- ಸಿರಿಯಾದ ಪಾಲ್ಮಿರಾ ನಗರದಲ್ಲಿ ಅಮೆರಿಕನ್ ಪಡೆಗಳ ಮೇಲೆ ಐಸಿಸ್ ದಾಳಿ
- ದಾಳಿಯಲ್ಲಿ ಇಬ್ಬರೂ ಸೈಸಿಕರು ಮತ್ತು ಒಬ್ಬ ಅಮೆರಿಕಾದ ನಾಗರಿಕ ಸಾವು
- ಈ ದಾಳಿಗೆ ತಕ್ಕ ಪ್ರತೀಕಾರ ತೆಗೆದುಕೊಳ್ಳುತ್ತೇವೆ : ಟ್ರಂಪ್
ಸಿರಿಯಾ : ಶನಿವಾರ(ಡಿ.13) ಮಧ್ಯ ಸಿರಿಯಾ(Syria) ದ ಪಾಲ್ಮಿರಾ ನಗರದಲ್ಲಿ ಇಸ್ಲಾಮಿಕ್ ಸ್ಟೇಟ್ (ISIS) ದಾಳಿಕೋರನೊಬ್ಬ ಅಮೆರಿಕದ ಸೈನಿಕರ ಮೇಲೆ ದಾಳಿ ನಡೆಸಿದ್ದು, ಇಬ್ಬರು ಅಮೆರಿಕದ ಸೈನಿಕರು ಮತ್ತು ಒಬ್ಬ ಅಮೆರಿಕದ ನಾಗರಿಕ ಸಾವನ್ನಪ್ಪಿದ್ದು, ಇತರ ಮೂವರು ಅಮೆರಿಕದ ಸೈನಿಕರು ಗಾಯಗೊಂಡಿದ್ದಾರೆ. ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಪ್ರಕಾರ, ಐಸಿಸ್ ವಿರುದ್ಧ ನಡೆಯುತ್ತಿರುವ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ ಅಮೆರಿಕದ ಸೈನಿಕರು ಸಭೆಯಲ್ಲಿ ಭಾಗವಹಿಸುತ್ತಿದ್ದಾಗ ಈ ದಾಳಿ ನಡೆದಿದೆ. ದಾಳಿಕೋರನನ್ನು ಸಿರಿಯನ್ ಪಡೆಗಳು ಸ್ಥಳದಲ್ಲಿಯೇ ಕೊಂದಿವೆ.
ಸಿರಿಯನ್ ಮಾಧ್ಯಮಗಳ ಪ್ರಕಾರ, ಸಿರಿಯನ್ ಭದ್ರತಾ ಪಡೆಗಳ ಕೆಲವು ಸದಸ್ಯರು ಸಹ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಅಲ್-ತನ್ಫ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗೆ ಕರೆದೊಯ್ಯಲಾಗಿದೆ. ಬಶರ್ ಅಲ್-ಅಸ್ಸಾದ್ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ ನಂತರ ಅಮೆರಿಕ ಪಡೆಗಳ ಮೇಲೆ ನಡೆದ ಮೊದಲ ದಾಳಿ ಇದಾಗಿದ್ದು, ದಾಳಿಗೆ ಕಾರಣವಾದ ಗುಂಪಿನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸಿರಿಯಾದಲ್ಲಿ ಐಸಿಸ್ ಸ್ಲೀಪರ್ ಸೆಲ್‌ಗಳು ಸಕ್ರಿಯವಾಗಿವೆ
2019 ರಲ್ಲಿ ಐಸಿಸ್ ಅನ್ನು ಪ್ರಾದೇಶಿಕವಾಗಿ ಸೋಲಿಸಲಾಗಿದೆಯಾದರೂ, ಸಿರಿಯಾ ಮತ್ತು ಇರಾಕ್‌ನಲ್ಲಿ ಸ್ಲೀಪರ್ ಸೆಲ್‌ಗಳು ಇನ್ನೂ ಸಕ್ರಿಯವಾಗಿವೆ ಎಂದು ವರದಿಯಾಗಿದೆ. ಐಸಿಸ್ ಇನ್ನೂ 5,000 ರಿಂದ 7,000 ಹೋರಾಟಗಾರರನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.ಐಸಿಸ್‌ನ ಬೆಳವಣಿಗೆಯನ್ನು ತಡೆಯುವ ಒಕ್ಕೂಟದ ಭಾಗವಾಗಿರುವ ಪೂರ್ವ ಸಿರಿಯಾದಲ್ಲಿ ನೂರಾರು ಯುಎಸ್ ಸೈನಿಕರನ್ನು ನಿಯೋಜಿಸಲಾಗಿದೆ. ಡಿಸೆಂಬರ್ 2024 ರಲ್ಲಿ ನಡೆದ ದಂಗೆಯ ನಂತರ, ಅಹ್ಮದ್ ಅಲ್-ಶರಾ ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.ಅಸ್ಸಾದ್ ಪತನದ ನಂತರ, ಹೊಸ ಮಧ್ಯಂತರ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರ ನೇತೃತ್ವದಲ್ಲಿ ಅಮೆರಿಕದೊಂದಿಗಿನ ಸಿರಿಯಾದ ಸಂಬಂಧಗಳು ಸುಧಾರಿಸಿವೆ. ಸಿರಿಯಾ ಇತ್ತೀಚೆಗೆ ಐಸಿಸ್ ವಿರೋಧಿ ಒಕ್ಕೂಟಕ್ಕೆ ಸೇರಿದೆ.
ಇದು ಅಮೆರಿಕ ಮತ್ತು ಸಿರಿಯಾ ಎರಡರ ಮೇಲೂ ದಾಳಿ : ಟ್ರಂಪ್
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ನಡೆದ ದಾಳಿಯನ್ನು ಅಮೆರಿಕ ಮತ್ತು ಸಿರಿಯಾ ಎರಡರ ಮೇಲೂ ಐಸಿಸ್ ನಡೆಸಿದ ದಾಳಿ ಎಂದು ಬಣ್ಣಿಸಿದ್ದಾರೆ ಮತ್ತು ಇದಕ್ಕಾಗಿ ಗಂಭೀರ ಪ್ರತೀಕಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಸಿರಿಯನ್ ಅಧ್ಯಕ್ಷ ಅಲ್-ಶರಾ ಈ ಘಟನೆಯಿಂದ ತೀವ್ರ ದುಃಖಿತರಾಗಿದ್ದಾರೆ ಮತ್ತು ಕೋಪಗೊಂಡಿದ್ದಾರೆ ಎಂದು ಟ್ರಂಪ್ ಹೇಳಿದ್ದು, ಗಾಯಗೊಂಡ ಅಮೇರಿಕನ್ ಸೈನಿಕರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸಿರಿಯಾದಲ್ಲಿ ಅಮೆರಿಕದ 1,000 ಸೈನಿಕರ ನಿಯೋಜನೆ
ಯುಎಸ್ 2014 ರಿಂದ ಸಿರಿಯಾದಲ್ಲಿ ತನ್ನ ಸೈನಿಕರನ್ನು ನಿಯೋಜಿಸುತ್ತಿದೆ. ಆರಂಭದಲ್ಲಿ, ಇರಾನ್ ಬೆಂಬಲಿತ ಭಯೋತ್ಪಾದಕರು ಮತ್ತು ರಷ್ಯಾದ ಬೆದರಿಕೆಯನ್ನು ನಿಗೃಹಿಸಲು ಸೈನ್ಯ ನಿಯೋಜನೆ ಮಾಡಲಾಗಿತ್ತು. ಆದರೆ ಈಗ ಐಸಿಸ್ ನಿಗ್ರಹವು ಮುಖ್ಯ ಗುರಿಯಾಗಿದೆ.
ಡಿಸೆಂಬರ್ 2025 ರ ಹೊತ್ತಿಗೆ, ಪೂರ್ವ ಮತ್ತು ಈಶಾನ್ಯ ಸಿರಿಯಾದಲ್ಲಿ ಸುಮಾರು 1,000 ಯುಎಸ್ ಪಡೆಗಳು ನಿಯೋಜಿಸಲ್ಪಟ್ಟಿವೆ. ಈ ಪಡೆಗಳು ಕುರ್ದಿಷ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (SDF) ನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತವೆ.(ಏಜೆನ್ಸೀಸ್).