Donald Trump | ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Donald Trump: ಮಧ್ಯಪ್ರಾಚ್ಯ ಸಂಘರ್ಷದ ಆರಂಭದಲ್ಲಿ (ಫೆಬ್ರವರಿ 28) ನಿಧನರಾದ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಗೆ ಇರಾನ್ ಕಣ್ಣೀರಿನ ವಿದಾಯ ಹೇಳಲು ಸಜ್ಜಾಗುತ್ತಿದ್ದಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಟೆಹ್ರಾನ್ ವಿರುದ್ಧ ವ್ಯಂಗ್ಯವಾಡಿದ್ದು, ನಾವು ಒಳ್ಳೆಯವರಾಗಿರುವುದರಿಂದ ಅಂತ್ಯಕ್ರಿಯೆಗಾಗಿ ಒಂದು ವಾರ ಕಾಲಾವಕಾಶ ನೀಡಿದ್ದೇವೆ ಎಂದು ಹೇಳಿದ್ದಾರೆ.
ಜುಲೈ 4 ರ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯ ಮುನ್ನಾದಿನದಂದು ಮೌಂಟ್ ರಶ್ಮೋರ್‌ನಲ್ಲಿ ನೆರೆದಿದ್ದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಇರಾನ್‌ನೊಂದಿಗಿನ ಇತ್ತೀಚಿನ ಸಂಘರ್ಷವನ್ನು ಪ್ರಸ್ತಾಪಿಸಿದರು ಮತ್ತು ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ತಮ್ಮ ಆಡಳಿತ ಕೈಗೊಂಡ ಮಿಲಿಟರಿ ಕ್ರಮವನ್ನು ಪುನರುಚ್ಚರಿಸಿದರು.
ನಾವು ಇರಾನ್ ಅನ್ನು ಧೂಳೀಪಟ ಮಾಡಿದ್ದೇವೆ, ಅವರು ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಲು ಹಪಹಪಿಸುತ್ತಿದ್ದು, ತುಂಬಾ ಕೆಟ್ಟದಾಗಿ ರಾಜಿ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ನಾವು ಒಳ್ಳೆಯವರಾಗಿರುವುದರಿಂದ ಅವರಿಗೆ ಅಂತ್ಯಕ್ರಿಯೆಗಾಗಿ ಒಂದು ವಾರ ರಜೆ ನೀಡಿದ್ದೇವೆ ಎಂದು ಟ್ರಂಪ್ ಹೇಳಿದರು. ಟ್ರಂಪ್ ಅವರ ಈ ಮಾತಿಗೆ ಅಲ್ಲಿದ್ದ ಸಾರ್ವಜನಿಕರು ಜೋರಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಯುಎಸ್-ಇಸ್ರೇಲ್ ಸಂಘರ್ಷದ ಪ್ರಾರಂಭದಲ್ಲಿ, ಅಂದರೆ, ಫೆಬ್ರವರಿ 28 ರಂದು ಸಾವಿಗೀಡಾದ ಖಮೇನಿ ಅವರ ಒಂದು ವಾರದ ಸುದೀರ್ಘ ಸರ್ಕಾರಿ ಅಂತ್ಯಕ್ರಿಯೆ ಇರಾನ್‌ನಲ್ಲಿ ಪ್ರಾರಂಭವಾಗುತ್ತಿದ್ದಂತೆ ಟ್ರಂಪ್ ಈ ಸರಣಿ ಹೇಳಿಕೆಗಳನ್ನು ನೀಡಿದ್ದಾರೆ. ಜಂಟಿ ಯುಎಸ್-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನ್ ನಾಯಕ ಖಮೇನಿ ಹಾಗೂ ಅವರ ಮಗಳು, ಅಳಿಯ, ಮೊಮ್ಮಗಳು ಮತ್ತು ಸೊಸೆ ಸೇರಿದಂತೆ ಅವರ ಕುಟುಂಬದ ಹಲವಾರು ಸದಸ್ಯರು ಸಾವನ್ನಪ್ಪಿದ್ದರು.
ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ ಸಾಮಾನ್ಯವಾಗಿ 24 ಗಂಟೆಗಳೊಳಗೆ ದಫನ್ ಮಾಡಬೇಕಾಗಿದ್ದರೂ, ಯುದ್ಧ ಮತ್ತು ಹೆಚ್ಚಿದ ಭದ್ರತಾ ಕಾಳಜಿಗಳ ಕಾರಣದಿಂದಾಗಿ ಇರಾನ್ ಅಧಿಕಾರಿಗಳು ಅಂತ್ಯಕ್ರಿಯೆಯನ್ನು ಮುಂದೂಡಿದ್ದರು. ಕಳೆದ ತಿಂಗಳು ಮಧ್ಯಂತರ ಕದನ ವಿರಾಮ ಏರ್ಪಟ್ಟ ನಂತರವೇ ಈ ಧಾರ್ಮಿಕ ವಿಧಿವಿಧಾನಗಳನ್ನು ನಿಗದಿಪಡಿಸಲಾಗಿದೆ.
ಅಲಿ ಖಮೇನಿ ವಿಳಂಬಿತ ಅಂತ್ಯಕ್ರಿಯೆ
ಶುಕ್ರವಾರ ಟೆಹ್ರಾನ್‌ನ ಗ್ರಾಂಡ್ ಮೊಸಲ್ಲಾದಲ್ಲಿ ಸಾವಿರಾರು ಶೋಕತಪ್ತರು ಜಮಾಯಿಸುವುದರೊಂದಿಗೆ ಅಂತ್ಯಕ್ರಿಯೆಯ ವಿಧಿವಿಧಾನಗಳು ಪ್ರಾರಂಭವಾದವು. ಅಲ್ಲಿ ಖಮೇನಿ ಶವಪೆಟ್ಟಿಗೆಯನ್ನು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿತ್ತು. ಈ ಸಮಾರಂಭದಲ್ಲಿ ಇರಾನ್‌ನ ಹಿರಿಯ ರಾಜಕೀಯ ಮತ್ತು ಮಿಲಿಟರಿ ನಾಯಕರು ಭಾಗವಹಿಸಿದ್ದರು, ಅವರಲ್ಲಿ ಅನೇಕರು ಗೌರವ ಸಲ್ಲಿಸುವಾಗ ಭಾವುಕರಾಗಿದ್ದರು.
ಈ ಒಂದು ವಾರದ ಸುದೀರ್ಘ ಮೆರವಣಿಗೆಯು ಖಮೇನಿ ಅವರ ಪಾರ್ಥಿವ ಶರೀರವನ್ನು ಪವಿತ್ರ ನಗರವಾದ ಕೋಮ್ ಮೂಲಕ ಇರಾಕ್‌ನ ಪವಿತ್ರ ನಗರಗಳಾದ ನಜಾಫ್ ಮತ್ತು ಕರ್ಬಲಾಗೆ ಕೊಂಡೊಯ್ಯಲಿದೆ. ಜುಲೈ 9 ರಂದು ಮಶಾದ್‌ನಲ್ಲಿರುವ ಇಮಾಮ್ ರೆಜಾ ಮಂದಿರದ ಬಳಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅವರನ್ನು ದಫನ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಇರಾನ್‌ನ ಸರ್ವೋಚ್ಚ ನಾಯಕನ ಮರಣದ ನಂತರ ದೇಶವು ರಾಜಕೀಯ ಮತ್ತು ಭದ್ರತಾ ಪರಿಣಾಮಗಳನ್ನು ಎದುರಿಸುತ್ತಿರುವ ಹೊರತಾಗಿಯೂ, ಈ ಅಂತ್ಯಕ್ರಿಯೆಯ ವಿಧಿವಿಧಾನಗಳಿಗೆ ಭಾರತ, ಪಾಕಿಸ್ತಾನ, ರಷ್ಯಾ ಮತ್ತು ಚೀನಾ ಸೇರಿದಂತೆ ಹಲವು ದೇಶಗಳ ನಿಯೋಗಗಳು ತೆರಳಿವೆ(ಏಜೆನ್ಸೀಸ್).