ಬಾಂಗ್ಲಾದೇಶ ವಿಜೇತ ಬಿಜೆಪಿ ಅಭ್ಯರ್ಥಿ ಅಂದಲೀವ್ ರೆಹಮಾನ್ 
ವಿದೇಶ

ಬಾಂಗ್ಲಾ ಚುನಾವಣೆಯಲ್ಲಿ 'ಬಿಜೆಪಿ'ಗೆ ಮೊದಲ ಜಯ? ಭಾರತೀಯರ ಕುತೂಹಲಕ್ಕೆ ಕಾರಣವಾದ ಆ ಒಂದು ಸೀಟಿನ ಅಸಲಿಯತ್ತೇನು? BJP

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣಾ ಫಲಿತಾಂಶ ಪ್ರಕಟ
  • ಬಾಂಗ್ಲಾದೇಶದಲ್ಲಿ ಖಾತೆ ಓಪನ್​ ಮಾಡಿದ ಬಿಜೆಪಿ
  • ಆದರೆ ಇದು ಭಾರತೀಯ ಜನತಾ ಪಕ್ಷವಲ್ಲ, ಬಾಂಗ್ಲಾದೇಶ ಜಾತಿಯಾ ಪಕ್ಷ
ಬಾಂಗ್ಲಾದೇಶ: ಗುರುವಾರ (ಫೆ.13) ಸಂಜೆ ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ ಬಹುಮತವನ್ನು ಗಳಿಸುವ ಮೂಲಕ ಪಕ್ಷದ ನಾಯಕ ತಾರಿಕ್ ರೆಹಮಾನ್ ಬಾಂಗ್ಲಾದ ನೂತನ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಆದರೆ ಈ ಚುನಾವಣೆಯಲ್ಲಿ ಬಿಜೆಪಿ (BJP) ಒಂದು ಸ್ಥಾನವನ್ನು ಗೆಲ್ಲುವ ಮೂಲಕ ಭಾರತೀಯರ ಗಮನವನ್ನು ಬಾಂಗ್ಲಾದತ್ತ ಸೆಳೆಯುವಂತೆ ಮಾಡಿದೆ. ಭಾರತದಲ್ಲಿರುವ ಬಹುತೇಕರು ನಮ್ಮ ಬಿಜೆಪಿ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ ಬದಲಿಗೆ ಮುಂದೊಂದು ದಿನ ಈಡೀ ವಿಶ್ವವನ್ನೇ ಆಳಲಿದೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿವೆ.
ಆದರೆ ಇದೊಂದು ತಪ್ಪು ಕಲ್ಪನೆಯಾಗಿದ್ದು, ಬಾಂಗ್ಲಾದಲ್ಲಿ ಬಿಜೆಪಿ ಒಂದು ಸ್ಥಾನವನ್ನು ಗೆದ್ದಿರುವು ನಿಜವಾದರೂ ಅದು ಭಾರತೀಯ ಜನತಾ ಪಕ್ಷವಲ್ಲ, ಬದಲಿಗೆ ಬಾಂಗ್ಲಾದೇಶ ಜಾತಿಯಾ ಪಕ್ಷ ಆ ಒಂದು ಸ್ಥಾನವನ್ನು ಗೆದ್ದ ಪಕ್ಷವಾಗಿದೆ. ತಾರಿಕ್ ರೆಹಮಾನ್ ಅವರ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಮಿತ್ರಪಕ್ಷವಾದ ಬಾಂಗ್ಲಾದೇಶ ಜಾತಿಯಾ ಪಕ್ಷದ (ಬಿಜೆಪಿ) ಅಂದಲೀವ್ ರೆಹಮಾನ್ ಅವರು ಬಾಂಗ್ಲಾದೇಶದ 13 ನೇ ರಾಷ್ಟ್ರೀಯ ಸಂಸತ್ ಚುನಾವಣೆಯಲ್ಲಿ ಭೋಲಾ -1 ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ ಎಂದು ಬಾಂಗ್ಲಾದ ಸುದ್ದಿ ಸಂಸ್ಥರಗಳು ವರದಿ ಮಾಡಿದೆ.
ಪ್ರಕಟಿಸಲಾದ ಫಲಿತಾಂಶಗಳ ಪ್ರಕಾರ, ರೆಹಮಾನ್ 1,05,543 ಮತಗಳನ್ನು ಪಡೆದರೆ, ಅವರ ಹತ್ತಿರದ ಪ್ರತಿಸ್ಪರ್ಧಿ ಜಮಾತ್-ಇ-ಇಸ್ಲಾಮಿ ಅಭ್ಯರ್ಥಿ ಮುಹಮ್ಮದ್ ನಜ್ರುಲ್ ಇಸ್ಲಾಂ 75,337 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಬಾಂಗ್ಲಾದೇಶ ಜಾತಿಯಾ ಪಕ್ಷ 2026 ರ ಸಂಸತ್ತಿನ ಚುನಾವಣೆಯಲ್ಲಿ ಏಕೈಕ ಸ್ಥಾನವನ್ನು ಪಡೆಯಲು ಯಶಸ್ವಿಯಾಗಿದೆ.

ಶೇಕ್​ ಹಸೀನಾ ಆಡಳಿತ ಅಂತ್ಯ

2024 ರ ವಿದ್ಯಾರ್ಥಿಗಳ ನೇತೃತ್ವದ ಜೆನ್-ಜೀ ಚಳುವಳಿ ಶೇಖ್ ಹಸೀನಾ ಅವರ ಸರ್ಕಾರವನ್ನು ಉರುಳಿಸಿ, ಮಾಜಿ ಪ್ರಧಾನಿ ಭಾರತಕ್ಕೆ ಪಲಾಯನ ಮಾಡುವಂತೆ ಮಾಡಿದ ನಂತರ ಗುರುವಾರ ನಡೆದ ಮೊದಲ ಚುನಾವಣೆ ಇದಾಗಿದೆ.
ಸಾಮೂಹಿಕ ಪ್ರತಿಭಟನೆಗಳು ಮತ್ತು ರಾಷ್ಟ್ರವ್ಯಾಪಿ ಅಶಾಂತಿಯ ನಂತರ, ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಎಲ್ಲಾ ಅವಾಮಿ ಲೀಗ್ ಚಟುವಟಿಕೆಗಳನ್ನು ನಿಷೇಧಿಸಿತು. ಬಾಂಗ್ಲಾದೇಶ ಚುನಾವಣಾ ಆಯೋಗವು ತರುವಾಯ ಪಕ್ಷದ ನೋಂದಣಿಯನ್ನು ಸ್ಥಗಿತಗೊಳಿಸಿ, ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯಿತು.
ಬಾಂಗ್ಲಾದೇಶವು ತಾರಿಕ್ ರೆಹಮಾನ್ ನೇತೃತ್ವದ ಬಿಎನ್‌ಪಿಗೆ ನಿರ್ಣಾಯಕ ಜನಾದೇಶವನ್ನು ನೀಡಿದೆ. ತಾರಿಕ್ ರೆಹಮಾನ್ ನೇತೃತ್ವದ ಬಿಎನ್‌ಪಿ 300 ಸದಸ್ಯರನ್ನು ಹೊಂದಿರುವ ಜತಿಯಾ ಸಂಗ್ಸಾದ್ ಅಥವಾ ಹೌಸ್ ಆಫ್ ದಿ ನೇಷನ್‌ನಲ್ಲಿ 200 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ ಎಂಬುದು ಸ್ಪಷ್ಟವಾಗಿದೆ. ಈ ಚುನಾವಣೆ ಬಿಎನ್‌ಪಿ ಮತ್ತು ಅದರ ಹಿಂದಿನ ಮಿತ್ರ ಪಕ್ಷ ಜಮಾತ್-ಇ-ಇಸ್ಲಾಮಿ ನಡುವಿನ ನೇರ ಸ್ಪರ್ಧೆಯಾಗಿತ್ತು.
ತಾರಿಕ್ ರೆಹಮಾನ್ ಅವರ ರಾಜಕೀಯ ಪುನರಾಗಮನವು ಬಾಂಗ್ಲಾದೇಶದ ಪ್ರಕ್ಷುಬ್ಧ ರಾಜಕೀಯ ಭೂದೃಶ್ಯದಲ್ಲಿ ನಾಟಕೀಯ ತಿರುವು ನೀಡುತ್ತದೆ. ವಿಮರ್ಶಕರಿಂದ ಬಾಂಗ್ಲಾದೇಶದ ರಾಜಕೀಯದ ಕಪ್ಪು ರಾಜಕುಮಾರ ಎಂದು ಹೆಚ್ಚಾಗಿ ವರ್ಣಿಸಲ್ಪಡುವ 60 ವರ್ಷದ ತಾರಿಕ್ ರೆಹಮಾನ್, ದೇಶದ ಅತ್ಯಂತ ಪ್ರಭಾವಶಾಲಿ ರಾಜಕೀಯ ಕುಟುಂಬದ ಹಿನ್ನಲೆ ಉಳ್ಳವರಾಗಿದ್ದು, ಇವರು ಬಾಂಗ್ಲಾದ ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಮತ್ತು ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರರಾಗಿದ್ದಾರೆ,(ಏಜನ್ಸೀಸ್​).