ಕೇವಲ ಬೇಟೆಯಷ್ಟೇ ಅಲ್ಲ, ಪ್ರಕೃತಿಯ ಸಕ್ಕರೆಯಾಂಶವೂ ಮಾನವನ ಅತಿ ದೊಡ್ಡ ವಿಕಸನಕ್ಕೆ ಕಾರಣ: ಹೊಸ ವರದಿ! Human Brain
- ಮಾನವ ಮಿದುಳಿನ ವಿಕಸನಕ್ಕೆ ಮಾಂಸಾಹಾರದ ಜೊತೆಗೆ ಹಣ್ಣು ಜೇನುತುಪ್ಪ ಹಾಗೂ ಬೇಯಿಸಿದ ಪಿಷ್ಟ ಪದಾರ್ಥಗಳು ಪ್ರಮುಖ ಕಾರಣ
- 3 ಬೆಂಕಿಯ ಬಳಕೆಯ ನಂತರ ಬೇಯಿಸಿದ ಪಿಷ್ಟಯುಕ್ತ ಸಸ್ಯಗಳು ಮಿದುಳಿನ ಬೆಳವಣಿಗೆಗೆ ಗ್ಲುಕೋಸ್ ಒದಗಿಸುವ ಮೂಲವಾಗಿ ಬದಲಾದವು
- 4 ಆದಿಮಾನವರ ಹಲ್ಲು ಮತ್ತು ತಳಿಶಾಸ್ತ್ರದ ಪುರಾವೆಗಳು ಅವರು ಕಾರ್ಬೋಹೈಡ್ರೇಟ್ ಸಮೃದ್ಧ ಆಹಾರಕ್ಕೆ ಹೊಂದಿಕೊಂಡಿದ್ದನ್ನು ನಿರೂಪಿಸುತ್ತವೆ
- ಮಾನವ ಮಿದುಳಿನ ವಿಕಾಸದಲ್ಲಿ ಪ್ರಾಣಿಜನ್ಯ ಆಹಾರದ ಜೊತೆಗೆ ಸಸ್ಯಜನ್ಯ ಸಿಹಿ ಪದಾರ್ಥಗಳು ಕೂಡ ಸಮಾನ ಪಾತ್ರ ವಹಿಸಿವೆ ಎಂದ ಸಂಶೋಧನೆ
Human Brain : ಆರಂಭದಲ್ಲಿ ಮಂಗನಂತಿದ್ದ ಮಾನವ ಹಲವು ವಿಕಸನಗಳ ಬಳಿಕ ಪರಿಪೂರ್ಣ ಮನುಷ್ಯನಾದ ಎಂಬ ಸತ್ಯವನ್ನು ವಿಜ್ಞಾನ ನಮಗೆ ತಿಳಿಸಿಕೊಟ್ಟಿದೆ. ಆರಂಭದಲ್ಲಿ ಮಾನವನ ನೆಚ್ಚಿನ ಆಹಾರ ಮಾಂಸಾಹಾರ. ಹೀಗಾಗಿ ಆತನ ಬೌದ್ಧಿಕ ಬೆಳವಣಿಗೆಗೆ ಮಾಂಸಾಹಾರವೇ ಮುಖ್ಯ ಕಾರಣ ಎನ್ನಲಾಗಿತ್ತು. ಆದರೆ, ಅದು ಸುಳ್ಳು ಅನ್ನೋದನ್ನು ಇತ್ತೀಚಿನ ಸಂಶೋಧನೆ ತೆರೆದಿಟ್ಟಿದೆ.
ಮಾನವನ ಮಿದುಳಿನ ವಿಕಸನಕ್ಕೆ ಕೇವಲ ಮಾಂಸಾಹಾರವಷ್ಟೇ ಅಲ್ಲ, ಬದಲಿಗೆ ಹಣ್ಣುಗಳು, ಜೇನುತುಪ್ಪ ಮತ್ತು ಬೇಯಿಸಿದ ಪಿಷ್ಟ ಪದಾರ್ಥಗಳು ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸಿವೆ ಎಂದು ವಿಜ್ಞಾನದ ಪ್ರತಿಷ್ಠಿತ ಜರ್ನಲ್‌ನಲ್ಲಿ ಪ್ರಕಟವಾಗಿರುವ ಹೊಸ ಅಧ್ಯಯನವು ಶತಮಾನಗಳ ನಂಬಿಕೆಗೆ ಸವಾಲು ಹಾಕಿದ್ದು, ಮನುಕುಲದ ವಿಕಾಸದ ಹಾದಿಯ ಬಗ್ಗೆ ಹೊಸ ಆಲೋಚನೆಯನ್ನು ಹುಟ್ಟುಹಾಕಿದೆ.
ಮಾನವನ ಮಿದುಳಿನ ಅಸಾಧಾರಣ ಬೆಳವಣಿಗೆಗೆ ಕೇವಲ ಮಾಂಸಾಹಾರವಷ್ಟೇ ಅಲ್ಲದೆ, ಗ್ಲುಕೋಸ್ ಒದಗಿಸುವ ಹಣ್ಣುಗಳು, ಜೇನುತುಪ್ಪ ಮತ್ತು ಕಾರ್ಬೋಹೈಡ್ರೇಟ್‌ಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿವೆ ಎಂದು ಇತ್ತೀಚಿನ ಅಧ್ಯಯನವು ಹೊಸ ಬೆಳಕು ಚೆಲ್ಲಿದೆ. ಮನುಕುಲದ ವಿಕಾಸದ ಹಾದಿಯಲ್ಲಿ ಪ್ರಮುಖ ಇಂಧನವಾಗಿ ಕಾರ್ಯನಿರ್ವಹಿಸಿದ ಶಕ್ತಿಯ ಮೂಲಗಳ ಬಗ್ಗೆ ಇದು ಹೊಸ ಚರ್ಚೆಗೆ ನಾಂದಿಹಾಡಿದೆ.
ಆಸ್ಟ್ರೋಪಿತೆಕಸ್ ಅಫರೆನ್ಸಿಸ್‌ನಂತಹ ಆದಿಮಾನವರ ಮಿದುಳಿನ ತೂಕವು ಸುಮಾರು 300 ಗ್ರಾಂ ಇದ್ದರೆ, ಆಧುನಿಕ ಹೋಮೋ ಸೇಪಿಯನ್ಸ್ ಮಿದುಳಿನ ತೂಕವು 1,500 ಗ್ರಾಂ ವರೆಗೆ ತಲುಪಿದೆ. ಮನುಷ್ಯನ ದೇಹದ ಒಟ್ಟು ತೂಕದಲ್ಲಿ ಮಿದುಳು ಕೇವಲ ಶೇ. 2ರಷ್ಟು ಮಾತ್ರವಿದ್ದರೂ, ವಿಶ್ರಾಂತಿ ಸ್ಥಿತಿಯಲ್ಲಿರುವ ದೇಹದ ಶೇ. 20ರಷ್ಟು ಶಕ್ತಿಯನ್ನು ಹಾಗೂ ಚಿಕ್ಕ ಮಕ್ಕಳಲ್ಲಿ ಇದು ಶೇ. 66ರಷ್ಟು ಶಕ್ತಿಯನ್ನು ಮಿದುಳು ಬಳಸಿಕೊಳ್ಳುತ್ತದೆ.
ಮಾನವ ವಿಕಾಸದ ಆರು ಹಂತಗಳಲ್ಲಿ ಆಹಾರ ಪದ್ಧತಿಯ ಮಾದರಿಗಳನ್ನು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಸಸ್ಯ ಮತ್ತು ಪ್ರಾಣಿಜನ್ಯ ಆಹಾರಗಳ ವಿವಿಧ ಸಂಯೋಜನೆಗಳು ದೇಹದ ಗ್ಲುಕೋಸ್ ಅಗತ್ಯತೆಯನ್ನು ಹೇಗೆ ಪೂರೈಸಬಲ್ಲವು ಎಂಬುದನ್ನು ಅಧ್ಯಯನ ಮಾಡಿದ್ದಾರೆ. ಆರಂಭಿಕ ಮಾನವ ಪೂರ್ವಜರು ಸಿಹಿ ಹಣ್ಣುಗಳು ಮತ್ತು ಇತರ ಸಿಹಿ ಪದಾರ್ಥಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದು, ತಮ್ಮ ಶಕ್ತಿಯ ಅಗತ್ಯತೆಯ ಶೇ. 65ಕ್ಕಿಂತ ಹೆಚ್ಚಿನ ಪ್ರಮಾಣವನ್ನು ಸಕ್ಕರೆಯಾಂಶದಿಂದ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಮನುಷ್ಯರು ಬೆಂಕಿಯ ಬಳಕೆಯನ್ನು ಕಲಿತುಕೊಂಡು ಆಹಾರವನ್ನು ಬೇಯಿಸಲು ಆರಂಭಿಸಿದ ನಂತರ, ಹಣ್ಣಿನ ಸಕ್ಕರೆಯ ಬದಲಿಗೆ ಪಿಷ್ಟಯುಕ್ತ (ಸ್ಟಾರ್ಚ್) ಸಸ್ಯಗಳು ಗ್ಲುಕೋಸ್‌ನ ವಿಶ್ವಾಸಾರ್ಹ ಮೂಲವಾಗಿ ಬದಲಾದವು. ಈ ಪ್ರಮುಖ ಬದಲಾವಣೆಯು ದೊಡ್ಡ ಗಾತ್ರದ ಮಿದುಳಿನ ವಿಕಾಸಕ್ಕೆ, ಸಂತಾನೋತ್ಪತ್ತಿಗೆ ಮತ್ತು ಮಕ್ಕಳ ಸಮಗ್ರ ಬೆಳವಣಿಗೆಗೆ ಹೆಚ್ಚು ಬೆಂಬಲ ನೀಡಿತು ಎಂದು ಸಂಶೋಧಕರು ವಾದಿಸಿದ್ದಾರೆ.
ಪ್ರಾಚೀನ ಹಲ್ಲುಗಳ ಪಳೆಯುಳಿಕೆಗಳು, ಸ್ಥಿರ ಐಸೊಟೋಪ್ ಅಧ್ಯಯನಗಳು, ಬಣ್ಣ ದೃಷ್ಟಿ, ಹಲ್ಲಿನ ಹುಳುಕು ಮತ್ತು ಮಾನವ ತಳಿಶಾಸ್ತ್ರದ ಪುರಾವೆಗಳನ್ನು ಈ ಅಧ್ಯಯನವು ಆಧರಿಸಿದೆ. ಈ ಎಲ್ಲಾ ಅಂಶಗಳು ಆರಂಭಿಕ ಹಾಮಿನಿನ್‌ಗಳು ಕೇವಲ ಮಾಂಸಾಹಾರಕ್ಕೆ ಮಾತ್ರ ಸೀಮಿತವಾಗದೆ, ಕಾರ್ಬೋಹೈಡ್ರೇಟ್ ಸಮೃದ್ಧ ಆಹಾರಕ್ಕೆ ಹೊಂದಿಕೊಂಡಿದ್ದವು ಎಂಬುದನ್ನು ಸೂಚಿಸುತ್ತವೆ. ನಮ್ಮ ಆಧುನಿಕ ಶರೀರಶಾಸ್ತ್ರ ಮತ್ತು ಅಂಗರಚನಾಶಾಸ್ತ್ರ, ವಿಶೇಷವಾಗಿ ಸಿಹಿ ರುಚಿ ಗ್ರಾಹಕಗಳು, ಸಣ್ಣ ಹಲ್ಲುಗಳು, ದವಡೆ, ಕರುಳು ಮತ್ತು ಗ್ಲುಕೋಸ್ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಅನುವಂಶಿಕ ವ್ಯತ್ಯಾಸಗಳು ಆಹಾರದ ಕಾರ್ಬೋಹೈಡ್ರೇಟ್‌ಗಳಿಂದಲೇ ನಿರ್ದಿಷ್ಟವಾಗಿ ಪ್ರೇರಿತವಾದ ಅನುವಂಶಿಕ ಆಯ್ಕೆಯನ್ನು ಬಿಂಬಿಸುತ್ತವೆ ಎಂದು ಸಂಶೋಧಕರು ತಮ್ಮ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ.
ಈ ಅಧ್ಯಯನವು ಪ್ರಾಣಿಜನ್ಯ ಆಹಾರಗಳ ಪ್ರಾಮುಖ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕುವುದಿಲ್ಲ. ಬದಲಿಗೆ, ಭೂಮಿಯ ಮೇಲಿನ ಅತ್ಯಂತ ಸಂಕೀರ್ಣವಾದ ಅಂಗವಾದ ಮಿದುಳಿನ ಬೆಳವಣಿಗೆಗೆ ಸಿಹಿ ಹಣ್ಣುಗಳು, ಜೇನುತುಪ್ಪ ಮತ್ತು ಬೇಯಿಸಿದ ಪಿಷ್ಟ ಪದಾರ್ಥಗಳು ಸಮಾನವಾದ ಶಕ್ತಿಯನ್ನು ಒದಗಿಸಿವೆ ಎಂಬ ಹೆಚ್ಚು ಸಮತೋಲಿತ ವಿಕಾಸದ ಚಿತ್ರಣವನ್ನು ಪ್ರಸ್ತುತಪಡಿಸುತ್ತದೆ, (ಏಜೆನ್ಸೀಸ್).