ಭಾರತದ ಪರ ಆಡಿದ ಪಾಕ್ ಆಟಗಾರ ಉಬೈದುಲ್ಲಾ ರಜಪೂತ್
- ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಹೊಸದೇನಲ್ಲ
- ಭಾರತವನ್ನು ಹೇಗಾದರೂ ಮಣಿಸಬೇಕೆಂದು ಪಾಕ್ ಆಗಾಗ ತನ್ನ ನರಿಬುದ್ಧಿ ತೋರುತ್ತಿರುತ್ತದೆ
- ಆದರೆ, ಪಾಕ್ ಜನರೆ ಭಾರತವನ್ನು ಕೊಂಡಾಡುವ ಎಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ
- ಇದೀಗ ಪಾಕಿಸ್ತಾನದ ಕಬಡ್ಡಿ ಆಟಗಾರ ಭಾರತದ ಜರ್ಸಿ ಧರಿಸಿ ಆಟವಾಡಿರುವುದು ಎಲ್ಲರ ಗಮನ ಸೆಳೆದಿದೆ
ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ( India vs Pakistan ) ನಡುವಿನ ಸಂಘರ್ಷ ಹೊಸದೇನಲ್ಲ. ಬಹಳ ಹಿಂದಿನಿಂದಲೂ ಉಭಯ ದೇಶಗಳ ನಡುವೆ ಸಂಘರ್ಷ ನಡೆದುಕೊಂಡು ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಭಾರತವನ್ನು ಹೇಗಾದರೂ ಮಣಿಸಬೇಕೆಂದು ತನ್ನ ನರಿಬುದ್ಧಿಯನ್ನು ತೋರುವ ಪಾಕ್, ಪಡೆದಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಸದ್ಯ ಆರ್ಥಿಕ ದಿವಾಳಿಯಿಂದ ಕಂಗೆಟ್ಟಿರುವ ಪಾಕ್, ತನ್ನ ಜನರಿಗೆ ಮೂಲ ಸೌಕರ್ಯ ನೀಡಲು ಹೆಣಗಾಡುತ್ತಿದೆ. ಹೀಗಾಗಿ, ಅಲ್ಲಿನ ಜನರೇ ತಮ್ಮ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಅಲ್ಲದೆ, ಭಾರತವನ್ನು ಕೊಂಡಾಡುವ ಎಷ್ಟೋ ಘಟನೆಗಳು ಕೂಡ ನಡೆದಿವೆ. ಇದೀಗ ಆ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ.
ಹೌದು, ಇತ್ತೀಚೆಗೆ ಉಗ್ರರ ಸ್ವರ್ಗ ಪಾಕಿಸ್ತಾನದ ಹೊಟ್ಟೆಗೆ ಬೆಂಕಿ ಬಿದ್ದಿದೆ. ಏಕೆಂದರೆ, ಪಾಕಿಸ್ತಾನದ ಆಟಗಾರನೊಬ್ಬ ಭಾರತವನ್ನು ಪ್ರತಿನಿಧಿಸಿದ್ದಾನೆ. ಇದನ್ನು ಕೇಳಿದರೆ ಒಂದು ಕ್ಷಣ ನಿಮ್ಮ ಹುಬ್ಬೇರಬಹುದು. ಇದು ನಿಜನಾ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ನಾವು ಹೇಳುತ್ತಿರುವುದು ನೂರಕ್ಕೆ ನೂರ ಸತ್ಯ. ಪಾಕಿಸ್ತಾನದ ಕಬಡ್ಡಿ ಆಟಗಾರನೊಬ್ಬ ಬಹ್ರೇನ್‌ನಲ್ಲಿ ನಡೆಯುತ್ತಿರುವ ಕಬಡ್ಡಿ ಸ್ಪರ್ಧೆಯಲ್ಲಿ ಭಾರತೀಯ ತಂಡಕ್ಕಾಗಿ ಆಡಿರುವುದು ಪಾಕಿಸ್ತಾನದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ವಿಷಯ ಈಗ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಇದೇ ಡಿಸೆಂಬರ್ 16ರಂದು ಬಹ್ರೈನ್ನಲ್ಲಿ ಖಾಸಗಿ ಕಬಡ್ಡಿ ಟೂರ್ನಮೆಂಟ್ ಜಿಸಿಸಿ ಕಪ್ ನಡೆಯಿತು. ಈ ವೇಳೆ ಪಾಕಿಸ್ತಾನ ಕಬಡ್ಡಿ ಆಟಗಾರ ಉಬೈದುಲ್ಲಾ ರಜಪೂತ್, ಭಾರತದ ಜರ್ಸಿ ಧರಿಸಿ ಆಡಿದರು. ಅಷ್ಟೇ ಅಲ್ಲದೆ, ಭಾರತದ ಬಾವುಟವನ್ನೂ ಹಾರಾಡಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪಾಕಿಸ್ತಾನದ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ. ಪಾಕ್ ನೆಲದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ರಜಪೂತ್ ವಿರುದ್ಧ ಪಾಕಿಸ್ತಾನ ಕಬಡ್ಡಿ ಫೆಡರೇಶನ್ ಕಠಿಣ ಕ್ರಮ ಕೈಗೊಂಡು, ತನಿಖೆದೆ ಆದೇಶಿಸಿದೆ. ಮಂಡಳಿಯ ಅನುಮತಿಯಿಲ್ಲದೆ ವಿದೇಶಿ ಪಂದ್ಯಗಳಲ್ಲಿ ಭಾಗವಹಿಸುವುದು ನಿಯಮಗಳ ಉಲ್ಲಂಘನೆ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಕಬಡ್ಡಿ ಫೆಡರೇಶನ್ ಕಾರ್ಯದರ್ಶಿ ರಾಣಾ ಸರ್ವರ್, ಭಾರತ ಪರ ಆಡುವುದು ದೇಶಕ್ಕೆ ದ್ರೋಹ ಮಾಡಿದಂತೆ. ಈ ಘಟನೆಗೆ ಪಾಕಿಸ್ತಾನಿ ಕಬಡ್ಡಿ ಆಟಗಾರ ಉಬೈದುಲ್ಲಾ ರಜಪೂತ್ ಈಗಾಗಲೇ ಕ್ಷಮೆಯಾಚಿಸಿದ್ದಾರೆ. ಆದಾಗ್ಯೂ, ಪಾಕಿಸ್ತಾನ ಕಬಡ್ಡಿ ಫೆಡರೇಶನ್ ಸುಮ್ಮನಾಗಿಲ್ಲ. ಶಿಸ್ತು ಕ್ರಮ ತೆಗೆದುಕೊಳ್ಳಲಿದೆ. ಪಾಕಿಸ್ತಾನದ ರಾಷ್ಟ್ರೀಯ ಗೌರವವನ್ನು ಅವಮಾನಿಸಿ, ಭಾರತಕ್ಕಾಗಿ ಆಡುವುದು ದೇಶದ್ರೋಹ. ಉಬೈದುಲ್ಲಾ ರಜಪೂತ್‌ಗೆ ಕಠಿಣ ಶಿಕ್ಷೆ ಎದುರಾಗಲಿದ್ದು, ಮತ್ತೆ ಕಬಡ್ಡಿ ಆಡದಂತೆ ಬ್ಯಾನ್ ಮಾಡಲಾಗುವುದು ಎಂದು ರಾಣಾ ಸರ್ವರ್ ತಿಳಿಸಿದ್ದಾರೆ.
ಇನ್ನು ಈ ಘಟನೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಕಬಡ್ಡಿ ಫೆಡರೇಶನ್ (ಪಿಕೆಎಫ್), ರಜಪೂತ್ ಮತ್ತು ಇತರರ ವಿರುದ್ಧ ಸಂಭವನೀಯ ಕ್ರಮದ ಬಗ್ಗೆ ನಿರ್ಧರಿಸಲು ಡಿಸೆಂಬರ್ 27 ರಂದು ತುರ್ತು ಸಭೆ ಕರೆಯುವುದಾಗಿ ಘೋಷಿಸಿದೆ. ಸದ್ಯ ಪಾಕಿಸ್ತಾನದಲ್ಲಿ ಇದು ಭಾರಿ ವಿವಾದ ಹುಟ್ಟುಹಾಕಿದೆ. ಇದರ ನಡುವೆ ಪಾಕಿಸ್ತಾನದ ಪರಿಸ್ಥಿತಿಯನ್ನು ನೆನೆದು ಭಾರತದ ನೆಟ್ಟಿಗರು ಪಾಕ್ ಕಾಲೆಳೆಯುತ್ತಿದ್ದಾರೆ, (ಏಜೆನ್ಸೀಸ್).