ಮಿಸ್ಸಿಸ್ಸಿಪ್ಪಿ ನದಿಯಲ್ಲಿ ದೈತ್ಯ ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಒಂದು ಬದಿಗೆ ವಾಲಿ ಪಲ್ಟಿಯಾಗಿರುವ 'ಅಮೆರಿಕನ್ ಹೆರಿಟೇಜ್' ಕ್ರೂಸ್ ಹಡಗು ಮತ್ತು ಸ್ಥಳದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ. 
ವಿದೇಶ

ಹಿಂಬದಿಯಿಂದ ಗುದ್ದಿದ ದೈತ್ಯ ಟ್ಯಾಂಕರ್: ನದಿಯಲ್ಲೇ ಪಲ್ಟಿಯಾದ ಐಷಾರಾಮಿ ಕ್ರೂಸ್ ಹಡಗು; 190 ಮಂದಿ ಪವಾಡಸದೃಶ ಪಾರು! Cruise Ship Crash

ನ್ಯೂ ಆರ್ಲಿಯನ್ಸ್: ಶುಕ್ರವಾರ (ನ.13) ಅಮೆರಿಕದ ಮಿಸ್ಸಿಸ್ಸಿಪ್ಪಿ ನದಿಯಲ್ಲಿ ದೊಡ್ಡದೊಂದು ಜಲದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ನಿಯಂತ್ರಣ ಕಳೆದುಕೊಂಡ ದೈತ್ಯ ತೈಲ ಟ್ಯಾಂಕರ್ ಹಡಗೊಂದು, ಪ್ರವಾಸಿಗರಿದ್ದ ಐಷಾರಾಮಿ ಕ್ರೂಸ್ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ ಕ್ರೂಸ್ ಹಡಗು ನದಿಯಲ್ಲೇ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಕನಿಷ್ಠ 32 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ, ಹಡಗಿನಲ್ಲಿದ್ದ ಸುಮಾರು 190 ಪ್ರಯಾಣಿಕರು ಮತ್ತು ಸಿಬ್ಬಂದಿ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ನಡೆದಿದ್ದು ಹೇಗೆ?

ನ್ಯೂ ಓರ್ಲಿಯನ್ಸ್ ಬಂದರಿನ ಫ್ರೆಂಚ್ ಕ್ವಾರ್ಟರ್ ಬಳಿ ಮಧ್ಯಾಹ್ನ 12:30ರ ಸುಮಾರಿಗೆ ಈ ಭಯಾನಕ ಅಪಘಾತ ಸಂಭವಿಸಿದೆ. ಸುಮಾರು 525 ಅಡಿ ಉದ್ದದ ಅಟ್ಲಾಂಟಿಕ್ ಆಸ್ಫಾಲ್ಟ್ ಎಂಬ ದೈತ್ಯ ಟ್ಯಾಂಕರ್ ನದಿಯಲ್ಲಿ ಸಾಗುತ್ತಿತ್ತು. ಸೇತುವೆಯೊಂದರ ಕೆಳಗೆ ಹಾದುಹೋದ ತಕ್ಷಣ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿದೆ. ನೇರವಾಗಿ ದಡದಲ್ಲಿ ನಿಂತಿದ್ದ 'ಅಮೆರಿಕನ್ ಹೆರಿಟೇಜ್' ಎಂಬ ಕ್ರೂಸ್ ಹಡಗಿಗೆ ಟ್ಯಾಂಕರ್ ಬಲವಾಗಿ ಗುದ್ದಿದೆ. ಅಪಘಾತದ ವೇಳೆ ಕ್ರೂಸ್ ಹಡಗಿನಲ್ಲಿ ಸುಮಾರು 180 ರಿಂದ 190 ಜನರಿದ್ದರು ಎಂದು ನ್ಯೂ ಓರ್ಲಿಯನ್ಸ್ ಮೇಯರ್ ಹೆಲೆನಾ ಮೊರೆನೊ ತಿಳಿಸಿದ್ದಾರೆ.

ಕ್ಷಣಾರ್ಧದಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆ!

ಅದೃಷ್ಟವಶಾತ್, ಅಪಘಾತಕ್ಕೂ ಸುಮಾರು ಎರಡು ಗಂಟೆಗಳ ಮೊದಲೇ ಕ್ರೂಸ್ ಹಡಗು ದಡಕ್ಕೆ ಬಂದು ನಿಂತಿತ್ತು ಮತ್ತು ಪ್ರಯಾಣಿಕರು ಹಡಗಿನಿಂದ ಕೆಳಗಿಳಿಯುತ್ತಿದ್ದರು. ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಸ್ ಹಡಗು ನಿಧಾನವಾಗಿ ಒಂದು ಬದಿಗೆ ವಾಲಲು ಶುರುವಾಗಿದೆ. ಅದು ಸಂಪೂರ್ಣವಾಗಿ ಪಲ್ಟಿಯಾಗುವ ಮೊದಲೇ ಸ್ಥಳಕ್ಕೆ ಧಾವಿಸಿದ ತುರ್ತು ರಕ್ಷಣಾ ತಂಡಗಳು 87ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತಂದಿದ್ದಾರೆ.

ಗಾಯಗೊಂಡ 32 ಮಂದಿಯನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಯಾರಿಗೂ ಪ್ರಾಣಾಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ರಕ್ಷಣಾ ಕಾರ್ಯದಲ್ಲಿ ನೆರವಾಗುತ್ತಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳೂ ಸಹ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜನ ಬದುಕುಳಿದಿದ್ದೇ ಪವಾಡ!

ಹಡಗಿನಲ್ಲಿದ್ದ ಪ್ರತಿಯೊಬ್ಬರನ್ನೂ ಪತ್ತೆಹಚ್ಚಲಾಗಿದ್ದು, ಯಾರೂ ನಾಪತ್ತೆಯಾಗಿಲ್ಲ ಎಂದು ಮೇಯರ್ ಮೊರೆನೊ ತಿಳಿಸಿದ್ದಾರೆ. ಇನ್ನು ಅಪಘಾತದ ಭೀಕರತೆಯನ್ನು ಕಂಡು ಬೆಚ್ಚಿಬಿದ್ದ ಲೂಸಿಯಾನ ಗವರ್ನರ್ ಜೆಫ್ ಲ್ಯಾಂಡ್ರಿ, "ಅಪಘಾತದ ಪ್ರಮಾಣವನ್ನು ನೋಡಿದರೆ ಯಾರಿಗೂ ಪ್ರಾಣಹಾನಿಯಾಗದಿರುವುದು ನಿಜಕ್ಕೂ ಒಂದು ಪವಾಡ. ಮಿಸ್ಸಿಸ್ಸಿಪ್ಪಿ ನದಿಯಲ್ಲಿ ಅಕ್ಷರಶಃ ಪವಾಡವೇ ನಡೆದಿದೆ" ಎಂದು ಬಣ್ಣಿಸಿದ್ದಾರೆ.

ಪ್ರಯಾಣಿಕರಿಗೆ ಹೋಟೆಲ್ ವ್ಯವಸ್ಥೆ, ತನಿಖೆಗೆ ಆದೇಶ

ಘಟನೆಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅಮೆರಿಕನ್ ಕ್ರೂಸ್ ಲೈನ್ಸ್ ಸಂಸ್ಥೆ, "ನಮ್ಮ ಎಲ್ಲಾ ಅತಿಥಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಸಂತ್ರಸ್ತರೆಲ್ಲರಿಗೂ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಅಗತ್ಯ ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದೆ.

ಸದ್ಯ ಅಪಘಾತ ನಡೆದ ಪ್ರದೇಶದಲ್ಲಿ ಹಡಗು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದೈತ್ಯ ಟ್ಯಾಂಕರ್ ನಿಯಂತ್ರಣ ಕಳೆದುಕೊಳ್ಳಲು ನಿಖರ ಕಾರಣವೇನು ಎಂಬುದರ ಕುರಿತು ಯುಎಸ್ ಕೋಸ್ಟ್ ಗಾರ್ಡ್ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಉನ್ನತ ಮಟ್ಟದ ತನಿಖೆಯನ್ನು ಆರಂಭಿಸಿದೆ, (ಏಜೆನ್ಸೀಸ್​).