ಥೇಟ್ ಮನುಷ್ಯನ ಆಕಾರದಲ್ಲಿ ಕಾಣುವ ರೋಬೋಟ್ಗಿದೆ ಕಾರಿನ ಬಾಗಿಲುಗಳ ಮುರಿಯುವ ಶಕ್ತಿ
ಚಾಕುವಿನ ದಾಳಿಯಿಂದ ಪಾರಾಗಲು ಇದೇ ಚಾಣಕ್ಷತನ, ಅದ್ಭುತ ಕೌಶಲ್ಯಗಳು
ಎಂಟು ಗಂಟೆಗಳ ಸ್ಟ್ಯಾಂಡ್ಬೈ ಸಾಮರ್ಥ್ಯವನ್ನು ಹೊಂದಿದೆ ಈ ಅತ್ಯದ್ಭುತ ರೋಬಾಟ್
Humanoid Robots: ಶರವೇಗದಲ್ಲಿ ಸಾಗುತ್ತಿರುವ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಜತೆ ಜತೆಯಲ್ಲೇ ರೋಬೋಟ್ಗಳ ಅಸ್ತಿತ್ವ ಜೋರಾಗಿದೆ ಎಂಬುದಕ್ಕೆ ಈಗಾಗಲೇ ನಮ್ಮ ಮುಂದಿರುವ ಹಲವು ನಿದರ್ಶನಗಳೇ ಸಾಕು. ಇತ್ತೀಚೆಗಷ್ಟೇ, ಅಥ್ಲೆಟಿಕ್ಸ್ ಟ್ರ್ಯಾಕ್ನಲ್ಲಿ ಮಾನವರಂತೆ ವೇಗದಲ್ಲಿ ಓಡಿ ಮಿಂಚಿದ ಹ್ಯೂಮನಾಯ್ಡ್ ರೋಬೋಟ್ಗಳು, ನೋಡುಗರನ್ನು ಅಕ್ಷರಶಃ ನಿಬ್ಬೆರಗಾಗಿಸಿತ್ತು. ಈ ಸಾಲಿಗೆ ಈಗ ಮತ್ತೊಂದು ವಿಡಿಯೋ ಜ್ವಲಂತ ಸಾಕ್ಷಿ ಎನ್ನುವಂತೆ ನೆಟ್ಟಿಗರ ಹುಬ್ಬೇರಿಸಿದೆ.
ಚೀನಾದ ಪ್ರಮುಖ ತಂತ್ರಜ್ಞಾನ ಕಂಪನಿಯಾದ 'ಯೂನಿಟ್ರೀ ರೋಬೋಟಿಕ್ಸ್' (Unitree Robotics) ಮತ್ತೊಂದು ಹೊಸ ಮಾನವಾಕಾರದ ರೋಬೋಟ್ ಅನ್ನು ಜಗತ್ತಿಗೆ ಪರಿಚಯಿಸಿದೆ. 'ಯೂನಿಟ್ರೀ H2-X ಕುಂಗ್ ಫೂ ಲೆಜೆಂಡ್ ಗಾರ್ಡಿಯನ್' (Unitree H2-X Kung Fu Legend Guardian) ಎಂದು ಹೆಸರಿಸಲ್ಪಟ್ಟ ಈ ಅತ್ಯಾಧುನಿಕ ರೋಬೋಟ್ನ ಪ್ರದರ್ಶನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ರೋಬೋಟ್ ಮಾಡುತ್ತಿರುವ ಕೆಲಸಗಳು ಹಾಲಿವುಡ್ನ ಸೈ-ಫೈ ಸಿನಿಮಾಗಳಲ್ಲಿ ತೋರಿಸುವ ಕೆಲವು ಊಹೆಗೂ ಮೀರಿದ ಆ್ಯಕ್ಷನ್ ಸೀನ್ಗಳನ್ನೇ ಮೀರಿಸುವಂತಿದೆ. ಆರಂಭದಲ್ಲಿ ಈ ವಿಡಿಯೋ ನೋಡಿ ಹಲವರು ಕುತೂಹಲ ಹಾಗೂ ಟೆಕ್ನಾಲಜಿಯ ಬೆಳವಣಿಗೆ ಬಗ್ಗೆ ಖುಷಿಪಟ್ಟರೆ, ಇನ್ನೂ ಕೆಲವರು ರೋಬೋಟ್ಗಳು ಈ ಮಟ್ಟಿಗೆ ಎಲ್ಲ ಕೆಲಸಗಳನ್ನು ಮಾಡುವ ಸಾಮರ್ಥ್ಯ ಗಿಟ್ಟಿಸಿಕೊಂಡರೆ ಮುಂದಿನ ಕಥೆ ಏನು? ಇದು ಭವಿಷ್ಯದಲ್ಲಿ, ಮನುಷ್ಯರಿಗೆ ಕಂಟಕವಾಗುವ ಎಲ್ಲ ಸಾಧ್ಯತೆಗಳಿವೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
'ಯೂನಿಟ್ರೀ' ಬಿಡುಗಡೆ ಮಾಡಿರುವ ಈ ಪ್ರಚಾರ ವಿಡಿಯೋದಲ್ಲಿ, 'ವಿನ್ಸೆಂಟ್' (Vincent) ಹೆಸರಿನ ರೋಬೋಟ್ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ. ಕಾರಿನ ಬಾಗಿಲುಗಳನ್ನು ಒದ್ದು ಮುರಿಯುವುದು, ಸುಮಾರು 4 ಮೀಟರ್ ಎತ್ತರದಿಂದ ಕಿಂಚಿತ್ತು ಪೆಟ್ಟು ಬೀಳದಂತೆ ಜಿಗಿಯುವುದು, ಚಾಕುವಿನಿಂದ ದಾಳಿ ಮಾಡುತ್ತಿರುವ ವ್ಯಕ್ತಿಯ ಕೈಯಿಂದ ಆಯುಧವನ್ನು ಅತ್ಯಂತ ಸುರಕ್ಷಿತವಾಗಿ ಕಸಿಯುವುದು ಮತ್ತು ಅಪಘಾತಕ್ಕೀಡಾದ ವ್ಯಕ್ತಿಯನ್ನು ರಕ್ಷಿಸಲು ಕಾರನ್ನೇ ಎತ್ತುವುದು ಸೇರಿದಂತೆ ಮುಂತಾದ ಸಾಹಸಗಳನ್ನು ಈ ರೋಬೋಟ್ ಪ್ರದರ್ಶಿಸಿವೆ.
"ನಿಮ್ಮ ರಕ್ಷಣೆಗಾಗಿ 'ಯೂನಿಟ್ರೀ H2-X' ಸಿದ್ಧವಾಗಿದೆ. ಇದರ ಬ್ಯಾಟರಿ ಸುಮಾರು 8 ಗಂಟೆಗಳ ಕಾಲ ಕಾರ್ಯನಿರ್ವಹಿಸಬಲ್ಲದು ಅಂದರೆ ಸ್ಟ್ಯಾಂಡ್ಬೈ ಆಗಬಹುದು. ದಯವಿಟ್ಟು ಈ ರೋಬೋಟ್ ಅನ್ನು ಸುರಕ್ಷಿತವಾಗಿ ಬಳಸಿ" ಎಂದು ಕಂಪನಿ ವಿಡಿಯೋದೊಂದಿಗೆ ಮುನ್ನೆಚ್ಚರಿಕೆ ಮಾಹಿತಿಯನ್ನೂ ನೀಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ 1 ಕೋಟಿಗೂ (10 ಮಿಲಿಯನ್) ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಈ ವಿಡಿಯೋದಲ್ಲಿ ರೋಬೋಟ್ ಮಾಡಿದ ಎಲ್ಲಾ ಕೆಲಸಗಳು ಸ್ವಯಂಚಾಲಿತವೇ ಅಥವಾ ರಿಮೋಟ್ ಕಂಟ್ರೋಲ್ ಮೂಲಕ ನಿರ್ವಹಿಸಲ್ಪಟ್ಟವೇ ಎಂಬ ಬಗ್ಗೆ 'ಯೂನಿಟ್ರೀ' ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಈ ಕುರಿತಾಗಿ ಹಲವರಿಗೆ ಗೊಂದಲಗಳಿವೆ. ರಕ್ಷಣಾ ಕಾರ್ಯಾಚರಣೆ ಅಥವಾ ಹೋರಾಟದ ಸಂದರ್ಭದಲ್ಲಿ ಬ್ಯಾಟರಿ ಹೇಗೆ ಕಾರ್ಯನಿರ್ವಹಿಸುತ್ತದೆ, ಇದರ ನಿಖರ ಬೆಲೆ ಎಷ್ಟು ಮತ್ತು ಇದನ್ನು ಯಾವಾಗ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ ಎಂಬ ಹೆಚ್ಚಿನ ವಿವರಗಳನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.
ಈ ವಿಡಿಯೋವನ್ನು ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ರೋಬೋಟ್ಗಳ ಚಲನವಲನಗಳು ಮನುಷ್ಯರಂತೆ ವೇಗವಾಗಿ ಮತ್ತು ಅದ್ಭುತವಾಗಿ ಬದಲಾಗುತ್ತಿರುವುದನ್ನು ಕೆಲವರು ಮೆಚ್ಚಿಕೊಂಡರೆ, ಇನ್ನು ಕೆಲವರು ಆಶ್ಚರ್ಯ ವ್ಯಕ್ತಪಡಿಸುತ್ತಾ, "ಇದ್ಯಾವುದು ನಿಜವಾಗದೇ ಇದ್ದರೆ ಚೆನ್ನಾಗಿತ್ತು, ಇದೊಂದು ಕನಸಾಗಿಯೇ ಉಳಿದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು" ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಂದೆಡೆ, ಇದೇ ರೋಬೋಟ್ಗಳಿಗೆ ಹಿಂಸಾತ್ಮಕ ಕೃತ್ಯಗಳನ್ನು ಕಲಿಸಿ, ಮುಂದೊಂದು ದಿನ ಮನುಷ್ಯರ ಮೇಲೆ ದಾಳಿ ಮಾಡಲು ಬಿಟ್ಟರೆ ಏನು? ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಬಡವರಿಗಾಗಿ ಮನೆಗಳನ್ನು ನಿರ್ಮಿಸುವುದು ಅಥವಾ ಗೋದಾಮುಗಳಲ್ಲಿ ಸರಳ ಕೆಲಸಗಳನ್ನು ಮಾಡುವಂತಹ ಅನೇಕ ಉಪಯುಕ್ತ ಕಾರ್ಯಗಳಿರುವಾಗ, ರೋಬೋಟ್ಗಳಿಗೆ ಈ ರೀತಿಯ ಕೆಲಸಗಳನ್ನು ಮಾಡಲು ಟ್ರೇನಿಂಗ್ ನೀಡುವಂತದ್ದೇನಿದೆ? ಎಂದು ಒಂದಷ್ಟು ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).