ಲಾಸ್ ಏಂಜಲೀಸ್: ಭಾರತದ ವರ್ಣರಂಜಿತ ಸಂಸ್ಕೃತಿ, ಸಂಗೀತ ಮತ್ತು ಸಂಪ್ರದಾಯಗಳ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಇತ್ತೀಚಿಗೆ ಲಾಸ್ ಏಂಜಲೀಸ್ ನಗರಸಭೆಯು ನಗರದ ಐತಿಹಾಸಿಕ ಹಾಗೂ ಪ್ರತಿಷ್ಠಿತ ಸಿಟಿ ಹಾಲ್ನಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಿದೆ.
ನೂತನ ಚುನಾಯಿತ ಮೇಯರ್ ಹಾಗೂ ನಗರಸಭಾ ಸದಸ್ಯರಾದ ನಿತ್ಯಾ ರಾಮನ್ ಅವರ ನೇತೃತ್ವದಲ್ಲಿ ನ. 13ರಂದು ಈ ದೀಪಾವಳಿ ಸಂಭ್ರಮಾಚರಣೆ ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಭಾರತದ ಕಾನ್ಸುಲ್ ಜನರಲ್ ಡಾ. ಕೆ. ಜೆ. ಶ್ರೀನಿವಾಸ, ನಗರಸಭಾ ಸದಸ್ಯ ಜಾನ್ ಲೀ ಸೇರಿದಂತೆ ವಿವಿಧ ಗಣ್ಯರು, ಭಾರತೀಯ ಮೂಲದ ಅಮೆರಿಕನ್ ಸಮುದಾಯದ ವಿವಿಧ ಸಂಘಟನೆಗಳ ನೂರಾರು ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೇಯರ್ ನಿತ್ಯಾ ರಾಮನ್ ಅವರು ಡಾ. ಶ್ರೀನಿವಾಸ ಅವರನ್ನು ಸಿಟಿ ಹಾಲ್ಗೆ ಆತ್ಮೀಯವಾಗಿ ಸ್ವಾಗತಿಸಿ, ಭಾರತ-ಲಾಸ್ ಏಂಜಲೀಸ್ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ತಮ್ಮ ಪರಸ್ಪರ ಬದ್ಧತೆಯನ್ನು ಪುನರುಚ್ಚರಿಸಿದರು. ಇದೇ ಸಂದರ್ಭದಲ್ಲಿ ಲಾಸ್ ಏಂಜಲೀಸ್ ನಗರಸಭೆಯು ದೀಪಾವಳಿ ಹಬ್ಬದ ಮಹತ್ವವನ್ನು ಗುರುತಿಸುವ ವಿಶೇಷ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.
ಕತ್ತಲೆಯ ಮೇಲೆ ಬೆಳಕಿನ, ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಾರುವ ದೀಪಾವಳಿಯ ಸಾರ್ವತ್ರಿಕ ಸಂದೇಶವನ್ನು ನಿರ್ಣಯವು ವಿಶೇಷವಾಗಿ ಗುರುತಿಸಿತು. ದಯೆ, ಔದಾರ್ಯ, ಕರುಣೆ, ಏಕತೆ, ಕೃತಜ್ಞತೆ ಹಾಗೂ ಸದ್ಭಾವನೆ ಮುಂತಾದ ಶಾಶ್ವತ ಮಾನವೀಯ ಮೌಲ್ಯಗಳನ್ನು ದೀಪಾವಳಿ ಪ್ರತಿನಿಧಿಸುತ್ತದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ಲಾಸ್ ಏಂಜಲೀಸ್ ನಗರದ ಪರವಾಗಿ ಮೇಯರ್ ನಿತ್ಯಾ ರಾಮನ್ ಅವರು ಭಾರತದ ಕಾನ್ಸುಲ್ ಜನರಲ್ ಕನ್ನಡಿಗ ಡಾ. ಕೆ. ಜೆ. ಶ್ರೀನಿವಾಸ ಅವರಿಗೆ ವಿಶೇಷ ಗೌರವ ಪ್ರಶಂಸಾಪತ್ರವನ್ನು ಪ್ರದಾನ ಮಾಡಿದರು. ಲಾಸ್ ಏಂಜಲೀಸ್ನ ಪ್ರಪ್ರಥಮ ಭಾರತೀಯ ಕಾನ್ಸುಲ್ ಜನರಲ್ ಆಗಿ ಅವರು ನೀಡುತ್ತಿರುವ ನಾಯಕತ್ವ ಮತ್ತು ಸೇವೆಯನ್ನು ಗುರುತಿಸಿ ಗೌರವಿಸಲಾಗಿದೆ.
ಚಿತ್ರದುರ್ಗ ಮೂಲದ ಡಾ. ಕೆ. ಜೆ. ಶ್ರೀನಿವಾಸ ಅವರು 2002ನೇ ಸಾಲಿನ ಭಾರತೀಯ ವಿದೇಶಾಂಗ ಸೇವೆಯ (IFS) ಅಧಿಕಾರಿಯಾಗಿದ್ದು, ಸ್ಪೇನ್, ಪೆರು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊ, ದಕ್ಷಿಣ ಆಫ್ರಿಕಾ ಹಾಗೂ ಗಯಾನಾ ದೇಶಗಳಲ್ಲಿ ವಿವಿಧ ರಾಜತಾಂತ್ರಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿರುವ ಡಾ. ಶ್ರೀನಿವಾಸ ಅವರು, ನಿತ್ಯಾ ರಾಮನ್ ಅವರು ಲಾಸ್ ಏಂಜಲೀಸ್ನ ನೂತನ ಮೇಯರ್ ಆಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅವರ ಮುಂಬರುವ ಅಧಿಕಾರಾವಧಿಗೆ ಶುಭ ಹಾರೈಸಿದರು.
2025ರಲ್ಲಿ ತಾವು ಕಾನ್ಸುಲ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ ದಿನದಿಂದ ರಂತರವಾಗಿ ತೋರಿದ ಸ್ನೇಹ, ಪ್ರೋತ್ಸಾಹ ಹಾಗೂ ಭಾರತೀಯ ಮೂಲದ ಅಮೆರಿಕನ್ ಸಮುದಾಯಕ್ಕೆ ನೀಡುತ್ತಿರುವ ಬೆಂಬಲಕ್ಕಾಗಿ ನಿತ್ಯಾ ರಾಮನ್ ಮತ್ತು ಲಾಸ್ ಏಂಜಲೀಸ್ ನಗರಸಭೆಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಮತ್ತು ಲಾಸ್ ಏಂಜಲೀಸ್ನ ನೂತನ ಆಡಳಿತದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ (ಏಜೆನ್ಸೀಸ್).