ಇರಾನ್‌ನ ಯುದ್ಧನೌಕೆ ಐರಿಸ್ ಡೆನಾ 
ವಿದೇಶ

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮುಳುಗಡೆ: ಹಡಗಿನಲ್ಲಿದ್ದ 100ಕ್ಕೂ ಹೆಚ್ಚು ನಾವಿಕರು ನಾಪತ್ತೆ; ಅಮೆರಿಕ-ಇಸ್ರೇಲ್​ ದಾಳಿ ಶಂಕೆ? Iran Warship Sink

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾದ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ ಐರಿಸ್ ಡೆನಾ ಜಲಸಮಾಧಿ
  • ನೂರಕ್ಕೂ ಹೆಚ್ಚಿನ ನಾವಿಕರು ಕಣ್ಮರೆ
  • ಅಮೆರಿಕ ಮತ್ತು ಇಸ್ರೇಲ್​ನ ಜಲಾಂರ್ತಗಾಮಿ ದಾಳಿ ಮಾಡಿರುವ ಶಂಕೆ
ಕೊಲಂಬೊ: ಮಧ್ಯಪ್ರಾಚ್ಯದಲ್ಲಿ ಹೊತ್ತಿಕೊಂಡಿರುವ ಕಿಚ್ಚು ಈಗ ಹಿಂದೂ ಮಹಾಸಾಗರದ ನೀರನ್ನೂ ಕೆಂಪಾಗಿಸಿದ್ದು, ಶ್ರೀಲಂಕಾದ ಗ್ಯಾಲೆ ಬಂದರು ನಗರದಿಂದ ಸುಮಾರು 40 ನಾಟಿಕಲ್ ಮೈಲು ದೂರದಲ್ಲಿ ಇರಾನ್ ನೌಕಾಪಡೆಯ ಯುದ್ಧನೌಕೆ ಮುಳುಗಡೆ (Iran Warship Sink) ಯಾಗಿದೆ ಎಂದು ವರದಿಯಾಗಿದೆ.
ಇರಾನ್ ನೌಕಾಪಡೆಯ ಯುದ್ಧನೌಕೆ ಐರಿಸ್ ಡೆನಾ ಮುಳುಗಡೆಯಾಗಿದ್ದು, ನೌಕೆಯಲ್ಲಿದ್ದ 180ಕ್ಕೂ ಹೆಚ್ಚು ಸಿಬ್ಬಂದಿಗಳ ಪೈಕಿ 78 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಸುಮಾರು 100ಕ್ಕೂ ಹೆಚ್ಚು ನಾವಿಕರು ಸಮುದ್ರದ ಅಲೆಗಳ ನಡುವೆ ಕಾಣೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಡೆದಿದ್ದೇನು?

ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಮುಂಜಾನೆ ಹೊತ್ತಿನಲ್ಲಿ ಯುದ್ಧನೌಕೆಯೊಳಗೆ ಹಠಾತ್ತನೆ ನೀರು ನುಗ್ಗಲು ಪ್ರಾರಂಭವಾಯಿತು. ಇದು ಕೇವಲ ತಾಂತ್ರಿಕ ದೋಷವಲ್ಲ, ಬದಲಾಗಿ ಜಲಾಂತರ್ಗಾಮಿ (Submarine) ದಾಳಿಯಿಂದ ಸಂಭವಿಸಿದ ಅನಾಹುತ ಎಂದು ಶಂಕಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಶ್ರೀಲಂಕಾ ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ಬೃಹತ್ ರಕ್ಷಣಾ ಕಾರ್ಯಾಚರಣೆಗೆ ಇಳಿದಿವೆ. ಗಾಯಗೊಂಡ 30 ನಾವಿಕರನ್ನು ಈಗಾಗಲೇ ಗ್ಯಾಲೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶ್ರೀಲಂಕಾದ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ನಿಯಮದಂತೆ ರಕ್ಷಣಾ ಕಾರ್ಯ

ಶ್ರೀಲಂಕಾದ ವಿದೇಶಾಂಗ ಸಚಿವೆ ವಿಜಿತಾ ಹೆರಾತ್ ಈ ಕುರಿತು ಸಂಸತ್ತಿನಲ್ಲಿ ಮಾಹಿತಿ ನೀಡಿದ್ದು, ನಮ್ಮ ಸಮುದ್ರ ವ್ಯಾಪ್ತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗುವುದು ನಮ್ಮ ಅಂತರರಾಷ್ಟ್ರೀಯ ಜವಾಬ್ದಾರಿ. ಆ ಹಿನ್ನೆಲೆಯಲ್ಲಿ ನಾವು ಇರಾನ್ ನಾವಿಕರ ರಕ್ಷಣೆಗೆ ಧಾವಿಸಿದ್ದೇವೆ ಎಂದಿದ್ದಾರೆ. ಉಪ ರಕ್ಷಣಾ ಸಚಿವೆ ಅರುಣಾ ಜಯಶೇಖರ ಅವರ ನೇತೃತ್ವದಲ್ಲಿ ಸಮುದ್ರದಲ್ಲಿ ಇನ್ನೂ ನಾಪತ್ತೆಯಾಗಿರುವವರ ಪತ್ತೆಗಾಗಿ ಹುಡುಕಾಟ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.
ಯುದ್ಧದ ಭೀತಿಯಲ್ಲಿ ಹಾರ್ಮುಜ್ ಜಲಸಂಧಿ
ಈ ಘಟನೆಯು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ತಲ್ಲಣ ಮೂಡಿಸಿದೆ. ಇತ್ತೀಚೆಗಷ್ಟೇ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಗುಡುಗಿತ್ತು. ಅಷ್ಟೇ ಅಲ್ಲ, ವಿಶ್ವದ 20% ತೈಲ ಸರಬರಾಜಾಗುವ ಹಾರ್ಮುಜ್ ಜಲಸಂಧಿಯನ್ನು ತನ್ನ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ಘೋಷಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತೈಲ ಟ್ಯಾಂಕರ್‌ಗಳ ರಕ್ಷಣೆಗೆ ಯುಎಸ್ ನೌಕಾಪಡೆಯನ್ನು ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ಗೆ ದೊಡ್ಡ ಹೊಡೆತ

ಐರಿಸ್ ಡೆನಾ ಇರಾನ್ ನೌಕಾಪಡೆಯ ಅತ್ಯಂತ ಶಕ್ತಿಶಾಲಿ ಮತ್ತು ಆಧುನಿಕ ಯುದ್ಧನೌಕೆಗಳಲ್ಲಿ ಒಂದಾಗಿತ್ತು. ಇಂತಹ ನಿರ್ಣಾಯಕ ಸಮಯದಲ್ಲಿ ಈ ಹಡಗಿನ ನಷ್ಟವು ಇರಾನ್‌ನ ಮಿಲಿಟರಿ ಶಕ್ತಿಗೆ ಬಿದ್ದಿರುವ ಬಹುದೊಡ್ಡ ಪೆಟ್ಟು ಎನ್ನಲಾಗುತ್ತಿದೆ. ಇದು ಅಕಸ್ಮಾತ್ ನಡೆದ ಅಪಘಾತವೇ ಅಥವಾ ಅಮೆರಿಕ-ಇಸ್ರೇಲ್ ನಡೆಸಿದ ಗುಪ್ತ ಕಾರ್ಯಾಚರಣೆಯೇ ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ.
ಸದ್ಯಕ್ಕೆ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಸಾವುನೋವುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಜಗತ್ತು ಈಗ ಮತ್ತೊಂದು ಮಹಾಯುದ್ಧದ ಅಂಚಿನಲ್ಲಿ ನಿಂತಿದೆಯೇ ಎಂಬ ಆತಂಕ ಎಲ್ಲೆಡೆ ಮನೆಮಾಡಿದೆ,(ಏಜನ್ಸೀಸ್​).