ಹೆರಿಗೆ ವಾರ್ಡ್‌ನಲ್ಲೇ ವಿಶ್ವದಾಖಲೆ: ಒಂದೇ ಆಸ್ಪತ್ರೆಯ ಎಲ್ಲಾ 17 ನರ್ಸ್‌ಗಳು ಏಕಕಾಲದಲ್ಲಿ ಪ್ರೆಗ್ನೆಂಟ್...! Pregnant 
ವಿದೇಶ

ಹೆರಿಗೆ ವಾರ್ಡ್‌ನಲ್ಲೇ ವಿಶ್ವದಾಖಲೆ: ಒಂದೇ ಆಸ್ಪತ್ರೆಯ ಎಲ್ಲಾ 17 ನರ್ಸ್‌ಗಳು ಏಕಕಾಲದಲ್ಲಿ ಪ್ರೆಗ್ನೆಂಟ್...! Pregnant

ಪ್ರಮುಖ ಮುಖ್ಯಾಂಶಗಳು

  • ಮಿಯಾಮಿ ವ್ಯಾಲಿ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ವಿಶ್ವದಾಖಲೆ
  • ಆಸ್ಪತ್ರೆಯ ಎಲ್ಲಾ 17 ಮಂದಿ ನರ್ಸ್‌ಗಳು ಏಕಕಾಲದಲ್ಲಿ ಪ್ರೆಗ್ನೆಂಟ್
  • ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯ ಬಿಕ್ಕಟ್ಟು ಸೃಷ್ಟಿಯಾಗುತ್ತಾ?
  • ನರ್ಸ್​ ಕೊರತೆಯ ಬಗ್ಗೆ ಮ್ಯಾನೇಜರ್ ಕೊಟ್ಟ ಬಿಗ್ ಅಪ್ಡೇಟ್ ಏನು?
ವಾಷಿಂಗ್ಟನ್: ಅಮೆರಿಕದ ಒಹಿಯೋ ರಾಜ್ಯದ ಡೇಟನ್‌ನಲ್ಲಿರುವ 'ಮಿಯಾಮಿ ವ್ಯಾಲಿ ಆಸ್ಪತ್ರೆ' ವಿಶಿಷ್ಟ ವಿಶ್ವದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ. ಈ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರ ಆರೈಕೆ ಮಾಡುವ ಎಲ್ಲಾ 17 ಮಂದಿ ನರ್ಸ್‌ಗಳು ಏಕಕಾಲದಲ್ಲಿ ಗರ್ಭಧರಿಸಿದ್ದು ( Pregnant ), ಶೀಘ್ರದಲ್ಲೇ ಇವರು ಕೂಡ ತಾಯಂದಿರಾಗಲು ಸಜ್ಜಾಗುತ್ತಿದ್ದಾರೆ.
ಇಡೀ ಹೆರಿಗೆ ವಿಭಾಗದ ಸಿಬ್ಬಂದಿಯೇ ಒಟ್ಟಿಗೆ ತಾಯ್ತನದ ಸಂಭ್ರಮದಲ್ಲಿರುವುದು ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಅಪರೂಪದ ಸುದ್ದಿ ಸಖತ್ ವೈರಲ್ ಆಗುತ್ತಿದೆ.
ಈ ಹಿಂದೆ 2019 ರಲ್ಲಿ ಇದೇ ಆಸ್ಪತ್ರೆಯ 11 ಮಂದಿ ನರ್ಸ್‌ಗಳು ಏಕಕಾಲದಲ್ಲಿ ಗರ್ಭಧರಿಸಿ ದಾಖಲೆ ಬರೆದಿದ್ದರು. ಆದರೆ, ಪ್ರಸ್ತುತ ಆಸ್ಪತ್ರೆಯ ಬರೋಬ್ಬರಿ 17 ಮಂದಿ ನರ್ಸ್‌ಗಳು ಒಟ್ಟಿಗೆ ಗರ್ಭಿಣಿಯರಾಗುವ ಮೂಲಕ ಆ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಸದ್ಯ ಈ ಎಲ್ಲಾ ಮಹಿಳಾ ಸಿಬ್ಬಂದಿಗಳು 12 ರಿಂದ 35 ವಾರಗಳ ಗರ್ಭಾವಸ್ಥೆಯಲ್ಲಿದ್ದು, ಇವರಲ್ಲಿ ಕೆಲವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರೆ, ಇನ್ನು ಕೆಲವರು ಎರಡನೇ ಮಗುವಿಗೆ ಜನ್ಮ ನೀಡಲು ಸಜ್ಜಾಗುತ್ತಿದ್ದಾರೆ.
ಇದೇ ಸಮಯದಲ್ಲಿ, ಇಷ್ಟೊಂದು ದೊಡ್ಡ ಸಂಖ್ಯೆಯ ಹೆರಿಗೆ ವಿಭಾಗದ ನರ್ಸ್‌ಗಳು ಏಕಕಾಲದಲ್ಲಿ ಹೆರಿಗೆ ರಜೆಯ ಮೇಲೆ ತೆರಳುವುದರಿಂದ ಆಸ್ಪತ್ರೆಯ ದೈನಂದಿನ ಕಾರ್ಯಕಲಾಪಗಳಿಗೆ ಅಥವಾ ರೋಗಿಗಳ ಆರೈಕೆಗೆ ಭಾರಿ ಅಡಚಣೆ ಉಂಟಾಗಬಹುದೇ? ಎಂಬ ತೀವ್ರ ಕುತೂಹಲ ಹಾಗೂ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಇಡೀ ವಾರ್ಡ್‌ನ ಪ್ರಮುಖ ಸಿಬ್ಬಂದಿಯೇ ಒಟ್ಟಿಗೆ ರಜೆ ಪಡೆದರೆ ಆಸ್ಪತ್ರೆಯು ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಿದೆ ಎಂಬ ಚರ್ಚೆಗಳು ಶುರುವಾಗಿವೆ.
ಈ ಎಲ್ಲಾ ಸಾರ್ವಜನಿಕ ಆತಂಕ ಹಾಗೂ ಕುತೂಹಲಗಳಿಗೆ ಆಸ್ಪತ್ರೆಯ ನರ್ಸಿಂಗ್ ಸ್ಟಾಫ್ ಮ್ಯಾನೇಜರ್ ಅಂಬರ್ಲಿ ಸ್ಯಾನರ್ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಒಟ್ಟು 200ಕ್ಕೂ ಹೆಚ್ಚು ನರ್ಸ್‌ಗಳು ಹಾಗೂ ಅವರಿಗೆ ಪೂರಕವಾಗಿ ಕೆಲಸ ಮಾಡುವ ಸಹಾಯಕ ನರ್ಸ್‌ಗಳ ದೊಡ್ಡ ತಂಡವೇ ಇದೆ ಎಂದಿದ್ದಾರೆ.
ಸಿಬ್ಬಂದಿಗಳ ಕೊರತೆಯಾಗದಂತೆ ಕೆಲಸದ ಶಿಫ್ಟ್‌ಗಳನ್ನು ನಿರ್ವಹಿಸಲು ಮತ್ತು ರಜೆಯ ಅವಧಿಯಲ್ಲಿ ಕೆಲಸ ಭರ್ತಿ ಮಾಡಲು ನಮ್ಮಲ್ಲಿ ವ್ಯವಸ್ಥಿತವಾದ ಮಾದರಿಗಳಿವೆ. ಜೊತೆಗೆ ಆಸ್ಪತ್ರೆಯಲ್ಲಿ ಅರೆಕಾಲಿಕ ಕೆಲಸ ಮಾಡುವ ನರ್ಸ್‌ಗಳೂ ಇದ್ದಾರೆ. ಹಾಗಾಗಿ ಯಾವುದೇ ರೀತಿಯ ಸಿಬ್ಬಂದಿ ಕೊರತೆಯಾಗಲಿ ಅಥವಾ ಆಸ್ಪತ್ರೆಯ ನಿರ್ವಹಣೆಯಲ್ಲಿ ಬಿಕ್ಕಟ್ಟಾಗಲಿ ಸೃಷ್ಟಿಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್​).