ಸಾಂದರ್ಭಿಕ ಚಿತ್ರ  
ವಿದೇಶ

ಇನ್ಮುಂದೆ ಮನುಷ್ಯನ ಜೀವಿತಾವಧಿ 70 ಅಲ್ಲ 150 ವರ್ಷ! ಚೀನಾ ಕಂಡುಹಿಡಿದ ಹೊಸ ಮಾತ್ರೆಯ ಬಗ್ಗೆ ಅಚ್ಚರಿ ಮಾಹಿತಿ ಇಲ್ಲಿದೆ...Human Life

ಪ್ರಮುಖ ಮುಖ್ಯಾಂಶಗಳು

  • ಆಧುನಿಕ ಜೀವನ ಶೈಲಿಯಲ್ಲಿ ಮನುಷ್ಯನ ಜೀವಿತಾವಧಿ ನಿರಂತರ ಕಡಿಮೆಯಾಗುತ್ತಿದೆ
  • ಪ್ರತಿಯೊಬ್ಬ ಮನುಷ್ಯನಿಗೂ ತಾನು ದೀರ್ಘಕಾಲ ಬದುಕೆಂಬ ಬಯಕೆ ಹೊಂದಿರುತ್ತಾನೆ
  • ಮಾನವನ ಜೀವಿತಾವಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಿವೆ
  • ಇದೀಗ ಚೀನಾದ ಸಂಶೋಧನೆಯೊಂದು ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ
Human Life : ಈ ಆಧುನಿಕ ಜೀವನ ಶೈಲಿಯಲ್ಲಿ ಮನುಷ್ಯನ ಜೀವಿತಾವಧಿ ಕಡಿಮೆ ಆಗುತ್ತಿರುವುದು ಹೊಸ ವಿಷಯವೇನಲ್ಲ. ಪ್ರತಿಯೊಬ್ಬ ಮನುಷ್ಯನು ದೀರ್ಘಕಾಲ ಬದುಕೆಂಬ ಬಯಕೆ ಹೊಂದಿರುತ್ತಾನೆ. ಆದರೆ, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಈ ಜಗತ್ತಿನಲ್ಲಿ ಮನುಷ್ಯನ ಆಯಸ್ಸು ಅಷ್ಟೇ ವೇಗವಾಗಿ ಕಡಿಮೆ ಆಗುತ್ತಿದೆ. ಸಹಜ ಸಾವುಗಳಿಗಿಂತ ಅಸಹಜ ಸಾವುಗಳು ಕೂಡ ಹೆಚ್ಚಾಗುತ್ತಿವೆ. ಪರಿಸರ ನಾಶ, ವಾಯು ಮಾಲಿನ್ಯ ಹಾಗೂ ವಿಷಪೂರಿತ ಆಹಾರಗಳಿಂದಾಗಿ ಮಾನವನ ಆಯಸ್ಸು ಕರಗುತ್ತಿದೆ. ಹೀಗಾಗಿ, ಮಾನವನ ಜೀವಿತಾವಧಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಪಂಚದಾದ್ಯಂತ ನಿರಂತರವಾಗಿ ಅನೇಕ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಆದಾಗ್ಯೂ ಈವರೆಗೆ ಯಾವುದೇ ಪ್ರಯೋಗ ಗಮನ ಸೆಳೆದಿಲ್ಲ. ಆದರೆ, ಇದೀಗ ಚೀನಾದ ಸಂಶೋಧನೆಯೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಹೌದು, ಚೀನಾದ ಬಯೋಟೆಕ್ ಕಂಪನಿ ಲೋನ್ವಿ ಬಯೋಸೈನ್ಸಸ್ ಮಹತ್ವದ ಘೋಷಣೆ ಮಾಡಿದೆ. ಆ ಘೋಷಣೆ ವಿಶ್ವದ ವಿಜ್ಞಾನಿಗಳನ್ನೇ ಅಚ್ಚರಿಗೆ ದೂಡಿದೆ. ಅಷ್ಟಕ್ಕೂ ಆ ಘೋಷಣೆ ಏನೆಂದರೆ, ಮಾನವರು ಇನ್ನು ಮುಂದೆ 150 ವರ್ಷಗಳವರೆಗೆ ಬದುಕಬಹುದು ಎಂದು ಹೇಳಿದ್ದಾರೆ. ಸದ್ಯ ಮನುಷ್ಯನ ಸರಾಸರಿ ಜೀವಿತಾವಧಿ 65 ರಿಂದ 70 ವರ್ಷಗಳ ನಡುವೆ ಇದೆ. ಆದರೆ, ಚೀನಾ ಕಂಪನಿ ಘೋಷಿಸಿರುವ ಜೀವಿತಾವಧಿ ಒಂದು ಪಟ್ಟು ಹೆಚ್ಚಿದೆ.
ಜೀವಿತಾವಧಿ ಹೆಚ್ಚಾಗಲು ಹೇಗೆ ಸಾಧ್ಯ? ಚೀನಾ ಕಂಪನಿ ಅಂಥದ್ದೇನು ಕಂಡುಹಿಡಿದಿದೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆ ಪ್ರಶ್ನೆಗೆ ಉತ್ತರ ಏನೆಂದರೆ, ಲೋನ್ವಿ ಬಯೋಸೈನ್ಸಸ್​ ಕಂಪನಿ ಒಂದು ಮಾತ್ರೆಯನ್ನು ಕಂಡುಹಿಡಿದಿದೆ. ಆ ಮಾತ್ರೆ ಜೀವಿತಾವಧಿಯನ್ನು ಹೆಚ್ಚಿಸುತ್ತದೆಯಂತೆ. ಒಂದು ವೇಳೆ ಈ ಮಾತು ನಿಜವಾಗಿದ್ದರೆ, ಮಾನವನ ಜೀವಿತಾವಧಿ ಸಂಪೂರ್ಣವಾಗಿ ಬದಲಾಗುತ್ತದೆ. ಆದಾಗ್ಯೂ, ಲೋನ್ವಿ ಕಂಪನಿ ಮಾಡಿರುವ ಹೇಳಿಕೆಯನ್ನು ಇನ್ನೂ ಸಂಪೂರ್ಣವಾಗಿ ಪರಿಶೀಲಿಸಿಲ್ಲ. ಆದಾದ್ಯೂ, ಪ್ರಯೋಗಗಳು ಬಹುತೇಕ ಯಶಸ್ವಿಯಾಗಿವೆ ಎಂದು ಲೋನ್ವಿ ಕಂಪನಿ ಹೇಳಿಕೊಂಡಿದೆ.

ಮಾತ್ರೆ ಹೇಗೆ ಕೆಲಸ ಮಾಡುತ್ತೆ?

ಮಾನವನ ದೇಹದಲ್ಲಿ ಜೀವಕೋಶಗಳ ಮಟ್ಟದಲ್ಲಿ ವಯಸ್ಸಾಗುತ್ತದೆ. ಅಂದರೆ, ಜೀವಕೋಶಗಳಿಗೆ ವಯಸ್ಸಾದಂತೆ ಮಾನವ ಸಾಯುತ್ತಾನೆ. ಈಗ ಚೀನಾ ಕಂಡುಹಿಡಿದಿರುವ ಮಾತ್ರೆ ವಯಸ್ಸಾಗುವಿಕೆಗೆ ಕಾರಣವಾಗುವ ಜೀವಕೋಶಗಳನ್ನೇ ಗುರಿಯಾಗಿಸುತ್ತದೆ. ನಮ್ಮ ದೇಹವು "ಜೊಂಬಿ ಕೋಶಗಳು" ಎಂದು ಕರೆಯಲ್ಪಡುವ ಸತ್ತಿಲ್ಲದ ಹಳೆಯ ಕೋಶಗಳನ್ನು ಹೊಂದಿರುತ್ತದೆ. ಅಂದರೆ, ಸಾಯಬೇಕಾದ ಕೋಶಗಳು ಸಾಯುವುದಿಲ್ಲ. ಈ ಕೋಶಗಳು ಉರಿಯೂತವನ್ನು ಉಂಟುಮಾಡುತ್ತವೆ ಮತ್ತು ವಯಸ್ಸಾದ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಚೀನಾ ಮಾತ್ರೆ ಆ ಹಾನಿಕಾರಕ ಕೋಶಗಳನ್ನು ನಿವಾರಿಸುತ್ತದೆ. ಅದರ ಪರಿಣಾಮವಾಗಿ, ಜೀವಿತಾವಧಿ ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ಕಂಪನಿ ಹೇಳುತ್ತದೆ.

ಮಾತ್ರೆಯಲ್ಲಿ ಏನಿದೆ?

ಈ ಮಾತ್ರೆಯು ಮುಖ್ಯವಾಗಿ ಪ್ರೊಸೈನಿಡಿನ್ C1 (PCC1) ಅನ್ನು ಹೊಂದಿರುತ್ತದೆ. ಇದನ್ನು ನೈಸರ್ಗಿಕವಾಗಿ ದ್ರಾಕ್ಷಿ ಬೀಜಗಳಿಂದ ಪಡೆಯಲಾಗುತ್ತದೆ. ಇದು ವಯಸ್ಸಾಗುವುದನ್ನು ತಡೆಯುವ ಗುಣಗಳನ್ನು ಹೊಂದಿದೆ ಮತ್ತು ಹಳೆಯ ಕೋಶಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ಇದು ನೈಸರ್ಗಿಕ ಮೂಲಗಳಿಂದ ಬರುವುದರಿಂದ ಇದು ಸುರಕ್ಷಿತವಾಗಿದೆ.

ಇಲಿಯ ಮೇಲೆ ನಡೆದ ಪ್ರಯೋಗ

ಈಗಾಗಲೇ ಇಲಿಗಳ ಮೇಲೆ ಪ್ರಯೋಗಗಳು ನಡೆದಿದ್ದು, ಅದರ ಫಲಿತಾಂಶ ಭರವಸೆ ನೀಡುತ್ತಿವೆ. ಇಲಿಗಳ ಜೀವಿತಾವಧಿ ಶೇ. 64 ರಷ್ಟು ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ. ಆದಾಗ್ಯೂ, ಮಾನವನ ಮೇಲೆ ಈ ಪ್ರಯೋಗ ಇನ್ನು ನಡೆದಿಲ್ಲ. ಮಾತ್ರೆಯ ಬಗ್ಗೆ ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಲ್ಯು ಕ್ವಿಂಗ್ಹುವಾ ಮಾತನಾಡಿದ್ದು, ತಮ್ಮ ತಂತ್ರಜ್ಞಾನದ ಮೇಲೆ ವಿಶ್ವಾಸ ಹೊಂದಿದ್ದಾರೆ. ಮನುಷ್ಯರು 150 ವರ್ಷಗಳವರೆಗೆ ಬದುಕುವುದು ಸಾಧ್ಯ. ಇದು ಶೀಘ್ರದಲ್ಲೇ ಸಾಬೀತಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಕಂಪನಿಯು ತನ್ನ ಸಂಶೋಧನೆಯನ್ನು ಮುಂದುವರಿಸುತ್ತದೆ ಎಂದಿದ್ದಾರೆ.
ಇನ್ನು ಚೀನಾದಲ್ಲಿ ಇಂತಹ ಪ್ರಯೋಗಗಳು ಬಹಳ ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಚೀನೀಯರಲ್ಲಿ ದೀರ್ಘಾಯುಷ್ಯ ಸಂಶೋಧನೆ ಮೇಲಿನ ಆಸಕ್ತಿ ಹೆಚ್ಚುತ್ತಿದೆ. ಚೀನಾದ ನಾಗರಿಕರ ಸರಾಸರಿ ಜೀವಿತಾವಧಿ ಈಗ 79 ವರ್ಷಗಳು. ಜಾಗತಿಕ ಸರಾಸರಿಗಿಂತ 5 ವರ್ಷಗಳು ಹೆಚ್ಚಿದೆ. ಇಂತಹ ಪ್ರಯೋಗಗಳಿಗೆ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆ ಕೂಡ ಹೆಚ್ಚುತ್ತಿದೆ. ಈ ಹಿಂದೆ, ಶ್ರೀಮಂತ ಅಮೆರಿಕನ್ನರು ಮಾತ್ರ ವಯಸ್ಸಾದ ಪ್ರಯೋಗಗಳಲ್ಲಿ ಹೂಡಿಕೆ ಮಾಡುತ್ತಿದ್ದರು. ಈಗ ಚೀನಾದ ಜನರು ಈ ಕ್ಷೇತ್ರದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಬದಲಾವಣೆಯಾಗಿದೆ.

ವಿಜ್ಞಾನಿಗಳ ಎಚ್ಚರಿಕೆ

ಇನ್ನು ಮಾನವ ಜೀವಿತಾವಧಿಯನ್ನು ಹೆಚ್ಚಿಸುವ ಪ್ರಯೋಗಗಳು ಅಪಾಯಕಾರಿ ಎಂದು ವಿಜ್ಞಾನಿಗಳು ಯಾವಾಗಲೂ ಎಚ್ಚರಿಸುತ್ತಾ ಬರುತ್ತಿದ್ದಾರೆ. ಇಲಿಗಳ ಮೇಲಿನ ಪ್ರಯೋಗಗಳ ಫಲಿತಾಂಶಗಳು ಕೇವಲ ಪ್ರಾಥಮಿಕ ಚಿಹ್ನೆಗಳಷ್ಟೇ, ಮಾನವ ಪ್ರಯೋಗಗಳು ಇನ್ನೂ ಅಗತ್ಯವಿದೆ. ಇಲಿಗಳ ಮೇಲಿನ ಪ್ರಯೋಗದ ಫಲಿತಾಂಶವನ್ನು ನಂಬಲಾಗದು. ಮಾನವನಿಗೆ ನೀಡುವ ಡೋಸೇಜ್ ತುಂಬಾ ನಿಖರವಾಗಿರಬೇಕು. ಅಡ್ಡಪರಿಣಾಮಗಳು ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ತಿಳಿದುಕೊಳ್ಳಬೇಕು. ಇದಕ್ಕೆ ವರ್ಷಗಳೇ ಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಒಂದು ವೇಳೆ ಈ ಮಾತ್ರೆ ಏನಾದರೂ ದೊಡ್ಡ ಪ್ರಗತಿ ಸಾಧಿಸಿದರೆ ಅಥವಾ ಲೋನ್ವಿ ಕಂಪನಿಯ ಹೇಳಿಕೆ ನಿಜವಾಗಿದ್ದರೆ, ಮಾನವ ಜನಾಂಗದ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ. ಇದು ಸಂಪೂರ್ಣವಾಗಿ ಯಶಸ್ವಿಯಾದರೆ, ಆರೋಗ್ಯ ವ್ಯವಸ್ಥೆಗಳು, ನಿವೃತ್ತಿ ವಯಸ್ಸು, ಜನಸಂಖ್ಯೆ ಹಾಗೂ ಆರ್ಥಿಕ ಸ್ಥಿತಿ ಎಲ್ಲವೂ ತಲೆಕೆಳಗಾಗುತ್ತದೆ. ಅಲ್ಲದೆ, ಭವಿಷ್ಯದಲ್ಲಿ, ಜೀವಕೋಶ ದುರಸ್ತಿ, ಆನುವಂಶಿಕ ಮಾರ್ಪಾಡುಗಳು, ಸಂಯೋಜನೆಯ ಚಿಕಿತ್ಸೆಗಳಂತಹ ಬಹು ಮಾರ್ಗಗಳನ್ನು ಅನ್ವೇಷಿಸಲಾಗುತ್ತದೆ. ಜೀವಿತಾವಧಿ ಸಂಶೋಧನೆಯ ಕ್ಷೇತ್ರವು ಕೂಡ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, (ಏಜೆನ್ಸೀಸ್​).