ಲಾಹೋರ್‌ನಲ್ಲಿ ಲಷ್ಕರ್-ಎ-ತೈಬಾ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿ ಕೊಲೆ 
ವಿದೇಶ

ಹಾಡುಹಗಲೇ ಲಷ್ಕರ್ ಕಮಾಂಡರ್​ ಕೊಲೆ: ಈದ್ ಪ್ರಾರ್ಥನೆ ಮುಗಿಸಿ ಬರುತ್ತಿದ್ದ ಬಿಲಾಲ್ ಸಲಾಫಿ; ಗುಂಡಿನ ದಾಳಿಗೆ ಉಗ್ರ ಬಲಿ| Bilal Arif Salafi

ಪ್ರಮುಖ ಮುಖ್ಯಾಂಶಗಳು

  • ಲಾಹೋರ್‌ನಲ್ಲಿ ಲಷ್ಕರ್-ಎ-ತೈಬಾ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿ ಕೊಲೆ
  • ಪ್ರಾರ್ಥನೆ ಮುಗಿಸಿ ಬರುತ್ತಿದ ಬಿಲಾಲ್​ ಮೇಲೆ ಗುಂಡು ಮತ್ತು ಚಾಕುವಿನಿಂದ ದಾಳಿ
  • ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ
ಪಾಕಿಸ್ತಾನ: ಶನಿವಾರ (ಮಾರ್ಚ್​ 21) ಪಾಕಿಸ್ತಾನದ ಲಾಹೋರ್​ನಲ್ಲಿ ಈದ್​ ಪ್ರಯುಕ್ತ ಪ್ರಾರ್ಥನೆಗೆ ತೆರಳಿದ್ದ, ಭಯೋತ್ಪಾದಕ ಸಂಘಟನೆ ಲಷ್ಕರ್​-ಎ-ತೈಬಾ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿ (Bilal Arif Salafi) ಯನ್ನು ಗುಂಡಿಕ್ಕಿ ಹಾಗೂ ಮಾರಕಾಸ್ತ್ರದಿಂದ ಚುಚ್ಚಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ. 
ಈ ಸಭೆಯಲ್ಲಿ ಮೌಲಾನಾ ಅಬು ಜರ್ ಮತ್ತು ಮೌಲಾನಾ ಅಬ್ದುಲ್ ರೆಹಮಾನ್ ಅಬಿದ್ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು. ಪ್ರಾರ್ಥನೆ ಮುಗಿಸಿ ಬಿಲಾಲ್ ಆರಿಫ್ ಸಲಾಫಿ ಹೊರಬರುತ್ತಿದಂತೆ ಇಬ್ಬರು ವ್ಯಕ್ತಿಗಳು ಬಿಲಾಲ್ ಮೇಲೆ ದಾಳಿ ಮಾಡಿದ್ದಾರೆ.

ಗುಂಡು ಮತ್ತು ಚಾಕುವಿನಿಂದ ಚುಚ್ಚಿ ಕೊಲೆ

ಪ್ರಾರ್ಥನಾ ಸ್ಥಳದಿಂದ ಬಿಲಾಲ್ ಆರಿಫ್ ಸಲಾಫಿ ಹೊರಬಂದ ಕೂಡಲೇ ಒಬ್ಬ ಪುರುಷ ಗುಂಡಿನ ಮಳೆಗೆರೆದರೆ,ಆತನ ಜೊತೆಗಿದ್ದ ಮಹಿಳೆ ಬಿಲಾಲ್​ ಮೇಲೆ ಎರಗಿ ಚಾಕುವಿನಿಂದ ನಿರಂತರವಾಗಿ ಚುಚ್ಚಿ ಕೊಲೆ ಮಾಡಿದ್ದಾಳೆ. ಈ ಘಟನೆ ನಡೆದ ನಂತರ ಲಷ್ಕರ್ ಕಾರ್ಯಕರ್ತರು ಸ್ಥಳಕ್ಕೆ ಬಂದು ಬಿಲಾಲ್​ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ್ದಾರೆ. ಆದರೆ ಬಿಲಾಲ್​ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿರುವುದಾಗಿ ಖಚಿತವಾಗಿದೆ.
ಕಾರಣ ತಿಳಿದು ಬಂದಿಲ್ಲ!
ಲಷ್ಕರ್​-ಎ-ತೈಬಾ ಕಮಾಂಡರ್ ಬಿಲಾಲ್ ಆರಿಫ್ ಸಲಾಫಿಯನ್ನು ಯಾವ ಕಾರಣದಿಂದ ಹೀಗೆ ಹಾಡು ಹಗಲೇ ಕೊಲ್ಲಲಾಗಿದೆ ಎಂದು ಇಲ್ಲಿವರೆಗೆ ತಿಳಿದು ಬಂದಿಲ್ಲ. ಇದು ಲಷ್ಕರ್​ ಒಳಗೆ ನಡೆಯುತ್ತಿರುವ ಅಧಿಕಾರ ಹೋರಾಟದ ಸಲುವಾಗಿ ನಡೆದಿರುವ ಕೊಲೆಯೆಂದು ಕೆಲವರು ಹೇಳುತ್ತಿದ್ದರೆ. ಈ ದಾಳಿಯಲ್ಲಿ ಮಹಿಳೆಯೊಬ್ಬಳು ಭಾಗಿಯಾಗಿರುವ ಕಾರಣ ಈ ಕೊಲೆ ಪೂರ್ವ ನಿಯೋಜಿತ ಎಂಬಂತೆ ಮೇಲ್ನೊಟಕ್ಕೆ ಕಂಡುಬರುತ್ತಿದೆ.

ಯಾರು ಈ ಬಿಲಾಲ್ ಆರಿಫ್ ಸಲಾಫಿ?

ಬಿಲಾಲ್ ಆರಿಫ್ ಸಲಾಫಿ ಇವನೊಬ್ಬ ಭಯೋತ್ಪಾದಕ ಸಂಘಟನೆ ಲಷ್ಕರ್​-ಎ-ತೈಬಾ ಕಮಾಂಡರ್ ಆಗಿದ್ದ. ಇವನು 2005 ರ ಸಮಯದಲ್ಲಿ ಈ ಸಂಘಟನೆಯ ಸಂಪರ್ಕಕ್ಕೆ ಬಂದಿದ್ದ ಎಂದು ಹೇಳಲಾಗುತ್ತದೆ. 
ಇವನು ಪಾಕಿಸ್ತಾನದಲ್ಲಿ ಲಷ್ಕರ್​-ಎ-ತೈಬಾದ ಶಕ್ತಿವೃದ್ಧಿಸುವಲ್ಲಿ ಕೆಲಸ ಮಾಡುತ್ತಿದ್ದು, ಶಸ್ತ್ರಾಸ್ತ್ರಗಳ ಖರೀದಿ, ಶೇಖರಣೆ ಮತ್ತು ಭಯೋತ್ಪಾದಕರಿಗೆ ಇವನು ತರಬೇತಿ ನೀಡುತ್ತಿದ್ದ ಎಂದು ಹೇಳಲಾಗುತ್ತದೆ,(ಏಜನ್ಸೀಸ್​).