ಸದ್ದಿಲ್ಲದೆ ಬದಲಾಯ್ತು ಇಸ್ರೇಲ್ ಡಿಫೆನ್ಸ್ ಸಿಸ್ಟಮ್! ನೆತನ್ಯಾಹು ಹೂಡಿದ ಈ ಹೊಸ ವ್ಯೂಹಕ್ಕೆ ಬಲಿಯಾಗಲಿದೆಯೇ ಇರಾನ್..? 
ವಿದೇಶ

ಸದ್ದಿಲ್ಲದೆ ಬದಲಾಯ್ತು ಇಸ್ರೇಲ್ ಡಿಫೆನ್ಸ್ ಸಿಸ್ಟಮ್! ನೆತನ್ಯಾಹು ಹೂಡಿದ ಈ ಹೊಸ ವ್ಯೂಹಕ್ಕೆ ಬಲಿಯಾಗಲಿದೆಯೇ ಇರಾನ್..? Israel Defense Budget

ಟೆಲ್​ಅವಿವ್​: ಇರಾನ್ ಜೊತೆಗಿನ ಯುದ್ಧವು ಒಂದು ತಿಂಗಳು ಪೂರೈಸಿ ಭೀಕರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Israel Defense Budget) ಜಗತ್ತೇ ಬೆರಗಾಗುವಂತಹ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಸೋಮವಾರ (ಮಾ.30) ಮುಂಜಾನೆ ನಡೆದ ತುರ್ತು ಸಂಸತ್ ಅಧಿವೇಶನದಲ್ಲಿ, ಇಸ್ರೇಲ್ ತನ್ನ ರಕ್ಷಣಾ ಬಜೆಟ್ ಅನ್ನು ದುಪ್ಪಟ್ಟುಗೊಳಿಸುವ ಮೂಲಕ ಇರಾನ್ ವಿರುದ್ಧದ ಹೋರಾಟದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬ ಬಲವಾದ ಸಂದೇಶ ರವಾನಿಸಿದೆ.

ಐತಿಹಾಸಿಕ ಬಜೆಟ್ ಮತ್ತು ರಕ್ಷಣಾ ವ್ಯೂಹ

ಇಸ್ರೇಲ್‌ನ ಸಂಸತ್ ಆದ ಕೆನೆಸೆಟ್​ನಲ್ಲಿ ಮುಂಜಾನೆ ನಡೆದ ಮತದಾನದಲ್ಲಿ $271 ಬಿಲಿಯನ್ ಮೊತ್ತದ ಬಜೆಟ್‌ಗೆ ಅನುಮೋದನೆ ನೀಡಲಾಯಿತು. ಈ ಒಟ್ಟು ಮೊತ್ತದ ಸುಮಾರು ಕಾಲು ಭಾಗವನ್ನು ಅಂದರೆ, ಸುಮಾರು $45 ಬಿಲಿಯನ್ ಹಣವನ್ನು ಕೇವಲ ರಕ್ಷಣಾ ವಲಯಕ್ಕೆ ಮೀಸಲಿಡಲಾಗಿದೆ. 2023 ರಲ್ಲಿ ರಕ್ಷಣಾ ಬಜೆಟ್ 27.5 ಬಿಲಿಯನ್ ಡಾಲರ್ ಆಗಿತ್ತು, ಈಗ ಅದನ್ನು ನೆತನ್ಯಾಹು ಸರ್ಕಾರ ಗಣನೀಯವಾಗಿ ಹೆಚ್ಚಿಸಿದೆ.
ಬಜೆಟ್‌ನ ಪ್ರಮುಖ ಅಂಶಗಳು:
ಒಟ್ಟು ಬಜೆಟ್: $271 ಬಿಲಿಯನ್ ಡಾಲರ್.
ರಕ್ಷಣಾ ವೆಚ್ಚ: $45 ಬಿಲಿಯನ್ (ಹಿಂದಿನ ಬಜೆಟ್‌ಗಿಂತ ಸುಮಾರು 100% ಹೆಚ್ಚಳ).
ಉಳಿತಾಯ ಕ್ರಮ: ರಕ್ಷಣಾ ಇಲಾಖೆಯನ್ನು ಹೊರತುಪಡಿಸಿ ಉಳಿದೆಲ್ಲಾ ಸಚಿವಾಲಯಗಳ ಬಜೆಟ್‌ನಲ್ಲಿ ಶೇ. 3 ರಷ್ಟು ಕಡಿತಗೊಳಿಸಿ, ಆ ಮೂಲಕ ಉಳಿತಾಯವಾದ $9 ಬಿಲಿಯನ್ ಹಣವನ್ನು ಯುದ್ಧಕ್ಕಾಗಿ ಬಳಸಲು ನಿರ್ಧರಿಸಲಾಗಿದೆ.

ಇರಾನ್ ವಿರುದ್ಧದ ನಿರ್ಣಾಯಕ ಹೋರಾಟ

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ ಈಗಾಗಲೇ ಇರಾನ್‌ನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ವರದಿಗಳ ಪ್ರಕಾರ, ಇಸ್ರೇಲ್ ನಡೆಸಿದ ಭೀಕರ ದಾಳಿಯಲ್ಲಿ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಸೇರಿದಂತೆ 48 ಪ್ರಮುಖ ನಾಯಕರು ಮತ್ತು 40 ಸೇನಾ ಕಮಾಂಡರ್‌ಗಳು ಹತರಾಗಿದ್ದಾರೆ. ಆದರೂ ಇರಾನ್ ತನ್ನ ಪ್ರತಿರೋಧವನ್ನು ಮುಂದುವರಿಸಿದ್ದು, ಇಸ್ರೇಲ್ ಮೇಲೆ ನಿರಂತರ ದಾಳಿ ನಡೆಸುತ್ತಿದೆ.
ಹಿಜ್ಬುಲ್ಲಾ, ಹಮಾಸ್ ಮತ್ತು ಹೌತಿಗಳಂತಹ ಉಗ್ರ ಸಂಘಟನೆಗಳು ಇರಾನ್ ಬೆಂಬಲಕ್ಕೆ ನಿಂತಿರುವುದರಿಂದ, ನಾಲ್ಕು ದಿಕ್ಕುಗಳಿಂದ ಎದುರಾಗುವ ಸವಾಲನ್ನು ಎದುರಿಸಲು ಈ ಬೃಹತ್ ರಕ್ಷಣಾ ಬಜೆಟ್ ಅನಿವಾರ್ಯವಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ನೆತನ್ಯಾಹು ಸರ್ಕಾರದ ರಾಜಕೀಯ ಚದುರಂಗದಾಟ

ಈ ಬಜೆಟ್ ಅನುಮೋದನೆಯು ಕೇವಲ ಯುದ್ಧದ ಸಿದ್ಧತೆಯಲ್ಲದೆ, ನೆತನ್ಯಾಹು ಅವರ ರಾಜಕೀಯ ಅಸ್ತಿತ್ವದ ಹೋರಾಟವೂ ಆಗಿದೆ. ಮಂಗಳವಾರ ಇಸ್ರೇಲ್‌ನಲ್ಲಿ ಸ್ನ್ಯಾಪ್ ಎಲೆಕ್ಷನ್ ನಡೆಯಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬಜೆಟ್ ಅಂಗೀಕಾರವಾಗಿದ್ದರಿಂದ, ಚುನಾವಣೆ ಮುಂದೂಡಲ್ಪಟ್ಟಿದೆ. ಇದು ನೆತನ್ಯಾಹು ಸರ್ಕಾರ ಅಕ್ಟೋಬರ್‌ವರೆಗೆ ಅಧಿಕಾರದಲ್ಲಿ ಮುಂದುವರಿಯಲು ದಾರಿ ಮಾಡಿಕೊಟ್ಟಿದೆ.
ಈ ಬಗ್ಗೆ ಮಾತನಾಡಿದ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್, ಇದು ಯುದ್ಧಕಾಲದ ಬಜೆಟ್ ಆಗಿದ್ದು. ನಮ್ಮ ಗುರಿ ಇಸ್ರೇಲ್‌ನ ಭದ್ರತೆ ಮತ್ತು ಆರ್ಥಿಕತೆಯನ್ನು ಸುಧಾರಿಸುವುದಾಗಿದೆ. ಈ ಬಜೆಟ್ ಮೂಲಕ ನಮ್ಮ ಸರ್ಕಾರ ತನ್ನ ಪೂರ್ಣಾವಧಿಯನ್ನು ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿರೋಧ ಪಕ್ಷಗಳ ಆಕ್ರೋಶ: ಇವರು ಜನರ ಹಣ ಲೂಟಿ ಮಾಡುವ ಕಳ್ಳರು

ಸರ್ಕಾರದ ಈ ಹಠಾತ್ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕ ಯಾಯಿರ್ ಲಾಪಿಡ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ Xನಲ್ಲಿ ಪೋಸ್ಟ್ ಮಾಡಿರುವ ವಿಪಕ್ಷ ನಾಯಕ, ಇದು ಸಾರ್ವಜನಿಕರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಕಳ್ಳರ ಗುಂಪು. ಯುದ್ಧದ ಭೀತಿಯಿಂದ ಬಂಕರ್‌ಗಳಲ್ಲಿ ವಾಸಿಸುತ್ತಿರುವ ನಾಗರಿಕರ ಹಣವನ್ನು ಇವರು ಲೂಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇಸ್ರೇಲ್ ಇತಿಹಾಸದಲ್ಲಿಯೇ ಇಂತಹ ಕೊನೆಯ ಕ್ಷಣದ ಬಜೆಟ್ ಬದಲಾವಣೆ ಮೊದಲ ಬಾರಿ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಆದರೆ ಸರ್ಕಾರ ಮಾತ್ರ ದೇಶದ ಭದ್ರತೆಯ ಹಿತದೃಷ್ಟಿಯಿಂದ ಬ್ಯಾಂಕುಗಳ ಮೇಲೆ ತೆರಿಗೆ ವಿಧಿಸಿ, ಜನ ಸಾಮಾನ್ಯರಿಗೆ ತೆರಿಗೆ ವಿನಾಯಿತಿ ನೀಡಿರುವುದಾಗಿ ಸಮರ್ಥಿಸಿಕೊಂಡಿದೆ.

ಮುಂದಿನ ಹಾದಿ ಏನು..?

ಇಸ್ರೇಲ್‌ನ ಈ ಬೃಹತ್ ಹಣಕಾಸು ಹೂಡಿಕೆಯು ಮಧ್ಯಪ್ರಾಚ್ಯದಲ್ಲಿ ಯುದ್ಧ ಮತ್ತಷ್ಟು ದೀರ್ಘಕಾಲ ನಡೆಯಲಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ. ಇರಾನ್ ಮಾತ್ರವಲ್ಲದೆ, ಅದರ ಬೆಂಬಲಿತ ಸಂಘಟನೆಗಳನ್ನು ಪೂರ್ಣವಾಗಿ ಮಟ್ಟಹಾಕಲು ಇಸ್ರೇಲ್ ಸಜ್ಜಾಗಿದೆ. ಈ ಬಜೆಟ್ ಬೆಂಬಲದೊಂದಿಗೆ ಇಸ್ರೇಲ್ ಸೇನೆ ಇನ್ನಷ್ಟು ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ,(ಏಜೆನ್ಸೀಸ್​).