ಇಸ್ರೇಲ್-ಇರಾನ್ ಯುದ್ಧ; ಜಗತ್ತು ನಿಷೇಧಿಸಿದ 10 ಮಾರಕ ಶಸ್ತ್ರಾಸ್ತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು..? 
ವಿದೇಶ

ಇಸ್ರೇಲ್-ಇರಾನ್ ಯುದ್ಧ; ಜಗತ್ತು ನಿಷೇಧಿಸಿದ 10 ಮಾರಕ ಶಸ್ತ್ರಾಸ್ತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು..? Banned Weapons

ನವದೆಹಲಿ: ಬ್ರಿಟಿಷ್ ಲೇಖಕಿ ಜೆ.ಕೆ. ರೌಲಿಂಗ್ ಅವರ 'ಹ್ಯಾರಿ ಪಾಟರ್' ಜಗತ್ತಿನಲ್ಲಿ ಮೂರು ಭಯಾನಕ ಮಾಂತ್ರಿಕ ಶಾಪಗಳಿವೆ. ಈ ಶಾಪಗಳನ್ನು ಬಳಸುವ ಮಾಂತ್ರಿಕನನ್ನು ನೇರವಾಗಿ ಅಜ್ಕಾಬನ್ ಜೈಲಿಗೆ ಕಳುಹಿಸಲಾಗುತ್ತದೆ. ಆದರೆ, ಮಾಯಾ ಪ್ರಪಂಚದ ಈ ಕಥೆ ನೈಜ ಜಗತ್ತಿನ ಯುದ್ಧ ಭೂಮಿಗೂ(BannedWeapons) ಅನ್ವಯಿಸುತ್ತದೆ ಎಂದರೆ ನೀವು ನಂಬಲೇಬೇಕು. 
ಮನುಷ್ಯ ನಿರ್ಮಿತ ತಂತ್ರಜ್ಞಾನ ಎಷ್ಟು ಅಪಾಯಕಾರಿಯಾಗಿದೆಯೆಂದರೆ, ನಿಯಮಗಳಿಲ್ಲದ ಯುದ್ಧ ಇಡೀ ನಾಗರಿಕತೆಯನ್ನೇ ನಾಶಮಾಡಬಲ್ಲದು. ಇದಕ್ಕಾಗಿಯೇ ಜಗತ್ತು ಜಿನೀವಾ ಒಪ್ಪಂದಗಳ ಮೂಲಕ ಕೆಲವು ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಇವುಗಳನ್ನು ಯುದ್ಧದ ಅಪರಿಮಿತ ಶಾಪಗಳು ಎನ್ನಬಹುದು.

ಮಾನವಕುಲ ಬೆಚ್ಚಿಬೀಳುವ ಆ 10 ನಿಷೇಧಿತ ಶಸ್ತ್ರಾಸ್ತ್ರಗಳು

ಯುದ್ಧದ ನಿಯಮಗಳ ಪ್ರಕಾರ, ನಾಗರಿಕರ ಮೇಲೆ ದಾಳಿ ಮಾಡುವುದು ಮತ್ತು ಅನಗತ್ಯ ಸಾವು-ನೋವುಗಳನ್ನು ಉಂಟುಮಾಡುವ ಶಸ್ತ್ರಾಸ್ತ್ರಗಳ ಬಳಕೆ ಅಪರಾಧವಾಗಿದೆ. ಜಗತ್ತು ಭಯಪಡುವ ಆ ಪ್ರಮುಖ ಆಯುಧಗಳು ಇಲ್ಲಿವೆ. 

1. ಜೈವಿಕ ಶಸ್ತ್ರಾಸ್ತ್ರಗಳು 

ಇವುಗಳನ್ನು ನಿಶ್ಯಬ್ದ ಶಸ್ತ್ರಾಸ್ತ್ರಗಳು ಎಂದು ಕರೆಯಲಾಗುತ್ತದೆ. ವೈರಸ್, ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳನ್ನು ಬಳಸಿ ಸಾಂಕ್ರಾಮಿಕ ರೋಗಗಳನ್ನು ಹರಡುವುದು ಇದರ ಉದ್ದೇಶ. ಇದು ಸೈನಿಕರು ಮತ್ತು ನಾಗರಿಕರ ನಡುವೆ ವ್ಯತ್ಯಾಸ ಕಾಣುವುದಿಲ್ಲ. 1972ರ ಒಪ್ಪಂದದಂತೆ ಇವುಗಳ ಉತ್ಪಾದನೆ ಸಂಪೂರ್ಣ ನಿಷೇಧಿತ.

2. ರಾಸಾಯನಿಕ ಶಸ್ತ್ರಾಸ್ತ್ರಗಳು

ಕ್ಲೋರಿನ್ ಗ್ಯಾಸ್, ಸರಿನ್ ಗ್ಯಾಸ್ ಅಥವಾ ವಿಎಕ್ಸ್ ನಂತಹ ಅನಿಲಗಳು ಮನುಷ್ಯನ ನರಮಂಡಲವನ್ನೇ ಸ್ಥಗಿತಗೊಳಿಸುತ್ತವೆ. 1915ರಲ್ಲಿ ಮೊದಲ ಬಾರಿಗೆ ಬಳಸಲ್ಪಟ್ಟ ಈ ಅನಿಲಗಳು ಸಾವಿರಾರು ಜನರನ್ನು ಉಸಿರುಗಟ್ಟಿಸಿ ಸಾಯಿಸಿದ್ದವು.

3. ಲ್ಯಾಂಡ್‌ಮೈನ್‌ಗಳು

ಭೂಮಿಯ ಅಡಿಯಲ್ಲಿ ಹೂತಿಟ್ಟ ಈ ಬಾಂಬ್‌ಗಳು ಯುದ್ಧ ಮುಗಿದ ದಶಕಗಳ ನಂತರವೂ ಸಕ್ರಿಯವಾಗಿರುತ್ತವೆ. ಅಫ್ಘಾನಿಸ್ತಾನ ಮತ್ತು ಕಾಂಬೋಡಿಯಾದಲ್ಲಿ ಇಂದಿಗೂ ರೈತರು ಮತ್ತು ಮಕ್ಕಳು ಇವುಗಳಿಗೆ ಬಲಿಯಾಗುತ್ತಿದ್ದಾರೆ. 1997ರ ಒಪ್ಪಂದದ ಪ್ರಕಾರ ಇವುಗಳನ್ನು ನಿಷೇಧಿಸಲಾಗಿದೆ.

4. ಕ್ಲಸ್ಟರ್ ಬಾಂಬ್‌ಗಳು

ಒಂದೇ ದೊಡ್ಡ ಬಾಂಬ್ ಗಾಳಿಯಲ್ಲಿ ಸಿಡಿದು ನೂರಾರು ಸಣ್ಣ ಸ್ಫೋಟಕಗಳನ್ನು ಹರಡುತ್ತದೆ. ಇವುಗಳಲ್ಲಿ ಹಲವು ತಕ್ಷಣ ಸಿಡಿಯದೆ ಭೂಮಿಯ ಮೇಲೆ ಹಾಗೆಯೇ ಉಳಿಯುತ್ತವೆ, ಇದು ಮುಂದೊಂದು ದಿನ ನಾಗರಿಕರಿಗೆ ಮೃತ್ಯುಪಾಸವಾಗುತ್ತದೆ.

5. ವೈಟ್ ಫಾಸ್ಫರಸ್ 

ಇದು ಆಮ್ಲಜನಕದ ಸಂಪರ್ಕಕ್ಕೆ ಬಂದ ಕೂಡಲೇ 800C ಗಿಂತ ಹೆಚ್ಚಿನ ತಾಪಮಾನದಲ್ಲಿ ಉರಿಯುತ್ತದೆ. ಇದು ಮನುಷ್ಯನ ಚರ್ಮವನ್ನು ಸುಟ್ಟು ನೇರವಾಗಿ ಮೂಳೆಗಳನ್ನೇ ಭೇದಿಸಬಲ್ಲದು. ನಾಗರಿಕ ಪ್ರದೇಶಗಳಲ್ಲಿ ಇದರ ಬಳಕೆ ಯುದ್ಧಾಪರಾಧ ಎಂದು ಪರಿಗಣಿಸಲಾಗುತ್ತದೆ.

6. ಅಣುಶಕ್ತಿ ಶಸ್ತ್ರಾಸ್ತ್ರಗಳು

ಹಿರೋಷಿಮಾ ಮತ್ತು ನಾಗಾಸಾಕಿಯ ವಿನಾಶ ನಮಗೆಲ್ಲ ತಿಳಿದಿದೆ. ಇವುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸದಿದ್ದರೂ, ಅವುಗಳ ಹರಡುವಿಕೆಯನ್ನು ತಡೆಯಲು ಕಠಿಣ ನಿಯಮಗಳಿವೆ.

7. ಡರ್ಟಿ ಬಾಂಬ್

ಸಾಮಾನ್ಯ ಸ್ಫೋಟಕಗಳ ಜೊತೆಗೆ ವಿಕಿರಣಶೀಲ ವಸ್ತುಗಳನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಇದು ಅಣುಬಾಂಬ್‌ನಂತೆ ದೊಡ್ಡ ಸ್ಫೋಟ ಮಾಡದಿದ್ದರೂ, ಇಡೀ ಪ್ರದೇಶವನ್ನು ವಿಕಿರಣದಿಂದ ಕಲುಷಿತಗೊಳಿಸಿ ಭೀತಿ ಹುಟ್ಟಿಸುತ್ತದೆ.

8. ವ್ಯಾಕ್ಯೂಮ್ ಬಾಂಬ್ 

ಇದು ವಾತಾವರಣದಲ್ಲಿರುವ ಆಮ್ಲಜನಕವನ್ನೇ ಬಳಸಿ ಭೀಕರ ಸ್ಫೋಟ ಉಂಟುಮಾಡುತ್ತದೆ. ಇದು ಬಂಕರ್‌ಗಳ ಒಳಗೆ ಅಡಗಿರುವವರ ಮೇಲೂ ತೀವ್ರ ಪರಿಣಾಮ ಬೀರುತ್ತದೆ.

9. ಕುರುಡು ಮಾಡುವ ಲೇಸರ್ ಆಯುಧಗಳು 

ಸೈನಿಕರನ್ನು ಶಾಶ್ವತವಾಗಿ ಕುರುಡು ಮಾಡುವ ಉದ್ದೇಶದಿಂದ ತಯಾರಾದ ಲೇಸರ್‌ಗಳನ್ನು 1995ರಲ್ಲಿಯೇ ನಿಷೇಧಿಸಲಾಗಿದೆ. ಬಳಕೆಗೆ ಬರುವ ಮೊದಲೇ ನಿಷೇಧಕ್ಕೊಳಗಾದ ಮೊದಲ ಶಸ್ತ್ರಾಸ್ತ್ರವಿದು.

10. ಎಕ್ಸ್‌ಪಾಂಡಿಂಗ್ ಬುಲೆಟ್‌ಗಳು

ದೇಹದ ಒಳಗೆ ಹೋದ ಕೂಡಲೇ ವಿಸ್ತಾರಗೊಳ್ಳುವ ಈ ಗುಂಡುಗಳು ಅಂಗಾಂಗಗಳನ್ನು ಸಂಪೂರ್ಣವಾಗಿ ಹರಿದು ಹಾಕುತ್ತವೆ. ಇವುಗಳು ನೀಡುವ ಅತೀವ ನೋವಿನ ಕಾರಣಕ್ಕಾಗಿ 1899ರಲ್ಲಿಯೇ ನಿಷೇಧಿಸಲಾಗಿದೆ.

ಮಧ್ಯಪ್ರಾಚ್ಯ ಯುದ್ಧ ಮತ್ತು ಈಗಿನ ಆತಂಕ

ಪ್ರಸ್ತುತ ನಡೆಯುತ್ತಿರುವ ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಲ್ಲಿ ಈ ಮೇಲಿನ ಹಲವು ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ವರದಿಗಳು ಕೇಳಿಬರುತ್ತಿವೆ. ಗಾಜಾ ಮತ್ತು ಲೆಬನಾನ್‌ನಲ್ಲಿ ವೈಟ್ ಫಾಸ್ಫರಸ್ ಬಳಕೆ ಮಾಡಲಾಗಿದೆ ಎಂಬ ಆರೋಪಗಳು ಮತ್ತು ಇರಾನ್‌ನ ಅಣುಬಾಂಬ್ ಸಿದ್ಧತೆಯ ಆತಂಕ ಇಡೀ ಜಗತ್ತನ್ನು ತಲ್ಲಣಗೊಳಿಸಿದೆ. ನಾಗರಿಕ ಪ್ರದೇಶಗಳಲ್ಲಿ ಇಂತಹ ಶಸ್ತ್ರಾಸ್ತ್ರಗಳ ಬಳಕೆ ಭೀಕರ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಬಹುದು.

ನಿಯಮ ಮುರಿದರೆ ಶಿಕ್ಷೆ ಏನು..?

ಯುದ್ಧದ ನಿಯಮಗಳನ್ನು ಮುರಿದರೆ ಅಂತಹವರನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ವಿಚಾರಣೆಗೆ ಒಳಪಡಿಸುತ್ತದೆ.
ಹಳೆಯ ಉದಾಹರಣೆ ಎಂದರೆ ಇರಾಕ್‌ನ ಕೆಮಿಕಲ್ ಅಲಿಗೆ ರಾಸಾಯನಿಕ ಶಸ್ತ್ರಾಸ್ತ್ರ ಬಳಸಿದ್ದಕ್ಕಾಗಿ ಮರಣದಂಡನೆ ನೀಡಲಾಗಿತ್ತು.
ಬೋಸ್ನಿಯನ್ ನರಮೇಧಕ್ಕೆ ಕಾರಣರಾದ ನಾಯಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಆದರೆ, ಅಮೆರಿಕ ಮತ್ತು ರಷ್ಯಾದಂತಹ ಪ್ರಬಲ ರಾಷ್ಟ್ರಗಳು ಈ ಕೋರ್ಟ್‌ನ ಅಧಿಕಾರವನ್ನು ಒಪ್ಪಿಕೊಳ್ಳದಿರುವುದು ನಿಯಮಗಳ ಜಾರಿಗೆ ದೊಡ್ಡ ಅಡ್ಡಿಯಾಗಿದೆ.
ಯುದ್ಧ ಎಂಬುದು ಮಾನವ ಇತಿಹಾಸದ ಕಹಿ ಸತ್ಯ. ಆದರೆ ಅದನ್ನು ಸಂಪೂರ್ಣ ಅನಾಗರಿಕತೆಯತ್ತ ಜಾರದಂತೆ ತಡೆಯಲು ಈ ನಿಯಮಗಳು ಅವಶ್ಯಕವಾಗಿದೆ. ಹ್ಯಾರಿ ಪಾಟರ್ ಜಗತ್ತಿನಲ್ಲಿ ನಿಷೇಧಿತ ಶಾಪಗಳನ್ನು ಬಳಸುವವರು ಹೇಗೋ, ಹಾಗೆಯೇ ನೈಜ ಪ್ರಪಂಚದಲ್ಲಿ ಈ ಶಸ್ತ್ರಾಸ್ತ್ರಗಳನ್ನು ಬಳಸುವವರು ಇಡೀ ನಾಗರಿಕತೆಯ ಶತ್ರುಗಳಾಗಿರುತ್ತಾರೆ. ನಿಯಮಗಳಿಲ್ಲದ ಯುದ್ಧದಲ್ಲಿ ಗೆಲುವು ಯಾರಿಗೂ ಸಿಗದು, ಅಲ್ಲಿ ಉಳಿಯುವುದು ಕೇವಲ ವಿನಾಶ ಮಾತ್ರ,(ಏಜೆನ್ಸೀಸ್).