ಪೈಲಟ್​ ಸ್ಮಿತ್​ ಮಚ್ಚಾರ್​ಗೆ ಚಾಕು ಇರಿದ ಸಹ-ಪೈಲಟ್‌ ಹಮಾಮ್ ಅಲ್ಹಮ್ಮಮಿ 
ವಿದೇಶ

ಅಲ್-ಖೈದಾಗೆ ಸಮರ್ಥನೆ,, ಮಹಿಳೆಯರ ಬಗ್ಗೆ ತಾತ್ಸಾರ! ಚಾಕು ಇರಿದ ಸಹ-ಪೈಲಟ್‌ "ಹಮಾಮ್ ಅಲ್ಹಮ್ಮಮಿ" ಹಿನ್ನಲೆ ಏನು ಗೊತ್ತಾ? Hamam Al Hammami

ಹಮಾಮ್ ಅಲ್ಹಮ್ಮಮಿ ಯಾರು? ಅಲ್-ಖೈದಾ ಸಮರ್ಥನೆ, ಮಹಿಳೆಯರ ಮೇಲಿನ ತಾತ್ಸಾರ ಮತ್ತು ಸಹ-ಪೈಲಟ್‌‌ಗೆ ಚಾಕು ಇರಿದ ಈ ವ್ಯಕ್ತಿಯ ಹಿನ್ನೆಲೆ ಹಾಗೂ ಆಘಾತಕಾರಿ ವಿವರಗಳನ್ನು ಇಲ್ಲಿ ತಿಳಿಯಿರಿ.

ಯುಎಇ: ಸೆಪ್ಟೆಂಬರ್​ 30 ರಂದು ದುಬೈನಿಂದ ಇಸ್ರೇಲ್‌ಗೆ ಪ್ರಯಾಣ ಬೆಳಿಸಿದ್ದ ಫ್ಲೈದುಬೈ (flydubai) ವಿಮಾನ FZ1073 ರ ಕಾಕ್‌ಪಿಟ್‌ನಲ್ಲಿ ನಡೆದ ಕರಾಳ ಘಟನೆಯೊಂದು ಇಡೀ ವಿಶ್ವವೇ ಬೆಚ್ಚಿಬೀಳುವಂತೆ ಮಾಡಿದೆ. ವಿಮಾನದ ಕ್ಯಾಪ್ಟನ್​ ಆಗಿದ್ದ ಭಾರತ ಮೂಲದ ಪೈಲಟ್​ ಸ್ಮಿತ್​ ಮಚ್ಚಾರ್​ ಮೇಲೆ ಓಮನ್​ ಮೂಲದ ಸಹ-ಪೈಲಟ್​ ಚಾಕುವಿನಿಂದ ದಾಳಿ ಮಾಡಿ 9/11 ಮಾದರಿಯ ಉಗ್ರಕೃತ್ಯಕ್ಕೆ ಸಂಚನ್ನು ರೂಪಿಸಿದ್ದ ಎನ್ನಲಾಗುತ್ತಿದೆ.

ಸದ್ಯ, ಸೌದಿ ಅರೇಬಿಯಾದಿಂದ ಯುಎಇ ಗೆ ಹಸ್ತಾಂತರಗೊಂಡಿರುವ ಈ ಆಗಂತುಕ ಸಹ ಪೈಲಟ್​ ಹೆಸರು ಮತ್ತು ಆತನ ಹಿನ್ನಲೆ ಬಹಿರಂಗಗೊಂಡಿದ್ದು, ಸದ್ಯ ಲಭ್ಯವಾಗಿರುವ ಮಾಹಿತಿ ಕೇಳಿದರೆ ಎಂತವರು ಬೆಚ್ಚಿ ಬೀಳಿಸುವಂತಿದೆ.

ನನ್ನ ಹೆಸರು..... ಹಮಾಮ್ ಅಲ್ಹಮ್ಮಮಿ!

ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಈ ಓಮನ್​ ಮೂಲದ ಸಹ ಪೈಲಟ್​ ಹೆಸರು ಹಮಾಮ್ ಅಲ್ಹಮ್ಮಮಿ (Hamam al-Hammami) ಎಂದು ಗುರುತಿಸಲಾಗಿದೆ. ಇತನ ತಂದೆ ಓಮನ್​ ಮೂಲದವರಾಗಿದ್ದರೆ, ತಾಯಿ ಸಿರಿಯಾ ದೇಶದವಳೆಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ಈ ಅಲ್ಹಮ್ಮಮಿ ತಮ್ಮ ಹೆಚ್ಚಿನ ಸಮಯವನ್ನು ಯುಎಇ ದೇಶದಲ್ಲೇ ಕಳೆದಿದ್ದಾರೆ, ಆದರೆ ಓಮನ್​ ದೇಶ ಇನ್ನುವರೆಗೆ ಇತನ ರಾಷ್ಟ್ರೀಯತೆ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಮಾಹಿತಿ ಪ್ರಕಾರ ಈತ ದ್ವೀಪೌರತ್ವ ಹೊಂದಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ತನಿಖೆ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬರಬೇಕಿದೆ.

2020 ರ ಬಳಿಕ ಯುಎಇ ಹಾಗೂ ಇಸ್ರೇಲ್​ ನಡುವೆ ರಾಜತಾಂತ್ರಿಕ ಸಂಬಂಧ ಸುಗಮವಾದ ಹಿನ್ನಲೆ ಈ, ಅಲ್ಹಮ್ಮಮಿ ತನ್ನ ಯುಎಇ ಪೌರತ್ವವನ್ನು ಬಳಸಿಕೊಂಡು ಪೈಲಟ್ ಆಗಿದ್ದಾನೆ ಎಂಬ ವಾದ ಸಹ ಕೇಳಿ ಬರುತ್ತಿದೆ. ಇದಕ್ಕೆಲ್ಲಾ ತನಿಖೆ ನಂತರವೇ ನಿಖರ ಮಾಹಿತಿ ದೊರೆಯಲಿದೆ.

ಅಲ್​-ಖೈದಾ ಸಮರ್ಥಕ!

ಅಮೆರಿಕ ಇತಿಹಾಸದಲ್ಲಿ ಅಚ್ಚಳೀಯದಂತೆ ದಾಖಲಾಗಿರುವ 9/11 ದಾಳಿಯನ್ನು ನಡೆಸಿದ್ದ ಕುಖ್ಯಾತ ಭಯೋತ್ಪಾದನಾ ಸಂಘಟನೆಯಾದ ಅಲ್​-ಖೈದಾ ಬಗ್ಗೆ ಈ ಅಲ್ಹಮ್ಮಮಿ ವಿಶೇಷ ಒಲವನ್ನು ಹೊಂದಿದ್ದ ಎಂದು ಇತನ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಮಾಹಿತಿ ಬಹಿರಂಗ ಪಡಿಸಿವೆ ಎಂದು ತಿಳಿದು ಬಂದಿದೆ.

ಒಸಾಮಾ ಬಿನ್ ಲಾಡೆನ್ ಜೊತೆಗೂಡಿ ಅಮೆರಿಕದಲ್ಲಿ 9/11 ದಾಳಿಗಳ ಸಂಚು ರೂಪಿಸಿದ್ದ ಅಲ್-ಖೈದಾ ಉಗ್ರ ಐಮನ್ ಅಲ್-ಜವಾಹಿರಿಯ ಭಾವಚಿತ್ರ ಹೊಂದಿರುವ ವಿಡಿಯೋವೊಂದನ್ನು ಈ ಅಲ್ಹಮ್ಮಮಿ, ಹಂಚಿಕೊಂಡಿರುವುದು ಪತ್ತೆಯಾಗಿದೆ.

ಹಾಗೆಯೇ, ಘಟನೆ ದಿನ ಪ್ರಯಾಣಿಕರು ನೀಡಿರುವ ಮಾಹಿತಿಯಂತೆ, ಇವನು ವಿಮಾನದಲ್ಲಿ ಅತೀಯಾಗಿ ದೇವರ ಪ್ರಾರ್ಥನೆ ಮಾಡುತ್ತಿದ್ದ, ಹಾಗೂ ಮಹಿಳೆಯರೊಂದಿಗೆ ಮಾತನಾಡುತ್ತಿರಲಿಲ್ಲ ಹಾಗೆಯೇ ನೋಡಲು ಬಹಳ ಒರಟನಂತೆ ಕಾಣುತ್ತಿದ್ದ ಎಂದು ಹೇಳಿದ್ದರು.

ಇದೇ ರೀತಿಯ ಮಾಹಿತಿಯನ್ನು ಇಸ್ರೇಲ್​ ಪ್ರಧಾನಿ ಬೆಂಜಾಮಿನ್​ ನೆತನ್ಯಾಹು ಕೂಡ ಹಂಚಿಕೊಂಡಿದ್ದು, ಬಂಧಿತ ಆರೋಪಿ ಇಸ್ಲಾಮಿಕ್​ ತೀವ್ರಗಾಮಿಯಾಗಿದ್ದಾನೆ. ಅವನೊಬ್ಬ ಬ್ರೇನ್​ವಾಶ್​ ಆಗಿರುವ ಪೈಲಟ್​ ಎಂದು ಹೇಳಿಕೆ ನೀಡಿದ್ದು, ತನಿಖೆ ನಂತರ ಈ ಕುರಿತು ಅಧಿಕ ಮಾಹಿತಿ ಹಂಚಿಕೊಳ್ಳುವುದಾಗಿ ನೆತನ್ಯಾಹು ತಿಳಿಸಿದ್ದರು.

ದುಡಿಯುವ ಮಹಿಳೆಯರ ಬಗ್ಗೆ ತಾತ್ಸಾರ!

ಕೇವಲ ಅಲ್​​ಖೈದಾ ಉಗ್ರನ ಮಾತ್ರವಲ್ಲ, ದುಡಿಯುವ ಮಹಿಳೆಯರ ಬಗ್ಗೆ ಹಾಗೂ ಸ್ತ್ರೀ ಪ್ರಧಾನ ವ್ಯವಸ್ಥೆ ಬಗ್ಗೆ ಕೂಡ ಈ ಅಲ್ಹಮ್ಮಮಿ ವಿರೋಧ ಹೊಂದಿದ್ದ ಎಂದು ಆತನ ಸೋಷಿಯಲ್​ ಮೀಡಿಯಾ ಪೋಸ್ಟ್​ಗಳು ತಿಳಿಸಿವೆ ಎನ್ನಲಾಗುತ್ತಿದೆ.

ದುಡಿಯುವ ಮಹಿಳೆಯರು ಸಂಪ್ರದಾಯವನ್ನು ಧಿಕ್ಕರಿಸುತ್ತಾರೆ, ಇದರಿಂದ ಸಮಾಜ ಕೆಳಮುಖವಾಗಿ ಸಾಗುತ್ತಿದೆ ಎಂದು ಇವನು 2022 ರಲ್ಲಿ ಬರೆದುಕೊಂಡಿದ್ದಾಗಿ ಹೇಳಲಾಗುತ್ತಿದೆ. ಸ್ತ್ರೀ ಮತ್ತು ಪುರುಷರು ಒಟ್ಟಿಗೆ ಕೆಲಸಮಾಡಿದರೆ, ಆ ಸ್ಥಳದಲ್ಲಿ ಪುರುಷರ ಏಕಾಗ್ರತೆ ಹದಗೆಡುತ್ತದೆ ಎಂಬೆಲ್ಲಾ ಕಟ್ಟರ್​ ಸಂಪ್ರದಾಯವಾದಿ ನಿಲುವನ್ನು ಇವನು ಹೊಂದಿದ್ದ ಎಂದು ತಿಳಿದು ಬಂದಿದೆ. ಆದರೆ, ಈ ಎಲ್ಲಾ ಪೋಸ್ಟ್​ಗಳು ಹಾಗೂ ನಿಖರತೆ ಬಗ್ಗೆ, ತನಿಖೆ ನಡೆದು ವರದಿ ಪ್ರಕಟಗೊಂಡ ನಂತರವೇ ಸ್ಪಷ್ಟನೆ ದೊರೆಯಲಿದೆ, (ಏಜೆನ್ಸೀಸ್​).