ಇಟಲಿ: ಭಾರತದ ಚುನಾವಣಾ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಕುರಿತು ಕಾಂಗ್ರೆಸ್ ಆಯೋಜಿಸಿದ್ದ ಭಾರತ್ ಶೃಂಗಸಭೆಯಲ್ಲಿ ಯುರೋಪಿನ ರಾಜಕೀಯ ನಾಯಕ ಜಿಯಾಕೊಮೊ ಫಿಲಿಬೆಕ್ ನೀಡಿದ ಹೇಳಿಕೆ ಸದ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಗೆ ಇದೀಗ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಪಕ್ಷದ ನಾಯಕಿ ಡೆಬೊರಾ ಬೆರ್ಗಮಿನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಮಾರು 97 ಕೋಟಿ ಮತದಾರರನ್ನು ಹೊಂದಿರುವ ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ವಿದೇಶಿ ನಾಯಕರು ಪ್ರಜಾಪ್ರಭುತ್ವದ ಪಾಠ ಹೇಳಿಕೊಡುವ ಅಗತ್ಯವಿಲ್ಲ. ಭಾರತಕ್ಕೆ ತನ್ನದೇ ಆದ ಪ್ರಜಾಪ್ರಭುತ್ವ ಸಂಸ್ಥೆಗಳು ಹಾಗೂ ಬಲಿಷ್ಠ ನ್ಯಾಯಾಂಗ ವ್ಯವಸ್ಥೆಯಿದೆ. ಇಂತಹ ದೇಶದ ಆಂತರಿಕ ವಿಚಾರಗಳಲ್ಲಿ ವಿದೇಶಿ ನಾಯಕರು ಅನಗತ್ಯವಾಗಿ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ನಡೆದ ಕಾಂಗ್ರೆಸ್‌ನ ಭಾರತ್ ಶೃಂಗಸಭೆಯಲ್ಲಿ ಮಾತನಾಡಿದ್ದ ಯುರೋಪಿಯನ್ ಸೋಷಿಯಲಿಸ್ಟ್ಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜಿಯಾಕೊಮೊ ಫಿಲಿಬೆಕ್, ಮತದಾರರ ಪಟ್ಟಿಯ ಪಾರದರ್ಶಕತೆಗಾಗಿ ರಾಹುಲ್ ಗಾಂಧಿ ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ. 'ಒಬ್ಬ ವ್ಯಕ್ತಿ, ಒಂದು ಮತ' ಎಂಬ ಪ್ರಜಾಪ್ರಭುತ್ವದ ಮೂಲ ತತ್ವವನ್ನು ರಕ್ಷಿಸಲು ರಾಹುಲ್ ಗಾಂಧಿ ಹೋರಾಡುತ್ತಿದ್ದಾರೆ ಎಂದು ಶ್ಲಾಘಿಸಿದ್ದ ಅವರು, ಎರಡು ವಾರಗಳ ಹಿಂದೆ ದೆಹಲಿಯ ರಾಮಲೀಲಾ ಮೈದಾನಕ್ಕೆ ಸಾವಿರಾರು ಜನರು ನಡೆಸಿದ ಮೆರವಣಿಗೆ ಪ್ರಜಾಪ್ರಭುತ್ವ ರಕ್ಷಣೆಗೆ ಜನರು ಮುಂದೆ ಬರುತ್ತಿರುವುದಕ್ಕೆ ಸಾಕ್ಷಿ ಎಂದಿದ್ದರು.
ಇದೇ ವೇಳೆ, ಕಾಂಗ್ರೆಸ್‌ನ 'ವೋಟ್ ಚೋರ್, ಗದ್ದಿ ಛೋಡ್' ಘೋಷಣೆಯನ್ನು ಉಲ್ಲೇಖಿಸಿದ ಫಿಲಿಬೆಕ್, ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಪ್ರಜಾಪ್ರಭುತ್ವವನ್ನು ರಕ್ಷಿಸಲು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲುವುದು ಅಗತ್ಯ ಎಂದು ಹೇಳಿದ್ದರು. ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು ಮತ್ತು ಹವಾಮಾನ ನ್ಯಾಯಕ್ಕಾಗಿ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಪ್ರಗತಿಪರ ಮೈತ್ರಿಕೂಟದ ಭಾಗವಾಗಿ ಕಾಂಗ್ರೆಸ್ ಕಾರ್ಯನಿರ್ವಹಿಸುತ್ತಿದೆ ಎಂದೂ ತಿಳಿಸಿದ್ದರು.
ಫಿಲಿಬೆಕ್ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತದ ಆಂತರಿಕ ರಾಜಕೀಯ ವಿಚಾರಗಳಲ್ಲಿ ಮಧ್ಯಪ್ರವೇಶಿಸಲು ವಿದೇಶಿ ನಾಯಕರಿಗೆ ಯಾವ ಅಧಿಕಾರವಿದೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ನಾಯಕ ಶಹನವಾಜ್ ಹುಸೇನ್, ಕಾಂಗ್ರೆಸ್ ದೇಶದ ರಾಜಕೀಯ ಚರ್ಚೆಗಳಿಗೆ ವಿದೇಶಿ ರಾಜಕಾರಣಿಗಳನ್ನು ಎಳೆದು ತರುತ್ತಿದೆ ಎಂದು ಆರೋಪಿಸಿದ್ದಾರೆ. ಭಾರತದ ಆಂತರಿಕ ವಿಚಾರಗಳಲ್ಲಿ ವಿದೇಶಿಗರು ಹಸ್ತಕ್ಷೇಪ ಮಾಡುವ ಹಕ್ಕು ಹೊಂದಿಲ್ಲ ಎಂದಿದ್ದಾರೆ.
ಇನ್ನು, ಫಿಲಿಬೆಕ್ ಭಾಷಣದ ವೇಳೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನಗುತ್ತಾ ಚಪ್ಪಾಳೆ ತಟ್ಟಿದ್ದಕ್ಕೂ ಕೇಂದ್ರ ಸಚಿವ ಕಿರಣ್ ರಿಜಿಜು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿದೇಶಿ ವ್ಯಕ್ತಿಯೊಬ್ಬರು ಭಾರತವನ್ನು ಅವಮಾನಿಸುವಾಗ ಯಾರಾದರೂ ನಗುವುದನ್ನು ಅಥವಾ ಚಪ್ಪಾಳೆ ತಟ್ಟುವುದನ್ನು ನೋಡಿದ್ದೀರಾ ಎಂದು ಪ್ರಶ್ನಿಸುವ ಮೂಲಕ ರಾಹುಲ್ ನಡೆಯನ್ನು ಖಂಡಿಸಿದ್ದಾರೆ,(ಏಜೆನ್ಸೀಸ್).