- ನಮ್ಮ ಭೂಮಿಯ ಸಾವಿರಾರು ಕಿಲೋಮೀಟರ್‌ಗಳಷ್ಟು ಆಳದಲ್ಲಿ ವಿಚಿತ್ರವಾದದ್ದೇನೋ ನಡೆಯುತ್ತಿದೆ
- ಭೂಮಿಯ ಅಂತರಾಳ ಅಂದರೆ, ಒಳಭಾಗದ ಚಲನೆ ನಿಧಾನಗೊಂಡಿದೆ ಅಂತಿದ್ದಾರೆ ಸಂಶೋಧಕರು
- ಕಾಂತೀಯ ಕ್ಷೇತ್ರ ಮತ್ತು ಗುರುತ್ವಾಕರ್ಷಣ ಬಲದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ
- ಭೂಮಿಯ ಒಳಗಿನ ತಿರುಳಿನ ನಿಧಾನಗತಿಯು ನಮ್ಮ ದೈನಂದಿನ ಜೀವನದ ಸಮಯವನ್ನು ನಿಲ್ಲಿಸುವುದಿಲ್ಲ
Earth : ನಾವು ನಮ್ಮ ಭೂಮಿಯ ಮೇಲ್ಮೈಯಲ್ಲಿ ನಿರಂತರವಾಗಿ ಓಡುತ್ತಿದ್ದೇವೆ, ಆದರೆ ನಮ್ಮ ಪಾದಗಳ ಕೆಳಗೆ ಸಾವಿರಾರು ಕಿಲೋಮೀಟರ್‌ಗಳಷ್ಟು ಆಳದಲ್ಲಿ ವಿಚಿತ್ರವಾದದ್ದೇನೋ ನಡೆಯುತ್ತಿದೆ. ಆದರೆ, ಇದು ಅನೇಕ ಮಂದಿಗೆ ತಿಳಿದಿಲ್ಲ. ಭೂಮಿಯ ಅಂತರಾಳ ಅಂದರೆ, ಒಳಭಾಗದ ಚಲನೆ ನಿಧಾನಗೊಂಡಿದೆ ಮತ್ತು ಬಹುಶಃ ನಿಂತುಹೋಗಿರಬಹುದು ಎಂದು ಸಂಶೋಧಕರು ಹೇಳುತ್ತಿದ್ದಾರೆ. ಇದನ್ನು ಕೇಳಿದರೆ, ಯಾವುದೋ ವೈಜ್ಞಾನಿಕ ಕಾದಂಬರಿ ಅಥವಾ ಸಿನಿಮಾ ಕತೆ ಅನಿಸಿದರು ಕೂಡ ಇದು ನಿಜವಾದ ವೈಜ್ಞಾನಿಕ ಆವಿಷ್ಕಾರವಾಗಿದೆ ಅನ್ನೋದೆ ಅಚ್ಚರಿಯ ಸಂಗತಿ.
ಹೌದು, ಭೂಮಿಯ ಒಳಗಿನ ಕೋರ್ ಅಂದರೆ ತಿರುಳು, ದ್ರವರೂಪದ ಹೊರ ತಿರುಳಿನಲ್ಲಿ ತೇಲುತ್ತಿರುವ ಕಬ್ಬಿಣದ ಘನ ಉಂಡೆಯಾಗಿದೆ. ಇದು ಸಾಮಾನ್ಯವಾಗಿ ಭೂಮಿಯ ತಿರುಗುವಿಕೆಗಿಂತ ಸ್ವಲ್ಪ ವೇಗವಾಗಿ ತಿರುಗುತ್ತದೆ ಎಂದು ಭಾವಿಸಲಾಗಿದೆ. ಆದಾಗ್ಯೂ, ಭೂಕಂಪಶಾಸ್ತ್ರಜ್ಞರು ಸಂಗ್ರಹಿಸಿದ ಇತ್ತೀಚಿನ ಭೂಕಂಪನ ತರಂಗ ದತ್ತಾಂಶದ ಪ್ರಕಾರ, ಈ ಒಳಗಿನ ತಿರುಳು ಅದರ ತಿರುಗುವಿಕೆಯ ವೇಗವನ್ನು ನಿಧಾನಗೊಳಿಸಿದಯಂತೆ.
2009ರ ಆರಂಭದಲ್ಲಿ, ಭೂಮಿಯ ತಿರುಳು ಅದರ ಮೇಲ್ಮೈನಂತೆಯೇ ಅದೇ ವೇಗದಲ್ಲಿ ನಿಂತಿರುವಂತೆ ತೋರುತ್ತಿತ್ತು. ಆದರೆ, ಈಗ ಅದು ನಿಧಾನವಾಗಿ ಭೂಮಿಯ ತಿರುಗುವಿಕೆಯ ದಿಕ್ಕಿನ ವಿರುದ್ಧವಾಗಿ ಚಲಿಸುತ್ತಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಈ ಬದಲಾವಣೆಯು ಭೂಮಿಯ ಒಳಗಿನ ಪದರಗಳಲ್ಲಿನ ಕಾಂತೀಯ ಕ್ಷೇತ್ರ ಮತ್ತು ಗುರುತ್ವಾಕರ್ಷಣ ಬಲದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.
ಭೂಮಿಯ ಒಳಗಿನ ತಿರುಳಿನ ನಿಧಾನಗತಿಯು ನಮ್ಮ ದೈನಂದಿನ ಜೀವನದಲ್ಲಿ ಸಮಯವನ್ನು ನಿಲ್ಲಿಸುವುದಿಲ್ಲ ಆದರೆ, ಭೂಮಿಯು ಒಂದು ತಿರುಗುವಿಕೆಯನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯದಲ್ಲಿ ಸ್ವಲ್ಪ ಬದಲಾವಣೆಗಳು ಉಂಟಾಗಬಹುದು ಎಂದು ಹೇಳಲಾಗುತ್ತಿದೆ. ಇದರರ್ಥ ದಿನದ ಉದ್ದವು ಕೆಲವು ಮಿಲಿಸೆಕೆಂಡುಗಳಷ್ಟು ಹೆಚ್ಚಾಗುತ್ತದೆ ಅಥವಾ ಕಡಿಮೆಯಾಗುತ್ತದೆ. ಆದರೆ, ಇದು ನಮ್ಮ ಅರಿವೆ ಬರುವುದಿಲ್ಲ. ಅಲ್ಲದೆ, ಈ ಬದಲಾವಣೆ ಭೂಮಿಯ ನೈಸರ್ಗಿಕ ಚಕ್ರದ ಭಾಗವಾಗಿದ್ದು, ಪ್ರತಿ 70 ವರ್ಷಗಳಿಗೊಮ್ಮೆ ಇಂತಹ ಬದಲಾವಣೆಗಳು ಸಂಭವಿಸುತ್ತವೆ ಎಂದು ಸಂಶೋಧಕರು ನಂಬಿದ್ದಾರೆ.
ಭೂಮಿಯ ಒಳಭಾಗದಲ್ಲಿ ನಡೆಯುವ ಈ ಪ್ರಕ್ರಿಯೆಯು ಸಮುದ್ರ ಮಟ್ಟದಲ್ಲಿ ಬದಲಾವಣೆಗಳನ್ನು ಮತ್ತು ಭೂಮಿಯ ಕಾಂತಕ್ಷೇತ್ರದಲ್ಲಿ ಸ್ವಲ್ಪ ಬದಲಾವಣೆಗಳನ್ನು ಉಂಟುಮಾಡಬಹುದು. ಆದರೆ, ಮಾನವನ ಮೇಲೆ ಅಷ್ಟು ಪರಿಣಾಮ ಬೀರುವುದಿಲ್ಲ. ಅಂದಹಾಗೆ, ನಾವು ವಾಸಿಸುವ ಭೂಮಿಯೊಳಗೆ ಇಷ್ಟು ದೊಡ್ಡ ಬದಲಾವಣೆ ಸಂಭವಿಸುತ್ತಿದ್ದರೂ, ನಾವು ಅದನ್ನು ನೇರವಾಗಿ ಅನುಭವಿಸಲು ಸಾಧ್ಯವಿಲ್ಲ. ಆದರೆ ವಿಜ್ಞಾನಿಗಳಿಗೆ, ಇದು ಭೂಮಿಯ ಮೂಲ ಮತ್ತು ಅದರ ಆಂತರಿಕ ರಚನೆಯ ಬಗ್ಗೆ ಹೊಸ ರಹಸ್ಯಗಳನ್ನು ಸಂಶೋಧನೆಯಲ್ಲಿ ಬಹಿರಂಗಪಡಿಸುತ್ತಿದೆ.
ಗಮನಿಸಿ: ಅಂತಾರಾಷ್ಟ್ರೀಯ ವಿಜ್ಞಾನ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಇತ್ತೀಚಿನ ಭೂಕಂಪಶಾಸ್ತ್ರೀಯ ಸಂಶೋಧನೆಯ ಆಧಾರದ ಮೇಲೆ, ಭೂಮಿಯ ಒಳಗಿನ ತಿರುಳಿನ ತಿರುಗುವಿಕೆಯಲ್ಲಿ ಆಗುತ್ತಿರುವ ಬದಲಾವಣೆಗಳು ದಿನದ ಉದ್ದದ ಮೇಲೆ ಕೇವಲ ಮಿಲಿಸೆಕೆಂಡುಗಳಲ್ಲಿ ಪರಿಣಾಮ ಬೀರುತ್ತವೆ. ಆದರೆ, ಇದು ಸಾಮಾನ್ಯ ಮಾನವ ಗಡಿಯಾರಗಳ ಮೇಲೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲ, (ಏಜೆನ್ಸೀಸ್).