ಬಿಡದಿ ವಿಚಾರದಲ್ಲಿ HDK, BSY ಮಾಡಿದ್ದನ್ನೇ ಮುಂದುವರೆಸುತ್ತಿದ್ದೇವೆ: ಹೊಸದಲ್ಲ, ಬಲವಂತವಾಗಿ ಭೂಮಿ ಕೊಡಲು ಕೇಳಲ್ಲ: ಸಿಎಂ ಡಿ.ಕೆ.ಶಿವಕುಮಾರ್

ಸಿಎಂ ಡಿ.ಕೆ.ಶಿವಕುಮಾರ್
ಸಿಎಂ ಡಿ.ಕೆ.ಶಿವಕುಮಾರ್
Published on
ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಹೆಚ್​ಡಿಕೆ ಮತ್ತು ಬಿಎಸ್​​ವೈ(HDK, BSY) ಮಾಡಿದ್ದನ್ನೇ ನಾವು ಮುಂದುವರೆಸುತ್ತಿದ್ದೇವೆ ಹೊರೆತು ಹೊಸದೇನು ಮಾಡ್ತಿಲ್ಲ. ಹೊಸ ಕೈಗಾರಿಕೆ ಬರಬೇಕಿದೆ, ಯಾರಿಗೂ ಭೂಮಿ ಕೊಡಿ ಎಂದು ಬಲವಂತ ಮಾಡಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶನಿವಾರ(ಜೂ. 20) ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಡಿ ನೋಟಿಫಿಕೇಶನ್ ಮಾಡಿ ಜೈಲಿಗೆ ಹೋಗಲು ಸಿದ್ಧನಿಲ್ಲ. ಶೇ.80 ಮಂದಿ ಜಮೀನು ಕೊಡಲು‌ ಮುಂದೆ ಬಂದಿದ್ದಾರೆ. ಉತ್ತಮ ಬೆಲೆ ನಿಗದಿ‌ಮಾಡಲಾಗಿದೆ. ನಾನೇನು ಮಾಡಲಾಗಲ್ಲ. ದೇವನಹಳ್ಳಿಯಲ್ಲೂ ಸ್ವಯಂ‌ಪ್ರೇರಿತವಾಗಿ ಜಮೀನು ಕೊಡಲು ಮತ್ತು ಮುಂದೆ ಬರಲು ಕಾಲಾವಕಾಶ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾಸೇವಾ ಇಲಾಖೆ ರಚನೆ

ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಪ್ರಮುಖ ಘೋಷಣೆ ಮಾಡಿದ್ದು, ಸಾರ್ವಜನಿಕರ ಅಹವಾಲು ಆಲಿಕೆಗೆ ಸ್ಪಂದಿಸಲು, ನ್ಯಾಯ ಕೊಡಲು, ಸಮಸ್ಯೆ ಪರಿಹರಿಸಲು ಪ್ರತ್ಯೇಕ ಇಲಾಖೆ ರಚಿಸಲಾಗುತ್ತದೆ. ಅದಕ್ಕೆ ಪ್ರಜಾಸೇವೆ ಇಲಾಖೆ ಎಂದು ಹೆಸರಿಡಲಾಗುತ್ತಿದ್ದು, ಪ್ರತ್ಯೇಕ ಸಚಿವ ಮತ್ತು ಹಿರಿಯ ಐಎಎಸ್ ಅಧಿಕಾರಿ ಇರುತ್ತಾರೆ. ಆ ಇಲಾಖೆಯಿಂದ ನ್ಯಾಯ ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಮನೆ ಹಂಚಿಕೆ ವಿಚಾರ

ಒಸಿ ಸಿಸಿ ವಿಚಾರದಲ್ಲಿ ಸರಳೀಕರಣ ಮಾಡಲಾಗಿದೆ. 2026 ಮೇ 31ರೊಳಗೆ ಕಟ್ಟಡಕ್ಕೆ ಅರ್ಜಿ ಹಾಕಿದವರಿಗೆ ನೀಡಲಾಗುವುದು ಎಂದು ಹೇಳಿದ್ದೆವು. ಗುತ್ತಿಗೆದಾರರು ಅನುಕೂಲ ಆಗಲ್ಲ ಎಂದಿದ್ದರು. ಕಟ್ಟಡ ಪೂರ್ಣಗೊಂಡು ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿದ್ದರೆ ಅರ್ಜಿ ಸಲ್ಲಿಸಲು ಹದಿನೈದು ದಿನ‌ ಅವಕಾಶ ಕೊಡಲಾಗುತ್ತಿದೆ. ಫೋಟೋ ಜಿಪಿಎಸ್ ಕಡ್ಡಾಯ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ದೆಹಲಿಯಲ್ಲಿ ಕರ್ನಾಟಕ ಭವನ-4 ನಿರ್ಮಾಣ

ನವದೆಹಲಿಯಲ್ಲಿ ಯುಪಿಎಸ್​ಸಿ ತಯಾರಿ ಮಾಡುವ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಭವನ -4 ನಿರ್ಮಿಸಲು 80 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಶೇ.50 ಎಸ್ಸಿ ಮತ್ತು ಎಸ್ಟಿ, ಉಳಿದದ್ದು ಇತರರಿಗೆ ಅಲ್ಲಿ ಪ್ರವೇಶಾವಕಾಶ ಸಿಗಲಿದೆ. ಜೊತೆಗೆ ದೆಹಲಿಯಲ್ಲಿನ ಆಯುಕ್ತರ ವ್ಯವಸ್ಥೆ ತರಲು ನಿರ್ಧರಿಸಲಾಗಿದೆ. ಬೇರೆ ರಾಜ್ಯದವರು ಅನುದಾನ ತೆಗೆದುಕೊಂಡು ಹೋಗುತ್ತಾರೆ, ಅದೆಲ್ಲ ಮಾಹಿತಿ ಪಡೆಯುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅದಕ್ಕೆ ದೆಹಲಿಯಲ್ಲಿರುವ ಕರ್ನಾಟಕ ಕೇಡರ್ ಅಧಿಕಾರಿಗಳು ನೆರವು ನೀಡಲು, ಸಹಕಾರ ನೀಡಲು ಮುಂದೆ ಬಂದಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ದೆಹಲಿಯಲ್ಲಿನ ಲೀಗಲ್ ಸೆಲ್ ಬಲವರ್ಧನೆಗೆ ವಿಶೇಷ ಕ್ರಮ ವಹಿಸಲಾಗಿದೆ. ಯಾದಗಿರಿ, ಕಾರವಾರ ಮೆಡಿಕಲ್ ಕಾಲೇಜು ಕಾಮಗಾರಿಗೆ ಅನುದಾನಕ್ಕೆ, ಬೆಂಗಳೂರು ನಗರದ ಮೆಡಿಕಲ್ ಸಂಶೋಧನಾ ಉಪಕರಣ ಖರೀದಿ, ಮೇಲ್ದರ್ಜೆಗೇರಿಸಲು ಒಪ್ಪಿಗೆ ನೀಡಲಾಗಿದೆ. ಸಂಡೂರು ಸರ್ಕಾರಿ ಬಸ್‌ ನಿಲ್ದಾಣ ಮೂಲ ಸೌಕರ್ಯಕ್ಕೆ 30 ಕೋಟಿ ರೂ. ಮಂಜೂರಿಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸೋಮವಾರ ಸಂಪುಟ ಉಪ ಸಮಿತಿ ನಡೆಸಲಿದ್ದು, ಮತ್ತೊಂದಿಷ್ಟು ಘೋಷಣೆ ಮಾಡಲಾಗುತ್ತದೆ. ಕೆಎಸ್ ಆರ್ ಟಿಸಿಗೆ 400 ಬಸ್ ಖರೀದಿಗೆ ಅನುಮತಿ, ಜತೆಗೆ ಈಶಾನ್ಯ ಸಾರಿಗೆಗೆ 220 ಬಸ್ ಖರೀದಿಸಲು ಒಪ್ಪಿಗೆ., ಇದಕ್ಕೆ 235 ಕೋಟಿ ರೂ. ಆಗಲಿದೆ. ಹನ್ನೊಂದು ಕಡೆ ಎಲೆಕ್ಟ್ರಿಕ್ ಬಸ್ ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net