ವಾಷಿಂಗ್ಟನ್: ಮೃತಪಟ್ಟಿದ್ದಾಳೆ ಅಂತ ಶವಪೆಟ್ಟಿಗೆಯಲ್ಲಿ ಮಲಗಿಸಿದ್ದ ಹದಿನೈದು ವರ್ಷದ ಬಾಲಕಿಯೊಬ್ಬಳು, ಸಮಾಧಿ ಮಾಡುವ ಕೆಲವೇ ಗಂಟೆಗಳ ಮುನ್ನ ಬದುಕಿ ಬಂದಿರುವ ಈ ಅಚ್ಚರಿಯ ಘಟನೆ ( Funeral Miracle ) ಅಮೆರಿಕದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ಪವಾಡಸದೃಶ ಘಟನೆ ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ನಡೆದಿದೆ. 15 ವರ್ಷದ ಯೂಲೈಡ್ ಇಕ್ಸೊಟೊಯಾಕ್ ಹೆಸರಿನ ಬಾಲಕಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅಕ್ಟೋಬರ್ 10ರ ಶನಿವಾರದಂದು ಆಕೆಯ ತಂದೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ, ಮಾರ್ಗಮಧ್ಯೆ ಬಾಲಕಿ ವಾಹನದಲ್ಲೇ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾಳೆ. ತಕ್ಷಣ ಗಾಬರಿಗೊಂಡ ತಂದೆ ವಾಹನ ನಿಲ್ಲಿಸಿ ಮಗಳ ನಾಡಿಮಿಡಿತ ಹಾಗೂ ಉಸಿರಾಟವನ್ನು ಪರಿಶೀಲಿಸಿದಾಗ ಯಾವುದೇ ಸ್ಪಂದನೆ ಸಿಗಲಿಲ್ಲ. ಯಾವುದೇ ವೈದ್ಯರ ಅಧಿಕೃತ ದೃಢೀಕರಣವಿಲ್ಲದೆ, ಮಗಳು ಮೃತಪಟ್ಟಿದ್ದಾಳೆ ಅಂತ ಭಾವಿಸಿದ ತಂದೆ, ನೇರವಾಗಿ ಮಗಳ ಶವವನ್ನು ಮನೆಗೆ ತೆಗೆದುಕೊಂಡು ಬಂದಿದ್ದಾರೆ.
ಮನೆಯಲ್ಲಿ ಮಗಳಿಗೆ ಮರಣೋತ್ತರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಸಿದ್ಧತೆ ನಡೆಸಿ, ಮೃತದೇಹವನ್ನು ಶವಪೆಟ್ಟಿಗೆಯಲ್ಲಿ ಮಲಗಿಸಲಾಗಿತ್ತು. ಅಂದಿನ ದಿನ ಮಧ್ಯಾಹ್ನ 2.30ಕ್ಕೆ ಅಂತ್ಯಸಂಸ್ಕಾರವನ್ನು ನಡೆಸಲು ನಿರ್ಧರಿಸಲಾಗಿತ್ತಲ್ಲದೆ, ನೆರೆಹೊರೆಯವರು ಹಾಗೂ ಸಂಬಂಧಿಕರು ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದರು. ಅಚ್ಚರಿಯೆಂಬಂತೆ, ಅಂತಿಮ ನಮನ ಸಲ್ಲಿಸುವ ಸಮಯದಲ್ಲಿ ಶವಪೆಟ್ಟಿಗೆಯ ಒಳಗಿನಿಂದ ಕೆಲವು ಸಣ್ಣಪುಟ್ಟ ಸದ್ದುಗಳು ಹಾಗೂ ಅಲುಗಾಟವು ಕೇಳಿಬಂದಿದೆ.
ನನ್ನ ಮಗಳು ಸತ್ತಿಲ್ಲ, ಆಕೆ ಜೀವಂತವಾಗಿದ್ದಾಳೆ ಎಂದು ಹೇಳುತ್ತಲೇ ಕಣ್ಣೀರುಹಾಕುತ್ತಿದ್ದ ಬಾಲಕಿಯ ತಾಯಿ, ಮಗಳ ಪೆಟ್ಟಿಗೆಯ ಮೇಲೆಯೇ ಮಲಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಶವಪಟ್ಟಿಗೆಯಲ್ಲಿ ಆದ ಬದಲಾವಣೆಗಳನ್ನು ನೋಡಿದ ತಾಯಿ, ಪೆಟ್ಟಿಗೆಯ ಮುಚ್ಚಳವನ್ನು ತೆರೆದು ನೋಡಿದಾಗ ಅವರಿಗೆ ಅಚ್ಚರಿಯೊಂದು ಕಾದಿತ್ತು. ಗುಲಾಬಿ ಬಣ್ಣದ ಬಟ್ಟೆ ಧರಿಸಿ ಶವಪೆಟ್ಟಿಗೆಯಲ್ಲಿ ಮಲಗಿದ್ದ ತಮ್ಮ ಮಗಳು ಏಕಾಏಕಿ ಕಣ್ಣುಬಿಟ್ಟು ಕುಳಿತುಕೊಳ್ಳುವುದನ್ನು ಕಂಡು ಇಡೀ ಕುಟುಂಬ ಹಾಗೂ ಅಲ್ಲಿ ನೆರೆದಿದ್ದ ಜನರು ಒಂದು ಕ್ಷಣ ದಂಗಾದರು.
ಸಾವಿನ ಮನೆ ಎಂದು ಗೋಳಾಡುತ್ತಿದ್ದ ಕುಟುಂಬ ಹಾಗೂ ಬಂಧು-ಬಳಗದ ಮುಖದಲ್ಲಿ ಇದೀಗ ನಗು ತುಂಬಿದೆ. ತಾನು ಪಾರಾಗಿ ಬಂದಿರುವುದನ್ನು ಒಂದು ಪವಾಡ ಎಂದು ಬಣ್ಣಿಸಿರುವ ಬಾಲಕಿ, ತನಗೆ ಮರುಜನ್ಮ ನೀಡಿದ ದೇವ-ದೇವತೆಗಳಿಗೆ ಹಾಗೂ ಪೋಷಕರಿಗೆ ಧನ್ಯವಾದ ಅರ್ಪಿಸಿದ್ದಾಳೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೈದ್ಯಕೀಯ ಲೋಕದಲ್ಲೂ ಅಚ್ಚರಿ ಮೂಡಿಸಿದೆ, (ಏಜೆನ್ಸೀಸ್).