ಲಾಹೋರ್: ಅಮೆರಿಕದಿಂದ ಜಾಗತಿಕ ಭಯೋತ್ಪಾದಕ ಹಣೆಪಟ್ಟಿ ಧರಿಸಿದ್ದ, ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್ (PMML) ಅಧ್ಯಕ್ಷ ಮುಹಮ್ಮದ್ ಸರ್ವರ್, ಸೋಮವಾರ (ಅ.19) ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಗಿ ವರದಿಯಾಗಿದೆ. ಎಂದಿನಂತೆ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ, ಮನೆಗೆ ಹಿಂತಿರುದಿದ್ದ ಸಂದರ್ಭದಲ್ಲಿ ಒಮ್ಮೆಲೇ ಕುಸಿದು ಬಿದ್ದಿರುವ ಮುಹಮ್ಮದ್ ಸರ್ವರ್, ಸ್ಥಳದಲ್ಲೇ ಅಸುನೀಗಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ.
ಸಾವಿಗೆ ನಿಖರಕಾರಣ ಏನೆಂದು ಇಲ್ಲಿವರೆಗೆ ತಿಳಿದುಬಂದಿಲ್ಲ. ಆದರೆ, ಮಸೀದಿ ಮೆಟ್ಟಿಲಿನಿಂದ ಬಿದ್ದು, ತಲೆಗಡ ಬಲವಾದ ಪೆಟ್ಟುಬಿದ್ದ ಹಿನ್ನಲೆ ಸಾವು ಸಂಭವಿಸಿದೆ ಎನ್ನವುದು ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್ ವಕ್ತಾರರ ಅಭಿಪ್ರಾಯವಾಗಿದೆ.
ಈ ಮೃತ ಉಗ್ರ ಮುಹಮ್ಮದ್ ಸರ್ವರ್, ಭಾರತದ ಮೋಸ್ಟ್ ವಾಟೆಂಟ್ ಭಯೋತ್ಪಾದಕ ಹಫೀಜ್ ಸಯೀದ್ನ ಹತ್ತಿರ ಗೆಳೆಯನೆಂದು ಹೇಳಲಾಗಿದೆ. ಇತ ಅಧ್ಯಕ್ಷನಾಗಿದ್ದ ಪಾಕಿಸ್ತಾನ್ ಮರ್ಕಝಿ ಮುಸ್ಲಿಂ ಲೀಗ್ (PMML) ಸಂಘಟನೆ, ಹಫೀಜ್ ಸಯೀದ್ನ ಲಷ್ಕರ್-ಎ-ತೊಯ್ಬಾದ ಉಪ ಸಂಘಟನೆ ಎಂದು ಹೇಳಲಾಗುತ್ತದೆ.
2012 ರಿಂದ 2015 ರ ವರೆಗೆ ಈ ಮುಹಮ್ಮದ್ ಸರ್ವರ್, ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕ ಸೈನ್ಯಕ್ಕೆ ತೊಂದರೆ, ಅವರ ಶಸ್ತ್ರಾಸ್ತ್ರ ಲೂಟಿ ಹಾಗೂ ಆರ್ಥಿಕ ವಂಚನೆ ಜೊತೆಗೆ ತಾಲಿಬಾನ್ ಜತೆಗೆ ಉತ್ತಮ ಸಂಬಂಧ ಹೊಂದಿದ್ದ ಹಿನ್ನಲೆ, 2016 ರಲ್ಲಿ ಅಮೆರಿಕ ಇತನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಿ, ಕಂಡಲ್ಲಿ ಗುಂಡಿಕ್ಕಿ ಕೊಲ್ಲುವ ನಿರ್ಧಾರಕ್ಕೆ ಬಂದಿತ್ತು.
ಆದರೆ, ಮುಹಮ್ಮದ್ ಸರ್ವರ್ ತಾನೊಬ್ಬ ರಾಜಕಾರಣಿ, ಸಮಾಜ ಸೇವಕ ಎಂದು ಬಿಂಬಿಸಿಕೊಳ್ಳುತ್ತಾ, ಪಾಕ್ ಆಕ್ರಮಿತ ಕಾಶ್ಮೀರದಿಂದ ಯವಕರನ್ನು ಕರೆತಂದು ಅವರಿಗೆ ತರಬೇತಿ ನೀಡಿ, ಭಾರತ ಹಾಗೂ ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದ ಎಂಬ ಆರೋಪ ಇತನ ಮೇಲಿತ್ತು.
ಮಸೀದಿಯಲ್ಲಿ ನಮಾಜ್ ಮಾಡಲು ಹೋಗಿದ್ದ ಮುಹಮ್ಮದ್ ಸರ್ವರ್, ದಿಢೀರ್ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಏಕೆಂದರೆ, ಕಳೆದ ಕೆಲ ತಿಂಗಳುಗಳಿಂದ ಪಾಕಿಸ್ತಾನ ಅದರಲ್ಲೂ, ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಗುರುತಿಸಿಕೊಂಡಿದ್ದ ಭಯೋತ್ಪಾದಕರ ಮೇಲೆ ಆಕಸ್ಮಿಕ ದಾಳಿಗಳು ನಡೆಯುತ್ತಿದೆ. ಇದರ ಹಿಂದೆ ಭಾರತ ಮತ್ತು ಅಮೆರಿಕದ ಗುಪ್ತಚರ ಇಲಾಖೆ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪ ಮಾಡುತ್ತಿದರೂ, ಇದಕ್ಕೆ ಯಾವುದೇ ಬಲವಾದ ಸಾಕ್ಷಿಗಳಿಲ್ಲದೆ ಹಿನ್ನಲೆ ಭಾರತದ ವಿದೇಶಾಂಗ ಇಲಾಖೆ ಹಾಗೂ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಈ ಆರೋಪಗಳನ್ನು ನಿರಾಕರಿಸಿದೆ, (ಏಜೆನ್ಸೀಸ್).