- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಜಂಟಿ ದಾಳಿಗೆ ಪ್ಲ್ಯಾನ್
- ಟ್ರಂಪ್-ಇಸ್ರೇಲ್ ದಾಳಿ ನಡೆದಿದ್ದೇ ಆದರೆ ಏನ್ನನ್ನೂ ಉಳಿಸಲ್ಲ ಎಂದ ಇರಾನ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಮತ್ತೊಂದು ದೊಡ್ಡ ಮಿಲಿಟರಿ ಕಾರ್ಯಾಚರಣೆಗೆ ತೆರೆಮರೆಯಲ್ಲಿ ಸಕಲ ಸಿದ್ಧತೆ ನಡೆಸುತ್ತಿದೆ. ಈ ಬಗ್ಗೆ ಯುಎಸ್ ಮಾಧ್ಯಮಗಳ ವರದಿ ಬೆನ್ನಲ್ಲೇ ಇರಾನ್ ಸೇಡಿನ ಎಚ್ಚರಿಕೆ ರವಾನಿಸಿದೆ.
ಈ ದಾಳಿಗಳು ಹಲವು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇರಾನ್‌ನ ಪೆಟ್ರೋಲಿಯಂ ಸಂಸ್ಕರಣಾಗಾರಗಳು, ವಿದ್ಯುತ್ ಉತ್ಪಾದನಾ ಘಟಕ, ಪ್ರಸರಣ ಜಾಲ ಹಾಗೂ ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಿಗೆ ಕರೆಂಟ್ ಪೂರೈಸುವ ಮೂಲಸೌಕರ್ಯಗಳನ್ನು ಉಡೀಸ್ ಮಾಡಲು ಅಮೆರಿಕ ಮತ್ತು ಇಸ್ರೇಲ್ ಪ್ಲ್ಯಾನ್ ಮಾಡಿಕೊಂಡಿದೆ. ಅಮೆರಿಕ ಪ್ರಸ್ತಾಪಿಸಿರುವ ಕದನ ವಿರಾಮದ ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಇರಾನ್ ಮೇಲೆ ಭಾರಿ ಒತ್ತಡ ಹೇರುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವೆಂದು ಗೊತ್ತಾಗಿದೆ.
ಇದರ ನಡುವೆ, ಇರಾನ್‌ನ ಭದ್ರತಾ ಅಧಿಕಾರಿಗಳು ತಮ್ಮ ಅಧಿಕೃತ ಸುದ್ದಿ ಸಂಸ್ಥೆಗಳ ಮೂಲಕ, ಇಂಧನ ಮೂಲಸೌಕರ್ಯಗಳ ಮೇಲೆ ಯಾವುದೇ ದಾಳಿ ಸಂಭವಿಸಿದರೆ, ಅಮೆರಿಕ ಮತ್ತು ಇಸ್ರೇಲ್‌ಗೆ ಸೇರಿದ ಇಂಧನ ಕೇಂದ್ರಗಳು ಹಾಗೂ ಸಂಬಂಧಿತ ತಾಣಗಳ ಮೇಲೆ ಸೇಡಿನ ದಾಳಿ ಕೈಗೊಳ್ಳುವುದು ಶತಸಿದ್ಧ ಎಂದು ಇರಾನ್ ಬಿಗ್ ವಾರ್ನಿಂಗ್ ನೀಡಿದೆ.
ಜುಲೈ 31ರಂದು ಕ್ಯಾಂಪ್ ಡೇವಿಡ್ ಅಧ್ಯಕ್ಷೀಯ ವಿಶ್ರಾಂತಿ ಕೇಂದ್ರದಲ್ಲಿ ಟ್ರಂಪ್ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಯೋಜನೆ ಕುರಿತು ಚರ್ಚಿಸಲಾಗಿದೆ. ಆರಂಭಿಕ ಮಿಲಿಟರಿ ಸಿದ್ಧತೆಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಲಾಗಿದೆ. ಆದರೆ, ಅಂತಿಮವಾಗಿ ಟ್ರಂಪ್ ಇನ್ನೂ ಅಧಿಕೃತ ಅನುಮೋದನೆ ಕೊಟ್ಟಿಲ್ಲ ಎಂಬುದು ಗಮನಾರ್ಹ. ಇತ್ತೀಚೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ವಾಷಿಂಗ್ಟನ್‌ನಲ್ಲಿ ಟ್ರಂಪ್ ಹಾಗೂ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರನ್ನು ಭೇಟಿಯಾಗಿದ್ದರು. ಈ ಮಾತುಕತೆಯ ಬಳಿಕ ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಹೆಚ್ಚುತ್ತಿರುವುದು ಸದ್ಯ ಆತಂಕಕಾರಿ ಬೆಳವಣಿಗೆಗಳಾಗಿದೆ.
ಇದೇ ವೇಳೆ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಭೀಕರ ಯುದ್ಧ ಭುಗಿಲೇಳುವ ಸಾಧ್ಯತೆಯಿದ್ದು, ಇದರಿಂದ ಜಾಗತಿಕ ಆರ್ಥಿಕತೆಯ ಮೇಲೆ ಉಂಟಾಗಬಹುದಾದ ಭಾರಿ ಪರಿಣಾಮಗಳ ಬಗ್ಗೆ ಅಮೆರಿಕದ ಶ್ವೇತಭವನದ ಕೆಲವು ಹಿರಿಯ ಸಲಹೆಗಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).