ಸಾಂದರ್ಭಿಕ ಚಿತ್ರ 
ವಿದೇಶ

ಪಾಕಿಸ್ತಾನದಲ್ಲಿ ಫುಟ್‌ಬಾಲ್ ತಂಡದ ಮೇಲೆ ದರೋಡೆಕೋರರ ದಾಳಿ; ಬಂದೂಕು ತೋರಿಸಿ ಆಟಗಾರರ ಲೂಟಿ! Pakistan Football Team

ಪಾಕಿಸ್ತಾನದಲ್ಲಿ ಫುಟ್‌ಬಾಲ್ ತಂಡದ ಮೇಲೆ ಸಶಸ್ತ್ರ ದರೋಡೆಕೋರರ ಭೀಕರ ದಾಳಿ! ಬಂದೂಕು ತೋರಿಸಿ ಆಟಗಾರರ ಹಣ, ಮೊಬೈಲ್ ಹಾಗೂ ಬೆಲೆಬಾಳುವ ವಸ್ತುಗಳ ಲೂಟಿ. ಸಂಪೂರ್ಣ ವಿವರ ಇಲ್ಲಿದೆ.

ಕರಾಚಿ: ಬಲೂಚಿಸ್ತಾನದಲ್ಲಿ ನಡೆಯುತ್ತಿದ್ದ 'ಮುಖ್ಯಮಂತ್ರಿಯವರ ಗೋಲ್ಡ್ ಕಪ್' ಪಂದ್ಯಾವಳಿಯಲ್ಲಿ ಭಾಗವಹಿಸಲು ಹೊರಟಿದ್ದ ಕರಾಚಿಯ ಫುಟ್‌ಬಾಲ್ ತಂಡದ ಆಟಗಾರರನ್ನು ಶಸ್ತ್ರ ಸಜ್ಜಿತ ದರೋಡೆಕೋರರು ದೋಚಿಕೊಂಡು ಹೋಗಿರುವ ಘಟನೆ ಪಾಕಿಸ್ತಾನದಲ್ಲಿ ವರದಿಯಾಗಿದೆ.

ಹೆದ್ದಾರಿಯಲ್ಲಿ ಬಂದೂಕುಧಾರಿಗಳ ಅಟ್ಟಹಾಸ!

ಕರಾಚಿ ಜಿಲ್ಲಾ ಪಶ್ಚಿಮ ತಂಡವು ಮಸ್ತುಂಗ್-ಸರಿಯಾಬ್ ಹೆದ್ದಾರಿಯ ಮೂಲಕ ಕ್ವೆಟ್ಟಾಗೆ ಪ್ರಯಾಣಿಸುತ್ತಿತ್ತು. ಸೋಮವಾರ ಸಂಜೆ ನಡೆದ ಈ ಘಟನೆ ಕ್ರೀಡಾ ಲೋಕದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಹನ್ನೆರಡಕ್ಕೂ ಹೆಚ್ಚು ಜನ ಬಂದೂಕುಧಾರಿಗಳು ಏಕಾಏಕಿ ಬಸ್ಸನ್ನು ತಡೆದು, ಎಲ್ಲಾ ಆಟಗಾರರನ್ನು ಬಸ್ಸಿನಿಂದ ಕೆಳಗಿಳಿಯುವಂತೆ ಹೆದರಿಸಿದ್ದಾರೆ.

ಬಂದೂಕಿನ್ನು ಹಿಡಿದಿದ್ದ ದರೋಡೆಕೋರರು, ಆಟಗಾರರ ಹತ್ತಿರವಿದ್ದ ಮೊಬೈಲ್ ಫೋನ್‌ಗಳು, ಜೇಬಿನಲ್ಲಿದ್ದ ಹಣ ಮತ್ತು ಇತರೆ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಮಾತು ಕೇಳದ ಕೆಲ ಆಟಗಾರರ ಮೇಲೆ ಬಂದೂಕಿನ ಹಿಂಭಾಗದಿಂದ ಹಲ್ಲೆ ಕೂಡ ನಡೆಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಎಲ್ಲವನ್ನೂ ಕಳೆದುಕೊಂಡ ಆಟಗಾರರು ಕೈಯಲ್ಲಿ ಕಾಸಿಲ್ಲದೆ ಕ್ವೆಟ್ಟಾದಲ್ಲಿ ಅತಂತ್ರವಾಗಿ ನಿಂತಿದ್ದಾರೆ.

ಕ್ರೀಡಾ ಸಚಿವರ ಎಂಟ್ರಿ; ತುರ್ತು ಸಹಾಯ!

ದರೋಡೆಕೋರರ ಕೈಗೆ ಸಿಲುಕಿ ನರಕಯಾತನೆ ಅನುಭವಿಸಿದ ಆಟಗಾರರು, ಹೇಗೋ ಮಾಡಿ ಸುರಕ್ಷಿತ ಸ್ಥಳ ತಲುಪಿದ ಬಳಿಕ ಬಲೂಚಿಸ್ತಾನದ ಕ್ರೀಡಾ ಸಚಿವರಿಗೆ ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ. ಆಟಗಾರರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಆಡಳಿತ ಮಂಡಳಿ, ತಕ್ಷಣವೇ ಎಚ್ಚೆತ್ತುಕೊಂಡು ತಂಡಕ್ಕೆ ಸೇವೆ ಒದಗಿಸಲು ವ್ಯವಸ್ಥೆ ಮಾಡಿದೆ.

ಈ ಘಟನೆ ಕುರಿತು ಮಾತನಾಡಿರುವ ತಂಡದ ವ್ಯವಸ್ಥಾಪಕ ಜುಲ್ಫಿಕರ್ ಅಲಿ ಭುಟ್ಟೋ, ನಾವು ಪ್ರಯಾಣಿಸುತ್ತಿದ್ದ ಆ ನಿರ್ಜನ ರಸ್ತೆಯಲ್ಲಿ ಪರಿಸ್ಥಿತಿ ಎಷ್ಟು ಬೇಗ ಕೈಮೀರಿತು ಎಂದರೆ ನಮಗೆ ಊಹಿಸಲು ಕೂಡ ಸಾಧ್ಯವಾಗಲಿಲ್ಲ. ಎಲ್ಲರ ಮೊಬೈಲ್ ಮತ್ತು ಹಣವನ್ನು ದೋಚಿಕೊಂಡು ನಮ್ಮನ್ನು ಬೀದಿಗೆ ತಳ್ಳಿದರು ಎಂದು ಕಣ್ಣೀರಿಟ್ಟಿದ್ದಾರೆ.

ಎಚ್ಚರಿಕೆ ಮರೆತು ಪ್ರಯಾಣಿಸಿದ್ದೇ ತಪ್ಪಾಯ್ತಾ?

ಈ ಘಟನೆಯ ಬಳಿಕ ಮಾತನಾಡಿರುವ ಸಿಂಧ್ ಫುಟ್‌ಬಾಲ್ ಅಸೋಸಿಯೇಷನ್‌ನ ಕಾರ್ಯದರ್ಶಿ ಮುಹಮ್ಮದ್ ಅಜಮ್ "ನಾವು ಸಿಂಧ್ ತಂಡವನ್ನು ಈ ಪಂದ್ಯಾವಳಿಗೆ ಅಧಿಕೃತವಾಗಿ ಕಳುಹಿಸಿರಲಿಲ್ಲ. ಭದ್ರತೆ ಇಲ್ಲದ ಕಾರಣ ಬಸ್ ಅಥವಾ ರೈಲಿನಲ್ಲಿ ಕ್ವೆಟ್ಟಾಗೆ ಪ್ರಯಾಣಿಸಬೇಡಿ ಎಂದು ಕರಾಚಿಯ ಎಲ್ಲ ಕ್ಲಬ್‌ಗಳಿಗೆ ಮುನ್ನೆಚ್ಚರಿಕೆ ನೀಡಿದ್ದೆವು. ಆದರೆ ಕರಾಚಿ ಪಶ್ಚಿಮ ತಂಡ ನಮ್ಮ ಮಾತನ್ನು ಲೆಕ್ಕಿಸದೆ ಪ್ರಯಾಣ ಬೆಳೆಸಿತು. ಕೊನೆಗೆ ನಾವು ಹೇಳಿದಂತೆ ಆಯಿತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕ್ರೀಡಾಪಟುಗಳ ಭದ್ರತೆಗೆ ಸಿಗುತ್ತಾ ಬೆಲೆ?

ಪಾಕಿಸ್ತಾನದ ಈ ನಿರ್ದಿಷ್ಟ ಹೆದ್ದಾರಿಗಳು ಈಗ ಕ್ರೀಡಾಪಟುಗಳು ಮತ್ತು ಪ್ರಯಾಣಿಕರಿಗೆ ಅತಿ ಅಪಾಯಕಾರಿ ವಲಯವಾಗಿ ಬದಲಾಗುತ್ತಿವೆ. ಬಂಡಾಯ ಗುಂಪುಗಳು ಮತ್ತು ದರೋಡೆಕೋರರು ಕ್ರೀಡಾಪಟುಗಳನ್ನೂ ಬಿಡದೆ ಟಾರ್ಗೆಟ್ ಮಾಡುತ್ತಿರುವುದು ದೇಶದ ಆಂತರಿಕ ಭದ್ರತೆಯ ಕರಾಳ ಮುಖವನ್ನು ತೋರಿಸುತ್ತದೆ.

ಇತ್ತೀಚೆಗಷ್ಟೇ ಡೆರಾ ಬುಗ್ತಿಯಲ್ಲಿ ಇಬ್ಬರು ಸ್ಥಳೀಯ ಕ್ರಿಕೆಟಿಗರನ್ನು ಅಪಹರಿಸಿದ್ದ ಘಟನೆ ಮರೆಯುವ ಮುನ್ನವೇ ಈ ಫುಟ್‌ಬಾಲ್ ತಂಡದ ಮೇಲಿನ ದಾಳಿ ನಡೆದಿರುವುದು ಇಡೀ ಕ್ರೀಡಾ ಲೋಕ ತಲೆತಗ್ಗಿಸುವಂತೆ ಮಾಡಿದೆ, (ಏಜೆನ್ಸೀಸ್​).