ಯುಎಇ ವಿರುದ್ಧ ಪಾಕ್ ಸಂಸದ ಅಸಾದ್ ಕೈಸರ್ ಆಕ್ರೋಶ
- ನಾನು ಸಂಸದನಾದರೂ ನನಗೆ ಹೋಟೆಲ್ ರೂಮ್ ಕೊಡಲಿಲ್ಲ!
- ಯುಎಇ ಹೋಟೆಲ್‌ನಲ್ಲಿ ಪಾಕಿಸ್ತಾನಿಗಳಿಗೆ ನಿರ್ಬಂಧ ಹೇರಿ, ಭಾರತೀಯರು ಹಾಗೂ ಅಮೆರಿಕನ್ನರಿಗೆ ಆದ್ಯತೆ
- ಯುಎಇ ವಿರುದ್ಧ ಪಾಕ್ ಸಂಸದ ಅಸಾದ್ ಕೈಸರ್ ಆಕ್ರೋಶ
ಇಸ್ಲಾಮಾಬಾದ್: ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಹಾಗೂ ಅಲ್ಲಿನ ನಾಗರಿಕರಿಗೆ ಇತರ ದೇಶದ ನಾಗರಿಕರಿಗೆ ನೀಡುವ ಬೆಲೆ ಮತ್ತು ಗೌರವವನ್ನು ನೀಡಲಾಗುತ್ತಿಲ್ಲವೆಂದು ಪಾಕಿಸ್ತಾನದ ಸಂಸದರೊಬ್ಬರು ಅಲ್ಲಿನ ಸಂಸತ್ತಿನಲ್ಲಿ ಮಾತನಾಡಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಸಂಸದ ಹಾಗೂ ಮಾಜಿ ಸ್ಪೀಕರ್ ಅಸಾದ್ ಕೈಸರ್ (Asad Qaiser on UAE), ಯುನೈಟೆಡ್ ಅರಬ್ ಎಮರೈಟ್ಸ್ನಲ್ಲಿ ತಮಗಾದ ಅವಮಾನದ ಬಗ್ಗೆ ಮಾತನಾಡಿರುವ ವಿಡಿಯೋ ಎಲ್ಲಡೆ ಹರಿದಾಡುತ್ತಿದೆ.
ಭಾರತ, ಅಮೆರಿಕನ್ನರಿಗೆ ಗೌರವ; ನಮಗೆ ಗೇಟ್ಪಾಸ್!
ಕೆಲ ದಿನಗಳ ಹಿಂದೆ ತಮ್ಮ ಯುಎಇ ಪ್ರವಾಸದ ಬಗ್ಗೆ ಮಾತನಾಡಿಸ ಕೈಸರ್, ನಾನು ಇತ್ತೀಚೆಗೆ ಯುನೈಟೆಡ್ ಅರಬ್ ಎಮರೈಟ್ಸ್ಗೆ ಪ್ರವಾಸಕ್ಕೆಂದು ಹೋದಾಗ, ನನ್ನ ವಿಮಾನದ ಹಾರಾಟ ರದ್ದಾಗಿತ್ತು. ಹೀಗಾಗಿ ವಿಮಾನಯಾನ ಸಂಸ್ಥೆಯವರು ಮುಂದಿನ ವಿಮಾನ ಹಾರಾಟವಾಗುವವರೆಗೆ ಪ್ರಯಾಣಿಕರಿಗೆ ತಂಗಲು ಹೋಟೆಲ್ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದರು.
ಆದರೆ, ಅಲ್ಲಿ ಕೇವಲ ಭಾರತ ಮತ್ತು ಅಮೆರಿಕದ ಪಾಸ್ಪೋರ್ಟ್ ಹೊಂದಿದ್ದ ಪ್ರಯಾಣಿಕರಿಗೆ ಮಾತ್ರ ಹೋಟೆಲ್ ನೀಡುತ್ತಿದ್ದರು. ಪಾಕಿಸ್ತಾನದ ಪಾಸ್ಪೋರ್ಟ್ ಹೊಂದಿದ್ದ, ಯಾವೊಬ್ಬನಿಗೂ ಅಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಿಲ್ಲ. ನಾನು ಪಾಕಿಸ್ತಾನದ ರಾಜಕೀಯ ನಾಯಕ ಎಂದರೂ ಸಹ ನನಗೂ ಕೂಡ ಅಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿಲ್ಲ ಎಂದಿದ್ದಾರೆ.
ನಮ್ಮವರೇ ಹೀಗೆ ಮಾಡಿದರೆ ಹೇಗೆ?
ಯುಎಇ ಮಾತನ್ನು ಪ್ರಾರಂಭಿಸಿದರೆ, ಯುನಿವರ್ಸ್ಲ್ ಬ್ರದರ್ಹೂಡ್ ಬಗ್ಗೆ ಮಾತನಾಡುತ್ತೆ, ಆದರೆ ಅದೇ ಧರ್ಮದ ನಮ್ಮನ್ನು ಈ ರೀತಿಯಾಗಿ ನಡೆಸಿಕೊಳ್ಳುತ್ತೆ. ಈ ರೀತಿಯ ದ್ವಂದ್ವ ನೀತಿಯಿಂದ ಜಗತ್ತಿಗೆ ತಪ್ಪಾದ ಸಂದೇಶ ರವಾನೆಯಾಗುತ್ತದೆ ಎಂದು ಕೈಸರ್ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪಾಕಿಸ್ತಾನ ಕೂಡ, ಯನೈಟೆಡ್ ಅರಬ್ ಎಮರೈಟ್ಸ್ ಜೊತೆಗಿನ ಸ್ನೇಹ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ತುರ್ತು ಅಗತ್ಯವಿದೆ ಎಂದಿದ್ದಾರೆ, (ಏಜನ್ಸೀಸ್).