Pistol Shrimp: ಸಮುದ್ರ ಒಂದು ಅದ್ಭುತ ಹಾಗೂ ಒಂದು ವಿಸ್ಮಯ, ವಿಶಾಲ ಜಗತ್ತು ಎಂದೇ ಹೇಳಬಹುದು. ಇದರ ಆಳಕ್ಕೆ ಹೋದಂತೆಲ್ಲಾ ಅದು ಇನ್ನಷ್ಟು ಆಳವಾಗುತ್ತಾ ಹೋಗುವುದುರ ಜತೆಗೆ ಅನೇಕ ರಹಸ್ಯಗಳು ಗೋಚರಿಸುತ್ತವೆ. ಈ ಪೈಕಿ ನಾವಿಂದು ಹೇಳುವ ಜೀವಿಯ ವಿಭಿನ್ನ ಸಾಮರ್ಥ್ಯದ ಬಗ್ಗೆ ಕೇಳಿದ್ರೆ ನಿಜಕ್ಕೂ ನೀವು ಆಶ್ಚರ್ಯಚಕಿತರಾಗುವುದರಲ್ಲಿ ಅನುಮಾನವೇ ಇಲ್ಲ.
ಸಮುದ್ರಾದಳದಲ್ಲಿ ಎಲ್ಲ ಜೀವಿಗಳಂತೆ ಬದುಕುವ ಈ ಸಿಗಡಿ, ಗಾತ್ರದಲ್ಲಿ ನಮ್ಮ ಬೆರಳಿನಷ್ಟಿಲ್ಲದೇ ಹೋದರೂ ಶಬ್ದದಲ್ಲಿ ಗನ್ನ ಬುಲೆಟ್ ಅನ್ನೇ ಮೀರಿಸುತ್ತದೆ ಎಂಬುದು ಮಾತ್ರ ಹುಬ್ಬೇರಿಸುವ ಸಂಗತಿಯೇ ಬಿಡಿ. ಏಕಂದರೆ, ಒಂದು ಗನ್ ಅಥವಾ ಶಾಟ್ ಗನ್ನಿಂದ ಹೊರಬರುವ ಬುಲೆಟ್ 114 ಡೆಸಿಬಲ್ ಪ್ರಮಾಣದಲ್ಲಿ ಶಬ್ದ ಮಾಡಿದರೆ ಸಾಕು ನಾವು ಒಂದು ನಿಮಿಷ ಬೆಚ್ಚಿಬೀಳುತ್ತೀವಿ. ಅದು ಗಾಳಿಯಲ್ಲಿ! ಅದೇ ಈ ಪಿಸ್ತೂಲ್ ಸಿಗಡಿ ನೀರಿನೊಳಗೆ ಮಾಡುವ ಸೌಂಡ್ ಬರೋಬ್ಬರಿ 210 ಡೆಸಿಬಲ್ ಮೀರುತ್ತದೆ ಎಂದರೆ ನಂಬುತ್ತೀರಾ? ಇಲ್ಲ ಅಂದರೂ ಇದೇ ಸತ್ಯ.
ಭೂಮಿ ಮೇಲಿರುವ ಸಿಂಹ ಘರ್ಜನೆ, ಆನೆಯ ಕೂಗುಗಳೇ ನಮಗೆ ಅತಿಯಾದ ಜೋರಾದ ಶಬ್ದ ಎಂದು ನಾವುಗಳ ಅಂದುಕೊಂಡಿದ್ದೀವಿ. ಆದರೆ, ಪಿಸ್ತೂಲ್ ಸಿಗಡಿ ಮುಂದೆ ಈ ದೈತ್ಯ ಪ್ರಾಣಿಗಳ ಶಬ್ದ ಏನೇನೂ ಅಲ್ಲ. 200 ಡೆಸಿಬಲ್ ಮೀರುವ ನೀರಿನಲ್ಲಿರುವ ಸಿಗಡಿಯ ಸೌಂಡ್ ಸುಮಾರು 8 ಕಿ.ಮೀ ದೂರದವರೆಗೆ ಕೇಳಿಸುತ್ತದೆ ಎಂಬ ಶಾಕಿಂಗ್ ಸಂಗತಿಯನ್ನು ವರದಿಗಳು ಉಲ್ಲೇಖಿಸಿವೆ. ಇಷ್ಟೇ ಅಲ್ಲದೇ, ಇವುಗಳು ನೀರನ್ನೇ ಬುಲೆಟ್ ಆಗಿ ಪರಿವರ್ತಿಸುವ ವಿಶೇಷ ಸಾಮರ್ಥ್ಯವನ್ನೂ ಹೊಂದಿವೆ.
ಹೌದು, ಇದನ್ನು 'ಪಿಸ್ಟಲ್ ಶ್ರಿಂಪ್' ಎಂದು ಆಂಗ್ಲ ಭಾಷೆಯಲ್ಲಿ ಕರೆಯಲಾಗುತ್ತದೆ. ಇದು ಕೆರಿಬಿಯನ್ ಸಮುದ್ರದ ಬೆಚ್ಚಗಿನ ನೀರಿನಲ್ಲಿ ಹಾಗೂ ಆಸ್ಟ್ರೇಲಿಯಾ ಮತ್ತು ಪೂರ್ವ ಆಫ್ರಿಕಾದ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಇವುಗಳ ಗಾತ್ರದ ಹೊರತಾಗಿಯೂ ಇದು ಅದ್ಭುತವಾದ ಶಕ್ತಿಯನ್ನು ಹೊಂದಿದೆ. ತನ್ನ ಒಂದು ಕೈಯಿಂದ ಗುಳ್ಳೆಯನ್ನು ಸೃಷ್ಟಿಸುತ್ತದೆ. ಈ ಗುಳ್ಳೆಯ ಬುಲೆಟ್ನಂತೆ ನೀರಿನೊಳಗೆ ಸ್ಫೋಟಗೊಳ್ಳುತ್ತದೆ. ಇದರೊಳಗಿನ ತಾಪಮಾನವು 4,700 °C ತಲುಪುತ್ತದೆ ಎಂದು ವಿವರಿಸಲಾಗಿದೆ.
ಇದು ಸೂರ್ಯನ ಮೇಲ್ಮೈಯಷ್ಟೇ ಬಿಸಿಯಾಗಿರುತ್ತದೆ. ಇದರಿಂದ ಉಂಟಾಗುವ ಆಘಾತಕಾರಿ ಅಲೆಯು 210 ಡೆಸಿಬಲ್ ತೀವ್ರತೆಯನ್ನು ಸೃಷ್ಟಿಸುತ್ತದೆ. ಇದು ಜೆಟ್ ಇಂಜಿನ್ ಅಥವಾ ಬಂದೂಕಿನ ಗುಂಡಿನ ಶಬ್ದಕ್ಕಿಂತಲೂ ಜೋರಾಗಿದ್ದು, ತನ್ನ ಬೇಟೆಯನ್ನು ತಕ್ಷಣವೇ ಕೊಂದು ಹಾಕುತ್ತದೆ. ಜಲಾಂತರ್ಗಾಮಿ ನೌಕೆಗಳಲ್ಲಿರುವ ಮಿಲಿಟರಿ ಹೈಡ್ರೋಫೋನ್‌ಗಳ ಮೂಲಕವೂ ಇದರ ಸಾಮರ್ಥ್ಯವನ್ನು ಪತ್ತೆಹಚ್ಚಬಹುದು.
ಈ ಸೀಗಡಿಗಳು ಮೌನವಾಗಿರುವುದಿಲ್ಲ. ಅವು ಸೃಷ್ಟಿಸುವ ಗುಳ್ಳೆಗಳು 218 ಡೆಸಿಬಲ್‌ನಷ್ಟು ಶಬ್ದವನ್ನು ಹೊರಹೊಮ್ಮಿಸುತ್ತವೆ. ಇದು ವೇಗವಾಗಿ ಚಲಿಸುವ ಗುಂಡಿನ (ಬುಲೆಟ್) ಶಬ್ದಕ್ಕಿಂತಲೂ ಜೋರಾಗಿರುತ್ತದೆ. ಮನುಷ್ಯರಾದ ನಮಗೆ ಈ ಶಬ್ದ ಅಷ್ಟೊಂದು ಜೋರಾಗಿ ಕೇಳಿಸದಿರಬಹುದು. ಆದರೆ, ಇದು ಕೇವಲ ಸೆಕೆಂಡಿನ ಒಂದು ಭಾಗದಷ್ಟು ಸಮಯ ಮಾತ್ರ ನಡೆಯುವ ಸ್ಫೋಟದಿಂದ ಉಂಟಾಗುತ್ತದೆ. ಗುಳ್ಳೆ ಒಡೆದಾಗ 8,000 ಡಿಗ್ರಿ ಫ್ಯಾರನ್‌ಹೀಟ್ (4,427 ಡಿಗ್ರಿ ಸೆಲ್ಸಿಯಸ್) ವರೆಗಿನ ಶಾಖ ಉತ್ಪತ್ತಿಯಾಗುತ್ತದೆ. ಇದು ಜ್ವಾಲಾಮುಖಿಯ ಲಾವಾಕ್ಕಿಂತ ನಾಲ್ಕು ಪಟ್ಟು ಹೆಚ್ಚು ಬಿಸಿಯಾಗಿರುತ್ತದೆ. ಶಾಖವು ಬಹಳ ವೇಗವಾಗಿ ಹರಡುವುದರಿಂದ, ಯಾವುದೇ ಪರಿಣಾಮಗಳು ಉಂಟಾಗುವುದಿಲ್ಲ (ಆದರೆ ದುರದೃಷ್ಟವಶಾತ್ ಸಿಕ್ಕಿಬಿದ್ದು ಸುಟ್ಟುಹೋಗುವ ಸಣ್ಣ ಜೀವಿಗಳಿಗೆ ಮಾತ್ರ ಇದು ಮಾರಕ).
ಎರಡನೇ ಮಹಾಯುದ್ಧದ ಸಮಯದಲ್ಲಿ, ಈ ಪ್ರಬಲ ಪಿಸ್ತೂಲ್ ಸೀಗಡಿಗಳು ಅಮೆರಿಕದ ನೌಕಾಪಡೆಯ ರಕ್ಷಣಾ ಯೋಜನೆಗೆ ಅನಿರೀಕ್ಷಿತ ಅಡಚಣೆಯನ್ನು ಉಂಟುಮಾಡಿತು. ಶತ್ರುಗಳ ಹಡಗುಗಳನ್ನು ಪತ್ತೆಹಚ್ಚಲು ಬಳಸಲಾಗುತ್ತಿದ್ದ ಸೋನಾರ್ ವ್ಯವಸ್ಥೆಯಲ್ಲಿ ಈ ಸೀಗಡಿಗಳು ಉಂಟುಮಾಡುವ ಶಬ್ದವು ವ್ಯತ್ಯಯವನ್ನು ಸೃಷ್ಟಿಸಿತ್ತು. ಇದರಿಂದಾಗಿ ನೌಕಾಪಡೆಯು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ 'ವಾರ್ ರಿಸರ್ಚ್ ಸೆಂಟರ್'ನ (ಯುದ್ಧ ಸಂಶೋಧನಾ ಕೇಂದ್ರ) ಸಂಶೋಧಕರ ಸಹಾಯವನ್ನು ಪಡೆಯುವ ಪರಿಸ್ಥಿತಿ ನಿರ್ಮಾಣವಾಯಿತು. ಅದೃಷ್ಟವಶಾತ್, ಅವರು ಆ ಶಬ್ದದ ಮೂಲವನ್ನು ಪತ್ತೆಹಚ್ಚಿ, ಸೀಗಡಿಯ ಶಬ್ದಗಳನ್ನು ಖಚಿತಪಡಿಸಿದರು,(ಏಜೆನ್ಸೀಸ್).