ಟಿಕ್‌ಟಾಕ್ ವಿಡಿಯೋಗಾಗಿ ಹುಲಿಯನ್ನು ಪಂಜರದಿಂದ ಹೊರತಂದು ಯುವಕನ ಸಾವಿಗೆ ಕಾರಣವಾದ ಆರೋಪದ ಮೇಲೆ ಬಂಧಿತನಾಗಿರುವ ಕಂಟೆಂಟ್ ಕ್ರಿಯೇಟರ್ ನೌಮಾನ್ ಹಸನ್. 
ವಿದೇಶ

ಟಿಕ್​ಟಾಕ್​ ಹುಚ್ಚಾಟಕ್ಕೆ ಬಲಿಯಾದ ಅಮಾಯಕ ಯುವಕ: ಹುಲಿ ದಾಳಿ ಮರೆಮಾಚಲು 'ನಾಯಿ ಕಚ್ಚಿದೆ' ಎಂದಿದ್ದ ಯೂಟ್ಯೂಬರ್ ಅರೆಸ್ಟ್! Tiger Attack

ಲಾಹೋರ್​: ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವ್ಯೂಸ್‌ಗಾಗಿ ಜನರು ಎಂತಹ ಅಪಾಯಕಾರಿ ಸಾಹಸಕ್ಕೂ ಕೈಹಾಕುತ್ತಾರೆ ಎಂಬುದಕ್ಕೆ ಪಾಕಿಸ್ತಾನದಲ್ಲಿ ನಡೆದಿರುವ ಈ ಘೋರ ದುರಂತವೇ ಜೀವಂತ ಸಾಕ್ಷಿಯಾಗಿದೆ.

ವಿಡಿಯೋ ಶೂಟಿಂಗ್ ಮಾಡಲು ಪಂಜರದಿಂದ ಹೊರಗೆ ತಂದಿದ್ದ ಹುಲಿಯೊಂದು ದಾಳಿ ನಡೆಸಿದ ಪರಿಣಾಮ, 19 ವರ್ಷದ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ಲಾಹೋರ್‌ನ ಕಹ್ನಾ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ, ಕಹ್ನಾ ಪಟ್ಟಣದ ಖಾಸಗಿ ಫಾರ್ಮ್‌ಹೌಸ್ ಒಂದರಲ್ಲಿ ಈ ದುರ್ಘಟನೆ ಸಂಭವಿಸಿದೆ. ಪಾಕಿಸ್ತಾನದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಆಗಿರುವ ನೌಮಾನ್ ಹಸನ್ (Nouman Hassan), ಹುಲಿಯೊಂದಿಗೆ ಸ್ಟಂಟ್ ಮಾಡುತ್ತಾ ಟಿಕ್‌ಟಾಕ್ ವಿಡಿಯೋ ಮಾಡಲು ಈ ಫಾರ್ಮ್‌ಹೌಸ್‌ಗೆ ಬಂದಿದ್ದನು. ಫಾರ್ಮ್‌ಹೌಸ್‌ನಲ್ಲಿದ್ದ ಹುಲಿಯನ್ನು ನೌಮಾನ್ ಹಸನ್​ನ ಒತ್ತಾಯದ ಮೇರೆಗೆ ವಿಡಿಯೋ ಶೂಟಿಂಗ್‌ಗಾಗಿ ಪಂಜರದಿಂದ ಹೊರಗೆ ತರಲಾಗಿತ್ತು.

ನಿಯಂತ್ರಣ ತಪ್ಪಿ ಯುವಕನ ಮೇಲೆ ಎರಗಿದ ಹುಲಿ!

ಪಂಜರದಿಂದ ಹೊರಬಂದ ಹುಲಿ ಏಕಾಏಕಿ ನಿಯಂತ್ರಣ ತಪ್ಪಿ ಅಲ್ಲಿಯೇ ಕೆಲಸ ಮಾಡುತ್ತಿದ್ದ 19 ವರ್ಷದ ತಲ್ಹಾ ಎಂಬ ಸಿಬ್ಬಂದಿಯ ಮೇಲೆ ಭೀಕರವಾಗಿ ದಾಳಿ ನಡೆಸಿದೆ. ಹುಲಿಯ ದಾಳಿಯಿಂದ ತಲ್ಹಾ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದನು. ತಕ್ಷಣವೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗಂಭೀರ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ತಲ್ಹಾ ಕೊನೆಯುಸಿರೆಳೆದಿದ್ದಾನೆ.

ನಾಯಿ ಕಚ್ಚಿದೆ ಎಂದು ಕಥೆ ಕಟ್ಟಿದ್ದ ಇನ್‌ಫ್ಲುಯೆನ್ಸರ್!

ಈ ದುರಂತ ನಡೆದ ಬೆನ್ನಲ್ಲೇ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿಗಳು ಸಂಚು ರೂಪಿಸಿದ್ದರು. ಪೊಲೀಸ್​ ವಿಚಾರಣೆ ಆರಂಭದಲ್ಲಿ, "ತಲ್ಹಾ ಮೇಲೆ ನಾಯಿಯೊಂದು ದಾಳಿ ಮಾಡಿದೆ, ಅದರಿಂದಲೇ ಆತ ಗಾಯಗೊಂಡಿದ್ದಾನೆ" ಎಂದು ನೌಮಾನ್ ಹಸನ್ ಸುಳ್ಳು ಕಥೆ ಕಟ್ಟಿದ್ದನು. ಆದರೆ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.

ಟಿಕ್‌ಟಾಕ್ ವಿಡಿಯೋ ಹುಚ್ಚಿಗಾಗಿ ಹುಲಿಯನ್ನು ಹೊರಗೆ ಬಿಟ್ಟಿದ್ದೇ ಈ ಸಾವಿಗೆ ಕಾರಣ ಎಂಬುದು ದೃಢಪಟ್ಟಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಫಾರ್ಮ್‌ಹೌಸ್ ಮಾಲೀಕ ಫಯಾಜ್ ಮತ್ತು ಕಂಟೆಂಟ್ ಕ್ರಿಯೇಟರ್ ನೌಮಾನ್ ಹಸನ್ ಇಬ್ಬರನ್ನೂ ಲಾಹೋರ್ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಖಡಕ್ ಎಚ್ಚರಿಕೆ!

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಲಾಹೋರ್ ಪೊಲೀಸರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಮನುಷ್ಯನ ಜೀವಕ್ಕಿಂತ ಟಿಕ್‌ಟಾಕ್ ಹುಚ್ಚು ದೊಡ್ಡದಲ್ಲ. ಮನರಂಜನೆಯ ಹೆಸರಿನಲ್ಲಿ ಯಾರೂ ಕೂಡ ಇತರರ ಪ್ರಾಣವನ್ನು ಅಪಾಯಕ್ಕೆ ತಳ್ಳುವಂತಿಲ್ಲ. ಸತ್ಯವನ್ನು ಮುಚ್ಚಿಡಲು ಮಾಡಿದ ಪ್ರಯತ್ನ ಮತ್ತು ನಿರ್ಲಕ್ಷ್ಯದ ಪ್ರತಿಯೊಂದು ಆಯಾಮದಲ್ಲೂ ತನಿಖೆ ನಡೆಸಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಈ ಫಾರ್ಮ್‌ಹೌಸ್‌ನಲ್ಲಿ ಹುಲಿಯನ್ನು ಸಾಕಲು ಕಾನೂನುಬದ್ಧ ಅನುಮತಿ ಇತ್ತೇ ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ ಎಂಬ ಬಗ್ಗೆಯೂ ತನಿಖೆ ಚುರುಕುಗೊಳಿಸಿದ್ದಾರೆ.

ಹಸನ್‌ಗೆ ಇದು ಮೊದಲೇನಲ್ಲ!

ಬಂಧಿತ ನೌಮಾನ್ ಹಸನ್‌ಗೆ ಕಾಡುಪ್ರಾಣಿಗಳೊಂದಿಗೆ ಇಂತಹ ಅಪಾಯಕಾರಿ ವಿಡಿಯೋಗಳನ್ನು ಮಾಡುವುದು ಇದೇ ಮೊದಲೇನಲ್ಲ. ಈ ಹಿಂದೆ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸರಪಳಿಯಿಂದ ಕಟ್ಟಿದ್ದ ಹುಲಿಗೆ ಮುತ್ತಿಡಲು ಹೋಗುವ ವಿಡಿಯೋ ಹಂಚಿಕೊಂಡು ಸುದ್ದಿಯಾಗಿದ್ದನು. ಮತ್ತೊಂದು ವಿಡಿಯೋದಲ್ಲಿ ಚಿರತೆಯೊಂದನ್ನು ಮುದ್ದಾಡಲು ಹೋದಾಗ, ಅದು ಆತನ ಮೇಲೆಯೇ ಜಿಗಿದು ಗಾಯಗೊಳಿಸಿತ್ತು. ಆದರೂ ಬುದ್ಧಿ ಕಲಿಯದ ಈತನ ಹುಚ್ಚಾಟಕ್ಕೆ ಈಗ 19 ವರ್ಷದ ಅಮಾಯಕ ಯುವಕನೊಬ್ಬ ಬಲಿಯಾಗಿರುವುದು ನಿಜಕ್ಕೂ ದುರಂತ ಸಂಗತಿಯಾಗಿದೆ, (ಏಜೆನ್ಸೀಸ್).