ನವದೆಹಲಿ: ತಮ್ಮ ವಿರುದ್ಧ ಮರಣದಂಡನೆ ತೀರ್ಪು ಹೊರಬಿದ್ದು, ಜೀವಕ್ಕೆ ಅಪಾಯವಿದ್ದರೂ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ತಮ್ಮ ತಾಯ್ನಾಡಿಗೆ ಮರಳುವ ನಿರ್ಧಾರದಿಂದ ಹಿಂದೆ ಸರಿದಿಲ್ಲ. "ನನ್ನ ಸ್ವಂತ ದೇಶಕ್ಕೆ ಮರಳಲು ನನಗೆ ಯಾವುದೇ ವಿದೇಶಿ ಶಕ್ತಿಯ ಅಗತ್ಯವಿಲ್ಲ. ಸಾವು ನನ್ನ ಹಣೆಯಲ್ಲೇ ಬರೆದಿದ್ದರೆ, ನನ್ನ ಜನರ ನಡುವೆ, ನನ್ನ ದೇಶದ ಮಣ್ಣಿನಲ್ಲೇ ಸಾಯಲು ನಾನು ಬಯಸುತ್ತೇನೆ," ಎಂದು ಹೇಳುವ ಮೂಲಕ ಹಸೀನಾ ಬಾಂಗ್ಲಾ ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಮೂಡಿಸಿದ್ದಾರೆ.
ಅಮೆರಿಕದ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತದಿಂದ ಬಾಂಗ್ಲಾದೇಶಕ್ಕೆ ಮರಳುವ ತಮ್ಮ ಯೋಜನೆಯಲ್ಲಿ ಕಿಂಚಿತ್ತೂ ಬದಲಾವಣೆಯಿಲ್ಲ ಎಂದು ಕಡ್ಡಿ ಮುರಿದಂತೆ ಸ್ಪಷ್ಟಪಡಿಸಿದ್ದಾರೆ.
ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲು ಅಮೆರಿಕ ಅಥವಾ ಭಾರತದಂತಹ ಪ್ರಭಾವಿ ದೇಶಗಳು ಬಾಂಗ್ಲಾದೇಶದ ಮೇಲೆ ರಾಜತಾಂತ್ರಿಕ ಒತ್ತಡ ಹೇರಬೇಕೆಂದು ನೀವು ನಿರೀಕ್ಷಿಸುತ್ತೀರಾ ಎಂಬ ಪ್ರಶ್ನೆಗೆ ಹಸೀನಾ ಖಡಕ್ ಉತ್ತರ ನೀಡಿದ್ದಾರೆ. "ನಾನು ಪ್ರತಿಯೊಂದು ರಾಷ್ಟ್ರದೊಂದಿಗಿನ ಸ್ನೇಹ ಮತ್ತು ಸಹಕಾರವನ್ನು ಗೌರವಿಸುತ್ತೇನೆ. ಆದರೆ ನನ್ನ ಸ್ವಂತ ಮನೆಗೆ ನಾನು ವಾಪಸ್ ಹೋಗಲು ಯಾವ ಮೂರನೇ ದೇಶದ ರಕ್ಷಣೆಯಾಗಲಿ, ಅನುಮತಿಯಾಗಲಿ ನನಗೆ ಬೇಕಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
2024 ರ ಆಗಸ್ಟ್ನಲ್ಲಿ ವಿದ್ಯಾರ್ಥಿ ದಂಗೆ ತಾರಕಕ್ಕೇರಿದ ಬೆನ್ನಲ್ಲೇ ಅಧಿಕಾರ ತ್ಯಜಿಸಿ ಭಾರತದಲ್ಲಿ ಆಶ್ರಯ ಪಡೆದಿದ್ದ ಹಸೀನಾ, ಅಂದಿನಿಂದ ದೆಹಲಿಯಲ್ಲೇ ನೆಲೆಸಿದ್ದಾರೆ. ಇತ್ತ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ ಪ್ರತಿಭಟನಾಕಾರರ ಹತ್ಯೆಯ ಆರೋಪದಡಿ, ಗೈರುಹಾಜರಿಯಲ್ಲೇ ಗಲ್ಲು ಶಿಕ್ಷೆ ವಿಧಿಸಿದೆ. ಆದರೂ ಡಿಸೆಂಬರ್ ವೇಳೆಗೆ ಗಡಿ ದಾಟಿ ದೇಶದೊಳಗೆ ಕಾಲಿಡುವ ಶಪಥವನ್ನು ಹಸೀನಾ ಮಾಡಿದ್ದಾರೆ.
ಬಾಂಗ್ಲಾಗೆ ಮರಳಿದರೆ ಎದುರಾಗಬಹುದಾದ ಅಪಾಯಗಳ ಬಗ್ಗೆ ಹಸೀನಾ ಮಾತನಾಡಿದ್ದು, "ನಾನು ಬಾಂಗ್ಲಾದೇಶದ ನೆಲ ಮುಟ್ಟಿದ ಕ್ಷಣವೇ ಅವರು ನನ್ನನ್ನು ಗುಂಡಿಕ್ಕಿ ಕೊಲ್ಲಬಹುದು, ಅಥವಾ ಜೈಲಿಗೆ ತಳ್ಳಿ ಚಿತ್ರಹಿಂಸೆ ನೀಡಬಹುದು. ಅದಾವುದಕ್ಕೂ ನಾನು ಹೆದರುವುದಿಲ್ಲ. ಅಧಿಕಾರ ಹಿಡಿಯುವುದು ನನ್ನ ಉದ್ದೇಶವಲ್ಲ, ಬದಲಿಗೆ ಕಷ್ಟದಲ್ಲಿರುವ ನನ್ನ ಜನರ ಪರವಾಗಿ ನಿಲ್ಲುವುದು ನನ್ನ ಗುರಿ," ಎಂದಿದ್ದಾರೆ.
ಡಿಸೆಂಬರ್ನಲ್ಲಿ ದೇಶ ಪ್ರವೇಶಿಸುವ ನಿಖರವಾದ ದಿನಾಂಕ, ಸಮಯ ಮತ್ತು ಮಾರ್ಗವನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಅವರು ತಿಳಿಸಿದ್ದಾರೆ. ಇಕ್ಕಟ್ಟಿನ ಸಮಯದಲ್ಲಿ ತಮಗೆ ಆಶ್ರಯ ಕಲ್ಪಿಸಿದ ಭಾರತ ಸರ್ಕಾರ ಮತ್ತು ಭಾರತೀಯರಿಗೆ ಇದೇ ವೇಳೆ ಅವರು ತುಂಬು ಹೃದಯದ ಧನ್ಯವಾದ ಅರ್ಪಿಸಿದ್ದಾರೆ, (ಏಜೆನ್ಸೀಸ್).