ಒಂದಲ್ಲ, ಎರಡಲ್ಲ, ಹಲವು ಬಾರಿ ಬ್ರೂಕ್ಲಿನ್ ಬ್ರಿಡ್ಜ್ ಮಾರಿದವನ ವಂಚನೆ ಕಥೆ ಕೇಳಿದ್ರೆ ನೀವು ಬೆಕ್ಕಸ ಬೆರಗಾಗ್ತೀರಾ!  
ವಿದೇಶ

ಒಂದಲ್ಲ, ಎರಡಲ್ಲ, ಹಲವು ಬಾರಿ ಬ್ರೂಕ್ಲಿನ್ ಬ್ರಿಡ್ಜ್ ಮಾರಿದವನ ವಂಚನೆ ಕಥೆ ಕೇಳಿದ್ರೆ ನೀವು ಬೆಕ್ಕಸ ಬೆರಗಾಗ್ತೀರಾ!

ನ್ಯೂಯಾರ್ಕ್‌ನಲ್ಲಿ ಈ ಕಳ್ಳನ ಮೋಸದ ಕಥೆಗೆ ಅನೇಕರು ಆರಂಭದಲ್ಲಿ ಸಂಪೂರ್ಣವಾಗಿ ನಂಬಿ, ಹಣದ ವ್ಯವಹಾರ ಕೂಡ ನಡೆಸಿಬಿಟ್ಟಿದ್ದರು. ಆದ್ರೆ, ನಂತರದ ದಿನಗಳಲ್ಲಿ ಈತನ ಅಸಲಿಯತ್ತು ಹೊರಬಿದ್ದಾಗ ಕೊಂಡುಕೊಳ್ಳಲು ಮುಂದಾದವರಿಗೆ ಭಯಾನಕ ಶಾಕ್​ ಕಾದಿತ್ತು. ಈ ವಿಚಿತ್ರ ಘಟನೆಗೆ​ ರುವಾರಿಯೇ ಜಾರ್ಜ್ ಸಿ.ಪಾರ್ಕರ್ ಎಂಬಾತ.

Brooklyn Bridge: ಅಮೆರಿಕದ ವಿಶ್ವದ ಅತ್ಯಂತ ಪ್ರಸಿದ್ಧ ಸೇತುವೆಗಳಲ್ಲಿ ಒಂದಾಗಿರುವ ಬ್ರೂಕ್ಲಿನ್​ ಬ್ರಿಡ್ಜ್​ ಅನ್ನು ಅಂದಿನ ಕಾಲಕ್ಕೆ ಒಂದಲ್ಲ, ಎರಡಲ್ಲ, ಹಲವು ಬಾರಿ ನಕಲಿ ದಾಖಲೆಗಳನ್ನು ಮುಂದಿಟ್ಟುಕೊಂಡು, ಇದು ತನ್ನದೇ ಎಂದು ಮಾರಾಟ ಮಾಡಲು ಮುಂದಾದ ವಂಚಕನ ಬಗ್ಗೆ ಎಂದಾದರೂ ಕೇಳಿದ್ದೀರಾ? ಟೆಕ್ನಾಲಜಿ ಬೆಳೆಯದ ಕಾಲದಲ್ಲೇ ಜನರಿಗೆ ಸುಲಭವಾಗಿ ಟೋಪಿ ಹಾಕುತ್ತಿದ್ದವನ ಅಸಲಿ ಕಥೆ ಕೇಳಿದರೆ ನಿಜಕ್ಕೂ ನೀವು ಬೆಕ್ಕಸ ಬೆರಗಾಗ್ತೀರಿ. ಹೀಗಿದೆ ನೋಡಿ ಆ ಪುಣ್ಯಾಥ್ಮನ ವಂಚನೆ ಸ್ಟೋರಿ.   

ಇಂದಿನ ಪ್ರಸಿದ್ಧ ಬ್ರೂಕ್ಲಿನ್​ ಬ್ರಿಡ್ಜ್​ ಸೇತುವೆಯ ಮಾಲೀಕತ್ವ ನನ್ನದೇ ಎಂದು ಹೇಳಿಕೊಂಡು ಲಕ್ಷಾಂತರ ರೂ. ಬೇಡಿಕೆಯಿಟ್ಟಿದ್ದ ವ್ಯಕ್ತಿಯೊಬ್ಬ, ಬ್ರೂಕ್ಲಿನ್ ಸೇತುವೆಯನ್ನು ಹಲವಾರು ಬಾರಿ ಮಾರಾಟ ಮಾಡಲು ಪ್ರಯತ್ನಿಸಿದ್ದ. ಅಮೇರಿಕಾ, ನ್ಯೂಯಾರ್ಕ್‌ನಲ್ಲಿ ಈ ಕಳ್ಳನ ಮೋಸದ ಕಥೆಗೆ ಅನೇಕರು ಆರಂಭದಲ್ಲಿ ಸಂಪೂರ್ಣವಾಗಿ ನಂಬಿ, ಹಣದ ವ್ಯವಹಾರ ಕೂಡ ನಡೆಸಿಬಿಟ್ಟಿದ್ದರು. ಆದ್ರೆ, ನಂತರದ ದಿನಗಳಲ್ಲಿ ಈತನ ಅಸಲಿಯತ್ತು ಹೊರಬಿದ್ದಾಗ ಕೊಂಡುಕೊಳ್ಳಲು ಮುಂದಾದವರಿಗೆ ಭಯಾನಕ ಶಾಕ್​ ಕಾದಿತ್ತು. ಈ ವಿಚಿತ್ರ ಘಟನೆಗೆ​ ರುವಾರಿಯೇ ಜಾರ್ಜ್ ಸಿ.ಪಾರ್ಕರ್ ಎಂಬಾತ.

ಲಾಭ ಮಾಡಿಕೊಂಡ ಕಿರಾತಕ

ಸೇತುವೆಯನ್ನು ನಿರ್ಮಿಸದಿದ್ದರೂ ಅಥವಾ ಅದರ ಯಾವುದೇ ಕೆಲಸದಲ್ಲಿಯೂ ಪಾಲ್ಗೊಳ್ಳದ ಈ ಪಾರ್ಕರ್​, ತಾನೇ ಮಾಲೀಕನಂತೆ ವರ್ತಿಸಿ, ಹಲವರನ್ನು ತನ್ನ ಮೋಸದ ಖೆಡ್ಡಾಗೆ ಬೀಳಿಸಿಕೊಳ್ಳುತ್ತಿದ್ದ. ನ್ಯೂಯಾರ್ಕ್‌ನಲ್ಲಿ 1883ರಲ್ಲಿ ಸಾರ್ವಜನಿಕರಿಗೆಂದೇ ತೆರೆಯಲಾದ ನಗರದ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾದ ಈ ಸೇತುವೆಯು ಅಮೆರಿಕಕ್ಕೆ ಆಗಮಿಸಿದ ವಲಸಿಗರು ಮತ್ತು ಪ್ರವಾಸಿಗರಿಗೆ ಹೆಚ್ಚು ಆಕರ್ಷಕವಾಗಿತ್ತು. ಇದನ್ನೇ ಲಾಭ ಮಾಡಿಕೊಂಡ ಕಿರಾತಕ, ಸೇತುವೆಯ ಮಾಲೀಕತ್ವ ನನ್ನದು ಮತ್ತು ಇದನ್ನು ಯಾರು ಖರೀದಿ ಮಾಡುತ್ತಾರೋ, ಅವರಿಗೆ ಸುಂಕ ವಸೂಲಿಯಿಂದ ಹಿಡಿದು ಹಲವು ರೀತಿಯಲ್ಲಿ ಲಾಭ ಸಿಗಲಿದೆ ಎಂದು ನಂಬಿಸಲು ಶುರುಮಾಡಿದ.

ಈ ವೇಳೆ, ಈತನ ಮಾತು ಕೇಳಿ ಕೆಲವರು, ಎಲ್ಲಿ ಬ್ರೂಕ್ಲಿನ್​ ಬ್ರಿಡ್ಜ್​ನ ಅಸಲಿ ಮಾಲೀಕತ್ವ ನಿನ್ನ ಹೆಸರಿನಲ್ಲಿರುವುದನ್ನು ಸಾಬೀತುಪಡಿಸು ಎಂದು ಕೇಳಿದಾಗ, ಅದಕ್ಕೆ ಮುಂಚಿತವಾಗಿಯೇ ತನ್ನ ಬಳಿ ಇಟ್ಟುಕೊಂಡಿದ್ದ ನಕಲಿ ದಾಖಲೆಗಳನ್ನು ತೋರಿಸಿ, ಜನರನ್ನು ಸಂಪೂರ್ಣವಾಗಿ ಏಮಾರಿಸಿದ್ದ ಎಂದು ಹಳೆಯ ವರದಿಗಳು ಇಂದಿಗೂ ಒತ್ತಿ ಹೇಳುತ್ತವೆ. ಸೇತುವೆ ಖರೀದಿಸಲು ಆಸಕ್ತಿ ಇರುವವರೊಂದಿಗೆ ಹೇಗೋ ಚೌಕಾಸಿ ಮಾಡಿ, ಹಣ ಪೀಕಿ, ವಂಚಿಸಿದ್ದ. ಕೆಲವು ಸಂತ್ರಸ್ತರು, ಸೇತುವೆ ಈಗ ನಮ್ಮ ಸ್ವಾಧೀನದಲ್ಲಿದೆ ಎಂದು ನಂಬಿ, ಅಲ್ಲಿ ಟೋಲ್ ಬೂತ್‌ಗಳನ್ನು ಸ್ಥಾಪಿಸಿ ಪ್ರಯಾಣಿಕರಿಂದ ಹಣ ಸಂಗ್ರಹಿಸಲು ಪ್ರಯತ್ನಿಸಿದರು. ಆದರೆ, ಮಧ್ಯಪ್ರವೇಶಿಸಿದ ಅಧಿಕಾರಿಗಳು, ನೀವು ಖರೀದಿಸಿದ್ದು ಸೇತುವೆಯಲ್ಲ. ಒಬ್ಬ ವಂಚಕನ ಕಟ್ಟುಕಥೆಗೆ ಮುಗ್ಗರಿಸಿ  ಬಿದ್ದಿದ್ದೀರಿ ಎಂದು ತಿಳಿಸಿದಾಗ, ತಾವು ಮೋಸ ಹೋಗಿದ್ದೀವಿ ಎಂಬುದು ಹಣ ಕೊಟ್ಟವರಿಗೆ ಬಹಳ ನಿಧಾನವಾಗಿ ಸ್ಪಷ್ಟವಾಯಿತು.

1937ರಲ್ಲಿ ಜೈಲಿನಲ್ಲೇ ನಿಧನ

ಅಸಲಿಗೆ, ಪಾರ್ಕರ್​ನ ಮೋಸದಾಟ​ ಕೇವಲ ಇದೊಂದು ಬ್ರಿಡ್ಜ್​ಗೆ ಮಾತ್ರ ನಿಂತಿರಲಿಲ್ಲ!  ನ್ಯೂಯಾರ್ಕ್‌ನ ಸ್ಟ್ಯಾಚ್ಯೂ ಆಫ್ ಲಿಬರ್ಟಿ, ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಮತ್ತು ಮಾಜಿ ಯುಎಸ್ ಅಧ್ಯಕ್ಷ ಯುಲಿಸೆಸ್ ಎಸ್. ಗ್ರಾಂಟ್ ಅವರ ಸಮಾಧಿ ಸೇರಿದಂತೆ ಅಮೆರಿಕದ ಪ್ರಸಿದ್ಧ ಹೆಗ್ಗುರುತುಗಳನ್ನು ನಕಲಿ ದಾಖಲೆಗಳ ಮೂಲಕ ಮಾರಾಟ ಮಾಡಲು ಪ್ರಯತ್ನಿಸಿದ್ದ ಎಂದು ವರದಿಗಳು ಉಲ್ಲೇಖಿಸಿವೆ. ಅಂತಿಮವಾಗಿ, 1928ರಲ್ಲಿ, ಪಾರ್ಕರ್ ನಕಲಿ ಚೆಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಖಾಕಿ ಕೈಗೆ ಸಿಕ್ಕಿಬಿದ್ದ. ಸಾಲು ಸಾಲು ಅಪರಾಧಗಳನ್ನು ಮಾಡಿ, ಕಾನೂನಿ ಕಣ್ಣಿನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದವನನ್ನು ಕೊನೆಗೂ ಸೆರೆಹಿಡಿದು ಕೋರ್ಟ್​ಗೆ ಒಪ್ಪಿಸಿದಾಗ, ನ್ಯೂಯಾರ್ಕ್ ಕಾನೂನಿನಡಿಯಲ್ಲಿ ಪಾರ್ಕರ್​ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಜೈಲುವಾಸ ಅನುಭವಿಸುತ್ತಿದ್ದ ವೇಳೆಯೇ 1937ರಲ್ಲಿ ಸಿಂಗ್ ಸಿಂಗ್ ಜೈಲಿನಲ್ಲಿ ಪಾರ್ಕರ್​ ಉಸಿರು ಚೆಲ್ಲಿದ ಎಂದು ವರದಿಯಾಗಿದೆ,(ಏಜೆನ್ಸೀಸ್).