ಸಾಂದರ್ಭಿಕ ಚಿತ್ರ 
ವಿದೇಶ

ವಿಮಾನ ಏರುವ ಮುನ್ನವೇ "ಫುಲ್​ ಟೈಟ್​"! ಮದ್ಯ ಸೇವಿಸಿ ಕೆಲಸದಿಂದ ವಜಾಗೊಂಡ ಏರ್​ ಇಂಡಿಯಾ ಪೈಲಟ್​! Air India Pilot

ಜ್ಯೂರಿಚ್: ಸ್ವಿಟ್ಜರ್ಲೆಂಡ್​ನ ಜ್ಯೂರಿಚ್ ವಿಮಾನ ನಿಲ್ದಾಣದಲ್ಲಿ 'ಬ್ರೆಥಲೈಜರ್' (ಮದ್ಯಪಾನ ಪರೀಕ್ಷೆ) ಪರೀಕ್ಷೆಯಲ್ಲಿ ಫೇಲ್ ಆಗಿರುವ ಏರ್ ಇಂಡಿಯಾ ವಿಮಾನದ ಪೈಲಟ್ (Air India Pilot) ಒಬ್ಬರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದ್ದು, ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆಯು ಸೆಪ್ಟೆಂಬರ್ 6 ರಂದು ನಡೆದಿದ್ದು, ಈಗ ತಡವಾಗಿ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಅಂದು ಜ್ಯೂರಿಚ್‌ನಿಂದ ದೆಹಲಿಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ AI 151 ಹಾರಾಟ ರದ್ದಾಗಲು ಅಸಲಿ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.

ಏನಿದು ಘಟನೆ? ಮದ್ಯದ ವಾಸನೆ ಪತ್ತೆ ಹಚ್ಚಿದ ಅಧಿಕಾರಿಗಳು!

ಜ್ಯೂರಿಚ್‌ನಿಂದ ನವದೆಹಲಿಗೆ ಹೊರಡಲು ಏರ್ ಇಂಡಿಯಾ ವಿಮಾನ AI 151 ಸಜ್ಜಾಗಿತ್ತು. ಎಲ್ಲ ತಯಾರಿಗಳು ಮುಗಿದು ಪೈಲಟ್ ಕಾಕ್‌ಪಿಟ್ ಪ್ರವೇಶಿಸಲು ಸಿದ್ಧರಾಗಿದ್ದರು. ಆದರೆ, ಅದೇ ಸಮಯದಲ್ಲಿ ಪೈಲಟ್‌ನಿಂದ ಮದ್ಯದ ವಾಸನೆ ಬರುತ್ತಿರುವುದನ್ನು ವಿಮಾನಯಾನ ಸಂಸ್ಥೆ ಸಿಬ್ಬಂದಿ ಗಮನಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಏರ್ ಇಂಡಿಯಾ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಅಧಿಕಾರಿಗಳು ಸ್ಥಳದಲ್ಲೇ ಬ್ರೆಥಲೈಜರ್ ಪರೀಕ್ಷೆ ನಡೆಸಿದಾಗ ಪೈಲಟ್ ಕುಡಿದಿರುವುದು ಖಚಿತವಾಗಿದೆ. ತಕ್ಷಣ ಆ ಪೈಲಟ್ ಅನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ, ಹೆಚ್ಚಿನ ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲ, ವಿಮಾನವನ್ನು ಹಾರಿಸಬೇಕಿದ್ದ ಆತನನ್ನು ಸಾಮಾನ್ಯ ಪ್ರಯಾಣಿಕನನ್ನಾಗಿ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ. ಸದ್ಯ ಅಂತಿಮ ವೈದ್ಯಕೀಯ ವರದಿ ಬರುವವರೆಗೆ ಹಾಗೂ ತನಿಖೆ ಮುಗಿಯುವವರೆಗೆ ಆತನನ್ನು ಸಂಪೂರ್ಣವಾಗಿ ಅಮಾನತುಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ರದ್ದಾದ ಜ್ಯೂರಿಚ್-ದೆಹಲಿ ವಿಮಾನ!

ಸ್ವಿಸ್ ಫೆಡರಲ್ ಆಫೀಸ್ ಆಫ್ ಸಿವಿಲ್ ಏವಿಯೇಷನ್ ​​(FOCA) ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ವಿಮಾನ ನಿರ್ವಾಹಕ ಸಂಸ್ಥೆ ಮತ್ತು ಭಾರತದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (DGCA) ಈ ಬಗ್ಗೆ ತಕ್ಷಣವೇ ತಿಳಿಸಲಾಗಿದೆ. ಇದರ ಪರಿಣಾಮವಾಗಿ ಜ್ಯೂರಿಚ್‌ನಿಂದ ದೆಹಲಿಗೆ ಬರಬೇಕಿದ್ದ AI151 ವಿಮಾನ ಸಮಯಕ್ಕೆ ಸರಿಯಾಗಿ ಹೊರಡಲು ಸಾಧ್ಯವಾಗಲಿಲ್ಲ ಮತ್ತು ಹಾರಾಟವನ್ನು ರದ್ದುಗೊಳಿಸಲಾಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸರಣಿ ಎಡವಟ್ಟು: ಮುಂದುವರಿದ ಆತಂಕ!

ವಿಮಾನಯಾನ ಸಿಬ್ಬಂದಿ ಈ ರೀತಿ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಇದು ಮೊದಲಲ್ಲ. ಕೆಲವೇ ದಿನಗಳ ಹಿಂದೆ ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಮತ್ತೊಂದು ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್, ಮಾದಕ ದ್ರವ್ಯ ಸೇವನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಕೆಲಸ ಕಳೆದುಕೊಂಡಿದ್ದರು.

ಆಗಸ್ಟ್ 4 ರಂದು ನಡೆದ ಈ ಭಯಾನಕ ಘಟನೆಯಲ್ಲಿ, 145 ಪ್ರಯಾಣಿಕರಿದ್ದ ವಿಮಾನವು 36,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಏಕಾಏಕಿ ಹೈಡ್ರಾಲಿಕ್ ಸಿಸ್ಟಮ್ ವೈಫಲ್ಯಗೊಂಡು ಸುಮಾರು 300 ಅಡಿಗಳಷ್ಟು ಕೆಳಗೆ ಕುಸಿದಿತ್ತು. ಆಟೋಪೈಲಟ್ ಕಡಿತಗೊಂಡು, ವಿಮಾನದ ನಿಯಂತ್ರಣ ತಪ್ಪಿದ್ದರಿಂದ ಪ್ರಯಾಣಿಕರು ಗಾಯಗೊಂಡಿದ್ದರು. ಈ ಆಘಾತಕಾರಿ ಘಟನೆಯ ಪ್ರಾಥಮಿಕ ವರದಿ ಹೊರಬಿದ್ದ ಬೆನ್ನಲ್ಲೇ, ಈಗ ಜ್ಯೂರಿಚ್‌ನಲ್ಲಿ ಈ ನಶೆಯ ಕಥೆ ಬಯಲಾಗಿದೆ.

ಏರ್ ಇಂಡಿಯಾದಿಂದ ಕಠಿಣ ಕ್ರಮ

ಸತತವಾಗಿ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಏರ್ ಇಂಡಿಯಾ ಎಚ್ಚೆತ್ತುಕೊಂಡಿದೆ. ವಿಮಾನಯಾನ ಸಂಸ್ಥೆಯು ತನ್ನ ಸಿಬ್ಬಂದಿಯ ಮೇಲೆ ನಿಗಾ ಇಡಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇವಲ ಮದ್ಯ ಪರೀಕ್ಷೆ ಮಾತ್ರವಲ್ಲದೆ, ಸೈಕೋಆಕ್ಟಿವ್ ವಸ್ತುಗಳ ಸೇವನೆಯ ಬಗ್ಗೆಯೂ ಪೈಲಟ್‌ಗಳಿಗೆ ಕಡ್ಡಾಯ ತಪಾಸಣೆ ನಡೆಸಲಾಗುತ್ತಿದೆ. ನಿಯಮ ಮೀರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ, ಅಮಾನತು ಹಾಗೂ ವಜಾಗೊಳಿಸುವಂತಹ ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, (ಏಜೆನ್ಸೀಸ್​).