ಡೊನಾಲ್ಡ್ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಮಿಸ್ ಸ್ವಿಟ್ಜರ್ಲೆಂಡ್  
ವಿದೇಶ

ಬಟ್ಟೆ ಹರಿದು, ಲೈಂಗಿಕ ದೌರ್ಜನ್ಯ ಎಸಗಿದರು!...ಡೊನಾಲ್ಡ್ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಮಿಸ್ ಸ್ವಿಟ್ಜರ್ಲೆಂಡ್ | Donald Trump

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿರುದ್ಧ ಮಾಜಿ ಮಿಸ್ ಸ್ವಿಟ್ಜರ್ಲೆಂಡ್, ಮಾಡೆಲ್ ಬೀಟ್ರಿಸ್ ಕ್ಯೂಲ್ ಅತ್ಯಾಚಾರ ಆರೋಪ ಮಾಡಿದ್ದು, ಈ ಕುರಿತು ಡೆಮಾಕ್ರಟಿಕ್ ಪಕ್ಷದ ಸಂಸತ್ ಸದಸ್ಯರು ಹೊಸ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಹೌಸ್ ಜುಡೀಷರಿ ಕಮಿಟಿಯ ಡೆಮಾಕ್ರಟಿಕ್ ಸಂಸದರು ಬಿಡುಗಡೆ ಮಾಡಿರುವ 53 ಪುಟಗಳ ಈ ವರದಿಯಲ್ಲಿ, ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಜೊತೆಗಿನ ಟ್ರಂಪ್ ನಂಟು ಹಾಗೂ ಲೈಂಗಿಕ ಕಿರುಕುಳದ ಹಳೆಯ ಆರೋಪಗಳನ್ನು ಮತ್ತೆ ಮುನ್ನೆಲೆಗೆ ತರಲಾಗಿದೆ.

1993ರ ನವೆಂಬರ್‌ನಲ್ಲಿ ಅಟ್ಲಾಂಟಿಕ್ ಸಿಟಿಯ ಪ್ಲಾಜಾ ಹೋಟೆಲ್‌ನಲ್ಲಿ ತನ್ನ ಮೇಲೆ ಕ್ರೂರ ಅತ್ಯಾಚಾರ ಎಸಗಲಾಗಿದೆ ಎಂದು ಬೀಟ್ರಿಸ್ ಕ್ಯೂಲ್ ಈ ವರದಿಯಲ್ಲಿ ದೂರಿದ್ದಾರೆ. ಈ ಹಿಂದೆ 2024ರಲ್ಲಿ ತಮ್ಮನ್ನು ಕೇವಲ ಅನುಚಿತವಾಗಿ ಸ್ಪರ್ಶಿಸಿದ್ದರು ಎಂದು ಹೇಳಿದ್ದ ಕ್ಯೂಲ್, ಇದೀಗ ಅದೇ ಸಂದರ್ಭದಲ್ಲಿ ಟ್ರಂಪ್ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ಹೊಸ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.

ವರದಿಯಲ್ಲಿ ಏನಿದೆ..?

ನ್ಯೂಯಾರ್ಕ್‌ನ ಪ್ಲಾಜಾ ಹೋಟೆಲ್‌ನಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಟ್ರಂಪ್ ಅವರನ್ನು ಭೇಟಿಯಾದಾಗ, ಅವರು ತನಗೆ ವೀಸಾ ಹಾಗೂ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಕಲ್ಪಿಸುವುದಾಗಿ ಭರವಸೆ ನೀಡಿದ್ದರು ಎಂದು ಕ್ಯೂಲ್ ತಿಳಿಸಿದ್ದಾರೆ. ನಂತರ ಟ್ರಂಪ್ ಒಡನಾಡಿ ಜೆಫ್ರಿ ಎಪ್‌ಸ್ಟೀನ್ ತನ್ನನ್ನು ಮರಾ-ಎ-ಲಾಗೊ ಪಾರ್ಟಿಗೆ ಆಹ್ವಾನಿಸಿದ್ದಾಗಿ ಅವರು ವಿವರಿಸಿದ್ದಾರೆ. ಬಳಿಕ ಟ್ರಂಪ್ ಪ್ರತಿನಿಧಿಯೊಬ್ಬರ ಆಹ್ವಾನದ ಮೇರೆಗೆ ಹೋಟೆಲ್ ರೂಮ್​ಗೆ ತೆರಳಿದಾಗ ಟ್ರಂಪ್ ತನ್ನ ಮೇಲೆ ಬಲವಂತವಾಗಿ ಅತ್ಯಾಚಾರವೆಸಗಿದರು ಎಂದು ಕ್ಯೂಲ್ ಆರೋಪಿಸಿದ್ದಾರೆ.

ದಾಳಿಯ ನಂತರ ಟ್ರಂಪ್ ತನ್ನನ್ನು ಹಾಸಿಗೆಯ ಅಂಚಿನಲ್ಲಿ ಕೂರಿಸಿ, ವೀಸಾ ಮತ್ತು ವಿಶ್ವವಿದ್ಯಾಲಯದ ಪ್ರವೇಶದ ಭರವಸೆಯನ್ನು ಪುನರುಚ್ಚರಿಸಿ, ಈ ಬಗ್ಗೆ ಯಾರಿಗೂ ಬಾಯಿಬಿಡಬಾರದು ಎಂದು ಬೆದರಿಕೆ ಹಾಕಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶ್ವೇತಭವನ ಖಂಡನೆ!

ಡೆಮಾಕ್ರಟಿಕ್ ಪಕ್ಷದ ಈ ವರದಿಯನ್ನು ಶ್ವೇತಭವನವು ಸಂಪೂರ್ಣವಾಗಿ ತಳ್ಳಿಹಾಕಿದೆ. ಇದು ಅಮೆರಿಕದ ಮತದಾರರ ಗಮನವನ್ನು ಬೇರೆಡೆಗೆ ಸೆಳೆಯುವ ಹುಚ್ಚು ಡೆಮೋಕ್ರಾಟ್‌ಗಳ ನಿರಾಶಾದಾಯಕ ಯತ್ನ ಎಂದು ತಿರುಗೇಟು ನೀಡಿದೆ. ಟ್ರಂಪ್ ಎಪ್‌ಸ್ಟೀನ್ ಪ್ರಕರಣದಿಂದ ಸಂಪೂರ್ಣ ಮುಕ್ತರಾಗಿದ್ದಾರೆ ಎಂದು ಶ್ವೇತಭವನದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ವಿಶೇಷ ತನಿಖೆಗೆ ಡೆಮಾಕ್ರಟಿಕ್ಸ್ ಒತ್ತಾಯ!

ಜೆಫ್ರಿ ಎಪ್‌ಸ್ಟೀನ್ ಪ್ರಕರಣದಲ್ಲಿ ಟ್ರಂಪ್ ನಂಟು ಹಾಗೂ ಸಾಕ್ಷ್ಯ ಮರೆಮಾಚುವ ಬಗ್ಗೆ ಸ್ವತಂತ್ರ ವಿಶೇಷ ವಕೀಲರಿಂದ ತನಿಖೆ ನಡೆಸಬೇಕು ಎಂದು ಹೌಸ್ ಜುಡೀಷರಿ ಕಮಿಟಿಯ ಪ್ರಮುಖ ಡೆಮಾಕ್ರಟಿಕ್ ಪ್ರತಿನಿಧಿ ಜೇಮೀ ರಾಸ್ಕಿನ್ ಆಗ್ರಹಿಸಿದ್ದಾರೆ. ಮುಂಬರುವ ನವೆಂಬರ್ 3ರ ಕಾಂಗ್ರೇಸ್ ಮಧ್ಯಂತರ ಚುನಾವಣೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಅಮೆರಿಕದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ(ಏಜೆನ್ಸೀಸ್​).