ಪಾಕಿಸ್ತಾನದಲ್ಲಿ ಚಾಲಕರಹಿತ ಕಾರು ಪೊಲೀಸ್ ವ್ಯಾನ್‌ಗೆ ಡಿಕ್ಕಿ ಹೊಡೆಯುತ್ತಿರುವ ವೈರಲ್ ವಿಡಿಯೋ ದೃಶ್ಯ 
ವಿದೇಶ

ಪಾಕಿಸ್ತಾನದಲ್ಲಿ ಪ್ರತಿಭೆಗೆ ಕೊರತೆಯಿಲ್ಲ: ಪೊಲೀಸ್ ವ್ಯಾನ್‌ಗೆ ಡಿಕ್ಕಿ ಹೊಡೆದ ‘ಡ್ರೈವರ್‌ಲೆಸ್‌ ಕಾರ್’; ವಿಡಿಯೋ ವೈರಲ್​! Driverless Car in Pakistan

ಇಸ್ಲಾಮಾಬಾದ್​: ಸೋಷಿಯಲ್ ಮೀಡಿಯಾನಲ್ಲಿ ಪಾಕಿಸ್ತಾನದ ಫನ್ನಿ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ಪಾಕ್​ ಪತ್ರಕರ್ತನೊಬ್ಬನ ಡ್ರೈವರ್​ ಲೆಸ್​ (Driverless Car in Pakistan) ಕಾರಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೀಕ್ಷಣೆಯನ್ನು ಪಡೆದುಕೊಳ್ಳುತ್ತಿದ್ದು, ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸುತ್ತಿದೆ.

ವೈರಲ್​ ವಿಡಿಯೋನಲ್ಲೇನಿದೆ?

ಇಸ್ಲಾಮಾಬಾದ್‌ನ ಡಿ-ಚೌಕ್ ಪ್ರದೇಶದಲ್ಲಿ ಪಾಕಿಸ್ತಾನಿ ಪತ್ರಕರ್ತ ಮುಹಮ್ಮದ್ ಆಲಿಜಾ ಎಂಬಾತ ಒಂದು ಹೊಸ ವರದಿ ಮಾಡುತ್ತಿದ್ದರು. ಅಬೋಟಾಬಾದ್‌ನ ತಂತ್ರಜ್ಞಾನ ಪ್ರೇಮಿ ಎಹ್ಸಾನ್ ಜಾಫರ್ ಎಂಬವರು ತಯಾರಿಸಿದ ಸ್ವಯಂಚಾಲಿತ ಚಾಲನಾ ನಾವೀನ್ಯತೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದರು. ಕಾರಿನ ಮುಂದೆ ಕುಳಿತು, ಪಾಕಿಸ್ತಾನದಲ್ಲಿ ಪ್ರತಿಭೆಗೆ ಕೊರತೆಯಿಲ್ಲ ಎಂದು ಉತ್ಸಾಹದಿಂದ ಕ್ಯಾಮೆರಾ ಮುಂದೆ ಮಾತನಾಡುತ್ತಾ ತಮ್ಮ ರಿಪೋರ್ಟಿಂಗ್ ಆರಂಭಿಸಿದರು.
ಟೆಸ್ಲಾ ಕಂಪನಿಯ ಕಾರುಗಳಂತೆ ಇದು ಕೂಡ ರಿಮೋಟ್ ಹಾಗೂ ಇಂಟರ್ನೆಟ್ ಮೂಲಕ ಕಂಟ್ರೋಲ್ ಆಗುವ ಕಾರ್ ಎಂದು ಅವರು ವಿವರಿಸುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆ ಇಂಟರ್ನೆಟ್ ಸಂಪರ್ಕ ಕಡಿತಗೊಂಡ ಹಿನ್ನಲೆ ನೆಟ್‌ವರ್ಕ್ ಕೈಕೊಟ್ಟ ತಕ್ಷಣ, ಆ ರಿಮೋಟ್ ಕಾರು ತನ್ನ ಹತೋಟಿ ಕಳೆದುಕೊಂಡಿದೆ. ಪತ್ರಕರ್ತ ಮಾತನಾಡುತ್ತಾ ನಿಂತಿರುವಾಗಲೇ ಆ ಕಂಟ್ರೋಲ್ ಇಲ್ಲದ ಕಾರು ನೇರವಾಗಿ ಹೋಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಪೊಲೀಸ್ ವ್ಯಾನ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ.

ನೆಟ್ಟಿಗರಿಂದ ಟ್ರೋಲ್!

ಈ ತಮಾಷೆ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿ ದೊಡ್ಡ ಮಟ್ಟದ ಮೀಮ್ ಆಯಿಗೆ. ಬಾಲಿವುಡ್‌ನ ಪ್ರಸಿದ್ಧ ನಟ ರಣವೀರ್ ಶೋರೆ ಕೂಡ ಈ ವಿಡಿಯೋವನ್ನು ಹಂಚಿಕೊಂಡು, ಸ್ವಯಂ ಚಾಲಿತ ಟೆಸ್ಲಾ: ಮಸ್ಲಾಗೆ ಪಾಕಿಸ್ತಾನದ ತತ್ತರ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದ ಬಳಕೆದಾರರಂತೂ "ಸಹೋದರ, ನೀನು ಮಾತಾಡೋಕೆ ತಪ್ಪು ಟೈಮ್‌ ಆಯ್ಕೆ ಮಾಡಿಕೊಂಡೆ ಬಿಡು", "ಅಷ್ಟು ಕಾರುಗಳಿದ್ದರೂ ಅದು ನೇರವಾಗಿ ಹೋಗಿ ಪೊಲೀಸ್ ಗಾಡಿಯನ್ನೇ ಗುರಿಯಾಗಿಸಿತಲ್ಲ, ಅದೇ ಅಸಲಿ ಪ್ರತಿಭೆ!", "ಪೊಲೀಸರು ನಿನಗೆ ಏನೂ ಮಾಡಲಿಲ್ವಾ? ನೀನು ನಿಜಕ್ಕೂ ಅದೃಷ್ಟವಂತ!" ಎಂದೆಲ್ಲಾ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ, (ಏಜನ್ಸೀಸ್​).