ಡಬಲ್ ಅಟ್ಯಾಕ್ ಪ್ಲಾನ್! ಟ್ರಂಪ್ ಡೆಡ್‌ಲೈನ್‌ಗೆ ಕ್ಷಿಪಣಿ ಮೂಲಕವೇ ಉತ್ತರ ಕೊಡುತ್ತಾ ಇರಾನ್..?
ಟೆಹ್ರಾನ್: ಪಶ್ಚಿಮ ಏಷ್ಯಾದ ರಣಾಂಗಣದಲ್ಲಿ ಪರಿಸ್ಥಿತಿ ಈಗ ಮಾಡು ಇಲ್ಲವೇ ಮಡಿ ಎಂಬ ಹಂತಕ್ಕೆ ಬಂದು ನಿಂತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಂದು ಇಡೀ ನಾಗರಿಕತೆಯೇ ಅಂತ್ಯವಾಗಲಿದೆ ಎಂಬ ಎಚ್ಚರಿಕೆಯ ಬೆನ್ನಲ್ಲೇ, ಇರಾನ್‌ನ (Iran Counter Attack) ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅತಿ ಭೀಕರವಾದ ಪ್ರತಿ ಎಚ್ಚರಿಕೆಯನ್ನು ನೀಡಿದೆ. ನಾವು ಅಳುಕುವುದಿಲ್ಲ, ನಮ್ಮ ದಾಳಿಗಳನ್ನು ದುಪ್ಪಟ್ಟುಗೊಳಿಸುತ್ತೇವೆ ಎಂದು ಘೋಷಿಸುವ ಮೂಲಕ ಇರಾನ್ ಯುದ್ಧದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ.
ಹೊಸ ಲಾಂಚ್ ಪ್ಯಾಡ್‌ಗಳು ಮತ್ತು ಮಿಸೈಲ್ ಅಬ್ಬರ!
ಇರಾನ್‌ನ IRGC ಏರೋಸ್ಪೇಸ್ ಫೋರ್ಸ್ ಕಮಾಂಡರ್ ನೀಡಿರುವ ಅಧಿಕೃತ ಸಂವಹನದ ಪ್ರಕಾರ, ಇರಾನ್ ತನ್ನ ಅತ್ಯಾಧುನಿಕ ಫತಾ ಮತ್ತು ಖೈಬರ್ ಶೆಕನ್ ಕ್ಷಿಪಣಿಗಳನ್ನು ಉಡಾವಣೆ ಮಾಡಲು ಹೊಸ ಲಾಂಚ್ ಪ್ಲಾಟ್‌ಫಾರ್ಮ್‌ಗಳನ್ನು ಸಿದ್ಧಪಡಿಸಿದೆ. ಅಮೆರಿಕದ ದಾಳಿಗೆ ಪ್ರತಿಯಾಗಿ ನಾವು ನಮ್ಮ ಪ್ರಹಾರದ ತೀವ್ರತೆಯನ್ನು ಡಬಲ್ ಮಾಡುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ. ಈ ಕ್ಷಿಪಣಿಗಳು ಅತ್ಯಂತ ದೂರದ ಗುರಿಯನ್ನು ನಿಖರವಾಗಿ ತಲುಪುವ ಸಾಮರ್ಥ್ಯ ಹೊಂದಿದ್ದು, ಇಡೀ ಪ್ರದೇಶದ ಮೇಲೆ ಆತಂಕದ ನೆರಳು ಮೂಡಿಸಿವೆ.
ಪಶ್ಚಿಮ ಏಷ್ಯಾ ದಾಟಿ ಹಬ್ಬಲಿದೆಯೇ ಯುದ್ಧ..?
ಇರಾನ್ ಕೇವಲ ತನ್ನ ಗಡಿಯೊಳಗೆ ಯುದ್ಧವನ್ನು ಸೀಮಿತಗೊಳಿಸಲು ತಯಾರಿಲ್ಲ. ಒಂದು ವೇಳೆ ಅಮೆರಿಕದ ಭಯೋತ್ಪಾದಕ ಸೈನ್ಯವು ನಮ್ಮ ಕೆಂಪು ಗೆರೆಯನ್ನು ದಾಟಿದರೆ, ನಮ್ಮ ಪ್ರತಿಕ್ರಿಯೆಯು ಈ ಪ್ರದೇಶವನ್ನು ದಾಟಿ ವಿಸ್ತರಿಸಲಿದೆ ಎಂದು ಐಆರ್‌ಜಿಸಿ ಎಚ್ಚರಿಸಿದೆ. ಅಂದರೆ, ಅಮೆರಿಕದ ಮಿತ್ರ ರಾಷ್ಟ್ರಗಳು ಮತ್ತು ಜಗತ್ತಿನ ಯಾವುದೇ ಭಾಗದಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸುವ ಸುಳಿವನ್ನು ಇರಾನ್ ನೀಡಿದೆ.
ಅಲ್ಲದೆ, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ವರ್ಷಗಳ ಕಾಲ ತೈಲ ಮತ್ತು ಅನಿಲ ಸಿಗದಂತೆ ಅಲ್ಲಿನ ಮೂಲಸೌಕರ್ಯಗಳನ್ನು ಧ್ವಂಸಗೊಳಿಸುತ್ತೇವೆ ಎಂದು ಹೇಳುವ ಮೂಲಕ ಜಾಗತಿಕ ಇಂಧನ ಮಾರುಕಟ್ಟೆಗೆ ದೊಡ್ಡ ಪೆಟ್ಟು ನೀಡುವ ಎಚ್ಚರಿಕೆ ನೀಡಿದೆ.
ಸ್ಥಗಿತಗೊಂಡ ರಾಜತಾಂತ್ರಿಕ ಮಾತುಕತೆಗಳು
ಟ್ರಂಪ್ ಅವರ ಸರಣಿ ಬೆದರಿಕೆಗಳ ನಂತರ, ಇರಾನ್ ಎಲ್ಲಾ ರೀತಿಯ ರಾಜತಾಂತ್ರಿಕ ಮಾರ್ಗಗಳನ್ನು ಮತ್ತು ಪರೋಕ್ಷ ಮಾತುಕತೆಗಳನ್ನು ಸ್ಥಗಿತಗೊಳಿಸಿದೆ. ಇನ್ನು ಮುಂದೆ ಯಾವುದೇ ಮಾತುಕತೆ ಇಲ್ಲ, ಕೇವಲ ಪ್ರತಿರೋಧ ಮಾತ್ರ ಎಂಬ ನಿಲುವನ್ನು ಟೆಹ್ರಾನ್ ತಳೆದಿದೆ. ಇದು ಶಾಂತಿಯ ಕೊನೆಯ ಆಸೆಯನ್ನೂ ಚಿವುಟಿ ಹಾಕಿದೆ.
ಇರಾನ್‌ನಲ್ಲಿ ಈಗಾಗಲೇ ಶುರುವಾಗಿದೆ ವಿನಾಶ!
ಟ್ರಂಪ್ ಅವರ ಡೆಡ್‌ಲೈನ್ ಮುಗಿಯುವ ಮೊದಲೇ ಇರಾನ್‌ನ ಎರಡು ಪ್ರಮುಖ ಸೇತುವೆಗಳು ಮತ್ತು ಒಂದು ರೈಲು ನಿಲ್ದಾಣದ ಮೇಲೆ ವೈಮಾನಿಕ ದಾಳಿಗಳು ನಡೆದಿವೆ. ಈ ದಾಳಿಗಳಿಂದ ಕಂಗೆಟ್ಟಿರುವ ಇರಾನ್ ಸರ್ಕಾರ, ತನ್ನ ವಿದ್ಯುತ್ ಸ್ಥಾವರಗಳನ್ನು ರಕ್ಷಿಸಲು ಯುವಕರಿಗೆ ಮಾನವ ಸರಪಳಿ ನಿರ್ಮಿಸುವಂತೆ ಕರೆ ನೀಡಿದೆ. 1.4 ಕೋಟಿ ಜನರು ಈ ಹೋರಾಟಕ್ಕೆ ಸಿದ್ಧರಿದ್ದಾರೆ ಎಂದು ಅಧ್ಯಕ್ಷ ಪೆಜೆಶ್ಕಿಯಾನ್ ಹೇಳಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಗೆ ಕಾದಿದೆ ಸಂಕಷ್ಟ!
ವಿಶ್ವದ ಒಟ್ಟು ತೈಲ ಪೂರೈಕೆಯ ಐದನೇ ಒಂದು ಭಾಗ ಹರಿಯುವ ಹೋರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದೆ. ಇದನ್ನು ತೆರೆಯದಿದ್ದರೆ ಇರಾನ್‌ನ ಪ್ರತಿಯೊಂದು ಸೇತುವೆ ಮತ್ತು ಪವರ್ ಪ್ಲಾಂಟ್ ಅನ್ನು ಸುಟ್ಟು ಭಸ್ಮ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ. ಅತ್ತ ಇರಾನ್ ಈಗಾಗಲೇ ಇಸ್ರೇಲ್ ಮತ್ತು ಸೌದಿ ಅರೇಬಿಯಾದ ಗುರಿಗಳ ಮೇಲೆ ದಾಳಿ ನಡೆಸುತ್ತಿದ್ದು, ಪರಿಸ್ಥಿತಿ ಕೈಮೀರಿ ಹೋಗಿದೆ.
ಇಂದು ರಾತ್ರಿ ಏನಾಗಲಿದೆ..?
ವಾಷಿಂಗ್ಟನ್ ಕಾಲಮಾನ ರಾತ್ರಿ 8 ಗಂಟೆ (ಭಾರತೀಯ ಕಾಲಮಾನ ಬುಧವಾರ ಮುಂಜಾನೆ) ಇಡೀ ಜಗತ್ತಿಗೆ ಅಗ್ನಿಪರೀಕ್ಷೆಯ ಕಾಲವಾಗಿದ್ದು. ಅಮೆರಿಕ ತನ್ನ ಅಂತಿಮ ದಾಳಿ ನಡೆಸುತ್ತದೆಯೇ ಅಥವಾ ಇರಾನ್ ತನ್ನ ಕ್ಷಿಪಣಿಗಳ ಮೂಲಕ ಜಗತ್ತನ್ನೇ ನಡುಗಿಸುತ್ತದೆಯೇ ಎಂಬುದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ,(ಏಜೆನ್ಸೀಸ್).