ಇರಾನಿ ಗಾಯಕಿ ಪರಸ್ತೂ ಅಹ್ಮದಿ 
ವಿದೇಶ

ಹಿಜಾಬ್ ಧರಿಸದೇ ಕಾನ್ಸರ್ಟ್​​ನಲ್ಲಿ ಸಂಗೀತ ಪ್ರದರ್ಶನ: ಇರಾನಿ ಗಾಯಕಿ ಪರಸ್ತೂ ಅಹ್ಮದಿಗೆ 74 ಛಡಿಯೇಟು ಶಿಕ್ಷೆ | Iranian singer

ಟೆಹ್ರಾನ್​: ಸಂಗೀತ ಕಾರ್ಯಕ್ರಮವೊಂದರಲ್ಲಿ ಹಿಜಾಬ್ ಧರಿಸದೇ ಪ್ರದರ್ಶನ ನೀಡಿದ ಆರೋಪದ ಮೇಲೆ 29 ವರ್ಷದ ಇರಾನಿ ಗಾಯಕಿ ಪರಸ್ತೂ ಅಹ್ಮದಿಗೆ(Iranian singer), ಅಲ್ಲಿನ ನ್ಯಾಯಾಲಯವು, ಎರಡು ವರ್ಷ ಸಂಗೀತ ಪ್ರದರ್ಶನ ಬ್ಯಾನ್ ಮಾಡುವ ಜೊತೆಗೆ 74 ಛಡಿಯೇಟು ಶಿಕ್ಷೆ ವಿಧಿಸಿದೆ ಎಂದು ಶನಿವಾರ(ಜೂ. 20) ವರದಿಯಾಗಿದೆ.
2024ರ ಡಿಸೆಂಬರ್​​ನಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಪರಸ್ತೂ ಅಹ್ಮದಿ ಹಿಜಾಬ್ ಧರಿಸದೆ ದೇಶಭಕ್ತಿ ಗೀತೆಯಾದ ಅಜ್ ಖೂನೆ ಜವಾನನೆ ವತನ್ ಹಾಡನ್ನು ಹಾಡಿದ್ದರು. ಬಳಿಕ ಅದನ್ನು ಯ್ಯೂಟೂಬ್​ ಚಾನಲ್​ನಲ್ಲಿ ಪ್ರಸಾರ ಮಾಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.
ಬಳಿಕ ಇಸ್ಲಾಮಿಕ್ ರಾಷ್ಟ್ರವಾದ ಇರಾನ್​ನಲ್ಲಿ ಹಿಜಾಬ್ ಧರಿಸದೇ ಪ್ರದರ್ಶನ ನೀಡಿದ ಹಿನ್ನೆಲೆ ಅಧಿಕಾರಿಗಳು ಅವರ ವಿರುದ್ಧ ಅಶ್ಲೀಲ ಮತ್ತು ಅನೈತಿಕ ಹಾಗೂ ಸಾರ್ವಜನಿಕ ಸಭ್ಯತೆಯನ್ನು ಉಲ್ಲಂಘಿಸುವ ಎಂದು ಆರೋಪದ ಮೇಲೆ ಅಹ್ಮದಿ ಮತ್ತು ಹಲವಾರು ಸಂಗೀತಗಾರರನ್ನು ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಇತ್ತೀಚೆಗೆ ಆ ಕುರಿತು ವಿಚಾರಣೆ ನಡೆಸಿದ ಇರಾನ್ ನ್ಯಾಯಾಲಯವು ಅಂತಿಮ ತೀರ್ಪು ನೀಡಿದ್ದು, ಸಂಗೀತಗಾರರು ಸೇರಿದಂತೆ ಕಾನ್ಸರ್ಟ್​ ನಡೆಸಿದ ತಂಡದ ಎಂಟು ಸದಸ್ಯರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಮತ್ತು 74 ಛಡಿಯೇಟುಗಳು ಶಿಕ್ಷೆ ನೀಡಿದ್ದು, ಇರಾನ್‌ನಿಂದ ಹೊರಹೋಗದಂತೆ ಎರಡು ವರ್ಷಗಳ ನಿಷೇಧ ಮತ್ತು ಕಲಾತ್ಮಕ ಚಟುವಟಿಕೆಗಳ ಮೇಲೆ ಎರಡು ವರ್ಷಗಳ ನಿಷೇಧವನ್ನು ವಿಧಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಇರಾನ್‌ನಲ್ಲಿರುವ ಅಮೆರಿಕ ಮೂಲದ ಮಾನವ ಹಕ್ಕುಗಳ ಕೇಂದ್ರದ ವಕಾಲತ್ತು ನಿರ್ದೇಶಕ ಬಹಾರ್ ಘಂಡೆಹರಿ, ಇರಾನ್ ಅಧಿಕಾರಿಗಳ ಯುದ್ಧಕಾಲದ ಪ್ರಚಾರ ಅಭಿಯಾನದ ಹೊರತಾಗಿಯೂ, ಇರಾನ್‌ನಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಗಳು ಬದಲಾಗಿಲ್ಲ ಎಂಬುದನ್ನು ಇದು ನೆನಪಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಇನ್ನೂ ಈ ತೀರ್ಪು ಇರಾನಿನ ಕಲಾ ಸಮುದಾಯದ ಪ್ರಮುಖ ವ್ಯಕ್ತಿಗಳಿಂದ ಟೀಕೆಗೆ ಗುರಿಯಾಗಿದೆ. ಮಾನವ ಹಕ್ಕುಗಳ ವಕೀಲ ಮೊಯಿನ್ ಖಜೇಲಿ ಕೂಡ ತೀರ್ಪಿನ ಕಾನೂನು ಆಧಾರವನ್ನು ಪ್ರಶ್ನಿಸಿದ್ದಾರೆ. ಇರಾನಿನ ಕ್ರಿಮಿನಲ್ ಕಾನೂನಿನಡಿಯಲ್ಲಿ ಮಹಿಳೆಯರು ಹಾಡುವುದು, ಸಂಗೀತ ಪ್ರದರ್ಶಿಸುವುದು ಮತ್ತು ಸಂಗೀತ ಕೃತಿಗಳನ್ನು ನಿರ್ಮಿಸುವುದು ಅಥವಾ ಪ್ರಸಾರ ಮಾಡುವುದು ಅಪರಾಧವಲ್ಲ. ಅಂತಹ ಚಟುವಟಿಕೆಗಳನ್ನು ಅಶ್ಲೀಲ ವಿಷಯದ ಉತ್ಪಾದನೆ, ವಿತರಣೆ ಅಥವಾ ಪ್ರಕಟಣೆ ಎಂದು ಅರ್ಥೈಸಲಾಗಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).