ವಿಶ್ವದ ನಂಬರ್ 1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ( Elon Musk )
- ತರಿಗೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಎಲಾನ್ ಮಸ್ಕ್ ವಿಡಿಯೋ
- ತೆರಿಗೆ ಲೆಕ್ಕ ಹಾಕಿ ತಮಾಷೆ ಮಾಡಿದ ವಿಶ್ವದ ನಂಬರ್ 1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್
- ಜೀವನದುದ್ದಕ್ಕೂ ಸುಮಾರು 500 ಬಿಲಿಯನ್ ಡಾಲರ್ಗಿಂತಲೂ ಹೆಚ್ಚಿನ ತೆರಿಗೆ ಕಟ್ತೀನಿ ಅಂದ್ರು ಮಸ್ಕ್
Elon Musk : ತರಿಗೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ತಮ್ಮದೇ ವಿಡಿಯೋಗೆ ಬಹಳ ತಮಾಷೆಯಾಗಿ ಪ್ರತಿಕ್ರಿಯೆ ನೀಡಿರುವ ವಿಶ್ವದ ನಂಬರ್ 1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್, ನನ್ನ ಸಾವನ್ನು ಒಳಗೊಂಡಂತೆ ಜೀವನದುದ್ದಕ್ಕೂ ಸುಮಾರು 500 ಬಿಲಿಯನ್ ಡಾಲರ್ಗಿಂತಲೂ ಹೆಚ್ಚಿನ ತೆರಿಗೆ ಕಟ್ಟುತ್ತೇನೆ ಎಂದು ಅಂದಾಜಿಸಿದ್ದಾರೆ.
ಥಾಮಸ್ ಸೋವೆಲ್ ಕೋಟ್ಸ್ ಹೆಸರಿನ ಎಕ್ಸ್ ಖಾತೆಯಲ್ಲಿ ಎಲಾನ್ ಮಸ್ಕ್ ವೇದಿಕೆ ಒಂದರಲ್ಲಿ ಮಾತನಾಡಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಮಸ್ಕ್ ಅವರು ತೆರಿಗೆ ವಿಚಾರವಾಗಿ ಮಾತನಾಡಿದ್ದಾರೆ.
ಮಸ್ಕ್ ಹೇಳಿದ್ದೇನು?
ನಾನು ಇತಿಹಾಸದಲ್ಲೇ ಅತಿ ಹೆಚ್ಚು ತೆರಿಗೆ ಕಟ್ಟಿದ ವ್ಯಕ್ತಿ. ಈವರೆಗೆ ನಾನು 10 ಬಿಲಿಯನ್ ಡಾಲರ್ಗಿಂತಲೂ ಹೆಚ್ಚು ತೆರಿಗೆ ಕಟ್ಟಿದ್ದೇನೆ. ಈ ವಿಚಾರದಲ್ಲಿ ಅಮೆರಿಕದ ಆಂತರಿಕ ಕಂದಾಯ ಸೇವಾ ಇಲಾಖೆ ( IRS ) ನನಗೆ ಒಂದು ಟ್ರೋಫಿ ಕಳುಹಿಸಬಹುದೆಂದು ನಾನು ಭಾವಿಸಿದ್ದೆ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದರು. ಈ ವೇಳೆ ಅಲ್ಲಿದ್ದವರೆಲ್ಲ ನಗೆಗಡಲಲ್ಲಿ ತೇಲಿದರು.
ಜೀವನಪೂರ್ತಿ ತೆರಿಗೆ ಲೆಕ್ಕಾಚಾರ
ಇದೀಗ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಮಸ್ಕ್, ನನ್ನ ಸಾವನ್ನು ಸೇರಿಸಿ, ನನ್ನ ಜೀವನಪೂರ್ತಿ 500 ಬಿಲಿಯನ್ ಡಾಲರ್ ತೆರಿಗೆ ಪಾವತಿಸುತ್ತೇನೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ತಿಂಗಳು ಮಸ್ಕ್ ಅವರ ವೈಯಕ್ತಿಕ ಸಂಪತ್ತು 852 ಬಿಲಿಯನ್ ಡಾಲರ್ಗೆ ಏರಿರುವ ಸಮಯದಲ್ಲಿ ಈ ಕಾಮೆಂಟ್ ಮಾಡಿದ್ದಾರೆ.
ಮಸ್ಕ್ ಹೇಳಿಕೆ ಪ್ರಕಾರ, 500 ಬಿಲಿಯನ್ ಡಾಲರ್ ತೆರಿಗೆಯು ಮರಣದ ನಂತರದ ತೆರಿಗೆಯನ್ನು ಸಹ ಒಳಗೊಂಡಿದೆ. ಅಂದರೆ ತನ್ನ ಆಸ್ತಿ/ಷೇರುಗಳ ಮೇಲೆ ಸಾಯುವಾಗ ಬರುವ ದೊಡ್ಡ ಮೊತ್ತದ ಎಸ್ಟೇಟ್ ತೆರಿಗೆಯನ್ನೂ ಮಸ್ಕ್ ಲೆಕ್ಕಹಾಕಿದ್ದಾರೆ. ನಾನು ಇತಿಹಾಸದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟಿದ ಹಾಗೂ ಕಟ್ಟುವ ವ್ಯಕ್ತಿ ಎಂಬ ಹೆಮ್ಮೆಯ ಮಾತಿನ ಭಾಗವಾಗಿ ಮಸ್ಕ್ ಈ ಹೇಳಿಕೆ ನೀಡಿದ್ದಾರೆ, (ಏಜೆನ್ಸೀಸ್).