ಯುದ್ಧ ಯಾವಾಗ ನಿಲ್ಲುತ್ತೆ? ತೈಲ ಬೆಲೆ ಏರಿಕೆ ಬೆನ್ನಲ್ಲೇ ಗುಡ್​ ನ್ಯೂಸ್ ನೀಡಿದ ಡೊನಾಲ್ಡ್​ ಟ್ರಂಪ್​! Donald Trump  
ವಿದೇಶ

ಯುದ್ಧ ಯಾವಾಗ ನಿಲ್ಲುತ್ತೆ? ತೈಲ ಬೆಲೆ ಏರಿಕೆ ಬೆನ್ನಲ್ಲೇ ಗುಡ್​ ನ್ಯೂಸ್ ನೀಡಿದ ಡೊನಾಲ್ಡ್​ ಟ್ರಂಪ್​! Donald Trump

ಪ್ರಮುಖ ಮುಖ್ಯಾಂಶಗಳು

  • ಇರಾನ್​ ವಿರುದ್ಧ ಸಾರಿರುವ ಯುದ್ಧ ಯಾವ ನಿಲ್ಲಬಹುದು ಎಂಬುದನ್ನು ತಿಳಿಸಿದ ಅಮೆರಿಕ ಅಧ್ಯಕ್ಷ
  • ಶೀಘ್ರದಲ್ಲೇ ಯುದ್ಧ ಕೊನೆಯಾಗುತ್ತದೆ ಎಂದ ಡೊನಾಲ್ಡ್​ ಟ್ರಂಪ್​
  • ಜಾಗತಿಕ ಪೂರೈಕೆಯಲ್ಲಿ ಅಡ್ಡಿ ಉಂಟಾದರೆ ಇರಾನ್​ ವಿರುದ್ಧದ ಯುದ್ಧ ಮತ್ತಷ್ಟು ತೀವ್ರ
ವಾಷಿಂಗ್ಟನ್​: ಇರಾನ್​ ವಿರುದ್ಧ ಇಸ್ರೇಲ್​ ಜತೆಗೂಡಿ ಅಮೆರಿಕ ನಡೆಸುತ್ತಿರುವ ಭೀಕರ ಯುದ್ಧ ಶೀಘ್ರದಲ್ಲೇ ಕೊನೆಯಾಗಬಹುದು ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ( Donald Trump )​, ಒಂದು ವೇಳೆ ಇರಾನ್​ನಿಂದ ಜಾಗತಿಕ ಪೂರೈಕೆಯಲ್ಲಿ ಅಡ್ಡಿ ಉಂಟಾದರೆ ಈ ಯುದ್ಧವೂ ಇನ್ನಷ್ಟು ಭೀಕರಗೊಳ್ಳಬಹುದು ಎಂದು ಖಡಕ್​ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಇರಾನ್​ನ ಸುಪ್ರೀಂ ಲೀಡರ್​ ಅಯತೊಲ್ಲಾ ಖಮೇನಿ ಹತ್ಯೆಯಾದ ಬೆನ್ನಲ್ಲೇ ಹೊಸ ಸುಪ್ರೀಂ ಲೀಡರ್​ ಆಗಿ ಖಮೇನಿ ಪುತ್ರ ಅಯತೊಲ್ಲಾ ಮೊಜ್ತಬಾ ಖಮೇನಿ ಅವರನ್ನು ಆಯ್ಕೆ ಮಾಡಲಾಗಿದೆ. ಇದಾದ ಒಂದು ದಿನದಲ್ಲೇ ಕಚ್ಛಾ ತೈಲ ಬೆಲೆಗಳು 2022 ರಿಂದ ಗರಿಷ್ಠ ಮಟ್ಟಕ್ಕೆ ಏರಿದೆ. ಜಾಗತಿಕವಾಗಿ ತೈಲ ಕಂಪನವಾಗಿದೆ. ಈ ಎಲ್ಲ ಬೆಳವಣಿಗೆಯನ್ನು ಗಮನಿಸಿರುವ ಹೂಡಿಕೆದಾರರು, ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಪ್ರಾರಂಭಿಸಿದ ಯುದ್ಧವನ್ನು ಇರಾನ್​ ಇನ್ನಷ್ಟು ತೀವ್ರಗೊಳಿಸುವ ಸೂಚನೆ ಎಂದು ಭಾವಿಸಿದ್ದಾರೆ.
ಆದರೆ, ಅಮೆರಿಕ ಅಧ್ಯಕ್ಷ ಟ್ರಂಪ್​​ ಅವರು ಈ ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂಬ ಭರವಸೆ ನೀಡಿದ ಬೆನ್ನಲ್ಲೇ ಬೆಲೆಗಳು ಕುಸಿತಕಂಡಿದ್ದು, ಅಮೆರಿಕದ ಷೇರುಗಳು ಮತ್ತೆ ಏರಿಕೆ ಕಂಡಿವೆ. 

ಟ್ರಂಪ್​ ಹೇಳಿದ್ದೇನು?

ಮಿಯಾಮಿ ಬಳಿಯ ತಮ್ಮ ಗಾಲ್ಫ್ ಕ್ಲಬ್‌ನಲ್ಲಿ ರಿಪಬ್ಲಿಕನ್ ಶಾಸಕರೊಂದಿಗೆ ಮಾತನಾಡಿದ ಟ್ರಂಪ್​, ಕೆಲವು ದುಷ್ಟತನವನ್ನು ತೊಡೆದುಹಾಕಲು ನಾವು ಮಧ್ಯಪ್ರಾಚ್ಯಕ್ಕೆ ಒಂದು ಸಣ್ಣ ಪ್ರವಾಸವನ್ನು ಕೈಗೊಂಡಿದ್ದೇವೆ ಮತ್ತು ಇದು ಅಲ್ಪಾವಧಿಯ ಪ್ರವಾಸ ಆಗಲಿದೆ ಎಂಬುದು ನೀವು ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆಂದು ಟ್ರಂಪ್​ ಹೇಳಿದ್ದಾರೆ. ಈ ಮೂಲಕ ಶೀಘ್ರದಲ್ಲೇ ಯುದ್ಧ ಕೊನೆಯಾಗಲಿದೆ ಎಂಬ ಸುಳಿವನ್ನು ನೀಡಿದ್ದಾರೆ. 

ತೈಲ ಬೆಲೆ ಭಾರಿ ಏರಿಕೆ

ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧವು ಜಾಗತಿಕ ಮಾರುಕಟ್ಟೆಗಳಿಗೆ ತೈಲ ಮತ್ತು ಅನಿಲದ ಪ್ರಮುಖ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ಇದರ ಪರಿಣಾಮ ಅಮೆರಿಕದಾದ್ಯಂತ ಇಂಧನ ಬೆಲೆಗಳನ್ನು ಏರಿದೆ. ಅಲ್ಲದೆ, ಭಾರತದಲ್ಲೂ ಇದರ ಪರಿಣಾಮ ತಟ್ಟಿದೆ. ಕೆಲವೇ ದಿನಗಳ ಹಿಂದಷ್ಟೇ ಅಡುಗೆ ಅನಿಲ (60 ರೂ.) ಮತ್ತು ವಾಣಿಜ್ಯ ಸಿಲಿಂಡರ್ಸ್​ ಬೆಲೆಯಲ್ಲಿ 100 ರೂ.ಗೂ ಅಧಿಕ ಬೆಲೆ ಏರಿಸಲಾಯಿತು.
ಯುದ್ಧ ಮತ್ತು ಇತರ ವಿಷಯಗಳ ಕುರಿತು ಚರ್ಚಿಸಲು ಟ್ರಂಪ್ ಅವರು ಸೋಮವಾರ (ಮಾರ್ಚ್​ 09) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದಾರೆ. ಗಲ್ಫ್ ನಾಯಕರು ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗಿನ ಸಂಭಾಷಣೆ ನಡೆಸಿದ ನಂತರ, ಸಂಘರ್ಷದ "ತ್ವರಿತ ರಾಜಕೀಯ ಮತ್ತು ರಾಜತಾಂತ್ರಿಕ ಇತ್ಯರ್ಥದ ಕುರಿತು ಪುಟಿನ್ ಕೆಲವು ವಿಚಾರಗಳನ್ನು ವ್ಯಕ್ತಪಡಿಸಿದರು" ಎಂದು ಪುಟಿನ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಯೂರಿ ಉಷಕೋವ್ ಹೇಳಿದ್ದಾರೆ, (ಏಜೆನ್ಸೀಸ್​).