ಸಮುದ್ರದಲ್ಲಿ ಮುಳುಗುತ್ತಿದ್ದ ಸರಕು ಹಡಗಿನಿಂದ ದುಬಾರಿ ಐಫೋನ್‌, ಸುಗಂಧ ದ್ರವ್ಯಗಳ ಲೂಟಿಗೆ ಮುಗಿಬಿದ್ದ ಮೀನುಗಾರರು | Iranian Fishermen  
ವಿದೇಶ

ಸಮುದ್ರದಲ್ಲಿ ಮುಳುಗುತ್ತಿದ್ದ ಸರಕು ಹಡಗಿನಿಂದ ದುಬಾರಿ ಐಫೋನ್‌, ಸುಗಂಧ ದ್ರವ್ಯಗಳ ಲೂಟಿಗೆ ಮುಗಿಬಿದ್ದ ಮೀನುಗಾರರು | Iranian Fishermen

ಇದರಲ್ಲಿ ಸುಮಾರು 2,500ಕ್ಕೂ ಹೆಚ್ಚು ಕಂಟೇನರ್‌ಗಳಿದ್ದು, ದುಬಾರಿ ಮೌಲ್ಯದ ಐಫೋನ್​ 18 ಫೋನ್​ಗಳು, ಸುಗಂಧ ದ್ರವ್ಯಗಳ ಬಾಟಲಿಗಳು ಮತ್ತು ಹಲವು ವಸ್ತುಗಳನ್ನು ಸಾಗಿಸುತ್ತಿದ್ದ ಹಡಗು ಕಡಲಿನಲ್ಲಿ ಮುಳುಗಿ ಹೋಗಿದೆ.

ಇರಾನ್​: ಗಲ್ಫ್‌ ಕರಾವಳಿಯಲ್ಲಿ ಮುಳುಗುತ್ತಿದ್ದ ಸರಕು ಹಡಗಿನಿಂದ ಹೊರಬಿದ್ದ ಐಫೋನ್‌ಗಳು, ಫ್ರೆಂಚ್‌ ಸುಗಂಧ ದ್ರವ್ಯಗಳು ಸೇರಿದಂತೆ ವಿವಿಧ ವಸ್ತುಗಳನ್ನು ಹೊತ್ತೊಯ್ಯಲು ಮೀನುಗಾರರು ಮುಗಿಬಿದ್ದ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಈ ಘಟನೆ ಅಕ್ಟೋಬರ್‌ 14ರಂದು ಸಂಭವಿಸಿರುವುದು ಎನ್ನಲಾಗಿದೆ. ಮುಳುಗುತ್ತಿದ್ದ ಹಡಗನ್ನು ಜಿಎಫ್​ಎಸ್​ ಪ್ರೈಡ್​ ಎಂದು ಹೆಸರಿಸಲಾಗಿದೆ. ಇದರಲ್ಲಿ ಸುಮಾರು 2,500ಕ್ಕೂ ಹೆಚ್ಚು ಕಂಟೇನರ್‌ಗಳಿದ್ದು, ದುಬಾರಿ ಮೌಲ್ಯದ ಐಫೋನ್​ 18 ಫೋನ್​ಗಳು, ಸುಗಂಧ ದ್ರವ್ಯಗಳ ಬಾಟಲಿಗಳು ಮತ್ತು ಹಲವು ವಸ್ತುಗಳನ್ನು ಸಾಗಿಸುತ್ತಿದ್ದ ಹಡಗು ಕಡಲಿನಲ್ಲಿ ಮುಳುಗಿ ಹೋಗಿದೆ.

ಹಡಗು ಮುಳುಗಿದ ಸುದ್ದಿ ಹರಡುತ್ತಿದ್ದಂತೆ, ಹಲವು ಮೀನುಗಾರರು ಮತ್ತು ಸ್ಥಳೀಯರು ಹೊರ್ಮುಜ್‌ ಜಲಸಂಧಿಯತ್ತ ತೆರಳಿದಾಗ ಸಮುದ್ರದಲ್ಲಿ ತೇಲುತ್ತಿದ್ದ ವಸ್ತುಗಳನ್ನು ನೀರಿನಿಂದ ಮೇಲಕ್ಕೆತ್ತಲು ಜನರು ಮುಗಿಬಿದ್ದಿರುವ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೆಲವರು ಇಡೀ ಕಂಟೇನರ್‌ ಅನ್ನೇ ಎಳೆದೊಯ್ಯಲು ಯತ್ನಿಸಿರುವುದೂ ಕಂಡುಬಂದಿದೆ.

ಅಷ್ಟಕ್ಕೂ ಹಡಗು ಮುಳುಗಿದ್ದೇಕೆ?

ಸಿಂಗಾಪುರದ ಧ್ವಜವನ್ನು ಮುಂದಿಟ್ಟು ಸಂಚರಿಸುತ್ತಿದ್ದ ಜಿಎಫ್​ಎಸ್​ ಪ್ರೈಡ್​ ಹಡಗಿನಲ್ಲಿ ದಿಢೀರ್​ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಸಮುದ್ರದಲ್ಲಿ ಮುಳುಗಿ ಹೋಯಿತು. ಹಡಗಿನಲ್ಲಿದ್ದ 21 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಮತ್ತೊಂದೆಡೆ, ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ (IRGC) ನೌಕಾಪಡೆ ವಿಭಿನ್ನ ಹೇಳಿಕೆ ಕೊಟ್ಟಿದೆ. ಹಡಗು ಅನುಮತಿಯಿಲ್ಲದ ಅಪಾಯಕಾರಿ ಮಾರ್ಗದಲ್ಲಿ ಸಾಗುವಾಗ ಸಮುದ್ರದ ಗಣಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಆರೋಪಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯ ಹೇಳಿಕೆಗಳಲ್ಲಿ ಭಾರಿ ವ್ಯತ್ಯಾಸಗಳು ಕಂಡುಬಂದಿವೆ. ಹೊರ್ಮುಜ್‌ ಜಲಸಂಧಿ ಮತ್ತು ಅದರ ಸುತ್ತಮುತ್ತ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಘಟನೆ ವರದಿಯಾಗಿದೆ,(ಏಜೆನ್ಸೀಸ್).