Labor Party 
ವಿದೇಶ

Labour Party; ಬ್ರಿಟನ್ ರಾಜಕೀಯದಲ್ಲಿ ಸಂಚಲನ: ಪ್ರಧಾನಿ ಸ್ಥಾನಕ್ಕೆ ಕಿಯರ್ ಸ್ಟಾರ್ಮರ್ ರಾಜೀನಾಮೆ!

ಲಂಡನ್: ಬ್ರಿಟನ್ ಪ್ರಧಾನಿ ಹಾಗೂ ಲೇಬರ್(Labor Party) ಪಕ್ಷದ ನಾಯಕ ಕಿಯರ್ ಸ್ಟಾರ್ಮರ್ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. ಪಕ್ಷದೊಳಗಿನ ಒತ್ತಡ ಮತ್ತು ನಾಯಕತ್ವ ಬದಲಾವಣೆಯ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಇದರೊಂದಿಗೆ ಕಳೆದ ಒಂದು ದಶಕದಲ್ಲಿ ಬ್ರಿಟನ್ ತನ್ನ ಏಳನೇ ಪ್ರಧಾನಿಯನ್ನು ಕಾಣುವ ಸಾಧ್ಯತೆ ಮೂಡಿದೆ.

ಪಕ್ಷದೊಳಗಿನ ಒತ್ತಡ ಹೆಚ್ಚಳ

ಕಳೆದ ವಾರ ನಡೆದ ವಿಶೇಷ ಸಂಸತ್ ಚುನಾವಣೆಯಲ್ಲಿ ಸ್ಟಾರ್ಮರ್ ಅವರ ಆಂತರಿಕ ಪ್ರತಿಸ್ಪರ್ಧಿ ಆಂಡಿ ಬರ್ನ್‌ಹ್ಯಾಮ್ ಗೆಲುವು ಸಾಧಿಸಿದ್ದರು. ಗ್ರೇಟರ್ ಮ್ಯಾಂಚೆಸ್ಟರ್ ಮೇಯರ್ ಆಗಿದ್ದ ಬರ್ನ್‌ಹ್ಯಾಮ್, ಪಕ್ಷದ ನಾಯಕತ್ವಕ್ಕೆ ಸವಾಲು ಹಾಕುವ ಉದ್ದೇಶದಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದರು ಎನ್ನಲಾಗಿದೆ. ಈ ಬೆಳವಣಿಗೆಯ ಬಳಿಕ ಸ್ಟಾರ್ಮರ್ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ವಾರಾಂತ್ಯದಲ್ಲಿ ಚಿಂತನೆ ನಡೆಸಿದ್ದರು. ಅಂತಿಮವಾಗಿ ಪ್ರಧಾನಿ ಮತ್ತು ಪಕ್ಷದ ನಾಯಕ ಸ್ಥಾನದಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.

ಜನಪ್ರಿಯತೆ ಕುಸಿತ

ಜುಲೈ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಲೇಬರ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದ ಸ್ಟಾರ್ಮರ್, ನಂತರ ಹಲವು ಸವಾಲುಗಳನ್ನು ಎದುರಿಸಿದರು. ಆರ್ಥಿಕ ಬೆಳವಣಿಗೆಗೆ ವೇಗ ನೀಡುವುದು, ಸಾರ್ವಜನಿಕ ಸೇವೆಗಳನ್ನು ಸುಧಾರಿಸುವುದು ಹಾಗೂ ಜೀವನ ವೆಚ್ಚದ ಸಮಸ್ಯೆಗಳನ್ನು ಕಡಿಮೆ ಮಾಡುವ ಭರವಸೆಗಳನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಿಲ್ಲ ಎಂಬ ಟೀಕೆಗಳು ಕೇಳಿಬಂದಿದ್ದವು.

ವಿವಾದಗಳೂ ಹಿನ್ನಡೆ

ಸ್ಟಾರ್ಮರ್ ಸರ್ಕಾರದ ಕೆಲವು ನಿರ್ಧಾರಗಳು ಕೂಡ ವಿವಾದಕ್ಕೆ ಕಾರಣವಾಗಿದ್ದವು. ಅದರಲ್ಲೂ ಅಮೆರಿಕದಲ್ಲಿನ ಬ್ರಿಟನ್ ರಾಯಭಾರಿಯಾಗಿ ಪೀಟರ್ ಮಂಡೆಲ್ಸನ್ ಅವರನ್ನು ನೇಮಿಸಿದ್ದ ನಿರ್ಧಾರ ಹೆಚ್ಚು ಟೀಕೆಗೆ ಗುರಿಯಾಗಿತ್ತು. ಇದೇ ವೇಳೆ ಲೇಬರ್ ಪಕ್ಷವು ಉದಾರವಾದಿ ಮತದಾರರನ್ನು ಗ್ರೀನ್ ಪಕ್ಷಕ್ಕೆ ಕಳೆದುಕೊಳ್ಳುತ್ತಿದ್ದು, ನೈಜಲ್ ಫ್ಯಾರೇಜ್ ನೇತೃತ್ವದ ವಲಸೆ ವಿರೋಧಿ ರಿಫಾರ್ಮ್ ಯುಕೆ ಪಕ್ಷವು ಜನಪ್ರಿಯತೆ ಗಳಿಸುತ್ತಿದೆ. ಹಲವು ರಾಷ್ಟ್ರೀಯ ಸಮೀಕ್ಷೆಗಳಲ್ಲಿ ರಿಫಾರ್ಮ್ ಯುಕೆ ಮುನ್ನಡೆಯಲ್ಲಿರುವುದು ಲೇಬರ್‌ಗೆ ಮತ್ತಷ್ಟು ಆತಂಕ ತಂದಿದೆ.

ಹೊಸ ನಾಯಕತ್ವದ ನಿರೀಕ್ಷೆ

ಸಂಸತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗಿರುವ ಆಂಡಿ ಬರ್ನ್‌ಹ್ಯಾಮ್ ಈಗ ಲೇಬರ್ ಪಕ್ಷದ ನಾಯಕತ್ವದ ಪ್ರಮುಖ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ. ಸ್ಟಾರ್ಮರ್ ರಾಜೀನಾಮೆಯ ಬಳಿಕ ಬ್ರಿಟನ್ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳಿಗೆ ವೇದಿಕೆ ಸಿದ್ಧವಾಗಿದೆ,(ಏಜೆನ್ಸೀಸ್​).