ಆರ್ಥಿಕ ಕೋಟೆ ಧೂಳೀಪಟ? ಇರಾನ್‌ನ ಶಕ್ತಿ ಕೇಂದ್ರವನ್ನೇ ಟಾರ್ಗೆಟ್ ಮಾಡಿದ ಅಮೆರಿಕ-ಇಸ್ರೇಲ್ ಜಂಟಿ ದಾಳಿ!
ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಮಾರಿ ಅಟ್ಟಹಾಸ ಮೆರೆಯುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಗಡುವು ಮುಗಿಯಲು ಕೇವಲ ಕೆಲವೇ ಗಂಟೆಗಳು ಬಾಕಿ ಇರುವಾಗಲೇ, ಇರಾನ್‌ನ ಅತ್ಯಂತ ಆಯಕಟ್ಟಿನ ಪ್ರದೇಶಗಳ ಮೇಲೆ ಭೀಕರ ದಾಳಿಗಳು ನಡೆದಿವೆ. ಇರಾನ್‌ನ ತೈಲ ರಫ್ತಿನ ಜೀವನಾಡಿಯಾಗಿರುವ ಖಾರ್ಗ್ ದ್ವೀಪ (Kharg Island) ಸೇರಿದಂತೆ ಹಲವು ಕಡೆಗಳಲ್ಲಿ ಸ್ಫೋಟದ ಸದ್ದು ಕೇಳಿಬರುತ್ತಿದ್ದು, ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.
ಖಾರ್ಗ್ ದ್ವೀಪದಲ್ಲಿ ನರಕ ಸದೃಶ ದೃಶ್ಯ!
ಮಂಗಳವಾರ ಮುಂಜಾನೆ ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪದ ಮೇಲೆ ಸರಣಿ ವೈಮಾನಿಕ ದಾಳಿಗಳು ನಡೆದಿವೆ ಎಂದು ಇರಾನ್‌ನ 'ಮೆಹರ್ ನ್ಯೂಸ್' ವರದಿ ಮಾಡಿದೆ. ಪರ್ಷಿಯನ್ ಕೊಲ್ಲಿಯ ಉತ್ತರ ಭಾಗದಲ್ಲಿರುವ ಈ ದ್ವೀಪವು ಇರಾನ್‌ನ ಶೇ. 90ಕ್ಕೂ ಹೆಚ್ಚು ಕಚ್ಚಾ ತೈಲ ರಫ್ತಿಗೆ ಆಧಾರವಾಗಿದೆ.
ಅಮೆರಿಕ ಮತ್ತು ಜಿಯೋನಿಸ್ಟ್ ಶತ್ರುಗಳು ಜಂಟಿಯಾಗಿ ಈ ದಾಳಿ ನಡೆಸಿವೆ ಎಂದು ಇರಾನ್ ಆರೋಪಿಸಿದೆ. ಬೃಹತ್ ಸ್ಫೋಟಗಳಿಂದಾಗಿ ದ್ವೀಪದಾದ್ಯಂತ ಬೆಂಕಿಯ ಕೆನ್ನಾಲಿಗೆಗಳು ಆವರಿಸಿವೆ ಎಂದು ವರದಿಯಾಗಿದೆ. ಈ ಹಿಂದೆಯೂ ಟ್ರಂಪ್ ಅವರು ಖಾರ್ಗ್ ದ್ವೀಪದ ಮಿಲಿಟರಿ ನೆಲೆಗಳನ್ನು ಧ್ವಂಸಗೊಳಿಸಿದ್ದಾಗಿ ಹೇಳಿಕೊಂಡಿದ್ದರು, ಆದರೆ ಈಗ ತೈಲ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿರುವುದು ಇರಾನ್‌ನ ಆರ್ಥಿಕ ಬೆನ್ನೆಲುಬನ್ನೇ ಮುರಿಯುವ ತಂತ್ರದಂತೆ ಕಾಣುತ್ತಿದೆ.
ಇಸ್ರೇಲ್ ಸೇನೆಯಿಂದ ವೈಡ್ ಸ್ಕೇಲ್ ದಾಳಿ ಘೋಷಣೆ
ಖಾರ್ಗ್ ದ್ವೀಪದ ದಾಳಿಯ ಬೆನ್ನಲ್ಲೇ ಇಸ್ರೇಲ್ ಸೇನೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಇರಾನ್‌ನಾದ್ಯಂತ ಇರುವ ಭಯೋತ್ಪಾದಕ ಆಡಳಿತದ ಹತ್ತಾರು ಮೂಲಸೌಕರ್ಯ ಕೇಂದ್ರಗಳ ಮೇಲೆ ವ್ಯಾಪಕ ದಾಳಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಐಡಿಎಫ್ ತಿಳಿಸಿದೆ. ಇದು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿರದೆ, ಇಡೀ ಇರಾನ್‌ನ ಆಯಕಟ್ಟಿನ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ ಎಂಬುದು ಸ್ಪಷ್ಟವಾಗಿದೆ.
ಸೇತುವೆಗಳ ಮೇಲೆ ಮಿಸೈಲ್ ಪ್ರಹಾರ: ಸಂವಹನ ಕಡಿತ
ಕೇವಲ ತೈಲ ಕೇಂದ್ರಗಳಷ್ಟೇ ಅಲ್ಲದೆ, ಇರಾನ್‌ನ ಸಾರಿಗೆ ಮತ್ತು ಸಂವಹನ ವ್ಯವಸ್ಥೆಯನ್ನೂ ಶತ್ರು ಪಡೆಗಳು ಗುರಿಯಾಗಿಸಿಕೊಂಡಿವೆ.
ಕೋಮ್: ಇರಾನ್‌ನ ಪವಿತ್ರ ನಗರವೆನಿಸಿದ ಕೋಮ್‌ನ ಹೊರವಲಯದಲ್ಲಿರುವ ಪ್ರಮುಖ ಸೇತುವೆಯೊಂದನ್ನು ಅಮೆರಿಕ-ಇಸ್ರೇಲ್ ಕ್ಷಿಪಣಿಗಳು ಧ್ವಂಸಗೊಳಿಸಿವೆ.
ಕಾಶಾನ್: ಇಸ್ಫಹಾನ್ ಪ್ರಾಂತ್ಯದ ಕಾಶಾನ್ ನಗರದ ಯಹ್ಯಾ ಅಬಾದ್ ರೈಲ್ವೆ ಸೇತುವೆಯ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ದಾಳಿಗಳ ಮೂಲಕ ಇರಾನ್‌ನ ಒಳನಾಡಿನ ಸೇನಾ ಚಲನವಲನಗಳನ್ನು ಮತ್ತು ಜನಸಾಮಾನ್ಯರ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಸಂಚು ರೂಪಿಸಲಾಗಿದೆ.
ಟ್ರಂಪ್ ಡೆಡ್‌ಲೈನ್ ಮತ್ತು ಇರಾನ್‌ನ ಹಠ
ಡೊನಾಲ್ಡ್ ಟ್ರಂಪ್ ಅವರು ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಮಂಗಳವಾರ ರಾತ್ರಿ 8 ಗಂಟೆಯ ಗಡುವನ್ನು ನೀಡಿದ್ದರು. ಒಂದು ವೇಳೆ ಇರಾನ್ ಮಾತು ಕೇಳದಿದ್ದರೆ, ಆ ದೇಶದ ಪ್ರತಿಯೊಂದು ಸೇತುವೆ ಮತ್ತು ವಿದ್ಯುತ್ ಸ್ಥಾವರವನ್ನು ಉರಿಯುತ್ತಿರುವ, ಸ್ಫೋಟಗೊಳ್ಳುತ್ತಿರುವ ಮತ್ತು ಎಂದಿಗೂ ಬಳಸಲಾಗದ ಸ್ಥಿತಿಗೆ ತರುವುದಾಗಿ ಟ್ರಂಪ್ ಎಚ್ಚರಿಸಿದ್ದರು. ಈಗ ನಡೆಯುತ್ತಿರುವ ದಾಳಿಗಳು ಆ ಎಚ್ಚರಿಕೆಯ ಟೀಸರ್ ಎಂಬಂತೆ ಭಾಸವಾಗುತ್ತಿವೆ.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಂಚಲನ
ಖಾರ್ಗ್ ದ್ವೀಪದ ಮೇಲಿನ ದಾಳಿಯಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವ ಭೀತಿ ಎದುರಾಗಿದೆ. ಇರಾನ್‌ನ ತೈಲ ರಫ್ತು ಸ್ಥಗಿತಗೊಂಡರೆ ಜಗತ್ತಿನಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ. ಭಾರತ ಸೇರಿದಂತೆ ಹಲವು ದೇಶಗಳು ಈ ಬೆಳವಣಿಗೆಯನ್ನು ಆತಂಕದಿಂದ ಗಮನಿಸುತ್ತಿವೆ.
ಒಂದೆಡೆ 1.4 ಕೋಟಿ ಜನರು ಬಲಿದಾನಕ್ಕೆ ಸಿದ್ಧ ಎಂದು ಇರಾನ್ ಅಧ್ಯಕ್ಷರು ಹೇಳುತ್ತಿದ್ದರೆ, ಇನ್ನೊಂದೆಡೆ ಅಮೆರಿಕ ಮತ್ತು ಇಸ್ರೇಲ್ ಇರಾನ್‌ನ ಶಕ್ತಿಯ ಕೇಂದ್ರಗಳನ್ನೇ ಧೂಳೀಪಟ ಮಾಡುತ್ತಿವೆ. ಇನ್ನು ಕೆಲವು ಗಂಟೆಗಳಲ್ಲಿ ಇರಾನ್ ಮಾತುಕತೆಗೆ ಒಪ್ಪದಿದ್ದರೆ, ಪಶ್ಚಿಮ ಏಷ್ಯಾದ ಭೂಪಟವೇ ಬದಲಾಗುವಂತಹ ಭೀಕರ ಯುದ್ಧ ಸಂಭವಿಸುವುದು ಖಚಿತ ಎನ್ನಲಾಗುತ್ತಿದೆ,(ಏಜೆನ್ಸೀಸ್).