರಾಯದಲ್ಲೂ ನನ್ನ ಗಂಡ ಫಿಟ್ ಎಂದು ಟ್ರೋಲರ್ಸ್ಗೆ ತಿರುಗೇಟು! ಬೆಡ್‌ರೂಮ್ ರಹಸ್ಯ ಬಿಚ್ಚಿಟ್ಟು ವೈರಲ್ ಆದ ಯುವತಿ...Love Story
- ಈ ಜೋಡಿಯ ವಯಸ್ಸಿನ ಅಂತರ ಮಾತ್ರ ನೋಡಿದವರ ಕಣ್ಣರಳಿಸುವಂತೆ ಮಾಡುತ್ತದೆ
- 26 ವರ್ಷದ ಗ್ರೇಸನ್ ಗೀಗನ್ ತನ್ನ 60 ವರ್ಷದ ಪತಿ ಕೆವಿನ್ ಜೊತೆ ಉತ್ತಮ ದಾಂಪತ್ಯ ಜೀವನ
- 2024ರ ಡಿಸೆಂಬರ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು 2025ರ ನವೆಂಬರ್ಲ್ಲಿ ದಾಂಪತ್ಯ ಜೀವನ ಆರಂಭ
- ಸಮಾಜದ ಮುಜುಗರದ ಪ್ರಶ್ನೆಗಳನ್ನು ನಗುತ್ತಲೇ ಎದುರಿಸುತ್ತಾ ಸದ್ಯ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು
Love Story : ಪ್ರೀತಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ ಅಂತಾರೆ, ಆದರೆ ಈ ಜೋಡಿಯ ವಯಸ್ಸಿನ ಅಂತರ ಮಾತ್ರ ನೋಡಿದವರ ಕಣ್ಣರಳಿಸುವಂತೆ ಮಾಡುತ್ತದೆ! 26 ವರ್ಷದ ಗ್ರೇಸನ್ ಗೀಗನ್ ತನ್ನ 60 ವರ್ಷದ ಪತಿ ಕೆವಿನ್ ಜೊತೆ ಸಾರ್ವಜನಿಕ ಸ್ಥಳಗಳಿಗೆ ಅಥವಾ ಕಾಫಿ ಶಾಪ್‌ಗೆ ಹೋದಾಗಲೆಲ್ಲಾ ಜನ ಆಕೆಯನ್ನು "ನಿಮ್ಮ ತಂದೆಗೆ ಏನು ಆರ್ಡರ್ ಮಾಡಬೇಕು?" ಎಂದೇ ಕೇಳುತ್ತಾರಂತೆ! ಡಿಸೆಂಬರ್ 2024ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಈ ಅಪರೂಪದ ಜೋಡಿ, ನವೆಂಬರ್ 2025ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಮಾಜದ ಮುಜುಗರದ ಪ್ರಶ್ನೆಗಳನ್ನು ನಗುತ್ತಲೇ ಎದುರಿಸುತ್ತಾ ಸದ್ಯ ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ.
ತಂದೆ-ಮಗಳೆಂದೇ ಭಾವಿಸುವ ಜನರು
ಕಾರು ಉದ್ಯಮಿಯಾಗಿರುವ ಕೆವಿನ್ ತಮ್ಮ ವಯಸ್ಸಿನ ಅಂತರದ ಬಗ್ಗೆ ಮಾತನಾಡುತ್ತಾ, ಇತ್ತೀಚೆಗಷ್ಟೇ ನಾನು ನಿಯಮಿತವಾಗಿ ಹೋಗುವ ಅಂಗಡಿಯೊಂದಕ್ಕೆ ಹೋದಾಗ, ಅಲ್ಲಿನ ಉದ್ಯೋಗಿ 'ನಿಮ್ಮ ಮಗಳು ಸ್ವಲ್ಪ ಸಮಯದ ಮುಂಚೆಯಷ್ಟೇ ಬಂದು ಹೋದರು ಎಂದು ಕ್ಯಾಶುಯಲ್ ಆಗಿ ಹೇಳಿದರು. ನಮ್ಮಿಬ್ಬರ ನಡುವೆ 34 ವರ್ಷಗಳ ವಯಸ್ಸಿನ ಅಂತರ ಇರುವುದರಿಂದ ಜನರು ಹಾಗೆ ಭಾವಿಸುವುದು ತೀರಾ ಸಹಜ, ಹೀಗಾಗಿ ನಾವಿಬ್ಬರೂ ಅದನ್ನು ಕೇಳಿ ನಕ್ಕಿದ್ದೆವು" ಎಂದಿದ್ದಾರೆ. ಇಂತಹ ಕಾಮೆಂಟ್‌ಗಳಿಗೆ ತಾವು ಎಂದಿಗೂ ಬೇಸರ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೆವಿನ್, ಹೆಚ್ಚಿನ ಜನರು ಯಾವುದೇ ಕೆಟ್ಟ ಉದ್ದೇಶವಿಲ್ಲದೆ ಹಾಗೆ ಹೇಳುತ್ತಾರೆ, ಒಂದು ವೇಳೆ ಯಾರಾದರೂ ಉದ್ದೇಶಪೂರ್ವಕವಾಗಿ ಕೀಟಲೆ ಮಾಡಲು ಹಾಗೆ ಹೇಳಿದರೂ ಸಹ ಅದು ನಮ್ಮ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಿದ್ದಾರೆ.
ಹೋಟೆಲ್‌ನಲ್ಲಿ ಶುರುವಾದ ಪರಿಚಯ
ಈ ಜೋಡಿಯ ಮೊದಲ ಪರಿಚಯವಾಗಿದ್ದು 2022ರಲ್ಲಿ. ಗ್ರೇಸನ್ ಅವರು ಐಷಾರಾಮಿ ಸ್ಟೀಕ್‌ಹೌಸ್ (ಹೋಟೆಲ್) ಒಂದರ ಮುಂಭಾಗದ ನಿರ್ವಹಣೆ ನೋಡಿಕೊಳ್ಳುತ್ತಿದ್ದರು. ಕೆವಿನ್ ತಮ್ಮ ಹಿಂದಿನ ಮದುವೆಯ ಮಕ್ಕಳ ಜೊತೆ ಅಲ್ಲಿಗೆ ನಿಯಮಿತವಾಗಿ ಬರುತ್ತಿದ್ದ ಗ್ರಾಹಕರಾಗಿದ್ದರು. ಆರಂಭದಲ್ಲಿ ಪ್ರೀತಿ-ಪ್ರೇಮದ ಯೋಚನೆ ಇಲ್ಲದಿದ್ದರೂ, ನಂತರದ ದಿನಗಳಲ್ಲಿ ಇವರ ಮಾತುಕತೆ ಮತ್ತು ಪರಸ್ಪರರ ಆಲೋಚನೆಗಳು ಒಂದಾಗಿ ಇವರ ಬಾಂಧವ್ಯ ಗಟ್ಟಿಯಾಯಿತು. ಒಳ್ಳೆಯ ಸಂಬಂಧಗಳು ಪರಸ್ಪರ ಗೌರವ, ಸ್ನೇಹ, ನಂಬಿಕೆ ಮತ್ತು ಜೀವನದ ಒಂದೇ ರೀತಿಯ ದೃಷ್ಟಿಕೋನದಂತಹ ಆಳವಾದ ವಿಷಯಗಳ ಮೇಲೆ ನಿರ್ಮಾಣವಾಗುತ್ತವೆ ಎನ್ನುತ್ತಾರೆ ಕೆವಿನ್. ಪ್ರಸ್ತುತ ಗ್ರೇಸನ್ ಅವರ ಟಿಕ್‌ಟಾಕ್ ಖಾತೆಯ ಮೂಲಕ ಈ ಜೋಡಿ ಆನ್‌ಲೈನ್‌ನಲ್ಲಿ ಭಾರಿ ಗಮನ ಸೆಳೆದಿದ್ದು, ಇವರ ವೀಡಿಯೊಗಳಿಗೆ 34 ಲಕ್ಷಕ್ಕೂ (3.4 Million) ಅಧಿಕ ಲೈಕ್ಸ್ ಹರಿದುಬಂದಿವೆ.
ಸೋಷಿಯಲ್ ಮೀಡಿಯಾ ಟ್ರೋಲ್ಸ್‌ಗೆ ದಂಪತಿಯ ಖಡಕ್ ಉತ್ತರ
ನಿಜ ಜೀವನಕ್ಕಿಂತ ಸಾಮಾಜಿಕ ಜಾಲತಾಣಗಳಲ್ಲೇ ತಮಗೆ ಅತಿ ಹೆಚ್ಚು ಟೀಕೆಗಳು ಎದುರಾಗುತ್ತವೆ ಎಂದು ಗ್ರೇಸನ್ ಹೇಳಿದ್ದಾರೆ. ಜನರು ಮುಖಾಮುಖಿಯಾದಾಗ ಪ್ರೀತಿ, ಗೌರವದಿಂದ ವರ್ತಿಸುತ್ತಾರೆ. ಸಾರ್ವಜನಿಕವಾಗಿ ಕೆಲವೊಮ್ಮೆ ಜನರು ನಮ್ಮನ್ನು ವಿಚಿತ್ರವಾಗಿ ದಿಟ್ಟಿಸಿ ನೋಡುವುದು ಬಿಟ್ಟರೆ, ನಿಜ ಜೀವನದಲ್ಲಿ ನಮಗೆ ಯಾವುದೇ ನೇರ ನೆಗೆಟಿವಿಟಿ ಎದುರಾಗಿಲ್ಲ. ಆದರೆ, ಆನ್‌ಲೈನ್‌ನಲ್ಲಿ ಮಾತ್ರ, ಕೆವಿನ್ ಅವರ ಹಣದ ಆಸೆಗಾಗಿ ನಾನು ಈ ಮದುವೆಯಾಗಿದ್ದೇನೆ ಎಂದು ಟ್ರೋಲರ್‌ಗಳು ಆಗಾಗ ಆರೋಪಿಸುತ್ತಾರೆ. ಇಂತಹ ಊಹಾಪೋಹದ ಕಾಮೆಂಟ್‌ಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ಅವುಗಳಿಗೆ ಪ್ರತಿಕ್ರಿಯಿಸುವುದೂ ಇಲ್ಲ ಎಂದು ಗ್ರೇಸನ್ ಸ್ಪಷ್ಟಪಡಿಸಿದ್ದಾರೆ.
ಹಣಕ್ಕಾಗಿ ಮದುವೆಯಾಗಿಲ್ಲ ಎಂದ ಯುವತಿ
ವಯಸ್ಸಿನ ಅಂತರ ಮತ್ತು ಆರ್ಥಿಕ ವ್ಯತ್ಯಾಸ ಕಂಡಾಗ ಜನರು ಇಂತಹ ಕೀಳು ಊಹೆಗಳನ್ನು ಮಾಡುವುದು ಸಹಜ ಎಂದಿರುವ ಗ್ರೇಸನ್, ಕೆವಿನ್ ವಯಸ್ಸಿನಲ್ಲಿ ಹಿರಿಯರು ಮತ್ತು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂಬುದು ನಿಜ. ಯಾವುದೇ ಮಹಿಳೆಯಂತೆ ನಾನು ಕೂಡ ಸಂಬಂಧದಲ್ಲಿ ಭಾವನಾತ್ಮಕ ಮತ್ತು ದೈಹಿಕ ಭದ್ರತೆಯನ್ನು ಬಯಸುತ್ತೇನೆ ಆದರೆ, ಅದೇ ನಮ್ಮ ಪ್ರೀತಿಯ ತಳಹದಿಯಲ್ಲ ಎಂದು ಗ್ರೇಸನ್ ಹೇಳಿದ್ದಾರೆ. ಇತ್ತೀಚೆಗೆ ಕೆವಿನ್ ಕೂಡ ಮಾತನಾಡುತ್ತಾ, ಆನ್‌ಲೈನ್‌ನ ಅಪರಿಚಿತರ ಮುಂದೆ ನನ್ನ ಮದುವೆಯನ್ನು ಸಮರ್ಥಿಸಿಕೊಳ್ಳುವ ಯಾವುದೇ ಆಸಕ್ತಿ ನನಗಿಲ್ಲ. ಗ್ರೇಸನ್ ನನ್ನನ್ನು ಎಷ್ಟು ಪ್ರೀತಿಸುತ್ತಾಳೆ ಮತ್ತು ಗೌರವಿಸುತ್ತಾಳೆ ಎಂಬುದು ಮಾತ್ರ ನನಗೆ ಮುಖ್ಯ. ಸಾಮಾನ್ಯವಾಗಿ 26ರ ಹರೆಯದ ಯುವತಿಯರು 60ರ ವೃದ್ಧರಿಗೆ ಆಕರ್ಷಿತರಾಗುವುದಿಲ್ಲ ಎಂಬ ಜನರ ಮಾತು ನಿಜ ಇರಬಹುದು, ಆದರೆ ಗ್ರೇಸನ್ ಸಾಮಾನ್ಯ 26 ವರ್ಷದ ಹುಡುಗಿಯಲ್ಲ, ನಾನು ಕೂಡ ಸಾಮಾನ್ಯ 60 ವರ್ಷದ ವೃದ್ಧನಲ್ಲ ಎಂದಿದ್ದಾರೆ.
ವೈರಲ್ ಆದ ಬೆಡ್‌ರೂಮ್ ರಹಸ್ಯ
ಈ ಜೋಡಿಯು ತಮ್ಮ ಟಿಕ್‌ಟಾಕ್‌ನ ಪ್ರಶ್ನೋತ್ತರ ಅವಧಿಯಲ್ಲಿ ಅಭಿಮಾನಿಗಳ ಕುತೂಹಲದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ತಮ್ಮ ಲೈಂಗಿಕ ಜೀವನದ ಬಗ್ಗೆಯೂ ಮುಕ್ತವಾಗಿ ಹಂಚಿಕೊಂಡು ವೈರಲ್ ಆಗಿದ್ದಾರೆ. ಈ ವೇಳೆ ಕೆವಿನ್ ತಾವು ಪಡೆಯುತ್ತಿರುವ ಟೆಸ್ಟೋಸ್ಟೆರಾನ್ ರಿಪ್ಲೇಸ್‌ಮೆಂಟ್ ಥೆರಪಿ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆರೋಗ್ಯಕ್ಕೆ ಆದ್ಯತೆ ನೀಡುವುದು ತನ್ನ ಶಕ್ತಿ, ಆತ್ಮವಿಶ್ವಾಸ ಮತ್ತು ವೈವಾಹಿಕ ಸಂಬಂಧದ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂಬುದನ್ನು ವಿವರಿಸಿರುವ ಅವರು, ವಯಸ್ಸಾಗುತ್ತಿದ್ದಂತೆ ಪುರುಷರಲ್ಲಿ ಶಕ್ತಿ, ಚೈತನ್ಯ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಟಿಆರ್‌ಟಿ ಒಂದು ಉತ್ತಮ ಸಾಧನವಾಗಿದೆ. ಸಮಸ್ಯೆಗಳು ಬಂದ ಮೇಲೆ ಯೋಚಿಸುವುದಕ್ಕಿಂತ, ಆರೋಗ್ಯ ಕೆಡುವುದನ್ನು ಮೊದಲೇ ತಡೆಯುವುದು ನನ್ನ ಅಭ್ಯಾಸ ಎಂದಿದ್ದಾರೆ.
ನನ್ನ ಪತಿ ವಯಸ್ಸಿನವರಿಗಿಂತ ಫಿಟ್ ಆಗಿದ್ದಾರೆ
ಕೆವಿನ್ ಅವರ ಕೇವಲ ಬಾಹ್ಯ ರೂಪವನ್ನು ನೋಡಿ ನಾನು ಆಕರ್ಷಿತಳಾಗಿಲ್ಲ, ಬದಲಿಗೆ ಅವರ ಒಳ್ಳೆಯ ಹೃದಯ ನನ್ನನ್ನು ಸೆಳೆಯಿತು ಎನ್ನುತ್ತಾರೆ ಗ್ರೇಸನ್. ಅವರು ಭಾವನಾತ್ಮಕವಾಗಿ ಅತ್ಯಂತ ಸ್ಥಿರವಾಗಿದ್ದಾರೆ, ಬುದ್ಧಿವಂತರು ಹಾಗೂ ತಮ್ಮ ನಂಬಿಕೆ ಮತ್ತು ಮೌಲ್ಯಗಳಿಗೆ ಬದ್ಧರಾಗಿದ್ದಾರೆ. ಅವರು ನನ್ನನ್ನು ಅತ್ಯಂತ ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ, ಇದು ಇಂದಿನ ದಿನಗಳಲ್ಲಿ ಅಪರೂಪ. ಇದೆಲ್ಲದರ ಜೊತೆಗೆ, ಅವರು ತಮ್ಮ ವಯಸ್ಸಿನ ಇತರರಿಗಿಂತ ಹಾಗೂ ನನಗೆ ಪರಿಚಯವಿರುವ ಹಲವರಿಗಿಂತ ಸಖತ್ ಫಿಟ್ ಮತ್ತು ಉತ್ತಮ ದೇಹದಾರ್ಢ್ಯ ಹೊಂದಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇವರ ವೈವಾಹಿಕ ಜೀವನದಲ್ಲಿ ದೈವಿಕ ನಂಬಿಕೆಯೂ ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರತಿ ರಾತ್ರಿ ಮಲಗುವ ಮುನ್ನ ದಂಪತಿ ಒಟ್ಟಿಗೆ ಪ್ರಾರ್ಥನೆ ಮಾಡುವುದನ್ನು ನಿಯಮವಾಗಿಸಿಕೊಂಡಿದ್ದಾರೆ.
ಯೂಟ್ಯೂಬ್‌ಗೆ ಕಾಲಿಟ್ಟ ಅಪರೂಪದ ಜೋಡಿ
ತಾವು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಪ್ರಚಾರ ಪಡೆಯಬೇಕೆಂಬ ಯಾವುದೇ ಮಹದಾಸೆ ಹೊಂದಿರಲಿಲ್ಲ ಎಂದು ಗ್ರೇಸನ್ ಹೇಳಿದ್ದಾರೆ. ನಾವು ನಮ್ಮ ಜೀವನ ಮತ್ತು ಮದುವೆಯನ್ನು ಮುಕ್ತವಾಗಿ ಹಂಚಿಕೊಂಡೆವು, ಅದಕ್ಕೆ ಜನರು ಪಾಸಿಟಿವ್ ಹಾಗೂ ನೆಗೆಟಿವ್ ಆಗಿ ಕನೆಕ್ಟ್ ಆದರು ಅಷ್ಟೇ. ಜನರು ಸಂಬಂಧಗಳು, ಸಂವಹನ ಮತ್ತು ಪ್ರಾಮಾಣಿಕತೆಯ ಬಗ್ಗೆ ಯೋಚಿಸುವಂತಾಗಲು ನಮ್ಮ ಕಂಟೆಂಟ್ ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ. ಇದೀಗ ಈ ದಂಪತಿ ತಮ್ಮ ಜೀವನದ ದಿನಚರಿ, ಸುದೀರ್ಘ ಮಾತುಕತೆ ಮತ್ತು ವೈವಾಹಿಕ ಜೀವನದ ಅನುಭವಗಳನ್ನು ಹಂಚಿಕೊಳ್ಳಲು ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದು, ಪ್ರತಿ ವಾರ ಎಪಿಸೋಡ್‌ಗಳನ್ನು ಪೋಸ್ಟ್ ಮಾಡಲು ಯೋಜಿಸಿದ್ದಾರೆ. ಕೊನೆಯದಾಗಿ, ಜನರ ಅಭಿಪ್ರಾಯಗಳಿಗೆ ಅವರೇ ಜವಾಬ್ದಾರರು, ಅಪರಿಚಿತರನ್ನು ಒಪ್ಪಿಸುವ ಅಗತ್ಯ ನನಗಿಲ್ಲ ಎಂದು ಗ್ರೇಸನ್ ಮಾತು ಮುಗಿಸಿದ್ದಾರೆ, (ಏಜೆನ್ಸೀಸ್).