ಲೆಬನಾನ್ ಪ್ರಧಾನಿ ನವಾಫ್ ಸಲಾಮ್, ಹೆಜ್ಬೊಲ್ಲಾ
- ಮಧ್ಯಪ್ರಾಚ್ಯದಲ್ಲಿ ಮುಂದುವರೆದ ಯುದ್ಧ
- ಇಸ್ರೇಲ್ ಮೇಲೆ ದಾಳಿ ಮಾಡಿದ್ದ ಲೆಬಾನಾನಿ ಹೆಜ್ಬೊಲ್ಲಾ ಸಂಘಟನೆ
- ಇಸ್ರೇಲ್ ಮರುದಾಳಿಗೆ ಲೆಬನಾನಿನ 31 ಜನ ಸಾವು, 149 ಮಂದಿ ಗಾಯಗೊಂಡಿದ್ದರು
- ಹೆಜ್ಬೊಲ್ಲಾ ಸಂಘಟನೆಯನ್ನು ನಿಷೇಧಿಸುವುದಾಗಿ ಹೇಳಿದ ಲೆಬನಾನ್ ಪ್ರಧಾನಿ ನವಾಫ್ ಸಲಾಮ್
ಬೈರುತ್: ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜ್ಬೊಲ್ಲಾ ನಡುವಿನ ಕಾದಾಟವು ಈಗ ಲೆಬನಾನ್ ದೇಶವನ್ನೇ ಇಬ್ಬಾಗ ಮಾಡಿದೆ. ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿ ಬಳಿಕ ಲೆಬನಾನ್ ಪ್ರಧಾನಿ ನವಾಫ್ ಸಲಾಮ್ (Nawaf Salam) ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ.
ಸ್ವದೇಶಿ ಗುಂಪಿನ ವಿರುದ್ಧವೇ ಕೆಂಡವಾದ ಸರ್ಕಾರ
ಇಂದಿನಿಂದಲೇ ಜಾರಿಗೆ ಬರುವಂತೆ ಹೆಜ್ಬೊಲ್ಲಾದ ಎಲ್ಲಾ ಮಿಲಿಟರಿ ಚಟುವಟಿಕೆಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ಪ್ರಧಾನಿ ಸಲಾಮ್ ಘೋಷಿಸಿದ್ದಾರೆ. ಅಷ್ಟೇ ಅಲ್ಲ, ದಶಕಗಳಿಂದ ತನ್ನದೇ ಆದ ಸೈನ್ಯ ಹೊಂದಿರುವ ಹೆಜ್ಬೊಲ್ಲಾ ತಕ್ಷಣವೇ ತನ್ನೆಲ್ಲಾ ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂದು ಅವರು ಖಡಕ್ ಸೂಚನೆ ನೀಡಿದ್ದಾರೆ. ಯುದ್ಧದಿಂದ ಜರ್ಜರಿತವಾಗಿರುವ ಲೆಬನಾನ್ನ್ನು ರಕ್ಷಿಸಲು ಇಸ್ರೇಲ್ ಜೊತೆ ನೇರ ಮಾತುಕತೆಗೆ ತಾವು ಸಿದ್ಧ ಎಂದು ಹೇಳುವ ಮೂಲಕ ಅವರು ಜಗತ್ತನ್ನೇ ಆಶ್ಚರ್ಯಚಕಿತಗೊಳಿಸಿದ್ದಾರೆ.
ಬೈರುತ್ನಲ್ಲಿ ಸ್ಮಶಾನ ಮೌನ: 31 ಸಾವು, 149 ಮಂದಿಗೆ ಗಾಯ
ಹೆಜ್ಬೊಲ್ಲಾ ಸಂಘಟನೆಯು ಉತ್ತರ ಇಸ್ರೇಲ್‌ನ ಹೈಫಾ ಮಿಲಿಟರಿ ನೆಲೆಯ ಮೇಲೆ ರಾಕೆಟ್ ದಾಳಿ ನಡೆಸಿದ ಬೆನ್ನಲ್ಲೇ, ಇಸ್ರೇಲಿ ಫೈಟರ್ ಜೆಟ್‌ಗಳು ಬೈರುತ್ ಮೇಲೆ ಮುಗಿಬಿದ್ದಿವೆ. ಈ ವಾಯುದಾಳಿಯಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದು, 149 ಜನರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಖಮೇನಿ ಹತ್ಯೆಗೆ ಸೇಡು ಎಂದ ಹೆಜ್ಬೊಲ್ಲಾ!
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ನಾವು ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದ್ದೇವೆ ಎಂದು ಹೆಜ್ಬೊಲ್ಲಾ ಸಮರ್ಥಿಸಿಕೊಂಡಿದೆ. ಇಸ್ರೇಲ್‌ನ 15 ತಿಂಗಳ ಆಕ್ರಮಣಕ್ಕೆ ತಕ್ಕ ಪಾಠ ಕಲಿಸದೆ ನಾವು ಸುಮ್ಮನಿರಲ್ಲ ಎಂದು ಗುಂಪು ಎಚ್ಚರಿಸಿದೆ. ಆದರೆ, ಹೆಜ್ಬೊಲ್ಲಾದ ಈ ಹಠಮಾರಿ ಧೋರಣೆಯಿಂದಾಗಿ ಇಡೀ ಲೆಬನಾನ್ ದೇಶವೇ ಇಸ್ರೇಲ್ ಕೆಂಗಣ್ಣಿಗೆ ಗುರಿಯಾಗಿರುವುದು ಅಲ್ಲಿನ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಯುದ್ಧದ ಮುಂದಿನ ಹಂತವೇನು?
ಲೆಬನಾನ್ ಸರ್ಕಾರವು ತನ್ನದೇ ದೇಶದ ಮಿಲಿಟರಿ ಗುಂಪನ್ನು ನಿಷೇಧಿಸಿರುವುದು ಹೆಜ್ಬೊಲ್ಲಾವನ್ನು ಇನ್ನಷ್ಟು ಕೆರಳಿಸಬಹುದು. ಇದು ಲೆಬನಾನ್‌ನಲ್ಲಿ ಅಂತರ್ಯುದ್ಧಕ್ಕೆ (Civil War) ದಾರಿ ಮಾಡಿಕೊಡುತ್ತದೆಯೇ? ಅಥವಾ ಇಸ್ರೇಲ್ ಜೊತೆಗಿನ ಮಾತುಕತೆಯಿಂದ ಶಾಂತಿ ಸ್ಥಾಪನೆಯಾಗುತ್ತದೆಯೇ? ಎಂಬ ಯಕ್ಷಪ್ರಶ್ನೆ ಎಲ್ಲರನ್ನು ಕಾಡುತ್ತಿದೆ,(ಏಜನ್ಸೀಸ್).