ಸಾಂದರ್ಭಿಕ ಚಿತ್ರ 
ವಿದೇಶ

‘50 ದಾಟಿದ್ರೆ ನಡೀಲಿಕ್ಕೆ ಕಷ್ಟ’... ಯುರೋಪ್ ವೃದ್ಧರನ್ನು ನೋಡಿ ಭಾರತೀಯರ ಬಗ್ಗೆ ಮಹಿಳೆ ಹೇಳಿದ್ದೇನು? | Indian Lifestyle

ಪ್ರಮುಖ ಮುಖ್ಯಾಂಶಗಳು

  • ಯುರೋಪ್​ನಲ್ಲಿ 70-80ರ ವಯಸ್ಸಿನವರ ಫಿಟ್‌ನೆಸ್ ನೋಡಿ ಅಚ್ಚರಿ
  • ತಮ್ಮ ಲಗೇಜ್ ತಾವೇ ಹೊತ್ತುಕೊಂಡು ಪ್ರಯಾಣಿಸುವ ವೃದ್ಧರು
  • ಭಾರತೀಯರ ಆಹಾರ, ಜೀವನಶೈಲಿಯ ಬಗ್ಗೆ ಮಹಿಳೆಯ ಪ್ರಶ್ನೆ
European Elderly Fitness: ವಯಸ್ಸು 70-80 ದಾಟಿದ್ರೂ ಒಬ್ಬರೇ ಪ್ರಯಾಣ, ಕೈಯಲ್ಲಿ ತಮ್ಮದೇ ಲಗೇಜ್, ದೂರದವರೆಗೂ ನಡೆದುಕೊಂಡೇ ಹೋಗುವ ವೃದ್ಧರು.. ಯುರೋಪ್ ಪ್ರವಾಸದ ವೇಳೆ ಕಂಡ ಈ ದೃಶ್ಯವೊಂದು ಮಹಿಳೆಯೊಬ್ಬರಿಗೆ ಭಾರತೀಯರ ಲೈಫ್‌ಸ್ಟೈಲ್ ಬಗ್ಗೆ ಪ್ರಶ್ನೆ ಹುಟ್ಟಿಸಿದೆ.
ಎಕ್ಸ್‌ ಖಾತೆಯಲ್ಲಿ ಮಹಿಳೆಯೊಬ್ಬರು ಈ ಬಗ್ಗೆ ಪೋಸ್ಟ್ ಮಾಡಿದ್ದು, ಯುರೋಪ್‌ನಲ್ಲಿ ಭೇಟಿಯಾದ ವೃದ್ಧರ ಫಿಟ್‌ನೆಸ್ ಮತ್ತು ಸ್ವಾವಲಂಬಿ ಜೀವನಶೈಲಿ ತಮ್ಮ ಗಮನ ಸೆಳೆದಿದೆ ಎಂದಿದ್ದಾರೆ. ಇದೇ ವೇಳೆ, 50 ವರ್ಷ ದಾಟುತ್ತಿದ್ದಂತೆ ಮಂಡಿ ನೋವು, ಉಸಿರಾಟದ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುವ ಭಾರತೀಯರ ಜೀವನಶೈಲಿ ಬಗ್ಗೆ ಅವರು ಪ್ರಶ್ನೆ ಎತ್ತಿದ್ದಾರೆ.

70-80ರ ಹರೆಯದಲ್ಲೂ ಲಗೇಜ್ ಹೊತ್ತು ಸುತ್ತಾಟ

ಯುರೋಪ್ ಪ್ರವಾಸದ ವೇಳೆ 70-80 ವರ್ಷ ದಾಟಿದ ಹಲವರು ಒಬ್ಬರೇ ಪ್ರಯಾಣಿಸುತ್ತಿರುವುದನ್ನು ಮಹಿಳೆ ಗಮನಿಸಿದ್ದಾರೆ. ತಮ್ಮ ಸೂಟ್‌ಕೇಸ್‌ಗಳನ್ನು ತಾವೇ ಹೊತ್ತುಕೊಂಡು, ದೂರದವರೆಗೂ ನಡೆದುಕೊಂಡು ಹೋಗುತ್ತಿದ್ದ ವೃದ್ಧರು ಸಾಕಷ್ಟು ಗಟ್ಟಿಮುಟ್ಟಾಗಿ ಕಾಣಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಈ ದೃಶ್ಯ ನೋಡಿದ ಬಳಿಕ ಭಾರತೀಯರ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಬಗ್ಗೆ ಯೋಚಿಸುವಂತಾಯಿತು ಎಂದಿದ್ದಾರೆ.

ಭಾರತೀಯ ಲೈಫ್‌ಸ್ಟೈಲ್‌ನಲ್ಲಿ ಏನೋ ತಪ್ಪಿದೆ?


ಯುರೋಪ್‌ನ ವೃದ್ಧರ ಫಿಟ್‌ನೆಸ್ ಕಂಡ ಬಳಿಕ, ಭಾರತೀಯರ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಬಗ್ಗೆ ಮಹಿಳೆ ಪ್ರಶ್ನೆ ಎತ್ತಿದ್ದಾರೆ. 50 ವರ್ಷ ದಾಟುತ್ತಿದ್ದಂತೆ ಹಲವರಿಗೆ ದೂರ ನಡೆಯಲು ಕಷ್ಟವಾಗುವುದು, ಪ್ರಯಾಣದ ವೇಳೆ ವೀಲ್‌ಚೇರ್ ಅವಲಂಬಿಸುವುದು ಸಾಮಾನ್ಯ. ಫಿಟ್‌ನೆಸ್ ಅಂದ್ರೆ ಹೆಚ್ಚು ವರ್ಷ ಬದುಕುವುದಷ್ಟೇ ಅಲ್ಲ, ವಯಸ್ಸಾದ ಮೇಲೂ ಯಾರ ಮೇಲೂ ಅವಲಂಬಿತರಾಗದೆ ಸ್ವತಂತ್ರವಾಗಿ ಬದುಕುವ ಸಾಮರ್ಥ್ಯ ಇರುವುದು ಮುಖ್ಯ ಎಂದು ಹೇಳಿದ್ದಾರೆ.

ಪೋಸ್ಟ್‌ಗೆ ಪರ-ವಿರೋಧದ ಚರ್ಚೆ

ಮಹಿಳೆಯ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ. ಕೆಲವರು ಭಾರತೀಯರ ಆಹಾರ ಪದ್ಧತಿ, ಪ್ರೋಟೀನ್ ಕೊರತೆ ಹಾಗೂ ವ್ಯಾಯಾಮ ಮಾಡದಿರುವುದು ಇದಕ್ಕೆ ಕಾರಣ ಎಂದಿದ್ದಾರೆ. ಇನ್ನು ಕೆಲವರು ಕುಟುಂಬದ ಜವಾಬ್ದಾರಿಗಳ ಮಧ್ಯೆ ಭಾರತೀಯ ಮಹಿಳೆಯರು ತಮ್ಮ ಆರೋಗ್ಯದ ಕಡೆ ಗಮನ ಕೊಡುವುದು ಕಡಿಮೆ ಎಂದಿದ್ದಾರೆ. ಮತ್ತೊಂದೆಡೆ, ಯುರೋಪ್‌ನ ವೃದ್ಧರನ್ನು ನೋಡಿ ಇಡೀ ಭಾರತೀಯರ ಜೀವನಶೈಲಿಯ ಬಗ್ಗೆ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರೆ.

‘ಇದಕ್ಕೆ ಆಧಾರ ಏನು?’ ಎಂದು ಪ್ರಶ್ನೆ

ಇನ್ನು, ಮಹಿಳೆಯ ಹೇಳಿಕೆಗೆ ಕೆಲ ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ. ‘50 ವರ್ಷ ಮೇಲ್ಪಟ್ಟ ಭಾರತೀಯರಿಗೆ ದೀರ್ಘಕಾಲ ನಡೆಯಲು ಕಷ್ಟ’ ಎನ್ನುವುದಕ್ಕೆ ಯಾವುದೇ ಅಧ್ಯಯನದ ಆಧಾರವಿದೆಯೇ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು, ಯುರೋಪ್‌ನ ವೃದ್ಧರು ಒಬ್ಬರೇ ಪ್ರಯಾಣಿಸುವುದಕ್ಕೆ ಅವರ ವೈಯಕ್ತಿಕ ಆಯ್ಕೆ ಕಾರಣವಾಗಿರಬಹುದು. ಇದನ್ನೇ ನೇರವಾಗಿ ಉತ್ತಮ ಆರೋಗ್ಯ ಅಥವಾ ಒತ್ತಡರಹಿತ ಜೀವನಕ್ಕೆ ಎನ್ನುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ
ಒಟ್ಟಿನಲ್ಲಿ, ವೃದ್ಧಾಪ್ಯದಲ್ಲಿ ಆರೋಗ್ಯ, ದೈಹಿಕ ಚಟುವಟಿಕೆ, ಸ್ವಾವಲಂಬನೆ ಮತ್ತು ಜೀವನಶೈಲಿ ಎಷ್ಟು ಮುಖ್ಯ ಎಂಬುದರ ಬಗ್ಗೆ ಮಹಿಳೆಯ ಪೋಸ್ಟ್ ಹೊಸ ಚರ್ಚೆಯನ್ನೇ ಹುಟ್ಟುಹಾಕಿದೆ,(ಏಜೆನ್ಸೀಸ್​).