ಹಮಾಸ್​ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್​ ಒಡೆಹ್​ ಸಾವು 
ವಿದೇಶ

ಗಾಜಾ ಮೇಲೆ ಇಸ್ರೇಲ್​ ಮಿಸೈಲ್​ ಅಟ್ಯಾಕ್​: ಹಮಾಸ್​ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಒಡೆಹ್ ಬಲಿ; ಬೂದಿ ಮುಚ್ಚಿದ ಕೆಂಡವಾದ ಮಧ್ಯಪ್ರಾಚ್ಯ! Mohammed Odeh Killed

ಪ್ರಮುಖ ಮುಖ್ಯಾಂಶಗಳು

  • ಗಾಜಾ ಮೇಲೆ ಇಸ್ರೇಲ್​ ದಾಳಿ
  • ಹಮಾಸ್​ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್​ ಒಡೆಹ್​ ಸಾವು
  • ಬೂದಿ ಮುಚ್ಚಿದ ಕೆಂಡವಾದ ಮಧ್ಯಪ್ರಾಚ್ಯ
ಇಸ್ರೇಲ್​:  ಮಂಗಳವಾರ (ಮೇ.26) ಗಾಜಾ ಪಟ್ಟಿ ಮೇಲೆ ಮತ್ತೊಮ್ಮೆ ಭೀಕರ ವಾಯುದಾಳಿ ನಡೆಸಿದ ಇಸ್ರೇಲ್​ ಈ ದಾಳಿಯಲ್ಲಿ ಹಮಾಸ್​ ಮಿಲಿಟರಿಯ ನೂತನ ಸೇನಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮೊಹಮ್ಮದ್ ಒಡೆಹ್ (Mohammed Odeh Killed) ನನ್ನು ಬಲಿ ಪಡೆದಿದೆ ಎಂದು ವರದಿಯಾಗಿದೆ.
ಈ ಸಂಘಟಿತ ದಾಳಿಯಲ್ಲಿ ಹಮಾಸ್​ನ ಮೂರು ಜನ ಸಾವನ್ನಪ್ಪಿದ್ದು, 12 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆಂದು ಇಸ್ರೇಲ್​ ತಿಳಿಸಿದೆ. ಈ ದಾಳಿಯ ಮುಖ್ಯ ಉದ್ದೇಶವು ಹಮಾಸ್​ ಸಂಘಟನೆಯ ನೂತನ ಮುಖ್ಯಸ್ಥನನ್ನು ಕೊಲ್ಲುವುದಾಗಿತ್ತು, ನಾವು ಅದರಲ್ಲಿ ಯಶಸ್ವಿಯಾಗಿದ್ದೆ ಎಂದು ಇಸ್ರೇಲ್​ನ ಗುಪ್ತಚರ ಸಂಘಟನೆಯಾದ ಶಿನ್ ಬೆತ್​ ತಿಳಿಸಿದೆ.

ಬಿಲ್ಡಿಂಗ್ ಉಡಾಯಿಸಿದ ಇಸ್ರೇಲ್​!

ಇಸ್ರೇಲ್​ನ ರಕ್ಷಣಾ ಪಡೆ ಹಾಗೂ ಗುಪ್ತಚರ ಸಂಘಟನೆ ಶಿನ್ ಬೆತ್​ ಮೂಲಗಳ ಪ್ರಕಾರ, ಹಲವು ತಿಂಗಳುಗಳಿಂದ ಮೊಹಮ್ಮದ್ ಒಡೆಹ್ ಚಲನ-ವಲನಗಳ ಮೇಲೆ ನಿಗಾ ಇಡಲಾಗಿತ್ತು. ಸರಿಯಾದ ಸಮಯ ನೋಡಿ, ದಾಳಿ ನಡೆಸಿದ ಪರಿಣಾಮ ನಮ್ಮ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಹೇಳಿದೆ.
ಗಾಜಾದ ಹೃದಯ ಭಾಗದಲ್ಲಿರುವ ಮೊಹಮ್ಮದ್ ಒಡೆಹ್​ನ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ ಪರಿಣಾಮ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ ಒಡೆಹ್​ ಮತ್ತು ಆತನ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮಗ ಬುಧವಾರ (ಮೇ.27) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. 

ಇಸ್ರೇಲ್​ ದಾಳಿಯ ಮಾಸ್ಟರ್​ಮೈಂಡ್​ ಒಡೆಹ್​!

2023 ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್​ ಉಗ್ರರು ನಡೆಸಿದ್ದ ದಾಳಿಯ ಮಾಸ್ಟರ್​ಮೈಂಡ್​ ಈ ಮೊಹಮ್ಮದ್ ಒಡೆಹ್ ಎಂದು ಹೇಳಲಾಗಿದ್ದು, ಅದರ ಪ್ರತೀಕಾರವನ್ನು ಈಗ ಇಸ್ರೇಲ್​ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಇಸ್ರೇಲ್​, ಇರಾನ್​ ಜೊತೆ ಯುದ್ಧದಲ್ಲಿದ್ದಾಗ, ಹಮಾಸ್​ ತೊಂದರೆ ನೀಡಿದ್ದಕ್ಕೆ ಈ ದಾಳಿ ನಡೆಸಲಾಗಿದೆ ಎನ್ನುವುದು ಅಂತಾರಾಷ್ಟ್ರೀಯ ಪರಿಣಿತರ ಅಭಿಪ್ರಾಯವಾಗಿದೆ, (ಏಜನ್ಸೀಸ್).