ಜರ್ಮನಿಯಲ್ಲೇ ಏಕಿಂತ ಸಮಸ್ಯೆ? ಮನೆಯ ಹಿರಿ ಜೀವಗಳನ್ನೇಕೆ ಅನ್ಯ ರಾಷ್ಟ್ರಕ್ಕೆ ಕಳುಹಿಸುತ್ತಿವೆ ಕುಟುಂಬಗಳು? ಇಲ್ಲಿದೆ ಅಚ್ಚರಿ ಕಾರಣ | German Seniors  
ವಿದೇಶ

ಜರ್ಮನಿಯಲ್ಲೇ ಏಕಿಂತ ಸಮಸ್ಯೆ? ಮನೆಯ ಹಿರಿ ಜೀವಗಳನ್ನೇಕೆ ಅನ್ಯ ರಾಷ್ಟ್ರಕ್ಕೆ ಕಳುಹಿಸುತ್ತಿವೆ ಕುಟುಂಬಗಳು? ಇಲ್ಲಿದೆ ಅಚ್ಚರಿ ಕಾರಣ | German Seniors

German Seniors: ವಯಸ್ಸಾದ ತಂದೆ-ತಾಯಿಯನ್ನು ಮಕ್ಕಳಂತೆ ಆರೈಕೆ ಮಾಡಿ, ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಮತ್ತು ಆಯಾ ಕುಟುಂಬಸ್ಥರ ಅತಿದೊಡ್ಡ ಜವಾಬ್ದಾರಿ. ಹೀಗಿರುವಾಗ, ಜರ್ಮನಿಯಿಂದ ವೃದ್ದರನ್ನು ಜೆಕ್​ ಗಣರಾಜ್ಯಕ್ಕೆ ಕಳುಹಿಸುತ್ತಿರುವ ಕುಟುಂಬಸ್ಥರ ಅಸಲಿ ಕಾರಣ ಕೇಳಿದ್ರೆ ಒಂದು ನಿಮಿಷ ಅಚ್ಚರಿ ಆಗುವುದಂತು ಗ್ಯಾರಂಟಿ.

ಜರ್ಮನಿಯಲ್ಲಿ ವೃದ್ಧರ ಆರೈಕೆಯ ವೆಚ್ಚ ಹೆಚ್ಚಾಗುತ್ತಿರುವುದರಿಂದ ಅಲ್ಲಿನ ಕೆಲವು ಕುಟುಂಬಗಳು ಹೊಸ ಮಾರ್ಗವನ್ನು ಕಂಡುಕೊಂಡಿವೆ. ಹಿರಿ ವಯಸ್ಸಿನ ಪೋಷಕರನ್ನು ತಮ್ಮ ಸ್ವಂತ ದೇಶಗಳ ನರ್ಸಿಂಗ್ ಹೋಂಗಳ ಬದಲು ನೆರೆಯ ಜೆಕ್ ಗಣರಾಜ್ಯದ ಆರೈಕೆ ಕೇಂದ್ರಗಳಿಗೆ ದಾಖಲಿಸುವ ಮೂಲಕ ಆರ್ಥಿಕ ಹೊಡೆತದಿಂದ ಕುಟುಂಬಸ್ಥರು ತಪ್ಪಿಸಿಕೊಳ್ಳುತ್ತಿದ್ದಾರೆ. ಹಣ ಉಳಿತಾಯದ ಈ ನಿರ್ಧಾರದ ಹಿಂದೆ ವೃದ್ಧರು ಕುಟುಂಬದಿಂದ ದೂರ ಉಳಿಯಬೇಕಾದಂತಹ ಭಾವನಾತ್ಮಕ ಸವಾಲುಗಳೂ ಇವೆ.

ಜರ್ಮನಿಯ ಮಾಧ್ಯಮ ಸಂಸ್ಥೆ ಡಾಯ್ಚೆ ವೆಲ್ಲೆ (Deutsche Welle) ವರದಿಯ ಪ್ರಕಾರ, ಜರ್ಮನಿಯಲ್ಲಿ ವೃದ್ಧರ ಆರೈಕೆಗಾಗಿ ತಿಂಗಳಿಗೆ ಸುಮಾರು 3,200ದಿಂದ 3,400 ಯುರೋಗಳವರೆಗೆ ವೆಚ್ಚ ತಗಲುತ್ತದೆ. ಅಂದರೆ, ಭಾರತೀಯ ಕರೆನ್ಸಿಯಲ್ಲಿ 3ರಿಂದ 3.45 ಲಕ್ಷ ರೂ. ಎನ್ನಲಾಗಿದೆ. ಈ ದುಬಾರಿ ಮೊತ್ತವನ್ನು ಭರಿಸಲು ಪರದಾಡುತ್ತಿರುವ ಕುಟುಂಬಗಳು, ಕಡಿಮೆ ವೆಚ್ಚದಲ್ಲಿ ಆರೈಕೆ ಸೌಲಭ್ಯ ಒದಗಿಸುವ ಜೆಕ್ ಗಣರಾಜ್ಯದ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿವೆ.

ಕಡಿಮೆ ವೆಚ್ಚದಲ್ಲಿ ಉತ್ತಮ ಆರೈಕೆ

ಜೆಕ್ ಗಣರಾಜ್ಯದಲ್ಲಿ ವೃದ್ಧರಿಗೆ ಉತ್ತಮ ಆರೈಕೆ, ಕಡಿಮೆ ಶುಲ್ಕ ಹಾಗೂ ಕೈಗೆಟುಕುವ ದರದಲ್ಲಿ ಹೆಚ್ಚುವರಿ ಚಿಕಿತ್ಸಾ ಸೌಲಭ್ಯಗಳು ಲಭ್ಯವಿರುವುದು ಜರ್ಮನಿಯ ಕುಟುಂಬಗಳನ್ನು ಆಕರ್ಷಿಸುತ್ತಿವೆ. ಹೀಗಾಗಿ, ತಮ್ಮ ಹಿರಿಯರನ್ನು ಅಲ್ಲಿನ ಆರೈಕೆ ಕೇಂದ್ರಗಳಿಗೆ ದಾಖಲಿಸುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಆರೈಕೆಯ ಜತೆಗೆ ಸವಾಲುಗಳೇನು?

ವೃದ್ಧರನ್ನು ಮತ್ತೊಂದು ದೇಶದ ಆರೈಕೆ ಕೇಂದ್ರಗಳಿಗೆ ಕಳುಹಿಸುವ ನಿರ್ಧಾರ ಅಷ್ಟು ಸುಲಭವಿಲ್ಲ. ಜೆಕ್ ಗಣರಾಜ್ಯದ ಕೆಲವು ಆರೈಕೆ ಕೇಂದ್ರಗಳಲ್ಲಿ ಜರ್ಮನ್ ಭಾಷೆ ಮಾತನಾಡಬಲ್ಲ ಸಿಬ್ಬಂದಿಯ ಕೊರತೆ ಹೆಚ್ಚಿದೆ. ಇದರಿಂದ ವೃದ್ಧರು ತಮ್ಮ ಅಗತ್ಯಗಳನ್ನು ಸಿಬ್ಬಂದಿಗೆ ತಿಳಿಸುವಲ್ಲಿ ತೊಂದರೆ ಅನುಭವಿಸುವ ಸಾಧ್ಯತೆಯಿದೆ.

ಇದಲ್ಲದೆ, ಆರೈಕೆ ಕೇಂದ್ರಗಳಲ್ಲಿ ಪ್ರವೇಶ ಪಡೆಯಲು ದೀರ್ಘಕಾಲ ಕಾಯವ ಪರಿಸ್ಥಿತಿಯಿದೆ. ಮುಖ್ಯವಾಗಿ, ಜೀವನದ ಕೊನೆಯ ಕ್ಷಣಗಳಲ್ಲಿ ಮಕ್ಕಳು, ಮೊಮ್ಮಕ್ಕಳು ಮತ್ತು ಕುಟುಂಬದವರಿಂದ ದೂರವಾಗಿ ಮತ್ತೊಂದು ದೇಶದಲ್ಲಿ ವಾಸಿಸಬೇಕಾದ ಅನಿವಾರ್ಯತೆ ವೃದ್ಧರಿಗೆ ಭಾವನಾತ್ಮಕ ಸವಾಲಾಗಿ ಪರಿಣಮಿಸಬಹುದು.

ಜರ್ಮನಿಯಲ್ಲಿ ವೃದ್ಧರ ಆರೈಕೆಗೆ ಹೆಚ್ಚುತ್ತಿರುವ ವೆಚ್ಚ ಕುಟುಂಬಗಳನ್ನು ಗಡಿದಾಟುವಂತೆ ಮಾಡಿರುವುದು ನಿಜಕ್ಕೂ ದುರಂತ. ಕಡಿಮೆ ವೆಚ್ಚ ಅನ್ನೋದು ಆಯಾ ಕುಟುಂಬಗಳಿಗೆ ಸಣ್ಣ ರಿಲೀಫ್​ ಅನಿಸಿದರೂ ಅಲ್ಲಿಯ ಭಾಷೆ, ಕುಟುಂಬದವರ ಕೊರತೆ ಮತ್ತು ಮಾನಸಿಕ ನೆಮ್ಮದಿಯಂತಹ ಅಂಶಗಳು ವೃದ್ಧರಲ್ಲಿ ಕಾಡುತ್ತದೆ ಎಂಬುದು ನಾವಿಲ್ಲಿ ಗಮನಿಸಲೇಬೇಕಾದ ಸಂಗತಿ,(ಏಜೆನ್ಸೀಸ್).