ಅಮೆರಿಕ ದಾಳಿಗೆ ಬಲಿಯಾಗಿದ್ದ 14 ತಿಂಗಳ ಮೊಮ್ಮಗಳ ಶವಪೆಟ್ಟಿಗೆ ನೋಡಿ ಕಣ್ಣೀರಿಟ್ಟ ಜನ 
ವಿದೇಶ

ಇರಾನ್ ಮಾಜಿ ನಾಯಕ ಖಮೇನಿ ಅಂತ್ಯಕ್ರಿಯೆ: 14 ತಿಂಗಳ ಮೊಮ್ಮಗಳ ಶವಪೆಟ್ಟಿಗೆ ನೋಡಿ ಕಣ್ಣೀರಿಟ್ಟ ಜನ; ಅಮೆರಿಕ ವಿರುದ್ಧ ಮೊಳಗಿದ ಘೋಷಣೆ! Khamenei Funeral

ಪ್ರಮುಖ ಮುಖ್ಯಾಂಶಗಳು

  • ಇರಾನ್ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ
  • ಅಮೆರಿಕ ದಾಳಿಗೆ ಬಲಿಯಾಗಿದ್ದ 14 ತಿಂಗಳ ಮೊಮ್ಮಗಳ ಶವಪೆಟ್ಟಿಗೆ ನೋಡಿ ಕಣ್ಣೀರಿಟ್ಟ ಜನ
  • ಕೆಂಪು ಬ್ಯಾನರ್ ಹಿಡಿದು ಅಮೆರಿಕ ವಿರುದ್ಧ ಆಕ್ರೋಶ ಹೊರಹಾಕಿದ ಇರಾನ ಜನತೆ
ಟೆಹ್ರಾನ್‌: ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಶುಕ್ರವಾರ (ಜು.3) ನಡೆದ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ (Khamenei Funeral) ಕಾರ್ಯಕ್ರಮ ಆರಂಭಗೊಂಡಿದೆ. ದೇಶದ ವಿವಿಧ ಭಾಗಗಳಿಂದ ಬಂದ ಜನರು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಬಳಿ ಸೇರಿದ್ದು, ಇಡೀ ಪ್ರದೇಶ ಜನಸಾಗರದಿಂದ ತುಂಬಿತ್ತು.
ಇಸ್ಲಾಮಿಕ್ ಗಣರಾಜ್ಯದ ರಾಷ್ಟ್ರೀಯ ಧ್ವಜದಲ್ಲಿ ಹೊದಿಸಲಾದ ಖಮೇನಿ ಅವರ ಶವಪೆಟ್ಟಿಗೆಯನ್ನು ಗೌರವದೊಂದಿಗೆ ಅಂತಿಮ ದರ್ಶನಕ್ಕಾಗಿ ತರಲಾಯಿತು. ಶವಪೆಟ್ಟಿಗೆಯ ಮೇಲ್ಭಾಗದಲ್ಲಿ ಕಪ್ಪು ಪೇಟವನ್ನು ಇರಿಸಲಾಗಿದ್ದು, ಧಾರ್ಮಿಕ ಸಂಪ್ರದಾಯದಂತೆ ಕಾರ್ಯಕ್ರಮ ನಡೆಯಿತು. ಖಮೇನಿ ಅವರ ಕುಟುಂಬದ ಹಲವು ಸದಸ್ಯರ ಶವಪೆಟ್ಟಿಗೆಗಳನ್ನೂ ಅವರ ಪಕ್ಕದಲ್ಲೇ ಇರಿಸಲಾಗಿತ್ತು.

ವಿಶ್ವದ ಗಮನ ಸೆಳೆದ ಮೊಮ್ಮಗಳ ಕಾಫಿನ್​!

ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದದ್ದು ಖಮೇನಿ ಅವರ 14 ತಿಂಗಳ ಮೊಮ್ಮಗಳ ಸಣ್ಣ ಶವಪೆಟ್ಟಿಗೆ. ಜಹ್ರಾ ಮೊಹಮ್ಮದಿ ಗೋಲ್ಪಾಯೆಗಾನಿ ಎಂಬ ಈ ಮಗು ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಮಗುವಿನ ಶವಪೆಟ್ಟಿಗೆಯನ್ನು ರಾಷ್ಟ್ರೀಯ ಧ್ವಜದಲ್ಲಿ ಹೊದಿಸಿ, ಅದರ ಪಕ್ಕದಲ್ಲಿ ಆಕೆಯ ಫೋಟೋವನ್ನು ಇರಿಸಲಾಗಿತ್ತು. ಈ ದೃಶ್ಯ ಕಂಡ ಅನೇಕರು ಭಾವುಕರಾದರು.
ಖಮೇನಿ ಅವರ ಅಂತ್ಯಕ್ರಿಯೆಗಾಗಿ ಇರಾನ್ ಮತ್ತು ಇರಾಕ್‌ನ ವಿವಿಧ ನಗರಗಳಲ್ಲಿ ಆರು ದಿನಗಳ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶುಕ್ರವಾರ ಟೆಹ್ರಾನ್‌ಗೆ ತರಲಾದ ಶವಪೆಟ್ಟಿಗೆ ಸೋಮವಾರದವರೆಗೆ ಅಲ್ಲಿಯೇ ಸಾರ್ವಜನಿಕ ದರ್ಶನಕ್ಕೆ ಇರಲಿದೆ. ಬಳಿಕ ನಗರದಲ್ಲಿ ಮೆರವಣಿಗೆ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ. 

ತವರಿನಲ್ಲಿ ಸಮಾಧಿ; ಪ್ರತೀಕಾರಕ್ಕಾಗಿ ಜನರಿಂದ ಒತ್ತಾಯ

ಮಂಗಳವಾರ (ಜು.7) ಖಮೇನಿ ಅವರ ಶವಪೆಟ್ಟಿಗೆಯನ್ನು ಕೋಮ್ ನಗರಕ್ಕೆ ಕರೆದೊಯ್ಯಲಾಗುತ್ತದೆ. ಬುಧವಾರ ನೆರೆಯ ಇರಾಕ್‌ನ ಪವಿತ್ರ ನಗರಗಳಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಗುರುವಾರ ಅವರ ತವರು ನಗರ ಮಶಾದ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತಿಮ ದರ್ಶನದ ವೇಳೆ ಹಲವು ಬೆಂಬಲಿಗರು ಕೆಂಪು ಬ್ಯಾನರ್‌ಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಅಮೆರಿಕಕ್ಕೆ ಸಾವು ಹಾಗೂ ಸೇಡು, ಸೇಡು ಎಂಬ ಘೋಷಣೆಗಳು ನಿರಂತರವಾಗಿ ಮೊಳಗಿದವು. ಇದರಿಂದ ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ಪಡೆಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡು ಕಾರ್ಯಕ್ರಮವನ್ನು ಕಟ್ಟುನಿಟ್ಟಿನ ಭದ್ರತೆಯಲ್ಲಿ ನಡೆಸಿದವು.
ಖಮೇನಿ ಅವರ ಅಂತ್ಯಕ್ರಿಯೆ ಕಾರ್ಯಕ್ರಮ ಕೇವಲ ಧಾರ್ಮಿಕ ವಿಧಿವಿಧಾನವಾಗಿಯೇ ಉಳಿಯದೆ, ದೇಶದ ರಾಜಕೀಯ ಪರಿಸ್ಥಿತಿ ಮತ್ತು ಇತ್ತೀಚಿನ ಬೆಳವಣಿಗೆಗಳ ನಡುವೆಯೂ ವಿಶೇಷ ಗಮನ ಸೆಳೆದಿದೆ. ದೇಶದ ವಿವಿಧ ಭಾಗಗಳಿಂದ ಬಂದ ಬೆಂಬಲಿಗರು ತಮ್ಮ ನಾಯಕನಿಗೆ ಅಂತಿಮ ಗೌರವ ಸಲ್ಲಿಸಿದ್ದು, ಮುಂದಿನ ಕೆಲವು ದಿನಗಳವರೆಗೆ ನಡೆಯಲಿರುವ ಅಂತಿಮ ದರ್ಶನ ಕಾರ್ಯಕ್ರಮಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).