ಅವನು ಸ್ಕೆಚ್ ಹಾಕಿದ್ದ.. ನಾನು ಫಿನಿಶ್ ಮಾಡಿದೆ! ಖಮೇನಿ ಸಾವಿನ ಹಿಂದೆ ಇತ್ತಾ ಪರ್ಸನಲ್ ರಿವೆಂಜ್: ಟ್ರಂಪ್ ಮಾತಿನ ಅಸಲಿ ಅರ್ಥವೇನು..?
ನ್ಯೂಯಾರ್ಕ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಭುಗಿಲೆದ್ದಿರುವ ಬೆನ್ನಲ್ಲೇ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump), ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯ ಕುರಿತು ಅತ್ಯಂತ ನೇರ ಮತ್ತು ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಸೋಮವಾರ (ಮಾ.2) ಎಬಿಸಿ ನ್ಯೂಸ್ ಜೊತೆ ಮಾತನಾಡಿದ ಟ್ರಂಪ್, ಅಲಿ ಖಮೇನಿ ನನ್ನನ್ನು ಕೊಲ್ಲುವ ಮೊದಲೇ ನಾನು ಅವನನ್ನು ಕೊಂದೆ ಎಂದು ಪ್ರತಿಪಾದಿಸಿದ್ದಾರೆ.
ಐ ಗಾಟ್ ಹಿಮ್ ಬಿಫೋರ್ ಹಿ ಗಾಟ್ ಮಿ
ತಮ್ಮ ಜೀವಕ್ಕೆ ಎದುರಾಗಿದ್ದ ಭೀತಿಯನ್ನು ಹತ್ತಿಕ್ಕಲು ತಾವೇ ಮೊದಲು ಹೆಜ್ಜೆ ಇಟ್ಟಿದ್ದಾಗಿ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಖಮೇನಿ ನನ್ನನ್ನು ಕೊಲ್ಲಲು ಎರಡು ಬಾರಿ ಪ್ರಯತ್ನಿಸಿದ್ದ. ಹಾಗಾಗಿ ಅವನು ನನ್ನನ್ನು ಮುಗಿಸುವ ಮುನ್ನವೇ ನಾನು ಅವನನ್ನು ಮುಗಿಸಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದು 2024ರಲ್ಲಿ ಟ್ರಂಪ್ ವಿರುದ್ಧ ಇರಾನ್ ರೂಪಿಸಿತ್ತು ಎನ್ನಲಾದ ಹತ್ಯೆ ಸಂಚಿಗೆ ಪ್ರತಿಕಾರ ಎಂಬಂತೆ ಕಂಡುಬರುತ್ತಿದೆ.
ಇರಾನ್ ಮೇಲೆ ಪಿನ್‌ಪಾಯಿಂಟ್ ದಾಳಿ: 200ಕ್ಕೂ ಹೆಚ್ಚು ಸಾವು
ಶನಿವಾರ ನಡೆದ ನಿಖರ ವೈಮಾನಿಕ ದಾಳಿಯಲ್ಲಿ ಖಮೇನಿ ಹತರಾದ ನಂತರ, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನಾದ್ಯಂತ ತಮ್ಮ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಗುರಿಗಳು: ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಮೂಲಸೌಕರ್ಯ ಮತ್ತು ನೌಕಾ ನೆಲೆಗಳನ್ನು ಗುರಿಯಾಗಿಸಿ ಭೀಕರ ಬಾಂಬ್ ದಾಳಿ ನಡೆಸಲಾಗಿದೆ.
ಸಾವು-ನೋವು: ಟೆಹ್ರಾನ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ಫೋಟಗಳು ಸಂಭವಿಸಿದ್ದು, ಕನಿಷ್ಠ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ ಇರಾನ್‌ನ ಉನ್ನತ ಕಮಾಂಡರ್‌ಗಳು ಸೇರಿದ್ದಾರೆ.
ಅಮೆರಿಕದ ಸಾವು: ಇರಾನ್ ನಡೆಸಿದ ಪ್ರತಿ-ದಾಳಿಯಲ್ಲಿ ಅಮೆರಿಕದ ಮೂವರು ಸೈನಿಕರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.
ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ಮಳೆ
ಖಮೇನಿ ಹತ್ಯೆಗೆ ಪ್ರತಿಯಾಗಿ ಇರಾನ್ ಈಗ ಇಸ್ರೇಲ್ ಮತ್ತು ಅಮೆರಿಕದ ನೆಲೆಗಳಿರುವ ಗಲ್ಫ್ ರಾಷ್ಟ್ರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುತ್ತಿದೆ. ಕುವೈತ್, ಬಹ್ರೇನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಮೇಲೆ ಇರಾನ್ ದಾಳಿ ಮಾಡಿದೆ. ಆದರೆ, ಈ ಬಹುತೇಕ ಗಲ್ಫ್ ರಾಷ್ಟ್ರಗಳು ಇರಾನ್‌ನ ನಡೆಯನ್ನು ಖಂಡಿಸಿವೆ ಮತ್ತು ಪರಿಸ್ಥಿತಿ ತಿಳಿಗೊಳಿಸಲು ಕರೆ ನೀಡಿವೆ.
ಇರಾನ್ ಜನತೆಗೆ ನೆತನ್ಯಾಹು ಕರೆ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇರಾನ್ ಜನತೆಯನ್ನು ಉದ್ದೇಶಿಸಿ ಮಾತನಾಡಿ, ಖಮೇನಿ ಆಡಳಿತದ ವಿರುದ್ಧ ದಂಗೆ ಎದ್ದು, ಸರ್ಕಾರದ ನಿಯಂತ್ರಣವನ್ನು ನಿಮ್ಮ ಕೈಗೆ ತೆಗೆದುಕೊಳ್ಳಿ ಎಂದು ಕರೆ ನೀಡಿದ್ದಾರೆ. ಇತ್ತ ಟ್ರಂಪ್ ಕೂಡ ಎಚ್ಚರಿಕೆ ನೀಡಿದ್ದು, ಇರಾನ್ ಇನ್ನು ಮುಂದೆ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದರೆ, ನಾವು ಮತ್ತಷ್ಟು ಭೀಕರವಾಗಿ ದಾಳಿ ನಡೆಸುತ್ತೇವೆ ಎಂದಿದ್ದಾರೆ.
ಇರಾನ್ ಸಂವಿಧಾನ ಮತ್ತು ಮುಂದಿನ ಅಸ್ಥಿರತೆ
ಇರಾನ್‌ನಲ್ಲಿ ಸಂಘಟಿತ ವಿರೋಧ ಪಕ್ಷಗಳಿಲ್ಲದಿರುವುದು ಮತ್ತು ಧಾರ್ಮಿಕ ಸರ್ವೋಚ್ಚ ನಾಯಕನ ಹುದ್ದೆಯನ್ನು ಪ್ರಶ್ನಿಸಲು ಸಂವಿಧಾನದಲ್ಲಿ ಅವಕಾಶವಿಲ್ಲದಿರುವುದು ದೇಶವನ್ನು ಅರಾಜಕತೆಯತ್ತ ತಳ್ಳುವ ಸಾಧ್ಯತೆ ಇದೆ. ಸದ್ಯಕ್ಕೆ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ನೇತೃತ್ವದ ಮಂಡಳಿಯು ಆಡಳಿತ ವಹಿಸಿಕೊಂಡಿದ್ದರೂ, ರೆವಲ್ಯೂಷನರಿ ಗಾರ್ಡ್ಸ್ ಪೂರ್ಣ ಅಧಿಕಾರವನ್ನು ಕಬಳಿಸುವ ಲಕ್ಷಣಗಳು ಕಾಣುತ್ತಿವೆ,(ಏಜೆನ್ಸೀಸ್).