ಭೂಮಿ  
ವಿದೇಶ

ಭೂಮಿಗೆ ಕಾದಿದೆ ಗಂಡಾಂತರ: ಹೆಚ್ಚು ವರ್ಷ ಉಳಿಯಲ್ಲ ಎಂದ ವಿಜ್ಞಾನಿಗಳು, ಜನರ ಮುಂದಿನ ನಿಲ್ದಾಣ ಸೂಪರ್-ಹ್ಯಾಬಿಟೇಬಲ್ ಗ್ರಹ! Earth

ಜೀವಿಗಳು ಹುಟ್ಟಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಅತ್ಯುತ್ತಮ ವಾತಾವರಣ ಕಲ್ಪಿಸಬಲ್ಲ ಗ್ರಹಗಳೇ ಸೂಪರ್-ಹ್ಯಾಬಿಟೇಬಲ್ ಗ್ರಹಗಳು. ಇವು ಭೂಮಿಗಿಂತ ಶೇ. 20 ರಿಂದ 30 ರಷ್ಟು ಹೆಚ್ಚು ಅಗಲವಾಗಿರುವುದಲ್ಲದೆ, ಭೂಮಿಗಿಂತ ಸುಮಾರು ಎರಡು ಪಟ್ಟು ಹೆಚ್ಚು ದ್ರವ್ಯರಾಶಿಯನ್ನು (Mass) ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ನವದೆಹಲಿ: ವಿಜ್ಞಾನಿಗಳು ಇದುವರೆಗೆ ಜೀವಿಗಳಿರುವ ಏಕೈಕ ಗ್ರಹವಾಗಿ ಭೂಮಿಯನ್ನು ( Earth ) ಮಾತ್ರ ಗುರುತಿಸಿದ್ದಾರೆ. ಆದರೆ, ಬ್ರಹ್ಮಾಂಡದಲ್ಲಿ ಭೂಮಿಗಿಂತಲೂ ಅತ್ಯುತ್ತಮವಾದ ವಾಸಯೋಗ್ಯ ಪರಿಸ್ಥಿತಿಗಳನ್ನು ಹೊಂದಿರುವ ಇಂತಹ ಅನೇಕ ಗ್ರಹಗಳು ಇರಬಹುದು ಎಂದು ಅದೇ ವಿಜ್ಞಾನಿಗಳು ನಂಬಿದ್ದಾರೆ. ಇವುಗಳನ್ನು 'ಸೂಪರ್-ಹ್ಯಾಬಿಟೇಬಲ್ ವರ್ಲ್ಡ್ಸ್' (Superhabitable worlds) ಎಂದು ಕರೆಯಲಾಗುತ್ತದೆ. ಈ ಗ್ರಹಗಳು ಅತ್ಯಂತ ಅನುಕೂಲಕರವಾದ ಹವಾಮಾನ ಹಾಗೂ ವಿಫುಲವಾದ ನೀರಿನ ಸಂಪನ್ಮೂಲವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ಭೂಮಿಗಿಂತಲೂ ದೀರ್ಘಕಾಲದವರೆಗೆ ಜೀವಿಗಳು ಬದುಕುಳಿಯಲು ಮತ್ತು ವಿಕಸನಗೊಳ್ಳಲು ಇಂತಹ ಗ್ರಹಗಳು ಹೇಳಿಮಾಡಿಸಿದಂತಿವೆ ಎಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ. ಆದರೆ, ಈವರೆಗೆ ಇಂತಹ ನಿರ್ದಿಷ್ಟ ಗ್ರಹಗಳು ಇನ್ನೂ ನೇರವಾಗಿ ಪತ್ತೆಯಾಗಿಲ್ಲ.

ಏನಿದು ಸೂಪರ್-ಹ್ಯಾಬಿಟೇಬಲ್ ಗ್ರಹಗಳು?

ಜೀವಿಗಳು ಹುಟ್ಟಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಅತ್ಯುತ್ತಮ ವಾತಾವರಣ ಕಲ್ಪಿಸಬಲ್ಲ ಗ್ರಹಗಳೇ ಸೂಪರ್-ಹ್ಯಾಬಿಟೇಬಲ್ ಗ್ರಹಗಳು. ಇವು ಭೂಮಿಗಿಂತ ಶೇ. 20 ರಿಂದ 30 ರಷ್ಟು ಹೆಚ್ಚು ಅಗಲವಾಗಿರುವುದಲ್ಲದೆ, ಭೂಮಿಗಿಂತ ಸುಮಾರು ಎರಡು ಪಟ್ಟು ಹೆಚ್ಚು ದ್ರವ್ಯರಾಶಿಯನ್ನು (Mass) ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇವುಗಳ ಪ್ರಬಲ ಗುರುತ್ವಾಕರ್ಷಣೆಯಿಂದಾಗಿ ದಪ್ಪನಾದ ವಾತಾವರಣ ನಿರ್ಮಾಣಗೊಂಡು, ಇದು ಹೆಚ್ಚು ಬೆಚ್ಚಗಿನ ಹಾಗೂ ಸ್ಥಿರವಾದ ಹವಾಮಾನವನ್ನು ಒದಗಿಸುತ್ತದೆ. ಅಲ್ಲದೆ, ದೊಡ್ಡದಾದ ಒಳಗಿನ ಕೋರ್ (Inner Core) ಬಲವಾದ ಕಾಂತಕ್ಷೇತ್ರವನ್ನು (Magnetic field) ಸೃಷ್ಟಿಸಿ, ಬಾಹ್ಯಾಕಾಶದ ಹಾನಿಕಾರಕ ವಿಕಿರಣಗಳಿಂದ ಅತ್ಯುತ್ತಮ ರಕ್ಷಣೆ ನೀಡುತ್ತದೆ ಎಂದು ವಿಜ್ಞಾನಿಗಳು ನಂಬಿದ್ದಾರೆ. ಇಲ್ಲಿ ವಿಶಾಲವಾದ ಆಳವಿಲ್ಲದ ಸಮುದ್ರಗಳು, ಸರೋವರಗಳು ಹಾಗೂ ದ್ವೀಪಗಳು ವಿವಿಧ ಜೀವ ರೂಪಗಳಿಗೆ ಹೇಳಿ ಮಾಡಿಸಿದಂತಿರುತ್ತವೆ.

ಕಿತ್ತಳೆ ಬಣ್ಣದ 'ಕೆ-ಡ್ವಾರ್ಫ್' ನಕ್ಷತ್ರಗಳ ವಿಶೇಷತೆ ಏನು?

ಸೂಪರ್-ಹ್ಯಾಬಿಟೇಬಲ್ ಗ್ರಹಗಳ ಜೊತೆಗೆ, ವಿಜ್ಞಾನಿಗಳು 'ಕೆ-ಡ್ವಾರ್ಫ್' (K-dwarf) ಎಂಬ ವಿಶೇಷ ನಕ್ಷತ್ರದ ಕುರಿತು ಅಚ್ಚರಿಯುಂಟುಮಾಡುವ ಆವಿಷ್ಕಾರಗಳನ್ನು ಮಾಡಿದ್ದಾರೆ. ಇದು ಸೂರ್ಯನಿಗಿಂತ ಗಾತ್ರದಲ್ಲಿ ಚಿಕ್ಕದಾದ, ತಂಪಾದ ಹಾಗೂ ಹೆಚ್ಚು ಕಿತ್ತಳೆ ಬಣ್ಣದ ನಕ್ಷತ್ರವಾಗಿದೆ. ಇದು ತನ್ನ ಇಂಧನವನ್ನು ಅತ್ಯಂತ ನಿಧಾನವಾಗಿ ಬಳಸಿಕೊಳ್ಳುವುದರಿಂದ, ಕೋಟ್ಯಂತರ ವರ್ಷಗಳ ಕಾಲ ಸ್ಥಿರವಾಗಿ ಬೆಳಗಬಲ್ಲದು. ಇದು ಹತ್ತಿರದ ಗ್ರಹಗಳ ಮೇಲಿನ ಜೀವಿಗಳಿಗೆ ಬೆಳೆಯಲು ಮತ್ತು ವಿಕಸನಗೊಳ್ಳಲು ಹೆಚ್ಚಿನ ಸಮಯವನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ಕೆ-ಡ್ವಾರ್ಫ್ ನಕ್ಷತ್ರದ ಬೆಳಕಿನಲ್ಲಿ ಸಸ್ಯಗಳು ವೇಗವಾಗಿ ಹಾಗೂ ಎತ್ತರವಾಗಿ ಬೆಳೆಯುತ್ತವೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದ್ದು, ದ್ಯುತಿಸಂಶ್ಲೇಷಣೆ ಕೂಡ ಅತ್ಯುತ್ತಮವಾಗಿ ನಡೆಯುತ್ತದೆ.

ಭೂಮಿ ಏಕೆ ದೀರ್ಘಕಾಲದವರೆಗೆ ಸೂಕ್ತವಲ್ಲ?

ಭೂಮಿಗಿಂತಲೂ ಉತ್ತಮ ವಾತಾವರಣವಿರುವ ಇಂತಹ ಗ್ರಹಗಳ ಕುರಿತ ಚರ್ಚೆಗಳು 2010ರಿಂದಲೇ ಮುನ್ನೆಲೆಗೆ ಬಂದಿವೆ. ಭೂಮಿಯಲ್ಲಿ ನಾನಾ ರೀತಿಯ ಜೀವಿಗಳಿದ್ದರೂ, ಇದರ ಅಸ್ತಿತ್ವವು ಸೂಕ್ಷ್ಮ ಪರಿಸರ ಸಮತೋಲನದ ಮೇಲೆ ಅವಲಂಬಿತವಾಗಿದೆ. ಸೂರ್ಯನಿಗೆ ಭೂಮಿ ಸ್ವಲ್ಪ ಹತ್ತಿರವಿದ್ದಿದ್ದರೆ ಇಂದು ಇರುವಂತೆ ಸಾಗರಗಳು ರೂಪುಗೊಳ್ಳುತ್ತಿರಲಿಲ್ಲ. ಕಾಲಾನಂತರದಲ್ಲಿ ಸೂರ್ಯ ಹೆಚ್ಚು ಪ್ರಕಾಶಮಾನವಾಗುತ್ತಿರುವುದರಿಂದ ಭೂಮಿಗೆ ಗಂಭೀರ ಬೆದರಿಕೆ ಎದುರಾಗಿದೆ. ಈ ಪ್ರಕ್ರಿಯೆ ಮುಂದುವರೆದರೆ ಭೂಮಿಯು ಜೀವಿಗಳು ಬದುಕಲಾರದಷ್ಟು ಬಿಸಿಯಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಸೂರ್ಯನ ಸುತ್ತ ಸುತ್ತುವ ಗ್ರಹಗಳಿಗೆ ಹೋಲಿಸಿದರೆ, ಕೆ-ಡ್ವಾರ್ಫ್ ನಕ್ಷತ್ರಗಳ ಸುತ್ತಲಿನ ಗ್ರಹಗಳು ಜೀವಕುಲಕ್ಕೆ ಹೆಚ್ಚು ಅನುಕೂಲಕರವಾಗಿವೆ.

ಸೂಪರ್-ಹ್ಯಾಬಿಟೇಬಲ್ ಗ್ರಹಗಳಲ್ಲಿ ಏಲಿಯನ್ ಜೀವ ಸಂಕುಲ ಇರಬಹುದೇ?

ಸಸ್ಯಗಳು ಮತ್ತು ಪ್ರಾಣಿಗಳಂತಹ ಜೀವಕೋಶಗಳ ಜೀವಿಗಳನ್ನು ಹೋಲುವಂತಹ ಜೀವರೂಪಗಳನ್ನು ಈ ಸೂಪರ್-ಹ್ಯಾಬಿಟೇಬಲ್ ಗ್ರಹಗಳು ಬೆಂಬಲಿಸಬಲ್ಲವು ಎಂದು ವಿಜ್ಞಾನಿಗಳು ಗಾಢವಾಗಿ ನಂಬಿದ್ದಾರೆ. ಇಂತಹ ಗ್ರಹಗಳ ಅಸ್ತಿತ್ವವು ಬ್ರಹ್ಮಾಂಡದಲ್ಲಿ ಭೂಮಿಯ ಹೊರತಾಗಿಯೂ ಜೀವಿಯಿರಬಹುದು ಎಂಬ ರೋಚಕ ಕುತೂಹಲಕ್ಕೆ ಪುಷ್ಟಿ ನೀಡಿದೆ.

ಅಂತಹ ಗ್ರಹಗಳನ್ನು ಪತ್ತೆ ಹಚ್ಚಲು ವಿಜ್ಞಾನಿಗಳ ಮುಂದಿನ ಯೋಜನೆಗಳೇನು?

ಸೂಪರ್-ಹ್ಯಾಬಿಟೇಬಲ್ ಗ್ರಹಗಳನ್ನು ಹುಡುಕಲು ಖಗೋಳಶಾಸ್ತ್ರಜ್ಞರು ಅತ್ಯಾಧುನಿಕ ಬಾಹ್ಯಾಕಾಶ ದೂರದರ್ಶಕಗಳನ್ನು (Space Telescopes) ಬಳಸಲು ಯೋಜನೆ ರೂಪಿಸಿದ್ದಾರೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯ 'ಪ್ಲೇಟೋ' ಮಿಷನ್ 2027ರಲ್ಲಿ ಉಡಾವಣೆಯಾಗಲಿದ್ದು, ಇದು ಇಂತಹ ಗ್ರಹಗಳನ್ನು ಗುರುತಿಸಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕೇವಲ ಗ್ರಹಗಳನ್ನು ಹುಡುಕುವುದಷ್ಟೇ ಅಲ್ಲ, ಅವುಗಳ ವಾತಾವರಣದಲ್ಲಿ ಜೀವಿಗಳ ಉಪಸ್ಥಿತಿಯನ್ನು ಸೂಚಿಸುವ ಅನಿಲಗಳಿವೆಯೋ ಎಂಬುದನ್ನು ಪರೀಕ್ಷಿಸಬೇಕಿದೆ. ಜೇಮ್ಸ್ ವೆಬ್ ಬಾಹ್ಯಾವಕಾಶ ದೂರದರ್ಶಕ ಹಾಗೂ ಚಿಲಿಯಲ್ಲಿ ನಿರ್ಮಾಣವಾಗುತ್ತಿರುವ 'ಎಕ್ಸ್ಟ್ರೀಮ್ಲಿ ಲಾರ್ಜ್ ಟೆಲಿಸ್ಕೋಪ್' (Extremely Large Telescope) ಕೂಡ ಈ ಕುರಿತ ಹೆಚ್ಚಿನ ಅಧ್ಯಯನಕ್ಕೆ ನೆರವಾಗಲಿವೆ. ಮುಂಬರುವ 2040ರ ದಶಕದ ವೇಳೆಗೆ ಕಾರ್ಯಾರಂಭ ಮಾಡಲಿರುವ ನಾಸಾದ 'ಹ್ಯಾಬಿಟೇಬಲ್ ವರ್ಲ್ಡ್ಸ್ ಅಬ್ಸರ್ವೇಟರಿ(Habitable Worlds Observatory) ದೂರದ ಗ್ರಹಗಳ ಮೇಲಿನ ಜೀವಿಗಳ ಸುಳಿವುಗಳನ್ನು ಪತ್ತೆಹಚ್ಚಲು ಮತ್ತಷ್ಟು ಸಹಕಾರಿಯಾಗಲಿದೆ, (ಏಜೆನ್ಸೀಸ್​).