ಪ್ರಧಾನಿ ನರೇಂದ್ರ ಮೋದಿ ಮತ್ತು ಜೋರ್ಡಾನ್ ರಾಜ ಅಬ್ದುಲ್ಲಾ II
ಅಮ್ಮನ್: ಪ್ರಧಾನಿ ನರೇಂದ್ರ ಮೋದಿ(PM Modi) ಮತ್ತು ಜೋರ್ಡಾನ್ ರಾಜ ಅಬ್ದುಲ್ಲಾ II ನಡುವೆ ಅಮ್ಮನ್‌ನಲ್ಲಿ ನಡೆದ ಮಾತುಕತೆಯಲ್ಲಿ ಉಭಯ ದೇಶಗಳು ಭಯೋತ್ಪಾದನೆ ನಿಗ್ರಹ, ಗಾಜಾ ಸೇರಿದಂತೆ ಪ್ರಾದೇಶಿಕ ಸಮಸ್ಯೆಗಳು ಮತ್ತು ದ್ವಿಪಕ್ಷೀಯ ಸಹಕಾರದ ಕುರಿತು ಐದು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಎರೆಡು ದೇಶಗಳು ವ್ಯಾಪಾರ, ಹೂಡಿಕೆ, ರಕ್ಷಣೆ, ಭದ್ರತೆ, ಭಯೋತ್ಪಾದನೆ ನಿಗ್ರಹ, ಮೂಲಭೂತೀಕರಣ ನಿರ್ಮೂಲನೆ, ರಸಗೊಬ್ಬರಗಳು, ಕೃಷಿ, ನವೀಕರಿಸಬಹುದಾದ ಇಂಧನ ಮತ್ತು ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವತ್ತ ಮಾತುಕತೆಗಳು ಚರ್ಚೆಯಾಗಿವೆ.
ಪ್ರವಾಸದಲ್ಲಿ ಮಾತನಾಡಿರುವ ಮೋದಿ, ಭಯೋತ್ಪಾದನೆ ಮತ್ತು ಉಗ್ರಗಾಮಿ ಸಿದ್ಧಾಂತದ ವಿರುದ್ಧ ಹೋರಾಡುವಲ್ಲಿ ಜೋರ್ಡಾನ್ ರಾಜ ಅಬ್ದುಲ್ಲಾ II ಅವರ ಪಾತ್ರವನ್ನು ಶ್ಲಾಘಿಸಿದ್ದಾರೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.
ಮೋದಿಯ ಜೋರ್ಡಾನ್ ಭೇಟಿಯು ಮೂರು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿದ್ದು, ಈ ಪ್ರವಾಸದಲ್ಲಿ ಪ್ರಧಾನಿಯು ಇಥಿಯೋಪಿಯಾ ಮತ್ತು ಒಮಾನ್‌ಗೂ ತೆರಳಲಿದ್ದಾರೆ. ಅಲ್ಲದೆ, 37 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಜೋರ್ಡಾನ್‌ಗೆ ನೀಡುತ್ತಿರುವ ಮೊದಲ ಪೂರ್ಣ ಪ್ರಮಾಣದ ದ್ವಿಪಕ್ಷೀಯ ಭೇಟಿಯಾಗಿದೆ.
ಅಮ್ಮನ್‌ನಲ್ಲಿ ಚರ್ಚೆಗಳು
ತಮ್ಮ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಮೋದಿ ಅವರು ಜೋರ್ಡಾನ್ ರಾಜ ಅಬ್ದುಲ್ಲಾ II ಅವರನ್ನು ಹುಸೇನಿಯಾ ಅರಮನೆಯಲ್ಲಿ ಭೇಟಿಯಾದರು. ಅಲ್ಲದೆ, ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಪರಿಶೀಲಿಸಿದರು ಮತ್ತು ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಭಯೋತ್ಪಾದನೆ, ಉಗ್ರಗಾಮಿ ಸಿದ್ಧಾಂತ ಮತ್ತು ಮೂಲಭೂತೀಕರಣದ ವಿರುದ್ಧ ಎರಡೂ ಕಡೆಯವರು ತಮ್ಮ ನಿಲುವನ್ನು ಪುನರುಚ್ಚರಿಸಿದರು. ಜೋರ್ಡಾನ್ ರಾಜ ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟವನ್ನು ಬಲವಾಗಿ ಬೆಂಬಲಿಸಿದರು ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಖಂಡಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಹಕಾರ
ಭಾರತ ಮತ್ತು ಜೋರ್ಡಾನ್ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ಪ್ರಧಾನಿ ಹೇಳಿದರು. ಇಂದಿನ ಸಭೆಯು ಭಾರತ-ಜೋರ್ಡಾನ್ ಸಂಬಂಧಗಳಿಗೆ ಹೊಸ ಶಕ್ತಿ ಮತ್ತು ಆಳವನ್ನು ನೀಡುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಮೋದಿ ತಿಳಿಸಿದ್ದಾರೆ. ಅಲ್ಲದೆ, ವ್ಯಾಪಾರ, ರಸಗೊಬ್ಬರಗಳು, ಡಿಜಿಟಲ್ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಜನರಿಂದ ಜನರಿಗೆ ಸಂಪರ್ಕಗಳಂತಹ ಕ್ಷೇತ್ರಗಳಲ್ಲಿ ಸಹಕಾರ ಮುಂದುವರಿಯುತ್ತದೆ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.
ಎರಡೂ ದೇಶಗಳು ಐದು ತಿಳುವಳಿಕೆ ಒಪ್ಪಂದಗಳಿಗೆ (MoU) ಸಹಿ ಹಾಕಿದವು:
1. ಹೊಸ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರಕ್ಕಾಗಿ ತಿಳುವಳಿಕೆ ಒಪ್ಪಂದ.
2. ಜಲ ಸಂಪನ್ಮೂಲ ನಿರ್ವಹಣೆ ಮತ್ತು ಅಭಿವೃದ್ಧಿಯಲ್ಲಿ ಸಹಕಾರಕ್ಕಾಗಿ ತಿಳುವಳಿಕೆ ಒಪ್ಪಂದ.
3. ಪೆಟ್ರಾ ಮತ್ತು ಎಲ್ಲೋರಾ ನಡುವಿನ ಅವಳಿ ಒಪ್ಪಂದ.
4. 2025-2029 ವರ್ಷಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ನವೀಕರಣ.
5. ಡಿಜಿಟಲ್ ರೂಪಾಂತರಕ್ಕಾಗಿ ಜನಸಂಖ್ಯಾ ಮಟ್ಟದಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾದ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳಲು ಸಹಯೋಗಕ್ಕಾಗಿ ಉದ್ದೇಶ ಪತ್ರ.
ಭಾರತವು ಜೋರ್ಡಾನ್‌ನ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಪ್ರಸ್ತುತ $2.8 ಬಿಲಿಯನ್‌ನಿಂದ $5 ಬಿಲಿಯನ್‌ಗೆ ಹೆಚ್ಚಿಸುವ ಪ್ರಸ್ತಾಪವನ್ನು ಮಾಡಿದರು. ಜೋರ್ಡಾನ್‌ನ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (UPI) ನಡುವಿನ ಸಹಯೋಗಕ್ಕೂ ಅವರು ಮೋದಿ ಕರೆ ನೀಡಿದ್ದಾರೆ.
ಭಯೋತ್ಪಾದನಾ ನಿಗ್ರಹದಲ್ಲಿ ಜೋರ್ಡಾನ್‌ನ ಪಾತ್ರ
ಈ ಬಗ್ಗೆ ಮಾತನಾಡಿದ ಮೋದಿ, ಭಯೋತ್ಪಾದನೆ, ಉಗ್ರಗಾಮಿ ಸಿದ್ಧಾಂತ ಮತ್ತು ಮೂಲಭೂತವಾದವನ್ನು ಎದುರಿಸುವಲ್ಲಿ ಮತ್ತು ಜಾಗತಿಕವಾಗಿ ಈ ಸವಾಲುಗಳನ್ನು ಎದುರಿಸುವಲ್ಲಿ ಜೋರ್ಡಾನ್ ರಾಜನ ಪಾತ್ರವನ್ನು ಶ್ಲಾಘಿಸಿದ್ದಾರೆ. ಗಾಜಾ ವಿಷಯದಲ್ಲಿ ಅಬ್ದುಲ್ಲಾ II ರ ಸಕ್ರಿಯ ಮತ್ತು ರಚನಾತ್ಮಕ ಪಾತ್ರವನ್ನು ಹೊಗಳಿದ್ದಾರೆ.
ಸೌಹಾರ್ದಯುತ ಸಂವಾದಗಳನ್ನು ನೆನಪಿಸಿಕೊಂಡ ಪ್ರಧಾನಿ, 2018 ರಲ್ಲಿ ಜೋರ್ಡಾನ್ ರಾಜ ಭಾರತಕ್ಕೆ ಭೇಟಿ ನೀಡಿದಾಗ, ಇಬ್ಬರೂ ಇಸ್ಲಾಮಿಕ್ ಪರಂಪರೆಯ ಕುರಿತಾದ ಸಮ್ಮೇಳನದಲ್ಲಿ ಭಾಗವಹಿಸಿದ್ದರು ಎಂದು ನೆನಪಿಸಿಕೊಂಡರು. ಸಹಿಷ್ಣುತೆಯನ್ನು ಉತ್ತೇಜಿಸುವ ನಿಮ್ಮ ಪ್ರಯತ್ನಗಳು ಪ್ರಾದೇಶಿಕ ಶಾಂತಿಗೆ ಮಾತ್ರವಲ್ಲದೆ ಜಾಗತಿಕ ಶಾಂತಿಗೂ ಬಹಳ ಮುಖ್ಯ ಎಂದು ಮೋದಿ ಹೇಳಿದ್ದಾರೆ,(ಏಜೆನ್ಸೀಸ್).