ರಷ್ಯಾದೊಂದಿಗಿನ ಪರಸ್ಪರ ಅವಲಂಬನೆ ತೊರೆದ ಯುರೋಪ್ ಈಗ ಅಮೆರಿಕಕ್ಕೆ ಶರಣು: ಕ್ರೆಮ್ಲಿನ್ ವಕ್ತಾರ ಪೆಸ್ಕೋವ್ ಚಾಟಿ
ಮಾಸ್ಕೋ: ಯುರೋಪಿಯನ್ ರಾಷ್ಟ್ರಗಳು ರಷ್ಯಾದ(Russia) ಮೇಲಿನ ತನ್ನ ಅವಲಂಬನೆಯಿಂದ ಮುಕ್ತವಾಗಿದ್ದೇವೆ ಎಂದು ಬೀಗುತ್ತಿವೆ. ಆದರೆ ವಾಸ್ತವದಲ್ಲಿ ಅವು ಅಮೆರಿಕದ ಮೇಲೆ ಹೊಸ ರೀತಿಯ ಅವಲಂಬನೆಗೆ ಬಿದ್ದಿವೆ ಎಂದು ಕ್ರೆಮ್ಲಿನ್ ಗಂಭೀರವಾಗಿ ಆರೋಪಿಸಿದೆ. ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ಆರ್ಥಿಕ ನಿರ್ಬಂಧಗಳು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ಹಾಳುಗೆಡವಿವೆ ಎಂದು ರಷ್ಯಾ ದೂರಿದೆ.
ಪರಸ್ಪರ ಅವಲಂಬನೆ' ವರ್ಸಸ್ ಏಕಪಕ್ಷೀಯ ಅವಲಂಬನೆ
ರಷ್ಯಾದ ಸರ್ಕಾರಿ ಸ್ವಾಮ್ಯದ ದೂರದರ್ಶನಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ರಷ್ಯಾ ಮತ್ತು ಯುರೋಪ್ ನಡುವಿನ ಹಿಂದಿನ ಸಂಬಂಧವನ್ನು ಪರಸ್ಪರ ಅವಲಂಬನೆ ಎಂದು ಬಣ್ಣಿಸಿದ್ದಾರೆ.
ಸ್ಥಿರ ಮಾರುಕಟ್ಟೆ: ಹಿಂದೆ ನಾವು ಮಾರಾಟಗಾರರಾಗಿದ್ದೆವು ಮತ್ತು ಯುರೋಪಿಯನ್ನರು ಖರೀದಿದಾರರಾಗಿದ್ದರು. ಇದು ಜಾಗತಿಕ ಸ್ಪರ್ಧಾತ್ಮಕ ಮಾರುಕಟ್ಟೆಯ ಭಾಗವಾಗಿತ್ತು. ನಾವು ಅವರ ಮೇಲೆ ಅವಲಂಬಿತವಾಗಿದ್ದೆವು, ಅವರು ನಮ್ಮ ಮೇಲೆ ಅವಲಂಬಿತವಾಗಿದ್ದರು ಎಂದು ಪೆಸ್ಕೋವ್ ವಿವರಿಸಿದ್ದಾರೆ.
ಅಮೆರಿಕದ ಹಿಡಿತ
ರಷ್ಯಾದ ಮೇಲಿನ ತಾತ್ಕಾಲಿಕ ಅವಲಂಬನೆಯನ್ನು ತೊಡೆದುಹಾಕುವ ಭರದಲ್ಲಿ, ಯುರೋಪ್ ಈಗ ಸಂಪೂರ್ಣವಾಗಿ ಅಮೆರಿಕದ ಆರ್ಥಿಕ ಮತ್ತು ರಾಜಕೀಯ ಹಿಡಿತಕ್ಕೆ ಸಿಲುಕಿದೆ ಎಂದು ಪೆಸ್ಕೋವ್ ಪ್ರತಿಪಾದಿಸಿದ್ದಾರೆ.
ರಾಜಕೀಯ ನಾಯಕತ್ವದ ಪತನ
ಯುರೋಪಿನ ಪ್ರಸ್ತುತ ರಾಜಕೀಯ ನಾಯಕತ್ವವನ್ನು ಟೀಕಿಸಿದ ಪೆಸ್ಕೋವ್, ಅಲ್ಲಿನ ನಾಯಕರಲ್ಲಿ ರಾಜಕೀಯ ಗುಣಮಟ್ಟದ ಕುಸಿತ ಕಂಡುಬರುತ್ತಿದೆ ಎಂದು ಕಿಡಿಕಾರಿದರು. ಇದು ಅಂತಾರಾಷ್ಟ್ರೀಯ ಸಂಬಂಧಗಳ ವ್ಯವಸ್ಥೆಗೆ ಮಾರಕವಾಗಿದೆ ಎಂದು ಡಿಮಿಟ್ರಿ ಎಚ್ಚರಿಸಿದರು.
ವಿಶೇಷವಾಗಿ, ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿಯ ಮುಖ್ಯಸ್ಥೆ ಕಾಜಾ ಕಲ್ಲಾಸ್ ಅವರ ಹೆಸರನ್ನು ಉಲ್ಲೇಖಿಸಿದ ಅವರು, ಸದ್ಯಕ್ಕೆ ಯುರೋಪ್ ಜೊತೆ ಮಾತುಕತೆಗೆ ಹೆಚ್ಚಿನ ಅವಕಾಶವಿಲ್ಲ. ನಾವು ಅಥವಾ ಅಮೆರಿಕನ್ನರು ಅವರೊಂದಿಗೆ ಏನನ್ನೂ ಚರ್ಚಿಸುವುದಿಲ್ಲ. ಅವರು ಅಧಿಕಾರದಿಂದ ಕೆಳಗಿಳಿಯುವವರೆಗೆ ಕಾಯುವುದೊಂದೇ ಈಗ ಉಳಿದಿರುವ ದಾರಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಭವಿಷ್ಯದ ಆತಂಕ
ಗ್ರೀನ್‌ಲ್ಯಾಂಡ್‌ನ ಆಯಕಟ್ಟಿನ ಪ್ರಾಮುಖ್ಯತೆ ಮತ್ತು ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾದ 'ಗೋಲ್ಡನ್ ಡೋಮ್' ಬಗ್ಗೆಯೂ ಮಾತನಾಡಿದ ಪೆಸ್ಕೋವ್, ಅಮೆರಿಕದ ಈ ಯೋಜನೆಗಳನ್ನು ರಷ್ಯಾ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದರು. ಇಂತಹ ಬೆಳವಣಿಗೆಗಳು ಜಾಗತಿಕ ಸ್ಥಿರತೆಗೆ ಸವಾಲಾಗಬಹುದು ಎಂಬ ಆತಂಕವನ್ನು ಡಿಮಿಟ್ರಿ ವ್ಯಕ್ತಪಡಿಸಿದರು,(ಏಜೆನ್ಸೀಸ್).