ಅಮೆರಿಕ-ಇಸ್ರೇಲ್ ಪಡೆಗಳಿಗೆ ಹಾರ್ಟ್ ಅಟ್ಯಾಕ್ ಗ್ಯಾರಂಟಿ!ಹೊರ್ಮುಜ್ ಸಂಘರ್ಷದ ನಡುವೆ ಇರಾನ್‌ನಿಂದ ಹೊಸ ರಹಸ್ಯ ಅಸ್ತ್ರದ ಎಚ್ಚರಿಕೆ! 
ವಿದೇಶ

ಅಮೆರಿಕ-ಇಸ್ರೇಲ್ ಪಡೆಗಳಿಗೆ ಹಾರ್ಟ್ ಅಟ್ಯಾಕ್ ಗ್ಯಾರಂಟಿ!ಹೊರ್ಮುಜ್ ಸಂಘರ್ಷದ ನಡುವೆ ಇರಾನ್‌ನಿಂದ ಹೊಸ ರಹಸ್ಯ ಅಸ್ತ್ರದ ಎಚ್ಚರಿಕೆ! Iran New Weapon

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಮತ್ತಷ್ಟು ದಟ್ಟವಾಗುತ್ತಿದ್ದು, ಇರಾನ್(Iran New Weapon) ಮತ್ತು ಅಮೆರಿಕ ನಡುವಿನ ಸಂಘರ್ಷ ಈಗ ಅತ್ಯಂತ ಅಪಾಯಕಾರಿ ಹಂತಕ್ಕೆ ಬಂದು ನಿಂತಿದೆ. ಅಮೆರಿಕದ ನೌಕಾ ದಿಗ್ಬಂಧನದ ವಿರುದ್ಧ ಕೆರಳಿರುವ ಇರಾನ್, ಶತ್ರು ಪಡೆಗಳ ಎದೆಯಲ್ಲಿ ನಡುಕ ಹುಟ್ಟಿಸುವಂತಹ 'ಹೊಸ ರಹಸ್ಯ ಅಸ್ತ್ರವೊಂದನ್ನು ಪ್ರಯೋಗಿಸುವುದಾಗಿ ಗುಡುಗಿದೆ. ನಮ್ಮ ಈ ಹೊಸ ಆಯುಧ ಶತ್ರುಗಳಿಗೆ ಹಾರ್ಟ್ ಅಟ್ಯಾಕ್ ಉಂಟುಮಾಡಬಲ್ಲದು ಎಂಬ ಇರಾನ್ ನೌಕಾಪಡೆಯ ಕಮಾಂಡರ್ ಹೇಳಿಕೆ ಈಗ ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದೆ.

ಹೊರ್ಮುಜ್ ಜಲಸಂಧಿಯಲ್ಲಿ ದಿಗ್ಬಂಧನ ಮತ್ತು ತಿರಸ್ಕಾರ

ಇರಾನ್ ಮೇಲಿನ ಅಮೆರಿಕದ ನೌಕಾ ದಿಗ್ಬಂಧನವನ್ನು ತೆರವುಗೊಳಿಸಿದರೆ, ಜಾಗತಿಕ ತೈಲ ವ್ಯಾಪಾರದ ಜೀವನಾಡಿಯಾಗಿರುವ ಹೊರ್ಮುಜ್ ಜಲಸಂಧಿಯನ್ನು ಮರುಮುಕ್ತಗೊಳಿಸುವುದಾಗಿ ಇರಾನ್ ಪ್ರಸ್ತಾಪ ನೀಡಿತ್ತು. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ಇರಾನ್‌ನ ಪರಮಾಣು ಕಾರ್ಯಕ್ರಮದ ಮಾತುಕತೆಯನ್ನು ಮುಂದೂಡಿ, ಕೇವಲ ಜಲಸಂಧಿಯ ವ್ಯವಹಾರಕ್ಕೆ ಒಪ್ಪಲು ಸಾಧ್ಯವಿಲ್ಲ ಎಂದು ವಾಷಿಂಗ್ಟನ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ತನ್ನ ನೌಕಾಪಡೆಯನ್ನು ಹೊರ್ಮುಜ್ ಬಳಿ ಮತ್ತಷ್ಟು ಬಲಪಡಿಸಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಈ ಮಾರಕ ಎಚ್ಚರಿಕೆ ನೀಡಿದೆ.

ಶತ್ರುಗಳ ಪಕ್ಕದಲ್ಲೇ ಇದೆ ಆ ಮಾರಕ ಅಸ್ತ್ರ!

ಇರಾನ್ ನೌಕಾಪಡೆಯ ಕಮಾಂಡರ್ ರಿಯರ್ ಅಡ್ಮಿರಲ್ ಶಹ್ರಾಮ್ ಇರಾನಿ ಅವರು ಸರ್ಕಾರಿ ಸ್ವಾಮ್ಯದ ಪ್ರೆಸ್ ಟಿವಿಯೊಂದಿಗೆ ಮಾತನಾಡಿ, ಶತ್ರುಗಳು ಯಾವುದಕ್ಕೆ ಅತೀವವಾಗಿ ಹೆದರುತ್ತಾರೋ ಅಂತಹ ಆಯುಧವನ್ನು ನಾವು ಅತಿ ಶೀಘ್ರದಲ್ಲೇ ಅವರ ಮುಂದೆ ತರಲಿದ್ದೇವೆ. ವಿಶೇಷವೆಂದರೆ, ಆ ಅಸ್ತ್ರ ಈಗಾಗಲೇ ಅವರ ಪಕ್ಕದಲ್ಲೇ ಇದೆ. ಅದನ್ನು ನೋಡಿದ ನಂತರ ಶತ್ರು ಪಡೆಗಳಿಗೆ ಹಾರ್ಟ್ ಅಟ್ಯಾಕ್ ಆಗದಿದ್ದರೆ ಸಾಕು ಎಂದು ವ್ಯಂಗ್ಯವಾಡಿದ್ದಾರೆ.
ಈ ಅಸ್ತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಕಮಾಂಡರ್, ಅಮೆರಿಕದ ಆರ್ಥಿಕ ಒತ್ತಡದ ತಂತ್ರಗಳು ಇರಾನ್ ಮುಂದೆ ನಡೆಯುವುದಿಲ್ಲ ಎಂದು ಕಿಡಿಕಾರಿದ್ದಾರೆ. ತೈಲ ವ್ಯಾಪಾರಕ್ಕೆ ಅಡ್ಡಿಪಡಿಸಿ ನಮ್ಮನ್ನು ಮಾತುಕತೆಗೆ ಒಳಪಡಿಸಬಹುದು ಎಂಬ ಅಮೆರಿಕದ ಕಲ್ಪನೆ ಮಿಲಿಟರಿ ಅಕಾಡೆಮಿಗಳಲ್ಲಿ ಒಂದು ಹಾಸ್ಯವಾಗಿ ಮಾರ್ಪಟ್ಟಿದೆ ಎಂದು ಲೇವಡಿ ಮಾಡಿದ್ದಾರೆ.

ಯುಎಸ್ ಯುದ್ಧನೌಕೆ 'ಅಬ್ರಹಾಂ ಲಿಂಕನ್' ಮೇಲೆ ದಾಳಿಯ ದಾವೆ

ಇದೇ ವೇಳೆ ಅಡ್ಮಿರಲ್ ಇರಾನಿ ಅವರು ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದಾರೆ. ಅಮೆರಿಕದ ಬೃಹತ್ ಯುದ್ಧನೌಕೆಯಾದ 'ಯುಎಸ್ಎಸ್ ಅಬ್ರಹಾಂ ಲಿಂಕನ್ ಅನ್ನು ಗುರಿಯಾಗಿಸಿಕೊಂಡು ಇರಾನ್ ಕನಿಷ್ಠ ಏಳು ಬಾರಿ ಕ್ಷಿಪಣಿ ದಾಳಿ ನಡೆಸಿದೆ ಎಂದು ಇರಾನಿ ಪ್ರತಿಪಾದಿಸಿದ್ದಾರೆ. ಈ ದಾಳಿಗಳಿಂದಾಗಿ ಅಮೆರಿಕದ ವಾಯು ಕಾರ್ಯಾಚರಣೆಗಳಿಗೆ ತಾತ್ಕಾಲಿಕವಾಗಿ ಅಡ್ಡಿಯಾಗಿತ್ತು ಎಂದು ಹೇಳಿದ್ದಾರೆ. ಯುದ್ಧ ಆರಂಭವಾದಾಗಿನಿಂದ ಅಮೆರಿಕ ಮತ್ತು ಇಸ್ರೇಲ್ ಗುರಿಗಳ ಮೇಲೆ ಇರಾನ್ ಒಟ್ಟು ೧೦೦ಕ್ಕೂ ಹೆಚ್ಚು ಬಾರಿ ಪ್ರತೀಕಾರದ ದಾಳಿಗಳನ್ನು ನಡೆಸಿದೆ ಎಂದು ಮಾಹಿತಿ ನೀಡಿದ್ದಾರೆ.

ಜಾಗತಿಕ ತೈಲ ಮಾರುಕಟ್ಟೆಗೆ ಆತಂಕ

ವಿಶ್ವದ ಒಟ್ಟು ಕಚ್ಚಾ ತೈಲ ಸಾಗಣೆಯ ಶೇ.೨೦ ರಷ್ಟು ಪಾಲು ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಇರಾನ್ ಈ ಮಾರ್ಗವನ್ನು ಬಹುತೇಕ ಮುಚ್ಚಿದ್ದು, ತನ್ನ ಶತ್ರು ರಾಷ್ಟ್ರಗಳಿಗೆ ಸೇರಿದ ಹಡಗುಗಳ ಸಂಚಾರಕ್ಕೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ಅರೇಬಿಯನ್ ಸಮುದ್ರದ ಕಡೆಯಿಂದ ಜಲಸಂಧಿಯ ಪ್ರವೇಶವನ್ನು ಇರಾನ್ ಬಂದ್ ಮಾಡಿದ್ದು, ಅಮೆರಿಕದ ನೌಕೆಗಳು ಹತ್ತಿರ ಬಂದರೆ ತಕ್ಷಣದ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಅಮೆರಿಕದ ಕೃತ್ಯ ಸೋಮಾಲಿಯಾ ಕಡಲ್ಗಳ್ಳರಿಗಿಂತಲೂ ಹೀನಾಯ

ಅಮೆರಿಕದ ಪಡೆಗಳು ಇರಾನ್‌ನ ಹಡಗುಗಳನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಳ್ಳುತ್ತಿವೆ ಎಂದು ಇರಾನಿ ಆರೋಪಿಸಿದ್ದಾರೆ. ಅಮೆರಿಕದ ನೌಕಾಪಡೆಯು ಇರಾನ್ ಹಡಗುಗಳಲ್ಲಿನ ಸಿಬ್ಬಂದಿ ಮತ್ತು ಅವರ ಕುಟುಂಬದವರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ. ಇದು ಅಂತಾರಾಷ್ಟ್ರೀಯ ದರೋಡೆಗಿಂತಲೂ ಕೀಳಾದ ಕೃತ್ಯವಾಗಿದೆ. ಇವರ ನಡವಳಿಕೆ ಸೋಮಾಲಿಯಾ ಕಡಲ್ಗಳ್ಳರಿಗಿಂತಲೂ ಹೀನಾಯವಾಗಿದೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಹೊರ್ಮುಜ್ ಜಲಸಂಧಿಯು ಈಗ ಜಾಗತಿಕ ಯುದ್ಧದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಇರಾನ್‌ನ ಈ ಹೊಸ ಅಸ್ತ್ರ ಯಾವುದು ಎಂಬ ಪ್ರಶ್ನೆ ಎದ್ದಿದೆ. ಅದು ಸುಧಾರಿತ ಡ್ರೋನ್ ತಂತ್ರಜ್ಞಾನವೇ ಅಥವಾ ಕರಾವಳಿ ರಕ್ಷಣಾ ಕ್ಷಿಪಣಿಗಳೇ ಎಂಬುದು ಈಗ ತಜ್ಞರಲ್ಲಿ ಚರ್ಚೆಯ ವಿಷಯವಾಗಿದೆ. ಒಂದು ವೇಳೆ ಸಂಘರ್ಷ ವಿಕೋಪಕ್ಕೆ ಹೋದರೆ, ಜಾಗತಿಕ ತೈಲ ಬೆಲೆ ಗಗನಕ್ಕೇರುವುದರ ಜೊತೆಗೆ ಮೂರನೇ ಮಹಾಯುದ್ಧಕ್ಕೆ ನಾಂದಿಯಾಗುವ ಭೀತಿಯೂ ಎದುರಾಗಿದೆ,(ಏಜೆನ್ಸೀಸ್).