ಡಯಾಬಿಟಿಸ್ ಕೇವಲ ಸವಾಲಷ್ಟೇ, ಮಿತಿಯಲ್ಲ: ಜರ್ಮನ್ ತಾರೆಯ ಮುಡಿಗೆ ಫ್ರೆಂಚ್ ಓಪನ್ ಕಿರೀಟ! ಕೋಟ್ಯಂತರ ಮಕ್ಕಳಿಗೆ ಪ್ರೇರಣೆಯಾದ ಅಲೆಕ್ಸಾಂಡರ್ ಜ್ವೆರೆವ್! 
ವಿದೇಶ

ಡಯಾಬಿಟಿಸ್ ಕೇವಲ ಸವಾಲಷ್ಟೇ, ಮಿತಿಯಲ್ಲ: ಜರ್ಮನ್ ತಾರೆಯ ಮುಡಿಗೆ ಫ್ರೆಂಚ್ ಓಪನ್ ಕಿರೀಟ! ಕೋಟ್ಯಂತರ ಮಕ್ಕಳಿಗೆ ಪ್ರೇರಣೆಯಾದ ಅಲೆಕ್ಸಾಂಡರ್ ಜ್ವೆರೆವ್! Alexander Zverev

ಪ್ಯಾರಿಸ್: ಯಾವುದೇ ಒಂದು ಕಾಯಿಲೆ ಅಥವಾ ದೈಹಿಕ ಸವಾಲು ಎದುರಾದರೆ ಸಾಕು, ಜೀವನವೇ ಮುಗಿದುಹೋಯಿತು ಎಂದು ಧೃತಿಗೆಡುವವರೇ ಹೆಚ್ಚು. ಆದರೆ, ಜರ್ಮನಿಯ ಟೆನಿಸ್ ತಾರೆ ಅಲೆಕ್ಸಾಂಡರ್ ಜ್ವೆರೆವ್ (Alexander Zverev) ತಮ್ಮ 4ನೇ ವಯಸ್ಸಿನಿಂದಲೇ ಬೆನ್ನುಬಿದ್ದಿದ್ದ ಮಾರಕ 'ಟೈಪ್-1 ಮಧುಮೇಹವನ್ನು ಮೆಟ್ಟಿ ನಿಂತು, ಇಂದು ಜಗತ್ತಿನ ಅತ್ಯುನ್ನತ ಟೆನಿಸ್ ಸಿಂಗಲ್ಸ್ 'ಗ್ರಾಂಡ್ ಸ್ಲಾಮ್' ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಭಾನುವಾರ ನಡೆದ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ರೋಚಕ ಫೈನಲ್ ಪಂದ್ಯದಲ್ಲಿ ಇಟಲಿಯ ಫ್ಲಾವಿಯೊ ಕೊಬೊಲ್ಲಿ ವಿರುದ್ಧ ಜಯಭೇರಿ ಬಾರಿಸುವ ಮೂಲಕ 29 ವರ್ಷದ ಜ್ವೆರೆವ್ ತಮ್ಮ ವೃತ್ತಿಜೀವನದ ಮೊದಲ ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಐತಿಹಾಸಿಕ ಜಯದೊಂದಿಗೆ, ಕಳೆದ 30 ವರ್ಷಗಳಲ್ಲಿ ಗ್ರಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಜರ್ಮನ್ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಸೂಜಿಗಳ ನಡುವೆ ಕಳೆದ 25 ವರ್ಷಗಳ ಬದುಕು
ಅಲೆಕ್ಸಾಂಡರ್ ಜ್ವೆರೆವ್ ಅವರ ಈ ಸಾಧನೆ ಕೇವಲ ಟೆನಿಸ್ ಅಂಕಣಕ್ಕೆ ಮಾತ್ರ ಸೀಮಿತವಾದುದಲ್ಲ. ಇದು ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ ಅಪ್ರತಿಮ ಹೋರಾಟದ ಕಥೆ. ಜ್ವೆರೆವ್ ಅವರಿಗೆ ಕೇವಲ 4 ವರ್ಷದ ಮಗುವಾಗಿದ್ದಾಗಲೇ 'ಟೈಪ್-1 ಡಯಾಬಿಟಿಸ್' ಇರುವುದು ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೆ, ಅಂದರೆ ಕಳೆದ 25 ವರ್ಷಗಳಿಂದ ಅವರು ಪ್ರತಿದಿನ ಇನ್ಸುಲಿನ್ ಸೂಜಿಗಳನ್ನು ತೆಗೆದುಕೊಳ್ಳುತ್ತಲೇ ಬದುಕುತ್ತಿದ್ದಾರೆ. ತೀವ್ರ ದೈಹಿಕ ಶ್ರಮ ಬೇಡುವ ಟೆನಿಸ್‌ನಂತಹ ಕ್ರೀಡೆಯಲ್ಲಿ, ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಂಡು ಜಾಗತಿಕ ಮಟ್ಟದ ಚಾಂಪಿಯನ್ ಆಗುವುದು ಸಾಮಾನ್ಯದ ಮಾತಲ್ಲ.
ಪಂದ್ಯದ ಪ್ರತಿ ಸೆಟ್‌ನ ನಡುವೆಯೂ ಜ್ವೆರೆವ್ ತಮ್ಮ ಇನ್ಸುಲಿನ್ ಮಟ್ಟ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹಾಗೂ ಪೌಷ್ಟಿಕಾಂಶದ ಸಮತೋಲನವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಕೋರ್ಟ್‌ನಲ್ಲಿ ಕೇವಲ ಎದುರಾಳಿ ಆಟಗಾರನ ವಿರುದ್ಧ ಮಾತ್ರವಲ್ಲದೆ, ತಮ್ಮದೇ ದೇಹದ ಸವಾಲುಗಳ ವಿರುದ್ಧವೂ ಅವರು ನಿರಂತರವಾಗಿ ಹೋರಾಡಬೇಕಾಗಿದೆ.

ಅಲೆಕ್ಸಾಂಡರ್ ಜ್ವೆರೆವ್ ಫೌಂಡೇಶನ್: ಡಯಾಬಿಟಿಸ್ ಮಕ್ಕಳ ಪಾಲಿನ ಆಶಾಕಿರಣ

ತಾವು ಅನುಭವಿಸಿದ ಕಷ್ಟಗಳು ಜಗತ್ತಿನ ಇತರ ಮಕ್ಕಳಿಗೆ ಬಾರದಿರಲಿ ಎಂಬ ಉದಾತ್ತ ಉದ್ದೇಶದಿಂದ ಜ್ವೆರೆವ್, ಅಲೆಕ್ಸಾಂಡರ್ ಜ್ವೆರೆವ್ ಫೌಂಡೇಶನ್' ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಮೂಲಕ ಜಗತ್ತಿನಾದ್ಯಂತ ಟೈಪ್-1 ಮಧುಮೇಹದಿಂದ ಬಳಲುತ್ತಿರುವ ಸಾವಿರಾರು ಮಕ್ಕಳಿಗೆ ಇನ್ಸುಲಿನ್ ಮತ್ತು ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಡಯಾಬಿಟಿಸ್ ಎನ್ನುವುದು ಒಂದು ಸವಾಲಷ್ಟೇ, ಅದು ನಿಮ್ಮ ಬದುಕಿನ ಮಿತಿಯಲ್ಲ ಎಂದು ಜ್ವೆರೆವ್ ಸಾರುತ್ತಿದ್ದಾರೆ.

ಜಗತ್ತಿನ 90 ಲಕ್ಷ ಜನರಿಗೆ ಹೊಸ ಚಾಂಪಿಯನ್:

ಪ್ರಸ್ತುತ ಇಡೀ ವಿಶ್ವದಲ್ಲಿ ಸುಮಾರು 90 ಲಕ್ಷಕ್ಕೂ ಹೆಚ್ಚು ಜನರು ಟೈಪ್-1 ಮಧುಮೇಹದೊಂದಿಗೆ ಬದುಕುತ್ತಿದ್ದಾರೆ. ಇವರೆಲ್ಲರಿಗೂ ಜ್ವೆರೆವ್ ಅವರ ಈ ಐತಿಹಾಸಿಕ ಗೆಲುವು ಒಂದು ದಿವ್ಯ ಪ್ರೇರಣೆಯಾಗಿದೆ. ಖಾಯಿಲೆ ಇದೆ ಎಂದು ಮನೆಯಲ್ಲೇ ಕುಳಿತುಕೊಳ್ಳಬೇಡಿ, ನಿಮ್ಮ ಕನಸುಗಳ ಬೆನ್ನಟ್ಟಿ ಎಂದು ಜ್ವೆರೆವ್ ತಮ್ಮ ಗೆಲುವಿನ ಮೂಲಕ ಸಂದೇಶ ನೀಡಿದ್ದಾರೆ. ನಿರಂತರ ಪರಿಶ್ರಮ, ಛಲ ಮತ್ತು ಧನಾತ್ಮಕ ಚಿಂತನೆ ಇದ್ದರೆ ಜಗತ್ತಿನ ಯಾವುದೇ ದೊಡ್ಡ ಸವಾಲನ್ನು ಗೆಲ್ಲಬಹುದು ಎಂಬುದನ್ನು ಈ ಜರ್ಮನ್ ತಾರೆ ಸಾಬೀತುಪಡಿಸಿದ್ದಾರೆ,(ಏಜೆನ್ಸೀಸ್​).