ಎಲ್ಲ ನನ್ನ ಪತ್ನಿಗಾಗಿ... ಲಾಠಿಯಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ಬಂದೂಕಿನಿಂದ ಹೆದರಿಸಿದ ಪಾಕ್​ ಸೈನಿಕ! Pakistani soldier  
ವಿದೇಶ

ಎಲ್ಲ ನನ್ನ ಪತ್ನಿಗಾಗಿ... ಲಾಠಿಯಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ಬಂದೂಕಿನಿಂದ ಹೆದರಿಸಿದ ಪಾಕ್​ ಸೈನಿಕ! Pakistani soldier

ಪ್ರಮುಖ ಮುಖ್ಯಾಂಶಗಳು

  • ಇಸ್ಲಾಮಾಬಾದ್‌ನ ಸರಹದ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆ
  • ಶುಲ್ಕ ಮತ್ತು ತರಗತಿ ಸಮಯದ ವಿಚಾರವಾಗಿ ಅಧಿಕಾರಿಯ ವಿರುದ್ಧ ಆಕ್ರೋಶ
  • ಸ್ಥಳಕ್ಕೆ ಬಂದ ಸೈನಿಕನಿಂದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಹಾಗೂ ಗುಂಡಿನ ದಾಳಿ
  • ತಪ್ಪಿತಸ್ಥ ಸೈನಿಕನ ವಿರುದ್ಧ ಶಿಸ್ತು ಕ್ರಮ ಹಾಗೂ ಆಂತರಿಕ ತನಿಖೆಗೆ ಆದೇಶ
ಇಸ್ಲಾಮಾಬಾದ್‌: ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸೈನಿಕನೊಬ್ಬ ( Pakistani soldier ) ವಿದ್ಯಾರ್ಥಿಗಳತ್ತ ಬಂದೂಕು ತೋರಿಸಿ, ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಆಘಾತಕಾರಿ ಘಟನೆಯು ಪಾಕಿಸ್ತಾನದ ಸರಹದ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ.
ಇಸ್ಲಾಮಾಬಾದ್‌ನ ಸರಹದ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಐನಾ ಅವರ ವಿರುದ್ಧ ವಿದ್ಯಾರ್ಥಿಗಳು ಶುಲ್ಕ ಮತ್ತು ತರಗತಿ ಸಮಯದ ವಿಚಾರವಾಗಿ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಪರಿಸ್ಥಿತಿಯನ್ನು ತಿಳಿಗೊಳಿಸಲು ಡಾ. ಐನಾ ಸ್ವತಃ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಕೆಲವರು ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿದರು. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಐನಾ ಅವರು ತನ್ನ ಪತಿಯನ್ನು ಸ್ಥಳಕ್ಕೆ ಕರೆಸಿಕೊಂಡರು.
ಸೇನಾ ಸಮವಸ್ತ್ರದಲ್ಲೇ ಸ್ಥಳಕ್ಕೆ ಆಗಮಿಸಿದ ಆಕೆಯ ಪತಿ, ಯಾವುದೇ ಪ್ರಚೋದನೆ ಇಲ್ಲದಿದ್ದರೂ ಏಕಾಏಕಿ ವಿದ್ಯಾರ್ಥಿಗಳ ಮೇಲೆ ಲಾಠಿಯಿಂದ ಹಲ್ಲೆ ನಡೆಸಲು ಆರಂಭಿಸಿದರು. ಅಷ್ಟೇ ಅಲ್ಲದೆ, ತಮ್ಮ ಬಳಿಯಿದ್ದ ಬಂದೂಕುಗಳನ್ನು ಹೊರತೆಗೆದು ವಿದ್ಯಾರ್ಥಿಗಳತ್ತ ನೇರವಾಗಿ ಗುರಿಯಿಟ್ಟು ತೋರಿಸಿ ಗಾಳಿಯಲ್ಲಿ ಗುಂಡು ಹಾರಿಸಿದರು. ಸೈನಿಕರ ಈ ಅತಿರೇಕದ ವರ್ತನೆಯಿಂದ ಕಕ್ಕಾಬಿಕ್ಕಿಯಾದ ವಿದ್ಯಾರ್ಥಿಗಳು ತೀವ್ರ ಭಯಭೀತರಾದರು ಮತ್ತು ಜೀವಭಯದಿಂದ ನಡುಗಿಹೋದರು.
ಸೈನಿಕನ ಈ ದೌರ್ಜನ್ಯದ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥ ಸೈನಿಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಲವಾಗಿ ಆಗ್ರಹಿಸುತ್ತಿದ್ದಾರೆ. ಘಟನೆಯ ಗಂಭೀರತೆಯನ್ನು ಪರಿಗಣಿಸಿ ಆ ಸೈನಿಕನ ವಿರುದ್ಧ ಈಗಾಗಲೇ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ವರದಿಯಾಗಿದ್ದು, ಈ ಸಂಪೂರ್ಣ ಪ್ರಕರಣದ ಕುರಿತು ಉನ್ನತ ಮಟ್ಟದ ಆಂತರಿಕ ತನಿಖೆಗೆ ಆದೇಶಿಸಲಾಗಿದೆ.
ಪಾಕಿಸ್ತಾನದ ಬಲೂಚಿಸ್ತಾನ, ಖೈಬರ್ ಪಕ್ತೂಂಕ್ವಾ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೈನ್ಯದ ದೌರ್ಜನ್ಯ ಹಾಗೂ ದಬ್ಬಾಳಿಕೆಯ ವಿರುದ್ಧ ಈಗಾಗಲೇ ಪ್ರಬಲ ಪ್ರತಿಭಟನೆಗಳು ಭುಗಿಲೆದ್ದಿರುವ ತಲ್ಲಣದ ವಾತಾವರಣದಲ್ಲೇ ಈ ಹೊಸ ಘಟನೆ ಬೆಳಕಿಗೆ ಬಂದಿದೆ. ಶಿಕ್ಷಣ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳ ಮೇಲೆ ಸೈನಿಕನೇ ಬಂದೂಕು ತೋರಿ ಹಲ್ಲೆ ನಡೆಸಿರುವ ಈ ಕೃತ್ಯವು ಪಾಕಿಸ್ತಾನದಲ್ಲಿ ಸೇನಾ ಬಲಪ್ರಯೋಗದ ಮತ್ತೊಂದು ಕರಾಳ ಮುಖವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ, (ಏಜೆನ್ಸೀಸ್​).